ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

Jammu and Kashmir | ಮೆಹಬೂಬಾ ಸೇರಿದಂತೆ ಹಲವರಿಗೆ ಗೃಹಬಂಧನ: ಆರೋಪ

ಜಮ್ಮು–ಕಾಶ್ಮೀರಕ್ಕೆ ನೀಡಿದ್ದ ವಿಶೇಷ ಸ್ಥಾನಮಾನ ರದ್ದುಪಡಿಸಿದ 4ನೇ ವಾರ್ಷಿಕೋತ್ಸವ
Published 5 ಆಗಸ್ಟ್ 2023, 21:30 IST
Last Updated 5 ಆಗಸ್ಟ್ 2023, 21:30 IST
ಅಕ್ಷರ ಗಾತ್ರ

ಶ್ರೀನಗರ: ‘ಜಮ್ಮು–ಕಾಶ್ಮೀರಕ್ಕೆ ನೀಡಿದ್ದ ವಿಶೇಷ ಸ್ಥಾನಮಾನ ರದ್ದುಪಡಿಸಿದ 4ನೇ ವಾರ್ಷಿಕೋತ್ಸವದ ದಿನವೇ(ಶನಿವಾರ)  ತಮ್ಮನ್ನು ಹಾಗೂ ಪಕ್ಷದ ಕೆಲವು ಹಿರಿಯ ನಾಯಕರನ್ನು ಗೃಹಬಂಧನದಲ್ಲಿ ಇರಿಸಲಾಗಿದೆ’ ಎಂದು ಪೀಪಲ್ಸ್ ಡೆಮಾಕ್ರಟಿಕ್ ಪಕ್ಷದ (ಪಿಡಿಪಿ) ಮುಖ್ಯಸ್ಥೆ ಮೆಹಬೂಬಾ ಮುಫ್ತಿ ಆರೋಪಿಸಿದ್ದಾರೆ.

‘ವಿಶೇಷ ಸ್ಥಾನಮಾನ ರದ್ದುಗೊಳಿಸಿದ ವಾರ್ಷಿಕೋತ್ಸವ ಆಚರಣೆ ಮಾಡಿ ಎಂದು ಕಾಶ್ಮೀರದ ಜನರಿಗೆ ಕರೆ ನೀಡುವ ದೊಡ್ಡ ಹೋರ್ಡಿಂಗ್‌ಗಳನ್ನು ಹಾಕಲಾಗಿದೆ. ಆದರೆ, ಮತ್ತೊಂದೆಡೆ ಜನರ ಭಾವನೆಗಳನ್ನು ಉಸಿರುಗಟ್ಟಿಸುವಂಥ ವಿವೇಚನಾರಹಿತ ಕ್ರಮಗಳನ್ನು ಬಳಸಿಕೊಳ್ಳಲಾಗುತ್ತಿದೆ’ ಎಂದೂ ಅವರು ದೂರಿದ್ದಾರೆ.

‘ಜಮ್ಮು ಮತ್ತು ಕಾಶ್ಮೀರವು ಸಹಜ ಸ್ಥಿತಿಗೆ ಮರಳಿದೆ ಎಂಬುದಾಗಿ ಕೇಂದ್ರ ಸರ್ಕಾರವು ಸುಪ್ರೀಂ ಕೋರ್ಟ್‌ಗೆ ಸುಳ್ಳು ಹೇಳಿಕೆಗಳನ್ನು ನೀಡಿದೆ ಎಂದೂ ಅವರು ಟ್ವೀಟ್ ಮಾಡಿದ್ದಾರೆ.

‘370ನೇ ವಿಧಿಯ ಕುರಿತ ವಿಚಾರಣೆ ಸಂದರ್ಭದಲ್ಲಿ ಸುಪ್ರೀಂಕೋರ್ಟ್, ರಾಜ್ಯದಲ್ಲಿನ ಈ ಎಲ್ಲಾ ಬೆಳವಣಿಗೆಗಳನ್ನು ಪರಿಗಣಿಸುತ್ತದೆ ಎಂಬುದಾಗಿ ಭಾವಿಸುವೆ’ ಎಂದೂ ಮತ್ತೊಂದು ಟ್ವೀಟ್‌ನಲ್ಲಿ ಅವರು ತಿಳಿಸಿದ್ದಾರೆ.

‘ವಿಶೇಷ ಸ್ಥಾನಮಾನ ರದ್ದುಪಡಿಸಿದ 4ನೇ ವರ್ಷಾಚರಣೆಯಂದು ಶಾಂತಿಯುತ ಕಾರ್ಯಕ್ರಮವನ್ನು ಆಯೋಜಿಸಲು ಪಿಡಿಪಿಗೆ ಅನುಮತಿ ನಿರಾಕರಿಸಿದ ಬಳಿಕ, ಪಕ್ಷದ ಕೆಲವು ನಾಯಕರ ಮೇಲೆ ಮಧ್ಯರಾತ್ರಿಯಲ್ಲಿ ಬಂಧಿಸಿ ದಬ್ಬಾಳಿಕೆ ನಡೆಸಲಾಗಿದೆ ಎಂದು ಆರೋಪಿಸಿದ್ದಾರೆ.

ಪಕ್ಷದ ಮುಖ್ಯ ವಕ್ತಾರ ಸೈಯದ್ ಸುಹೈಲ್ ಬುಖಾರಿ, ಯುವ ಘಟಕದ ಅಧ್ಯಕ್ಷ ವಹೀದ್ ಉರ್ ರೆಹಮಾನ್ ಪರ‍್ರಾ, ರಾಜ್ಯ ಕಾರ್ಯದರ್ಶಿ ಅಬ್ದುಲ್ ಹಮೀದ್ ಕೊಹ್‌ಶೀನ್, ಹೆಚ್ಚುವರಿ ವಕ್ತಾರ ಅಬ್ದುಲ್ ರೂಫ್ ಭಟ್, ಶ್ರೀನಗರ ಜಿಲ್ಲಾ ಘಟಕದ ಅಧ್ಯಕ್ಷ ಅಬ್ದುಲ್ ಖಯ್ಯೂಮ್ ಭಟ್ ಸೇರಿದಂತೆ ಪಕ್ಷದ ನಾಯಕರು ಹಾಗೂ ಕಾರ್ಯಕರ್ತರನ್ನು ಬಂಧಿಸಿ ಬೇರೆ ಬೇರೆ ಪೊಲೀಸ್ ಠಾಣೆಗಳಲ್ಲಿ ಇರಿಸಲಾಗಿದೆ’ ಎಂದೂ ಅವರು ಹೇಳಿದ್ದಾರೆ.

ಶೇರ್ ಏ ಕಾಶ್ಮೀರ್ ಪಾರ್ಕ್ ಸಮೀಪವಿರುವ ಪಿಡಿಪಿಯ ಕೇಂದ್ರ ಕಚೇರಿಗೆ ಹೋಗುವ ಮಾರ್ಗಗಳನ್ನೂ ಬಂದ್ ಮಾಡಲಾಗಿದೆ. ಪಕ್ಷದ ಕಚೇರಿಯೊಳಗೆ ಯಾವುದೇ ಸಿಬ್ಬಂದಿಯನ್ನೂ ಬಿಟ್ಟಿರಲಿಲ್ಲ. ಆದರೂ ಪಿಡಿಪಿಯ ಕೆಲ ಕಾರ್ಯಕರ್ತರು ರಾಜ್‌ಭಾಗ್‌ನಲ್ಲಿ ಪ್ರತಿಭಟನೆ ನಡೆಸುವಲ್ಲಿ ಯಶಸ್ವಿಯಾದರು.

ಈ ನಡುವೆ ನ್ಯಾಷನಲ್ ಕಾನ್ಫರೆನ್ಸ್ ಪಕ್ಷ ಕೂಡ, ತನ್ನ ಪಕ್ಷದ ಪ್ರಧಾನ ಕಚೇರಿ ನವಾ-ಇ-ಸುಬಾಹ್ ಅನ್ನು ಸೀಲ್ ಮಾಡಲಾಗಿದೆ ಮತ್ತು ಯಾರಿಗೂ ಒಳಗೆ ಹೋಗಲು ಅನುಮತಿ ನೀಡಿಲ್ಲ ಎಂದು ಸಾಮಾಜಿಕ ಮಾಧ್ಯಮವೊಂದರಲ್ಲಿ ದೂರಿದೆ.

ಜಮ್ಮು ಮತ್ತು ಕಾಶ್ಮೀರಕ್ಕೆ ಸಂವಿಧಾನದ 370ನೇ ವಿಧಿ ಅಡಿ ನೀಡಲಾಗಿದ್ದ ವಿಶೇಷ ಸ್ಥಾನಮಾನವನ್ನು ಕೇಂದ್ರ ಸರ್ಕಾರವು 2019ರ ಅಗಸ್ಟ್ 5ರಂದು ಹಿಂಪಡೆದಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT