ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪಿಚ್ಚರ್ ನೋಡಿ

Last Updated 9 ಮೇ 2018, 19:30 IST
ಅಕ್ಷರ ಗಾತ್ರ

ವಿಚಿತ್ರ ಜೀವಿಗಳು ಮತ್ತು ಮನುಷ್ಯನ ದುರಾಸೆಯನ್ನು ಇಟ್ಟುಕೊಂಡು ಸಿನಿಮಾ ಮಾಡುವುದು ಹಾಲಿವುಡ್‌ನಲ್ಲಿ ಹೊಸದೇನಲ್ಲ. ಇಂಥ ಸಿನಿಮಾಗಳ ಉದ್ದ ಪಟ್ಟಿಯನ್ನೇ ತಯಾರಿಸಬಹುದು. ಇಂಥದ್ದೇ ವಸ್ತುವನ್ನು ಇರಿಸಿಕೊಂಡಿದ್ದರೂ ಹಿಂದಿನ ಎಲ್ಲ ಸಿನಿಮಾಗಳಿಗಿಂತ ಭಿನ್ನವಾಗಿ ನಿಲ್ಲುವುದು 2017ರಲ್ಲಿ ತೆರೆಕಂಡ ಆಸ್ಕರ್‌ ಪ್ರಶಸ್ತಿ ಪುರಸ್ಕೃತ ಚಿತ್ರ ‘ಶೇಪ್‌ ಆಫ್‌ ವಾಟರ್’.

ಈ ಚಿತ್ರದ ನಿರ್ದೇಶಕ ಗುಯಿಲ್ಲೆರ್ಮೊ ಡೆಲ್ ಟೊರೊ. ಅಮೆರಿಕ ಮತ್ತು ರಷ್ಯಾ ದೇಶಗಳ ನಡುವಿನ ಶೀತಲ ಸಮರ ತಾರಕಕ್ಕೇರಿದ್ದ ಕಾಲಘಟ್ಟದಲ್ಲಿ ನಡೆಯುವ ಕಥನ ಇದು. ತಾಂತ್ರಿಕವಾಗಿಯೂ ತುಂಬ ಬಿಗಿಯಾಗಿರುವ ಕಾರಣಕ್ಕಾಗಿಯೇ ಈ ಚಿತ್ರ ಗಮನಿಸಲೇಬೇಕಾದ ಸಿನಿಮಾಗಳ ಸಾಲಿಗೆ ಸೇರಿಕೊಳ್ಳುತ್ತದೆ.

ಅಮೆರಿಕದ ಸರ್ಕಾರಿ ಅಧೀನದಲ್ಲಿರುವ ಲ್ಯಾಬ್‌ ಒಂದರಲ್ಲಿ ಒಂದು ವಿಚಿತ್ರ ಜೀವಿನ್ನು ಸೆರೆಹಿಡಿದು ಇಡಲಾಗಿದೆ. ಮನುಷ್ಯನ ಆಕಾರವನ್ನೂ ಸಮುದ್ರಜೀವಿಗಳ ಲಕ್ಷಣವನ್ನೂ ಹೊಂದಿರುವ ಆ ಜೀವಿಯ ಕುರಿತಾಗಿ ಅಧ್ಯಯನ ನಡೆಯುತ್ತಿದೆ. ಇದೇ ನೆಪದಲ್ಲಿ ಅದಕ್ಕೆ ಚಿತ್ರಹಿಂಸೆಯನ್ನೂ ಕೊಡಲಾಗುತ್ತದೆ.

ಈ ಲ್ಯಾಬ್‌ನಲ್ಲಿ ನೆಲ ಒರೆಸುವ ಕೆಲಸ ಮಾಡುತ್ತಿರುವ ಎಲಿಸಾಗೆ ಆ ವಿಚಿತ್ರ ಜೀವಿಯ ಜತೆಗೆ ಬಾಂಧವ್ಯ ಬೆಳೆಯುತ್ತದೆ. ಎಲಿಸಾ ಅನಾಥೆ. ಮೂಗಿ. ಸನ್ನೆಯ ಮೂಲಕವೇ ಮಾತನಾಡುವವಳು. ಇನ್ನೇನು ಸಾಯುವ ಹಂತದಲ್ಲಿರುವ ಆ ಜೀವಿಯನ್ನು ಬದುಕಿಸುವ ಸಂಕಲ್ಪ ಮಾಡುತ್ತಾಳೆ. ಆ ಬಿಗಿ ಭದ್ರತೆಯ ನಡುವೆಯೂ ಆ ಜೀವಿಯನ್ನು ಕದ್ದೊಯ್ದು ತನ್ನ ಮನೆಯಲ್ಲಿರಿಸಿಕೊಳ್ಳುತ್ತಾಳೆ.

ಹೀಗೆ ಅನ್ಯಗ್ರಹದ ಜೀವಿಯ ಜತೆಗಿನ ಹುಡುಗಿಯೊಬ್ಬಳ ಪ್ರೇಮಸಂಬಂಧ ಮತ್ತು ಮನುಷ್ಯನೊಳಗಿನ ಕ್ರೌರ್ಯ, ಹಿಂಸೆಯ ಬೇರುಗಳನ್ನು ಕಟ್ಟಿಕೊಡುವ ಕಾರಣಕ್ಕೆ ಶೇಪ್‌ ಆಫ್ ವಾಟರ್ ಸಿನಿಮಾ ಇಷ್ಟವಾಗುತ್ತದೆ.

ಅಲೆಕ್ಸಾಂಡ್ರೆ ಡೆಸ್‌ಪ್ಲ್ಯಾಟ್‌ ಅವರ ಸಂಗೀತ ಈ ಚಿತ್ರದ ಆತ್ಮಶಕ್ತಿ. ಸನ್ನಿವೇಶ, ಪಾತ್ರಗಳ ಭಾವುಕ ಏರಿಳಿತಗಳನ್ನು ಅವರ ಸಂಗೀತದ ಎಳೆಗಳು ಇನ್ನಷ್ಟು ತೀವ್ರಗೊಳಿಸಿವೆ. ಡ್ಯಾನ್‌ ಲೌಸ್ಟೆನ್‌ ಅವರ ಛಾಯಾಗ್ರಹಣವನ್ನೂ ನೆನಪಿಸಿಕೊಳ್ಳಲೇಬೇಕು. ಮಾತೇ ಬರದ ಮೂಗಿ ಹುಡುಗಿಯ ಅಂತರಂಗವನ್ನು ಸ್ಯಾಲಿ ಹಾವ್ಕಿನ್ಸ್‌ ಕಣ್ಣುಗಳಲ್ಲಿಯೇ ವ್ಯಕ್ತಪಡಿಸುವ ಪ್ರತಿಭಾವಂತೆ. ನೋವನ್ನೂ, ವ್ಯಂಗ್ಯವನ್ನೂ ವ್ಯಕ್ತಪಡಿಸಲು ಅವರಿಗೆ ಕಣ್ಣುಗಳೇ ಭಾಷೆಯಾಗಿ ಒದಗಿಬಂದಿವೆ. ಕ್ರೂರ ಅಧಿಕಾರಿಯಾಗಿ ಮೈಖೆಲ್ ಕಾರ್ಬೆಟ್‌ ಶೆನನ್ ಕೂಡ ವಿಜೃಂಭಿಸುತ್ತಾರೆ.

ಹಾಗೆಂದು ‘ಶೇಪ್‌ ಆಫ್‌ ವಾಟರ್‌’ ಅತ್ಯದ್ಭುತ ಸಿನಿಮಾ ಏನಲ್ಲ. ಸಿನಿಮಾ ವ್ಯಾಕರಣವನ್ನು ವಿಸ್ತರಿಸಬಲ್ಲ ಮಹತ್ವಾಕಾಂಕ್ಷೆಯಾಗಲಿ, ಬದುಕಿನ ಆಳವಾದ ತಲ್ಲಣಗಳನ್ನು ಹಿಡಿದಿಡಬಲ್ಲ ಲಕ್ಷಣವಾಗಲಿ ಇರುವ ಸಿನಿಮಾ ಕೂಡ ಅಲ್ಲ. ಮಾಮೂಲಿ ಅನಿಸುವಂಥ ಕಥೆಯನ್ನೇ ಅಚ್ಚುಕಟ್ಟಾಗಿ ತೋರಿಸುವ ಸಿನಿಮಾ. ಆಸ್ಕರ್‌ ಪ್ರಶಸ್ತಿ ದೊರೆತ ಚಿತ್ರಗಳೆಲ್ಲವೂ ಅತೀ ಶ್ರೇಷ್ಠವೇ ಆಗಿರುವುದಿಲ್ಲ ಎನ್ನುವುದನ್ನು ಮನವರಿಕೆ ಮಾಡಿಕೊಳ್ಳುವುದಕ್ಕಾಗಿಯಾದರೂ ಈ ಚಿತ್ರವನ್ನು ನೋಡಬೇಕು.

ಅಂತರ್ಜಾಲದಲ್ಲಿ https://bit.ly/2FLLLrB ಕೊಂಡಿ ಬಳಸಿ ಈ ಚಿತ್ರವನ್ನು ವೀಕ್ಷಿಸಬಹುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT