ನವದೆಹಲಿ: ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಸರ್ಕಾರವು ದಲಿತ ಹಾಗೂ ಅಲ್ಪಸಂಖ್ಯಾತ ನಾಯಕರ ವಿರುದ್ಧ ತಾರತಮ್ಯ ತೋರುತ್ತಿದೆ ಎಂದು ಆರೋಪಿಸಿರುವ ಆಮ್ ಆದ್ಮಿ ಪಕ್ಷದ (ಎಎಪಿ) ಸರ್ಕಾರದ ಮಾಜಿ ಸಚಿವ ರಾಜೇಂದ್ರ ಪಾಲ್ ಗೌತಮ್ ಇಂದು (ಶುಕ್ರವಾರ) ಎಎಪಿ ತೊರೆದು ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾಗಿದ್ದಾರೆ.
ಸೀಮಾಪುರಿ ಮೀಸಲು ವಿಧಾನಸಭೆ ಕ್ಷೇತ್ರವನ್ನು ಪ್ರತಿನಿಧಿಸುತ್ತಿರುವ ಗೌತಮ್, ತಮ್ಮ ಶಾಸಕ ಸ್ಥಾನಕ್ಕೂ ರಾಜೀನಾಮೆ ಸಲ್ಲಿಸಿದ್ದಾರೆ.
ಎಎಪಿ ಹಾಗೂ ಪಕ್ಷದ ಎಲ್ಲ ಹುದ್ದೆಗಳಿಗೆ ರಾಜೀನಾಮೆ ಘೋಷಿಸಿದ ಕೆಲವೇ ಹೊತ್ತಿನಲ್ಲಿ ಗೌತಮ್ ಅವರು ಕಾಂಗ್ರೆಸ್‌ಗೆ ಅಧಿಕೃತವಾಗಿ ಸೇರ್ಪಡೆಯಾದರು.
ಕೇಜ್ರಿವಾಲ್ ಅವರಿಗೆ ಬರೆದ ಪತ್ರದಲ್ಲಿ ಎಎಪಿಯಲ್ಲಿ ಸಾಮಾಜಿಕ ನ್ಯಾಯ ಹಾಗೂ ಸಾಮಾಜಿಕ ಸಮಾನತೆಯ ವಿಷಯಗಳನ್ನು ಕಲ್ಪಿಸಿಕೊಳ್ಳುವುದು ಅಸಾಧ್ಯ. ಎಎಪಿಯಲ್ಲಿ ಇದ್ದುಕೊಂಡು ಜೀವನದ ಮೊದಲ ಹಾಗೂ ಕಟ್ಟಕಡೆಯ ಗುರಿಯಾದ ಸಾಮಾಜಿಕ ನ್ಯಾಯ ಗಳಿಸುವುದು ಅಸಾಧ್ಯ ಎಂದು ಅವರು ಹೇಳಿದ್ದಾರೆ.
ಯಾವುದೇ ಆರೋಪಗಳು ಎದುರಾದಾಗ ಪಕ್ಷವು, ಮೇಲ್ವರ್ಗದ ಶಾಸಕರು ಹಾಗೂ ಸಚಿವರ ಬೆಂಬಲಕ್ಕೆ ನಿಲ್ಲುತ್ತದೆ. ಆದರೆ ಆರೋಪ ಸುಳ್ಳಾದರೂ ಮುಸ್ಲಿಂ ಅಥವಾ ದಲಿತರ ಮೇಲೆ ಕ್ರಮ ಕೈಗೊಳ್ಳುತ್ತದೆ. ಆಂತರಿಕವಾಗಿ ಮುಸ್ಲಿಂ ಮತ್ತು ದಲಿತರನ್ನು ಕಪ್ಪು ಪಟ್ಟಿಗೆ ಸೇರಿಸುತ್ತದೆ ಎಂದು ಅವರು ಬರೆದುಕೊಂಡಿದ್ದಾರೆ.
2014ರಲ್ಲಿ ಆಮ್ ಆದ್ಮಿ ಪಕ್ಷಕ್ಕೆ ಸೇರಿದ್ದ ಗೌತಮ್, ಕೇಜ್ರಿವಾಲ್ ಸರ್ಕಾರದಲ್ಲಿ ಸಮಾಜ ಕಲ್ಯಾಣ ಸೇರಿದಂತೆ ವಿವಿಧ ಖಾತೆಗಳಲ್ಲಿ ಸಚಿವರಾಗಿದ್ದರು.