ಅದೊಂದು ಸುಂದರವಾದ ಮನೆ. ಆ ಮನೆಯವರು ತಮ್ಮ ಮನೆ ಸುತ್ತ ವಿವಿಧ ಹೂವಿನ ಗಿಡಗಳನ್ನು ಬೆಳೆಸಿದ್ದರು. ಅದು ನೋಡುಗರ ಕಣ್ಣಿಗೆ ಖುಷಿ ಕೊಡುತ್ತಿತ್ತು. ಸುಂದರವಾದ ಹೂವು, ಗಿಡ, ಬಳ್ಳಿಗಳಿಂದಾಗಿ ಮನೆಯ ಸೌಂದರ್ಯ ಇಮ್ಮಡಿಯಾಗಿತ್ತು.

ಸೋಹನ್ ಎಂಬ ಹುಡುಗ ಆ ಮನೆಯ ಕಣ್ಮಣಿಯಾಗಿದ್ದ. ಅವನು ಐದನೇ ತರಗತಿಯಲ್ಲಿ ಓದುತ್ತಿದ್ದ. ಅವನು ಮನೆಯವರು ಹೇಳಿದಂತೆ ಕೇಳುತ್ತಿದ್ದ. ಮನೆಯ ಮುಂದಿನ ಭಾಗದಲ್ಲಿ ದಾಸವಾಳದ ಗಿಡಗಳನ್ನು ನೆಟ್ಟು ಅವುಗಳಿಗೆ ಗೊಬ್ಬರ–ನೀರು ಹಾಕಿ, ಅವು ಹೂವು ಬಿಡುವುದನ್ನು ಕಾಯುತ್ತಿದ್ದ ಸೋಹನ್. ಆ ಗಿಡಗಳನ್ನು ಯಾರೂ ಹಾಳು ಮಾಡದಂತೆ ನೋಡಿಕೊಳ್ಳುತ್ತಿದ್ದ. ಅವುಗಳ ಪಕ್ಕ ಕುಳಿತು ಹಾಡು ಹೇಳುತ್ತಿದ್ದ. ಮನೆಯವರು, ‘ಏಕೆ ಹಾಡು ಹೇಳುತ್ತೀಯಾ’ ಎಂದರೆ, ‘ಅವುಗಳಿಗೂ ಜೀವವಿದೆ. ನಾನು ಹಾಡಿದರೆ ತಲೆ ಅಲ್ಲಾಡಿಸುತ್ತವೆ’ ಎನ್ನುತ್ತಿದ್ದ.

ಗಿಡಗಳು ಚಿಗುರಿ ಚಿಕ್ಕ ಚಿಕ್ಕ ಮೊಗ್ಗುಗಳು ಬರಲು ಪ್ರಾರಂಭವಾಯಿತು. ಸೋಹನ್ಗೆ ಅದನ್ನು ನೋಡಿ ಸಂತೋಷವಾಯಿತು. ಮನೆ ಮಂದಿಯೆಲ್ಲರನ್ನೂ ಕರೆತಂದು ಮೊಗ್ಗುಗಳನ್ನು ತೋರಿಸಿದ. ತಾನು ಬೆಳೆಸಿ ಆರೈಕೆ ಮಾಡಿದ ಗಿಡ ಹೂವು ಬಿಡಲು ಸಜ್ಜಾಗಿದೆ ಎಂಬುದನ್ನು ಸ್ನೇಹಿತರು ಮತ್ತು ಶಿಕ್ಷಕರಿಗೆ ತಿಳಿಸಿದ.

ಒಂದು ದಿನ ಸೋಹನ್ ಶಾಲೆಗೆ ಹೋದಾಗ ಮನೆಯ ಎಲ್ಲರೂ ಊರಿನ ದೇವಸ್ಥಾನಕ್ಕೆ ಹೋದರು. ಮನೆಯ ಬಾಗಿಲಿನ ಕೀಲಿ ಹಾಕಿ ಮುಂದಿನ ಗೇಟು ಮುಚ್ಚದೆ ಹೋಗಿದ್ದರು. ಇದೇ ಸಂದರ್ಭ ಉಪಯೋಗಿಸಿ, ಅರಳಿದ ಹೂವುಗಳನ್ನು ಕೀಳಲು ಯಾರೋ ಗೇಟು ತೆಗೆದು ಒಳಗೆ ಬಂದು, ಗಿಡಗಳಲ್ಲಿ ಬಿಟ್ಟಿರುವ ಹೂಗಳನ್ನು ಕಿತ್ತು ಗೇಟು ಹಾಕದೇ ಅಲ್ಲಿಂದ ಪರಾರಿಯಾದರು.

ರಸ್ತೆಯಲ್ಲಿ ಮೇಯುತ್ತಿದ್ದ ಹಸುಗಳು ಒಳನುಗ್ಗಿ ಎಲ್ಲಾ ಗಿಡಗಳನ್ನು ತಿಂದು ಹಾಕಿದವು. ಮನೆಯವರು ಹಿಂದಿರುಗಿ ಬಂದು ಅದನ್ನು ನೋಡಿ ಮರುಗಿದರು. ಸೋಹನ್ ಶಾಲೆಯಿಂದ ಬಂದ ನಂತರ, ಅವನಿಗೆ ಸಮಾಧಾನ ಮಾಡುವುದು ಹೇಗೆ ಎಂಬುದು ದೊಡ್ಡ ತಲೆನೋವಾಯಿತು.

ಸೋಹನ್ ಶಾಲೆಯಿಂದ ಮನೆಗೆ ಬಂದವನೇ ತಾನು ಸಾಕಿದ ಗಿಡಗಳ ಸ್ಥಿತಿ ನೋಡಿ ಅಳಲು ಪ್ರಾರಂಭಿಸಿದ. ಅವನನ್ನು ಕಂಡು ಇತರರಿಗೂ ದುಃಖ ಉಕ್ಕಿ ಬಂತು. ಸೋಹನ್ ತಾಯಿ ಮಗನ ತಲೆ ಸವರುತ್ತಾ ‘ಪುಟ್ಟಾ, ನಿನ್ನಷ್ಟೇ ಸಂಕಟ ನಮಗೂ ಆಗಿದೆ. ಏನೂ ಮಾಡಲು ಸಾಧ್ಯವಿಲ್ಲ. ಹಸುಗಳನ್ನು ಬೈದು ಪ್ರಯೋಜನವಿಲ್ಲ. ಇಲ್ಲಿ ನಮ್ಮದೂ ತಪ್ಪಿದೆ. ಪುನಃ ಆ ಗಿಡಗಳಿಗೆ ನೀರು–ಗೊಬ್ಬರ ಹಾಕಿ ಜೋಪಾನವಾಗಿ ನೋಡಿಕೋ’ ಎಂದು ಸಮಾಧಾನ ಮಾಡಿದಳು.

ತಾಯಿಯ ಸಮಾಧಾನದ ಮಾತಿಗೆ ಸೋಹನ್ ಅಳುವುದನ್ನು ನಿಲ್ಲಿಸಿದ. ಗಿಡಗಳಿಗೆ ನೀರನ್ನು ಹಾಕುತ್ತಾ ಅವುಗಳಿಗೆ ಕೇಳಿಸುವ ರೀತಿಯಲ್ಲಿ ಹಾಡನ್ನು ಹಾಡುತ್ತಾ ಮುದ್ದಿಸುತ್ತಾ ಬೇಗ ದೊಡ್ಡದಾಗಿ ಬೆಳೆದು ಹೂಗಳನ್ನು ಕೊಡಿರೆಂದು ಗಿಡಗಳಿಗೆ ಹೇಳಿ ಮನೆಯೊಳಗೆ ನಡೆದ.

ಗಿಡಗಳು ಸೋಹನ್ನ ಆರೈಕೆಯಲ್ಲಿ ಪುನಃ ಚಿಗುರಿ ಮೊಗ್ಗು ಬಿಡಲು ಪ್ರಾರಂಭಿಸಿದವು. ಸೋಹನ್ಗೆ ಎಲ್ಲಿಲ್ಲದ ಸಂತೋಷವಾಯಿತು. ಪುನಃ ತನ್ನ ಗೆಳೆಯರೊಂದಿಗೆ ಈ ವಿಷಯ ಹಂಚಿಕೊಂಡ. ‘ನಾನು ಸಾಕಿ ಪೋಷಿಸಿದ ಹೂವಿನ ಗಿಡ ಸ್ವಲ್ಪ ಸಮಯದಲ್ಲೇ ಬಣ್ಣ ಬಣ್ಣದ ಹೂಗಳನ್ನು ಕೊಡುತ್ತದೆ. ಮೊದಲನೆಯ ಹೂವನ್ನು ದೇವರಿಗೆ ಅರ್ಪಿಸುತ್ತೇನೆ. ದೇವರೇ ನಾನು ಸಾಕಿದ ಗಿಡಗಳನ್ನು ಕಾಪಾಡಬೇಕು, ಹಾಗೆಯೇ ಎಲ್ಲರಿಗೂ ಒಳ್ಳೆಯದಾಗಬೇಕು’ ಎಂದು ಹೇಳತೊಡಗಿದ.

ಶಾಲೆಯಿಂದ ಮನೆಗೆ ಬಂದ ಸೋಹನ್ ಗಿಡಗಳನ್ನು ನೋಡಿದ. ಎಲ್ಲಾ ಗಿಡಗಳಲ್ಲೂ ದೊಡ್ಡ ದೊಡ್ಡದಾದ ಮೊಗ್ಗುಗಳು ಬಿಟ್ಟು, ಒಡೆಯಲು ಪ್ರಾರಂಭವಾಗಿತ್ತು. ಅದೇ ಸಂತೋಷಕ್ಕೆ ತನ್ನ ತಾಯಿಯನ್ನು ಕರೆದು ತೋರಿಸಿದ ಸೋಹನ್. ಅವನ ತಾಯಿ, ‘ನಾಳೆ ನಿನ್ನಾಸೆಯಂತೆ ಹೂವುಗಳು ಬಿಡುತ್ತವೆ. ದೇವರಿಗೆ ಶ್ರದ್ಧಾಭಕ್ತಿಯಿಂದ ಪೂಜೆ ಮಾಡಿ ಆ ಹೂಗಳನ್ನು ಸಮರ್ಪಿಸು’ ಎಂದು ಹೇಳಿದಳು.

ಸೋಹನ್ಗೆ ಸಂತೋಷ ತಡೆಯಲು ಸಾಧ್ಯವಾಗುತ್ತಿರಲಿಲ್ಲ. ಮನೆಯ ಕಿಟಕಿಯ ಮೂಲಕ ಆಗೊಮ್ಮೆ ಈಗೊಮ್ಮೆ ಗಿಡಗಳನ್ನು ನೋಡುತ್ತಿದ್ದ. ಬೆಳಿಗ್ಗೆ ಬೇಗ ಎದ್ದು ಹೂವು ಕಿತ್ತು ದೇವರಿಗೆ ಅರ್ಪಿಸಬೇಕೆಂದು ತೀರ್ಮಾನ ಮಾಡಿದ. ತನ್ನ ತಾಯಿಯ ಬಳಿ, ‘ನಾಳೆ ಬೇಗ ಎಬ್ಬಿಸು. ನಾನೇ ಹೂವು ಕೀಳುತ್ತೇನೆ’ ಎಂದ. ತಾಯಿಯು ಮಗನ ಸಂತೋಷ ಕಂಡು ‘ಆಯಿತು, ಹೋಗಿ ಮಲಗು’ ಎಂದಳು.

ಬೆಳಕು ಹರಿಯಲು ಪ್ರಾರಂಭವಾಯಿತು. ಸೋಹನ್ನನ್ನು ಎಬ್ಬಿಸಲು ತಾಯಿ ಅವನ ಬಳಿ ಹೋದಳು. ಸೋಹನ್ ಕೂಡಲೇ ಹಾಸಿಗೆಯಿಂದ ಎದ್ದು ಮನೆಯ ಮುಂದೆ ತಾನು ಬೆಳೆಸಿದ ಗಿಡಗಳಿಂದ ಹೂವು ಕೀಳಲು ಓಡಿದ. ಗಿಡಗಳನ್ನು ನೋಡಿದ ಕೂಡಲೇ ಗರಬಡಿದವರ ರೀತಿ ಅಲ್ಲಿಯೇ ನಿಂತ. ಜೋರಾಗಿ ಅಳಲು ಪ್ರಾರಂಭಿಸಿದ. ಮನೆಯವರೆಲ್ಲ, ‘ಏನಾಯಿತು’ ಎಂದು ಗಾಬರಿಯಿಂದ ಅವನ ಬಳಿ ಓಡಿ ಬಂದರು. ಗಿಡಗಳಲ್ಲಿದ್ದ ಹೂವುಗಳು ಮಾಯವಾಗಿದ್ದವು. ಮನೆಯವರಿಗೆ ತುಂಬಾ ಬೇಸರವಾಯಿತು.

‘ನಾವು ಗಿಡಗಳಿಗೆ ನೀರು, ಗೊಬ್ಬರ ಹಾಕಿ ಜೋಪಾನವಾಗಿ ಮಕ್ಕಳಂತೆ ಸಾಕಿದರೆ, ನಮಗೆ ಗೊತ್ತಿಲ್ಲದೆ ಯಾರೋ ಕದ್ದು ಕಿತ್ತುಕೊಂಡು ಹೋಗಿದ್ದಾರೆ. ಬೆಳಿಗ್ಗೆ ವಾಕಿಂಗ್ಗೆ ಎಂದು ಬರುವ ಕೆಲವು ಜನ ಇದನ್ನೇ ಹವ್ಯಾಸವಾಗಿ ಮಾಡಿಕೊಂಡಿದ್ದಾರೆ. ಎಂತಹ ಜನ ಇವರು! ಕಂಡವರ ಮನೆಯ ಗಿಡಗಳ ಹೂಗಳನ್ನು ಕದಿಯುವವರು’ ಎಂದು ಶಪಿಸುತ್ತಾ ಸೋಹನ್ನನ್ನು ಮನೆಯ ಒಳಗೆ ಕರೆದುಕೊಂಡು ಹೋದರು.

ಸೋಹನ್ ಅಳುವುದನ್ನು ನಿಲ್ಲಿಸಲಿಲ್ಲ. ಸೋಹನ್ ತಾಯಿ ಮಗನನ್ನು ತಬ್ಬಿಕೊಂಡು ಕಣ್ಣೀರು ಒರೆಸುತ್ತಾ, ‘ಪುಟ್ಟಾ, ನೀನು ಆ ಹೂಗಳನ್ನು ದೇವರಿಗೆ ಅರ್ಪಿಸಬೇಕೆಂದು ತೀರ್ಮಾನ ಮಾಡಿದ್ದಿ ತಾನೇ? ಈಗ ನೀನು ಬೆಳೆಸಿದ ಹೂವುಗಳು ದೇವರ ಮುಡಿಗೆ ಅರ್ಪಿತವಾಗಿರುತ್ತವೆ. ಇಲ್ಲಿಂದ ಕದ್ದವರು ದೇವರ ಪೂಜೆಗೆಂದು ಕದ್ದಿರುತ್ತಾರಲ್ಲವೇ? ಚಿಂತಿಸಬೇಡ ಮಗು. ಅವರು ಪೂಜಿಸುವ ದೇವರು ನಿನಗೆ ಅನುಗ್ರಹ ನೀಡುತ್ತಾನೆ.

ಅವರಿಗಿಂತ ನಿನಗೆ ಫಲ ಜಾಸ್ತಿ. ಏಕೆಂದರೆ ನೀನು ಕಷ್ಟಪಟ್ಟು ಬೆಳೆಸಿದ ಗಿಡಗಳಲ್ಲಿ ಬಿಟ್ಟ ಹೂವುಗಳು ಅವು. ಬೇರೆಯವರು ಕದ್ದು ಕಿತ್ತುಕೊಂಡು ದೇವರಿಗೆ ಅರ್ಪಿಸಿದರೆ ಅದರ ಫಲ ಖಂಡಿತಾ ಅವರಿಗೆ ಸಿಗುವುದಿಲ್ಲ. ಆ ದೇವರು ನಿನ್ನನ್ನು ಚೆನ್ನಾಗಿಟ್ಟಿರುತ್ತಾನೆ. ಯೋಚನೆ ಮಾಡಬೇಡ. ನೀನು ಬೆಳೆಸಿದ ಗಿಡಗಳನ್ನು ಮುಂದೆ ಇನ್ನೂ ಜೋಪಾನವಾಗಿ ಕಾಪಾಡಿಕೊಳ್ಳೊಣ’ ಎಂದು ಮಗನಿಗೆ ಸಮಾಧಾನ ಮಾಡಿ ಶಾಲೆಗೆ ಹೊರಡಲು ತಯಾರು ಮಾಡಿದಳು.

ಸೋಹನ್ ತಾಯಿಯ ಮಾತಿನಿಂದ ಸಮಾಧಾನ ಮಾಡಿಕೊಂಡು ಶಾಲೆಗೆ ಹೋಗಲು ಅಣಿಯಾದನು. ಮುದ್ದು ಮನಸ್ಸಿನ ಸೋಹನ್ ಪುನಃ ಹೂವಿನ ಗಿಡಗಳ ಆರೈಕೆ ಮಾಡಲು ಪ್ರಾರಂಭ ಮಾಡಿದ. ತಾನು ಬೆಳೆಸಿದ ಹೂಗಿಡಗಳನ್ನು ಮುದ್ದಿಸಿ ದಿನವೂ ಶಾಲೆಗೆ ಹೋಗುತ್ತಾನೆ ಈಗ. ಇಂತಹ ಮುದ್ದಾದ ಗುಣಗಳಿಂದ ಮನೆಯವರ ಮುದ್ದಿನ ಕಣ್ಮಣಿ ಆಗಿದ್ದಾನೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.