ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸರ್ಕಾರದ ಜಾಗದಲ್ಲಿ ನಮಾಜ್; 28 ಜನರ ವಿರುದ್ಧ 'ಗಲಭೆ', 'ಅತಿಕ್ರಮಣ' ಪ್ರಕರಣ ದಾಖಲು

Last Updated 10 ಏಪ್ರಿಲ್ 2023, 4:26 IST
ಅಕ್ಷರ ಗಾತ್ರ

ಲಖೀಂಪುರ ಖೇರಿ (ಉತ್ತರ ಪ್ರದೇಶ): ಇಲ್ಲಿನ ಕಾಶಿ ರಾಮ್‌ ಪ್ರದೇಶದಲ್ಲಿರುವ ರಾಜ್ಯ ಸರ್ಕಾರದ ಸ್ವತ್ತಿನಲ್ಲಿ ಅಕ್ರಮವಾಗಿ ಧ್ವನಿ ವರ್ಧಕಗಳನ್ನು ಅಳವಡಿಸಿ, ಸಾಮೂಹಿಕ ಪ್ರಾರ್ಥನೆ ನಡೆಸಿದ 28 ಜನರ ವಿರುದ್ಧ, 'ಗಲಭೆ' ಮತ್ತು 'ಅತಿಕ್ರಮಣ' ಆರೋಪಗಳ ಅಡಿಯಲ್ಲಿ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.

ಕಟ್ಟಡ ಸಂಕೀರ್ಣವೊಂದರಲ್ಲಿ ಭಾನುವಾರ ನಮಾಜ್‌ ಮಾಡುತ್ತಿರುವ ವಿಡಿಯೊ ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡಿತ್ತು. ಬಲಪಂಥೀಯ ಸಂಘಟನೆಯೊಂದರ ಕಾರ್ಯಕರ್ತ ರಾಮ್‌ಗೋಪಾಲ್‌ ಪಾಂಡೆ ಎನ್ನುವವರು ಈ ಬಗ್ಗೆ ಸದರ್‌ ಕೊತ್ವಾಲಿ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.

ಪೊಲೀಸರು, ಮೊಹಮ್ಮದ್‌ ಆದಿಲ್‌, ಜುಮ್ಮಾನ್‌ ಖಾನ್‌, ನಿಶಾ ಖಾನ್‌ ಮತ್ತು ಇತರ 25 ಅಪರಿಚಿತರ ವಿರುದ್ಧ ಸೆಕ್ಷನ್‌ 477 (ಕ್ರಿಮಿನಲ್‌ ಅತಿಕ್ರಮಣ), ಸೆಕ್ಷನ್‌ 147 (ಗಲಭೆ), ಮತ್ತು ಸೆಕ್ಷನ್‌ 298ರ (ಧಾರ್ಮಿಕ ಭಾವನೆಗಳಿಗೆ ಧಕ್ಕೆ ತರುವ ಉದ್ದೇಶ) ಅಡಿಯಲ್ಲಿ ಎಫ್‌ಐಆರ್‌ ದಾಖಲಿಸಿದ್ದಾರೆ.

'ನಮಾಜ್‌ ಮಾಡಿರುವ ಕಟ್ಟಡವು ರಾಜ್ಯ ಸರ್ಕಾರ ಕಾಶಿ ರಾಮ್‌ ಕಾಲೊನಿಯ ಮಕ್ಕಳಿಗಾಗಿ ನಿರ್ಮಿಸಿರುವ ವೃತ್ತಿಪರ ಶಿಕ್ಷಣ ಶಾಲೆ. ನಮಾಜ್ ಮಾಡುವ ಸಲುವಾಗಿ ನಿರ್ದಿಷ್ಟ ಧರ್ಮದ ಕೆಲವರು ಇದನ್ನು ಅತಿಕ್ರಮಣ ಮಾಡಿ, ನಮ್ಮ ಧಾರ್ಮಿಕ ಭಾವನೆಗಳಿಗೆ ಧಕ್ಕೆ ತಂದಿದ್ದಾರೆ. ಅವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು' ಎಂದು ರಾಮ್‌ಗೋಪಾಲ್‌ ಪಾಂಡೆ ತಮ್ಮ ದೂರಿನಲ್ಲಿ ಉಲ್ಲೇಖಿಸಿದ್ದಾರೆ.

ಆರೋಪಿಗಳು ತಲೆಮರೆಸಿಕೊಂಡಿದ್ದಾರೆ ಎಂದು ಪೊಲೀಸರು ಹೇಳಿದ್ದಾರೆ.

ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡಿದ ವಿಡಿಯೊಗಳ ಪರಿಶೀಲನೆ ನಡೆಸುತ್ತಿದ್ದೇವೆ. ಸದ್ಯ ದಾಖಲಿಸಿರುವ ಸಾಕ್ಯ್ಷಗಳ ಆಧಾರದಲ್ಲಿ ಆರೋಪಿಗಳನ್ನು ಗುರುತಿಸಿ, ತನಿಖೆಗೆ ಹಾಜರಾಗುವಂತೆ ನೋಟಿಸ್ ನೀಡಲಾಗುವುದು ಎಂದು ಪೊಲೀಸ್ ವೃತ್ತಾಧಿಕಾರಿ ಸಂದೀಪ್‌ ಸಿಂಗ್‌ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT