ಭಾನುವಾರ, 14 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಸಂಘರ್ಷ ಪೀಡಿತ ಮಣಿಪುರದಲ್ಲಿ 20 ವರ್ಷಗಳ ಬಳಿಕ ಹಿಂದಿ ಸಿನಿಮಾ ಪ್ರದರ್ಶನ

Published 15 ಆಗಸ್ಟ್ 2023, 10:25 IST
Last Updated 15 ಆಗಸ್ಟ್ 2023, 10:25 IST
ಅಕ್ಷರ ಗಾತ್ರ

ಇಂಫಾಲ: ಗಲಭೆ ಪೀಡಿತ ಮಣಿಪುರದಲ್ಲಿ ಸುಮಾರು 20 ವರ್ಷಗಳ ಬಳಿಕ ಇದೇ ಮೊದಲ ಬಾರಿಗೆ ಹಿಂದಿ ಸಿನಿಮಾವೊಂದನ್ನು ಪ್ರದರ್ಶಿಸಲಾಗುತ್ತಿದೆ.

ಸ್ವಾತಂತ್ರ್ಯ ದಿನದ ಅಂಗವಾಗಿ ಮಂಗಳವಾರ ಸಂಜೆ ಹಿಂದಿ ಸಿನಿಮಾ ಪ್ರದರ್ಶಿಸಲು ಬುಡಕಟ್ಟು ಸಂಘಟನೆಯ ‘ಹಮರ್‌ ವಿದ್ಯಾರ್ಥಿಗಳ ಸಂಘ’ವು ನಿರ್ಧರಿಸಿದೆ. ಆದರೆ ತೆರೆ ಕಾಣುವ ಸಿನಿಮಾ ಯಾವುದು ಎಂಬುದರ ಬಗ್ಗೆ ಬಹಿರಂಗಪಡಿಸಿಲ್ಲ.

ಚುರಚಂದಪುರ ಜಿಲ್ಲೆಯ ರೆಂಗಕೈ (ಲಮ್ಕಾ)ದಲ್ಲಿ ಸಿನಿಮಾ ಪ್ರದರ್ಶನ ಆಯೋಜಿಸಲಾಗಿದೆ.

‘ದಶಕಗಳಿಂದ ಬುಡಕಟ್ಟು ಜನಾಂಗದವರನ್ನು ಅಧೀನದಲ್ಲಿರಿಸಿಕೊಂಡ ಭಯೋತ್ಪಾದಕ ಗುಂಪುಗಳಿಗೆ ನಮ್ಮ ಧಿಕ್ಕಾರ ಮತ್ತು ವಿರೋಧವನ್ನು ತೋರಿಸುವ ಸಂದರ್ಭವಿದು. ಸ್ವಾತಂತ್ರ್ಯ ಮತ್ತು ನ್ಯಾಯಕ್ಕಾಗಿ ನಮ್ಮ ಹೋರಾಟವನ್ನು ಮುಂದುವರೆಸುವ ಪ್ರತಿಜ್ಞೆಯನ್ನು ತೆಗೆದುಕೊಳ್ಳುವುದರಲ್ಲಿ ನಮ್ಮೊಂದಿಗೆ ಸೇರಿ’ ಎಂದು ಸಂಘಟನೆ ಸೋಮವಾರ ಕರೆ ನೀಡಿತ್ತು.

ಕೊನೆಯ ಬಾರಿ 1998ರಲ್ಲಿ ಸಾರ್ವಜನಿಕವಾಗಿ ‘ಕುಚ್‌ ಕುಚ್ ಹೋತಾ ಹೈ’ ಸಿನಿಮಾವನ್ನು ಪ್ರದರ್ಶಿಸಲಾಗಿತ್ತು ಎಂದು ವಿದ್ಯಾರ್ಥಿಗಳ ಸಂಘ ಹೇಳಿದೆ.

ಸ್ವಾತಂತ್ರ್ಯ ದಿನವನ್ನು ನಿಷೇಧಿಸಿದ ದೇಶ ವಿರೋಧಿ ಉಗ್ರ ಸಂಘಟನೆಗಳಿಂದ ಸ್ವತಂತ್ರವನ್ನು ನಾವು ಘೋಷಿಸಿದ್ದೇವೆ  ಎಂದು ಸಂಘ ಹೇಳಿಕೆಯಲ್ಲಿ ತಿಳಿಸಿದೆ.

ಸೆಪ್ಟೆಂಬರ್‌ 2000ರಲ್ಲಿ ಬಂಡಾಯವೆದ್ದ ‘ರೆವಲ್ಯೂಷನರಿ ಪೀಪಲ್ಸ್‌ ಫ್ರಂಟ್‌’ (Revolutionary Peoples' Front) ಸಂಘಟನೆಯು ಹಿಂದಿ ಸಿನಿಮಾ ಪ್ರದರ್ಶನಕ್ಕೆ ನಿರ್ಬಂಧ ಹೇರಿತ್ತು. ಅಲ್ಲದೆ 6 ರಿಂದ 8 ಸಾವಿರದಷ್ಟು ವಿಡಿಯೊ ಮತ್ತು ಆಡಿಯೊ ಕ್ಯಾಸೆಟ್‌ಗಳನ್ನು ಸುಟ್ಟುಹಾಕಲಾಗಿತ್ತು.

ಬಾಲಿವುಡ್‌ ಸಿನಿಮಾಗಳು ರಾಜ್ಯದ ಭಾಷೆ ಮತ್ತು ಸಂಸ್ಕೃತಿಗೆ ಧಕ್ಕೆ ಉಂಟುಮಾಡಲಿವೆ ಎನ್ನುವ ಆತಂಕವನ್ನು ಭಯೋತ್ಪಾದಕ ಸಂಘಟನೆಗಳು ಹೊಂದಿದ್ದವು ಎಂಬುದು ಕೇಬಲ್‌ ಆಪರೇಟರ್‌ಗಳ ಮಾತು. ಆದರೆ ಹಿಂದಿ ಸಿನಿಮಾಕ್ಕೆ ನಿರ್ಬಂಧ ಹೇರಿರುವ ಬಗ್ಗೆ ಸಂಘಟನೆಯು ಯಾವುದೇ ಅಧಿಕೃತ ಕಾರಣಗಳನ್ನು ನೀಡಿಲ್ಲ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT