ಗುರುವಾರ, 22 ಫೆಬ್ರುವರಿ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭಾರತ ಪ್ರವೇಶಿಸಿದ ಮ್ಯಾನ್ಮಾರ್‌ 416 ಸೈನಿಕರು

ಮ್ಯಾನ್ಮಾರ್‌ನಲ್ಲಿ ಸೇನೆ– ಬಂಡುಕೋರರ ನಡುವೆ ಹೋರಾಟ ತೀವ್ರ
Published 11 ಜನವರಿ 2024, 16:45 IST
Last Updated 11 ಜನವರಿ 2024, 16:45 IST
ಅಕ್ಷರ ಗಾತ್ರ

ನವದೆಹಲಿ: ಮ್ಯಾನ್ಮಾರ್‌ ಸೇನೆ ಮತ್ತು ಅಲ್ಲಿನ ಬಂಡುಕೋರ ಗುಂಪುಗಳ ಮಧ್ಯೆ ನಡೆಯುತ್ತಿರುವ ಶಸ್ತ್ರಸಜ್ಜಿತ ಹೋರಾಟವು ‘ಗಡಿ ಭಾಗದಲ್ಲಿ ಕಳವಳ’ಕ್ಕೆ ಕಾರಣವಾಗಿದೆ ಎಂದು ಸೇನಾ ಮುಖ್ಯಸ್ಥ ಜನರಲ್‌ ಮನೋಜ್‌ ಪಾಂಡೆ ಹೇಳಿದ್ದಾರೆ.

ಭಾರತ–ಮ್ಯಾನ್ಮಾರ್‌ ಗಡಿಯಲ್ಲಿ ಭದ್ರತೆಗೆ ಅಸ್ಸಾಂ ರೈಫಲ್ಸ್‌ನ 20 ತುಕಡಿಗಳನ್ನು ನಿಯೋಜಿಸಲಾಗಿದ್ದು, ಭದ್ರತೆಯನ್ನು ಇನ್ನಷ್ಟು ಹೆಚ್ಚಿಸಲು ಸೇನೆಯು ಯೋಜನೆ ರೂಪಿಸಿದೆ. ಗಡಿಯುದ್ದಕ್ಕೂ ಬೇಲಿ ಹಾಕುವ ಚಿಂತನೆಯೂ ನಡೆದಿದೆ. 

‘ಸಂಘರ್ಷ ತೀವ್ರಗೊಂಡ ಬಳಿಕ ಕಳೆದ ಎರಡು ತಿಂಗಳಲ್ಲಿ ಮ್ಯಾನ್ಮಾರ್‌ನ 416 ಸೈನಿಕರು ಗಡಿ ದಾಟಿ ಭಾರತಕ್ಕೆ ಬಂದಿದ್ದರು. ಕೆಲವು ಪ್ರಜೆಗಳು ಆಶ್ರಯ ಅರಸಿ ಮಿಜೋರಾಂ ಮತ್ತು ಮಣಿಪುರ ಪ್ರವೇಶಿಸಿದ್ದಾರೆ. ಅಲ್ಲಿನ ಕೆಲವು ಬಂಡುಕೋರ ಗುಂಪುಗಳು ಮಣಿಪುರಕ್ಕೆ ನುಸುಳಲು ಪ್ರಯತ್ನಿಸುತ್ತಿವೆ’ ಎಂದು ಪಾಂಡೆ ಅವರು ಗುರುವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು. 

ಭಾರತದ ಗಡಿ ಪ್ರವೇಶಿಸಿದ್ದ ಎಲ್ಲ 416 ಸೈನಿಕರನ್ನು ಸ್ವದೇಶಕ್ಕೆ ಮರಳಿ ಕಳುಹಿಸಲಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. 

ಜುಂಟಾ ವಿರೋಧಿ ಗುಂಪುಗಳು ಭಾರತ–ಮ್ಯಾನ್ಮಾರ್‌ ಗಡಿ ಸಮೀಪದ ಕೆಲವು ಪಟ್ಟಣಗಳು ಮತ್ತು ಸೇನಾ ನೆಲೆಗಳನ್ನು ತನ್ನ ನಿಯಂತ್ರಣಕ್ಕೆ ತೆಗೆದುಕೊಂಡಿರುವುದಾಗಿ ವರದಿಯಾಗಿದೆ. 

ಈಶಾನ್ಯದ ರಾಜ್ಯಗಳಾದ ನಾಗಾಲ್ಯಾಂಡ್‌ ಮತ್ತು ಮಣಿಪುರ ಸೇರಿದಂತೆ ಭಾರತವು ಮ್ಯಾನ್ಮಾರ್‌ನೊಂದಿಗೆ ಒಟ್ಟು 1,640 ಕಿ.ಮೀ ಗಡಿಯನ್ನು ಹಂಚಿಕೊಂಡಿದೆ.  

2021ರ ಫೆಬ್ರುವರಿಯಲ್ಲಿ ನಡೆದ ದಂಗೆಯಲ್ಲಿ ಸೇನೆಯು ಆಡಳಿತವನ್ನು ತನ್ನ ವಶಕ್ಕೆ ಪಡೆದುಕೊಂಡಾಗಿನಿಂದ ಪ್ರಜಾಪ್ರಭುತ್ವ ವ್ಯವಸ್ಥೆಯ ಮರುಸ್ಥಾಪನೆಗೆ ಒತ್ತಾಯಿಸಿ ಮ್ಯಾನ್ಮಾರ್‌ನಲ್ಲಿ ವ್ಯಾಪಕ ಪ್ರತಿಭಟನೆಗಳು ನಡೆಯುತ್ತಿವೆ. ಬಂಡುಕೋರ ಗುಂಪುಗಳನ್ನು ಸದೆಬಡಿಯಲು ಸೇನೆಯು ಹಲವು ವೈಮಾನಿಕ ದಾಳಿಗಳನ್ನು ನಡೆಸಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT