ಭಾನುವಾರ, 24 ಸೆಪ್ಟೆಂಬರ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪುತ್ರಿಯರು ಕನಿಷ್ಠ ಪದವಿ ಪಡೆಯಲಿ: ಗ್ರಾಮೀಣ ಭಾಗದ ಶೇ 78ರಷ್ಟು ಪಾಲಕರ ಬಯಕೆ

Published 9 ಆಗಸ್ಟ್ 2023, 14:18 IST
Last Updated 9 ಆಗಸ್ಟ್ 2023, 14:18 IST
ಅಕ್ಷರ ಗಾತ್ರ

ನವದೆಹಲಿ: ದೇಶದ ಗ್ರಾಮೀಣ ಪ್ರದೇಶದ ಪಾಲಕರ ಪೈಕಿ ಶೇ 78ರಷ್ಟು ಮಂದಿ ತಮ್ಮ ಪುತ್ರಿಯರು ಕನಿಷ್ಠಪಕ್ಷ ಪದವಿ ಇಲ್ಲವೇ ಅದಕ್ಕಿಂತ ಹೆಚ್ಚು ಶಿಕ್ಷಣ ಪಡೆಯಬೇಕು ಎಂಬ ಬಯಕೆ ಹೊಂದಿದ್ದಾರೆ ಎಂದು ಸಮೀಕ್ಷೆಯೊಂದು ತಿಳಿಸಿದೆ.

ಮಕ್ಕಳು ಎಷ್ಟು ಹೊತ್ತು ಸ್ಮಾರ್ಟ್‌ಫೋನ್‌ನೊಂದಿಗೆ ಸಮಯ ಕಳೆಯುತ್ತಾರೆ ಎಂಬದರ ಮೇಲೆಯೂ ಸಮೀಕ್ಷೆ ಬೆಳಕು ಚೆಲ್ಲಿದೆ. ಸಮೀಕ್ಷೆ ಭಾಗವಾಗಿದ್ದವರ ಪೈಕಿ ಶೇ 73ರಷ್ಟು ಮಕ್ಕಳು ದಿನದಲ್ಲಿ ಎರಡು ಗಂಟೆಗಳಿಗೂ ಕಡಿಮೆ ಅವಧಿಗೆ ಸ್ಮಾರ್ಟ್‌ಫೋನ್‌ ಬಳಸುತ್ತಾರೆ ಎಂಬುದು ತಿಳಿದು ಬಂದಿದೆ.

‘ಗ್ರಾಮೀಣ ಭಾರತದಲ್ಲಿ ಪ್ರಾಥಮಿಕ ಶಿಕ್ಷಣದ ಸ್ಥಿತಿಗತಿ–2022’ ಎಂಬ ಸಮೀಕ್ಷೆ ವರದಿಯಲ್ಲಿ ಈ ಅಂಶಗಳಿವೆ. ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರು ಬುಧವಾರ ಈ ವರದಿಯನ್ನು ಬಿಡುಗಡೆ ಮಾಡಿದರು.

20 ರಾಜ್ಯಗಳ ಗ್ರಾಮೀಣ ಪ್ರದೇಶದ 6,229 ಮನೆಗಳನ್ನು ಸಮೀಕ್ಷೆಗೆ ಒಳಪಡಿಸಲಾಗಿತ್ತು. ಟ್ರಾನ್ಸ್‌ಫಾರ್ಮಿಂಗ್ ರೂರಲ್‌ ಇಂಡಿಯಾ ಫೌಂಡೇಷನ್‌ನ (ಟಿಆರ್‌ಐಎಫ್‌) ಉಪಕ್ರಮವಾದ ಡೆವೆಲೆಪ್‌ಮೆಂಟ್ ಇಂಟೆಲಿಜೆನ್ಸ್‌ ಯುನಿಟ್‌(ಡಿಐಯು) ಹಾಗೂ ಸಂಬೋಧಿ ಪ್ರೈವೇಟ್‌ ಜಂಟಿಯಾಗಿ ಈ ಸಮೀಕ್ಷೆ ನಡೆಸಿದ್ದವು.

8 ಹಾಗೂ ಅದಕ್ಕಿಂತ ಹೆಚ್ಚಿನ ತರಗತಿಯಲ್ಲಿ ಓದುತ್ತಿರುವವರ ಪೈಕಿ ಶೇ 25.4ರಷ್ಟು ಮಕ್ಕಳು 2–4 ಗಂಟೆಗಳಷ್ಟು ಕಾಲ ಸ್ಮಾರ್ಟ್‌ಫೋನ್‌ನೊಂದಿಗೆ ಸಮಯ ಕಳೆಯುತ್ತಾರೆ. 1ರಿಂದ 3ನೇ ತರಗತಿ ವರೆಗಿನವರ ಪೈಕಿ ಶೇ 16.8ರಷ್ಟು ಮಕ್ಕಳು ಇಷ್ಟೇ ಸಮಯ ಸ್ಮಾರ್ಟ್‌ಫೋನ್‌ ಬಳಸುತ್ತಾರೆ ಎಂಬ ಅಂಶ ಸಮೀಕ್ಷೆಯಿಂದ ತಿಳಿದುಬಂದಿದೆ.

‘ಗಂಡು ಮತ್ತು ಹೆಣ್ಣು ಮಕ್ಕಳು ತಾಂತ್ರಿಕ ಶಿಕ್ಷಣ, ಸ್ನಾತಕ ಮತ್ತು ಸ್ನಾತಕೋತ್ತರ ಪದವಿ ಸೇರಿದಂತೆ ಉನ್ನತ ಶಿಕ್ಷಣ ಪಡೆಯಬೇಕು ಎಂದು ಪಾಲಕರು ಬಯಸುತ್ತಾರೆ. ಶೇ 82ರಷ್ಟು ಪಾಲಕರು ಗಂಡು ಮಕ್ಕಳು ಪದವಿ ಹಾಗೂ ಹೆಚ್ಚಿನ ಶಿಕ್ಷಣ ಪಡೆಯಬೇಕು ಎಂಬ ಇಚ್ಛೆ ವ್ಯಕ್ತಪಡಿಸಿದ್ದಾರೆ’ ಎಂದು ಇದೇ ವರದಿಯಲ್ಲಿ ಹೇಳಲಾಗಿದೆ.

ವರದಿಯಲ್ಲಿನ ಪ್ರಮುಖ ಅಂಶಗಳು

ಹೆಚ್ಚಿನ ವಿದ್ಯಾಭ್ಯಾಸದ ಸೌಲಭ್ಯ ಇರುವ ಶಾಲೆಗಳು ಗ್ರಾಮಗಳಲ್ಲಿ ಅಥವಾ ಗ್ರಾಮಗಳ ಹತ್ತಿರ ಇಲ್ಲದಿರುವುದು ಮಕ್ಕಳು ಶಾಲೆ ಅರ್ಧಕ್ಕೆ ಬಿಡಲು ಕಾರಣ

ತಾಯಿಯ ಮೇಲ್ವಿಚಾರಣೆಯಲ್ಲಿ ವಿದ್ಯಾಭ್ಯಾಸ ಮಾಡುವ ಮಕ್ಕಳ ಪ್ರಮಾಣ ಶೇ 62.5ರಷ್ಟು 

ಮಕ್ಕಳನ್ನು ಟ್ಯೂಷನ್‌ಗೆ ಕಳುಹಿಸುವ ಪಾಲಕರ ಪ್ರಮಾಣ ಶೇ 38

ಶೇ 25 – ಪ್ರಾಥಮಿಕ ಹಂತದಲ್ಲಿಯೇ ಶಾಲೆ ಬಿಟ್ಟ ಗಂಡುಮಕ್ಕಳ ಪ್ರಮಾಣ

ಶೇ 75 – ಪ್ರಾಥಮಿಕ ಹಂತದ ಶಿಕ್ಷಣ ಬಳಿಕ ಶಾಲೆ ಬಿಟ್ಟ ಗಂಡುಮಕ್ಕಳ ಪ್ರಮಾಣ

ಶೇ 35 – ಪ್ರಾಥಮಿಕ ಹಂತದಲ್ಲಿಯೇ ಶಾಲೆ ಬಿಟ್ಟ ಹೆಣ್ಣುಮಕ್ಕಳ ಪ್ರಮಾಣ

ಶೇ 65 – ಪ್ರಾಥಮಿಕ ಹಂತದ ಶಿಕ್ಷಣ ಬಳಿಕ ಶಾಲೆ ಬಿಟ್ಟ ಹೆಣ್ಣುಮಕ್ಕಳ ಪ್ರಮಾಣ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT