ಶನಿವಾರ, ಮಾರ್ಚ್ 6, 2021
18 °C
ಮತದಾರರನ್ನು ‘ಬ್ಲ್ಯಾಕ್‌ಮೇಲ್’ ಮಾಡಲು ಅಭ್ಯರ್ಥಿಗಳ ತಂತ್ರ

ಗುರುತಿನ ಚೀಟಿ ಅಕ್ರಮ ಸಂಗ್ರಹ ಯಾಕೆ?

ಎಂ.ಸಿ.ಮಂಜುನಾಥ್ Updated:

ಅಕ್ಷರ ಗಾತ್ರ : | |

ಗುರುತಿನ ಚೀಟಿ ಅಕ್ರಮ ಸಂಗ್ರಹ ಯಾಕೆ?

ಬೆಂಗಳೂರು: ಮೊದಲೆಲ್ಲ ಮತದಾರರಿಂದ ಆಣೆ–ಪ್ರಮಾಣ ಮಾಡಿಸಿ ಮತಗಳನ್ನು ಭದ್ರಪಡಿಸಿಕೊಳ್ಳುತ್ತಿದ್ದ ಅಭ್ಯರ್ಥಿಗಳು, ಗುರುತಿನ ಚೀಟಿಗಳನ್ನು ಸುಪರ್ದಿಯಲ್ಲಿ ಇಟ್ಟುಕೊಳ್ಳುವ ಹೊಸ ತಂತ್ರಗಾರಿಕೆ ಆರಂಭಿಸಿದ್ದಾರೆ.

ರಾಜರಾಜೇಶ್ವರಿ ನಗರ ಕ್ಷೇತ್ರದಲ್ಲಿ ಗುರುತಿನ ಚೀಟಿಗಳ ಅಕ್ರಮ ಸಂಗ್ರಹ ಪತ್ತೆಯಾದ ಬೆನ್ನಲ್ಲೇ, ಗೆಲ್ಲುವುದಕ್ಕಾಗಿ ಅಭ್ಯರ್ಥಿಗಳು ಬಳಸುವ ವಾಮಮಾರ್ಗಗಳ ಬಗ್ಗೆ ರಾಜಕೀಯ ವಲಯದಲ್ಲಿ ಚರ್ಚೆ ನಡೆದಿದೆ.

ಬಳ್ಳಾರಿ ಹಾಗೂ ಆಂಧ್ರಪ್ರದೇಶದಗಡಿ ಭಾಗದಲ್ಲಿ ಮತದಾರರಿಂದ ಆಣೆಮಾಡಿಸಿಕೊಳ್ಳುವ ಪದ್ಧತಿ ಇತ್ತು. ಕಾರ್ಮಿಕರ ಕಾಲೊನಿಗಳಿಗೆ ತೆರಳುತ್ತಿದ್ದ ಅಭ್ಯರ್ಥಿಗಳು, ಹಣ, ಹೆಂಡ ಹಂಚಿ ಪ್ರಚಾರ ಮಾಡುತ್ತಿದ್ದರು. ಬಳಿಕ ಕಾಲೊನಿಯಲ್ಲಿ ದೀಪ ಅಂಟಿಸಿ, ‘ನಿಮಗೇ ಮತ ಹಾಕುತ್ತೇವೆ’ ಎಂದು ಆಣೆ ಮಾಡಿಸಿಕೊಳ್ಳುತ್ತಿದ್ದರು. ಇಲ್ಲವೇ, ಹಿಡಿ ಉಪ್ಪು ಕೊಟ್ಟು ಪ್ರಮಾಣ ಮಾಡಿಸುತ್ತಿದ್ದರು.

2008ರ ವಿಧಾನಸಭಾ ಚುನಾವಣೆ ಹಾಗೂ 2011ರ ಉಪ ಚುನಾವಣೆಯಲ್ಲಿ ಬಳ್ಳಾರಿಯಲ್ಲಿ ಅಭ್ಯರ್ಥಿಯೊಬ್ಬರು ಇದೇ ತಂತ್ರಗಾರಿಕೆ ಅನುಸರಿಸಿದ್ದರು. ಮತದಾರರು ಕ್ರಮೇಣ ಆಣೆ ಮುರಿದು ಹೆಚ್ಚು ಹಣ ಕೊಡುತ್ತಿದ್ದ ಅಭ್ಯರ್ಥಿಗೆ ಮತ ಹಾಕಲು ಶುರುವಿಟ್ಟರು. ಇದನ್ನು ಅರಿತ ಮುಖಂಡರು, ಮತದಾರರ ಗುರುತಿನ ಚೀಟಿಗಳನ್ನು ವಶಕ್ಕೆ ಪಡೆದುಕೊಳ್ಳಲು ಪ್ರಾರಂಭಿಸಿದರು.

ಕೆಲ ಅಭ್ಯರ್ಥಿಗಳು ತಮಗೆ ಮತ ಹಾಕಿದರೆ ಮಾತ್ರ ಗುರುತಿನ ಚೀಟಿಯನ್ನು ಮರಳಿಸುವುದಾಗಿ ಮತದಾರರಿಗೆ ಬ್ಲ್ಯಾಕ್‌ಮೇಲ್ ಸಹ ಮಾಡಲಾರಂಭಿಸಿದರು. 2008 ಹಾಗೂ ನಂತರದ ಚುನಾವಣೆಗಳಲ್ಲಿ ರಾಜ್ಯದೆಲ್ಲೆಡೆ ತೆರೆಮರೆಯಲ್ಲಿ ಇದೇ ಪದ್ಧತಿ ಚಾಲ್ತಿಗೆ ಬಂತು.

ಶಾಯಿ ಹಾಕಿದ ಅಭ್ಯರ್ಥಿ!: ಹೆಬ್ಬಾಳ ಕ್ಷೇತ್ರದ ಅಭ್ಯರ್ಥಿಯೊಬ್ಬರು ಸುಮಾರು 9 ಸಾವಿರ ಮತದಾರರಿಗೆ ಹಣ ಕೊಟ್ಟು, ಅವರ ಗುರುತಿನ ಚೀಟಿಗಳನ್ನು ಪಡೆದುಕೊಂಡಿದ್ದರು. ಅವರೆಲ್ಲ ಎದುರಾಳಿ ಅಭ್ಯರ್ಥಿಗೆ ಮತ ಚಲಾಯಿಸಬಹುದೆಂಬ ಅನುಮಾನದ ಮೇಲೆ, ತಮಗೆ ಮತ ಹಾಕದಿದ್ದರೂ ಪರವಾಗಿಲ್ಲವೆಂದು ಹಿಂದಿನ ದಿನವೇ ಎಲ್ಲರ ಬೆರಳಿಗೂ ತಾವೇ ಶಾಯಿಯನ್ನು ಹಾಕಿಸಿದ್ದರು. ಆದರೆ, ಆ ಪ್ರಕರಣ ಬೆಳಕಿಗೆ ಬರಲೇ ಇಲ್ಲ ಎಂದು ಅದೇ ಅಭ್ಯರ್ಥಿಯ ಆಪ್ತರೊಬ್ಬರು ಹೇಳಿದರು.

ದಂಧೆ ಹೇಗೆ ನಡೆಯುತ್ತದೆ?: ₹500–₹1,000ವನ್ನಷ್ಟೇ ನಿರೀಕ್ಷೆ ಮಾಡುವ ಅಮಾಯಕರನ್ನೇ ಅಭ್ಯರ್ಥಿಗಳು ಗುರಿಯಾಗಿಸಿಕೊಳ್ಳುತ್ತಾರೆ. ಕೊಳೆಗೇರಿ, ನಿರ್ದಿಷ್ಟ ಸಮುದಾಯದ ಬಡಾವಣೆ ಮುಖಂಡರು ಚುನಾವಣೆಗೂ ಮುನ್ನ ತಮ್ಮ ಕ್ಷೇತ್ರದ ಅಭ್ಯರ್ಥಿಯನ್ನು ಭೇಟಿಯಾಗುತ್ತಾರೆ.

‘ನಮ್ಮ ಕಾಲೊನಿಯಲ್ಲಿ ಇಷ್ಟು ಮತದಾರರಿದ್ದಾರೆ. ನನಗೆ ಕಮಿಷನ್ ಹಾಗೂ ಪ್ರತಿಯೊಬ್ಬರಿಗೆ ಇಂತಿಷ್ಟು ಹಣ ಕೊಟ್ಟರೆ ತಮಗೇ ಮತ ಹಾಕಿಸುತ್ತೇನೆ’ ಎಂದು ಆ ಮುಖಂಡ ದೊಡ್ಡ ಮೊತ್ತದ ಪ್ಯಾಕೇಜ್‌ಗೆ ಬೇಡಿಕೆ ಇಡುತ್ತಾನೆ. ವ್ಯವಹಾರ ಕುದುರಿದ ಬಳಿಕ, ಅಭ್ಯರ್ಥಿಯು ಆ ಕಾಲೊನಿಯ ಎಲ್ಲ ಮತದಾರರ ಗುರುತಿನ ಚೀಟಿ ತರಿಸಿಕೊಳ್ಳುತ್ತಾನೆ.

ಮತದಾನದ ಹಿಂದಿನ ದಿನ ತಮ್ಮ ಕಾಲೊನಿಯ ನಿವಾಸಿಗಳಿಗೆ ಹಣ ಹಂಚುವ ಮುಖಂಡ, ಬೆಳಿಗ್ಗೆ ಬಸ್‌ಗಳ ವ್ಯವಸ್ಥೆ ಮಾಡಿಕೊಂಡು ಎಲ್ಲರನ್ನೂ ತಾನೇ ಮತಗಟ್ಟೆಗೆ ಕರೆದೊಯ್ಯುತ್ತಾನೆ. ದೂರದಲ್ಲೇ ವಾಹನ ನಿಲ್ಲಿಸಿ, ಎಲ್ಲರಿಗೂ ಗುರುತಿನ ಚೀಟಿ ವಿತರಿಸುತ್ತಾನೆ. ಅಲ್ಲದೆ, ಫಲಿತಾಂಶ ಬಂದ ಬಳಿಕ ಮತ್ತೆ ಹಣ ಹಂಚುವ ಆಮಿಷ ಒಡ್ಡುತ್ತಾನೆ.

ಅಭ್ಯರ್ಥಿ ಗೆದ್ದರೆ, ತಾನು ಕೊಟ್ಟ ಮಾತಿನಂತೆ ಕಾಲೊನಿ ನಿವಾಸಿಗಳಿಗೆ ಪುನಃ ಹಣ ಹಂಚಿ ಋಣ ತೀರಿಸಿಕೊಳ್ಳುತ್ತಾನೆ. ಒಂದು ವೇಳೆ ಪರಾಭವಗೊಂಡರೆ, ಸಮುದಾಯ ಮುಖಂಡರನ್ನು ತರಾಟೆಗೆ ತೆಗೆದುಕೊಳ್ಳುತ್ತಾನೆ.

ವಿಶ್ವಾಸವೇ ಬಂಡವಾಳ: ‘ಮತದಾರ ಹಣ ಕೊಟ್ಟ ಅಭ್ಯರ್ಥಿಗೇ ಮತ ಚಲಾಯಿಸಿದನೇ ಅಥವಾ ಬೇರೆಯವರಿಗೆ ಮತ ಹಾಕಿದನೇ ಎಂಬುದು ಯಾರಿಗೂ ಗೊತ್ತಾಗುವುದಿಲ್ಲ. ಎಲ್ಲವೂ ನಂಬಿಕೆ ಮತ್ತು ವಿಶ್ವಾಸದ ಮೇಲೆಯೇ ನಡೆಯುತ್ತದೆ. ತಮ್ಮ ಕಾಲೊನಿಯ ಮುಖಂಡನ ಮಾತಿನಂತೆಯೇ ನಡೆದುಕೊಳ್ಳುವುದರಿಂದ ಅವರ ನಿಲುವು ಬದಲಾಗುವುದಿಲ್ಲ’ ಎಂದು ಹೆಸರು ಹೇಳಲಿಚ್ಛಿಸದ ಕೊಳೆಗೇರಿಯ ಮುಖಂಡರೊಬ್ಬರು ತಿಳಿಸಿದರು.

‘ಚುನಾವಣಾ ಗುರುತಿನ ಚೀಟಿ ಇಲ್ಲದಿದ್ದರೂ, ಯಾವುದಾದರೊಂದು ದಾಖಲೆ ತೋರಿಸಿ ಮತ ಚಲಾಯಿಸಲು ಅವಕಾಶವಿದೆ. ಆದರೆ, ಕಾರ್ಮಿಕ ವರ್ಗಕ್ಕೆ ಇದರ ಮಾಹಿತಿ ಇಲ್ಲ. ಇವರು ಚುನಾವಣಾ ಗುರುತಿನ ಚೀಟಿಗೆ ಹೆಚ್ಚಿನ ಪ್ರಾಶಸ್ತ್ಯ ನೀಡುತ್ತದೆ. ಅದನ್ನು ಪಡೆಯುವುದಕ್ಕಾಗಿಯಾದರೂ, ಹಣ ಕೊಟ್ಟ ಅಭ್ಯರ್ಥಿಗೇ ಮತ ಹಾಕುತ್ತಾರೆ’ ಎಂದು ಮಾಹಿತಿ ನೀಡಿದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.