ಭಾನುವಾರ, 16 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

Modi 3.0 Cabinet |19 ಸಚಿವರ ವಿರುದ್ಧ ಗಂಭೀರ ಅಪರಾಧ ಪ್ರಕರಣ

Published 11 ಜೂನ್ 2024, 15:35 IST
Last Updated 11 ಜೂನ್ 2024, 15:35 IST
ಅಕ್ಷರ ಗಾತ್ರ

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಎನ್‌ಡಿಎ ಸರ್ಕಾರದ 28 ಸಚಿವರ ವಿರುದ್ಧ ಅಪರಾಧ ಪ್ರಕರಣಗಳಿವೆ. ಇವರಲ್ಲಿ 19 ಸಚಿವರು ಕೊಲೆ ಯತ್ನ, ಮಹಿಳೆಯರ ವಿರುದ್ಧ ಅಪರಾಧ ಹಾಗೂ ದ್ವೇಷ ಭಾಷಣದಂತಹ ಗಂಭೀರ ಆರೋಪಗಳನ್ನು ಎದುರಿಸುತ್ತಿದ್ದಾರೆ ಎಂದು ಅಸೋಸಿಯೇಷನ್ ​​ಫಾರ್ ಡೆಮಾಕ್ರಟಿಕ್ ರಿಫಾರ್ಮ್ಸ್ (ಎಡಿಆರ್) ತಿಳಿಸಿದೆ. 

ನೂತನ ಸಚಿವರ ಅಪರಾಧ ಹಿನ್ನೆಲೆ, ಹಣಕಾಸು, ಶಿಕ್ಷಣ, ಲಿಂಗ ಹಾಗೂ ಇತರ ವಿಷಯಗಳ ಬಗ್ಗೆ ವಿಶ್ಲೇಷಣೆ ನಡೆಸಿ ಎಡಿಆರ್‌ ಮಂಗಳವಾರ ವರದಿ ಪ್ರಕಟಿಸಿದೆ. ಬಂದರು, ಒಳನಾಡು ಹಾಗೂ ಜಲಸಾರಿಗೆ ರಾಜ್ಯ ಸಚಿವ ಶಂತನು ಠಾಕೂರ್‌, ಶಿಕ್ಷಣ ಹಾಗೂ ಈಶಾನ್ಯ ಪ್ರದೇಶ ಅಭಿವೃದ್ಧಿ ರಾಜ್ಯ ಸಚಿವ ಸುಕಂತ ಮಜುಂದಾರ್ ವಿರುದ್ಧ ಕೊಲೆ ಯತ್ನಕ್ಕೆ ಸಂಬಂಧಿಸಿದ ಪ್ರಕರಣಗಳಿವೆ. 

ಗೃಹ ಖಾತೆ ರಾಜ್ಯ ಸಚಿವ ಬಂಡಿ ಸಂಜಯ ಕುಮಾರ್‌, ಠಾಕೂರ್‌, ಮಜುಂದಾರ್‌, ಪ್ರವಾಸೋದ್ಯಮ ಖಾತೆ ರಾಜ್ಯ ಸಚಿವ ಸುರೇಶ್ ಗೋಪಿ ಹಾಗೂ ಬುಡಕಟ್ಟು ವ್ಯವಹಾರಗಳ ಸಚಿವ ಜುಯಲ್‌ ಓರಮ್‌ ಮೇಲೆ ಮಹಿಳೆಯರ ವಿರುದ್ಧದ ಅಪರಾಧಗಳಿಗೆ ಸಂಬಂಧಿಸಿದ ಪ್ರಕರಣಗಳು ದಾಖಲಾಗಿವೆ. 

ಕೇಂದ್ರ ಸಂಪುಟದಲ್ಲಿರುವ ಶೇ 66ರಷ್ಟು ಸಚಿವರು (46 ಮಂದಿ) 51ರಿಂದ 70 ವರ್ಷಗಳ ನಡುವಿನವರು. 71ರಿಂದ 80 ವರ್ಷ ನಡುವಿನ ಎಂಟು ಮಂತ್ರಿಗಳಿದ್ದಾರೆ. ಶೇ 24ರಷ್ಟು ಸಚಿವರು 31ರಿಂದ 50 ವರ್ಷ ನಡುವಿನವರು ಎಂದು ಎಡಿಆರ್ ತಿಳಿಸಿದೆ. 

ಸರಾಸರಿ ಆಸ್ತಿ ₹107 ಕೋಟಿ: ಹೊಸ ಮಂತ್ರಿ ಪರಿಷತ್ತಿನಲ್ಲಿ 70 ಸಚಿವರು (ಶೇ 99) ಕೋಟ್ಯಾಧಿಪತಿಗಳು. ಅವರ ಸರಾಸರಿ ಆಸ್ತಿ ₹107 ಕೋಟಿ. ಗ್ರಾಮೀಣಾಭಿವೃದ್ಧಿ ಖಾತೆಯ ರಾಜ್ಯ ಸಚಿವ ಚಂದ್ರಶೇಖರ್ ಪೆಮ್ಮಸಾನಿ ₹5,705 ಕೋಟಿ ಆಸ್ತಿ ಹೊಂದಿದ್ದಾರೆ. ನಂತರದ ಸ್ಥಾನಗಳಲ್ಲಿ ಸಂಪರ್ಕ ಸಚಿವ ಜ್ಯೋತಿರಾಧಿತ್ಯ ಸಿಂಧಿಯಾ (₹424 ಕೋಟಿ) ಹಾಗೂ ಬೃಹತ್‌ ಕೈಗಾರಿಕೆ ಸಚಿವ ಎಚ್.ಡಿ.ಕುಮಾರಸ್ವಾಮಿ (₹217 ಕೋಟಿ) ಇದ್ದಾರೆ ಎಂದು ಎಡಿಆರ್ ವರದಿ ತಿಳಿಸಿದೆ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT