ಬುಧವಾರ, ಜುಲೈ 6, 2022
22 °C

ಚಾಕೊಲೆಟ್ ಪ್ರಿಯೆಯ ಟೆನಿಸ್ ಸಾಧನೆ

ವಿಶಾಖ ಎನ್. Updated:

ಅಕ್ಷರ ಗಾತ್ರ : | |

ಚಾಕೊಲೆಟ್ ಪ್ರಿಯೆಯ ಟೆನಿಸ್ ಸಾಧನೆ

ರೊಮೇನಿಯಾದ ಹುಡುಗಿಯರು ಒಲಿಂಪಿಕ್ಸ್‌ ಜಿಮ್ನ್ಯಾಸ್ಟಿಕ್ಸ್‌ನಲ್ಲಿ ಬಂಗಾರದ ಪದಕಗಳನ್ನು ಕೊರಳಿಗೆ ಹಾಕಿಕೊಂಡು ಮೆರೆಯುತ್ತಿದ್ದ ಗಳಿಗೆ ಟಿ.ವಿಯಲ್ಲಿ ಪ್ರಸಾರವಾಗುತ್ತಿತ್ತು. ಅನೇಕರು ಅದನ್ನು ನೋಡುತ್ತಿರುವಾಗ ಸಿಮೊನಾ ಹೆಲೆಪ್ ಮಾತ್ರ ಜಸ್ಟಿನ್ ಹೆನಿನ್ ಹಾರ್ಡಿನ್ ಆಡಿದ ಹಳೆಯ ಟೆನಿಸ್ ಪಂದ್ಯಗಳನ್ನು ಮತ್ತೆ ಮತ್ತೆ ನೋಡುತ್ತಿದ್ದಳು.

ಸಿಮೊನಾ ಅಪ್ಪ ಫುಟ್‌ಬಾಲ್‌ ಆಟಗಾರ. ಅಣ್ಣನ ಕೈಲಿ ಟೆನಿಸ್ ರ‍್ಯಾಕೆಟ್ ಇತ್ತು. ಅವನಿಗೆ ಸ್ಪರ್ಧೆ ಯೊಡ್ಡಲು ತಾನು ಸಿದ್ಧ ಎಂದು ಅವಳು ನಾಲ್ಕನೇ ವಯಸ್ಸಿನಲ್ಲೇ ತಲೆ ಮೇಲೆ ಹೊಡೆದಂತೆ ಹೇಳಿದಳು. ಆರು ತುಂಬುವ ಹೊತ್ತಿಗೆ ಟೆನಿಸ್‌ನ ಗಂಭೀರ ವಿದ್ಯಾರ್ಥಿನಿ.

ಇನ್ನೂ ಹತ್ತು ವರ್ಷ ದಾಟಿದ್ದೇ ಬುಚಾರೆಸ್ಟ್‌ನಲ್ಲಿ ಹೆಚ್ಚುವರಿ ತರಬೇತಿಗೆ ಸೇರಿದ ಹುಡುಗಿಯರಲ್ಲಿ ಒಬ್ಬಳಾಗಿದ್ದಳು. ಹೋದವರ್ಷ ಮ್ಯಾಡ್ರಿಡ್‌ ಓಪನ್ ಟೆನಿಸ್‌ನಲ್ಲಿ ಗೆದ್ದಾಗ ಆವೆಮಣ್ಣಿನ ನೆಲದಲ್ಲಿ ಚುರುಕು ಪಾದಚಲನೆಯಿಂದ ಗಮನಸೆಳೆದ ಹುಡುಗಿ. ಅವಳ ಮೇಲೆ ಬೆಟ್ಟಿಂಗ್‌ಕೋರರು ಹಣ ಹೂಡುವ ಮಟ್ಟಕ್ಕೆ ಖ್ಯಾತಿ ಬೆಳೆದುಬಿಟ್ಟಿತು. ಫ್ರೆಂಚ್‌ ಓಪನ್‌ ಟೆನಿಸ್‌ ಗೆಲ್ಲುವುದು ಅವಳೇ ಎಂದು ಅನೇಕರು ಬೆಟ್ಟಿಂಗ್ ಕಟ್ಟಿದ್ದರು. ಆದರೆ, ಆ ನಿರೀಕ್ಷೆಯನ್ನು ಹುಸಿಗೊಳಿಸಿದ್ದು ಮರಿಯಾ ಶರಪೊವಾ. ಆಗ ಫೈನಲ್ ಪ್ರವೇಶಿಸಿದ ಸಂದರ್ಭದಲ್ಲಿ ಮಾಧ್ಯಮಗಳು ಸಿಮೊನಾ ಸಂದರ್ಶನಕ್ಕೆ ಮುಗಿಬಿದ್ದಿದ್ದವು. ಅಂಥ ಒಂದು ಸಂದರ್ಶನದ ಸಾರಾಂಶ ಬಹಳ ಮಜವಾಗಿದೆ.

ಅದು ಹೀಗಿತ್ತು–

ಪ್ರಶ್ನೆ: ಟೆನಿಸ್‌ನಲ್ಲಿ ನೀನು ಸಾಧನೆ ಮಾಡಲು ಏನು ಕಾರಣ?

ಸಿಮೊನಾ: ಚಾಕೊಲೆಟ್ ಮೂಸ್!

ಪ್ರಶ್ನೆ: ಅರೆ... ಅದು ಹೇಗೆ?

ಸಿಮೊನಾ: ನಾನು ಮ್ಯಾಡ್ರಿಡ್ ಫೈನಲ್ ಪಂದ್ಯಕ್ಕೆ ಮೊದಲು ಚಾಕೊಲೆಟ್‌ ಮೂಸ್‌ ತಿಂದಿದ್ದೆ. ಪ್ರಮುಖ ಪಂದ್ಯಗಳಿದ್ದಾಗಲೆಲ್ಲಾ ಅದನ್ನು ತಿಂದೇ ಆಡಿದ್ದೇನೆ. ಹೀಗಾಗಿ ನನ್ನ ಸಾಧನೆಗೆ ಅದೇ ಕಾರಣ.

ಸಿಮೊನಾ ಗಂಭೀರ ಪ್ರಶ್ನೆಗಳನ್ನೂ ಹೀಗೆ ಅತಿ ಲಘು ಎನ್ನುವಂತೆ ಮಾರ್ಪಾಟು ಮಾಡಿ ಉತ್ತರಿಸಿದ್ದನ್ನು ಕೆಲವರು ಟೀಕಿಸಿದ್ದು ಬೇರೆ ಮಾತು. ಆದರೆ, ಈ ಹುಡುಗಿ ಪ್ರಾಮಾಣಿಕಳು.

ನಿಜಕ್ಕೂ ಅವಳಿಗೆ ಚಾಕೊಲೆಟ್‌ ತುಂಬಾ ಇಷ್ಟ. ಅದರಿಂದಲೇ ದೇಹ ಅಗತ್ಯವಿರುವಷ್ಟು ಕೃಶವಾಗಿ ಇಲ್ಲ. ಅವಳ ಬಾಯಿ ಕಟ್ಟಿಹಾಕಲು ಡಯಟಿಷಿಯನ್‌ಗಳು ಕೂಡ ತಲೆಕೆಡಿಸಿಕೊಂಡಿದ್ದಿದೆ. ಆದರೀಗ ಜಿಹ್ವಾಚಾಪಲ್ಯದ ಮೇಲೆ ತುಸು ನಿಯಂತ್ರಣ ಸಾಧಿಸಿರುವುದರಿಂದ ಫಲವೂ ಸಲ್ಲುತ್ತಿದೆ.

ಈ ಸಲ ಫ್ರೆಂಚ್ ಓಪನ್ ಟೆನಿಸ್‌ನಲ್ಲಿ ಜರ್ಮನಿಯ ಏಂಜೆಲಿಕ್ ಕರ್ಬರ್ ಎದುರು ಗೆದ್ದು ಸೆಮಿಫೈನಲ್‌ ಪ್ರವೇಶಿಸಿದಾಗ ಯಾರೂ ಚಾಕೊಲೆಟ್ ಪ್ರೀತಿಯ ಬಗೆಗೆ ಪ್ರಶ್ನೆ ಕೇಳಲಿಲ್ಲ.

ಕರ್ಬರ್‌ಗೆ ಕೂಡ ತನ್ನ ಎದುರಾಳಿಯ ಚಾಕೊಲೆಟ್‌ ಪ್ರೀತಿ ಎಂಥದೆನ್ನುವುದು ಗೊತ್ತು. 2014ರಲ್ಲಿ ರೋಲ್ಯಾಂಡ್‌ ಗ್ಯಾರೋಸ್‌ನಲ್ಲಿ ಇವರಿಬ್ಬರೂ ಸೆಣೆಸಿದ್ದಾಗ ವಿಜಯಲಕ್ಷ್ಮಿಯನ್ನು ಕರ್ಬರ್‌ ಒಲಿಸಿಕೊಂಡಿದ್ದಳು. ಈ ಸಲ ಅದಕ್ಕೆ ಸಿಮೊನಾ ಅವಕಾಶ ಕೊಡಲಿಲ್ಲ. ಆರು ಸಲ ಈ ಇಬ್ಬರೂ ಆಟಗಾರ್ತಿಯರು ಮುಖಾಮುಖಿಯಾಗಿದ್ದಾಗ ನಾಲ್ಕು ಬಾರಿ ಗೆದ್ದಿದ್ದು ಚಾಕೊಲೆಟ್ ಹುಡುಗಿ ಸಿಮೊನಾ.

2013ರಲ್ಲಿ ಆರು ಡಬ್ಲ್ಯುಟಿಎ ಪ್ರಶಸ್ತಿಗಳನ್ನು ಎತ್ತಿಹಿಡಿದಾಗ ಗುಣವಿಶೇಷಣವೊಂದು ಸಹಜವಾಗಿಯೇ ಅವಳಿಗೆ ಒಲಿದುಬಂದಿತ್ತು. 1986ರಲ್ಲಿ ಸ್ಟೆಫಿ ಗ್ರಾಫ್ ನಂತರ ಅಷ್ಟೊಂದು ಪ್ರಶಸ್ತಿಗಳನ್ನು ಒಂದೇ ವರ್ಷ ಬೇರೆ ಯಾವ ಹುಡುಗಿಯೂ ಗೆದ್ದಿರಲಿಲ್ಲ ಎಂಬ ಗೌರವ ಅದು.

‘ನನ್ನ ದೇಹದಲ್ಲಿ ಕಸುವಿದೆ. ಜಾಣೆ ನಾನೆನ್ನುವುದೂ ಗೊತ್ತು. ಇವೆರೆಡೂ ಗುಣಗಳಿಲ್ಲದೇ ಹೋದರೆ ಒಂದು ಸೆಟ್‌ ಸೋತ ಮೇಲೆ ಇಡೀ ಪಂದ್ಯವನ್ನು ನನ್ನದಾಗಿಸಿಕೊಳ್ಳುವುದು ಕಷ್ಟದ ಮಾತು’– ಸಿಮೊನಾ ಆತ್ಮವಿಶ್ವಾಸಕ್ಕೆ ಇದು ಕನ್ನಡಿ ಹಿಡಿಯುತ್ತದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.