ಶುಕ್ರವಾರ, 3 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಘೇಲ್‌ ಸರ್ಕಾರ ವಿರುದ್ಧ ‘ಆರೋಪಪತ್ರ‘ ಬಿಡುಗಡೆ ಮಾಡಿದ ಶಾ

Published 2 ಸೆಪ್ಟೆಂಬರ್ 2023, 16:16 IST
Last Updated 2 ಸೆಪ್ಟೆಂಬರ್ 2023, 16:16 IST
ಅಕ್ಷರ ಗಾತ್ರ

ರಾಯ್‌ಪುರ (ಪಿಟಿಐ): ಛತ್ತೀಸಗಢದಲ್ಲಿನ ಭೂಪೇಶ್‌ ಬಘೇಲ್‌ ಅವರ ನೇತೃತ್ವದ ಸರ್ಕಾರದ ವಿರುದ್ಧ ಭ್ರಷ್ಟಾಚಾರದ ‘ಆರೋಪ ಪತ್ರ (ಚಾರ್ಜ್‌ಶೀಟ್‌)’ವನ್ನು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಶನಿವಾರ ಬಿಡುಗಡೆ ಮಾಡಿ, ಮುಂಬರುವ ಚುನಾವಣೆಯಲ್ಲಿ ಬಿಜೆಪಿಯು ಪೂರ್ಣ ಬಹುಮತದೊಂದಿಗೆ ರಾಜ್ಯದಲ್ಲಿ ಅಧಿಕಾರ ಚುಕ್ಕಾಣಿ ಹಿಡಿಯಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಬಘೇಲ್‌ ಅವರ ನೇತೃತ್ವದ ಸರ್ಕಾರ ಹಗರಣಗಳು ಮತ್ತು ಲೂಟಿಯಲ್ಲಿ ತೊಡಗಿದೆ. ರಾಜ್ಯದ ಜನರ ವಿರುದ್ಧ ದೌರ್ಜನ್ಯ ಎಸಗುತ್ತಿದೆ ಎಂದು ಈ ಚಾರ್ಚ್‌ಶೀಟ್‌ನಲ್ಲಿ ಬಿಜೆಪಿ ಆರೋಪಿಸಿದೆ. 

ಬಘೇಲ್‌ ಅವರು ಛತ್ತೀಸಗಢವನ್ನು ಗಾಂಧಿ ಪರಿವಾರದ ಎಟಿಎಂ ಆಗಿ ಮಾಡಿದ್ದಾರೆ. ಅವರ ಸರ್ಕಾರವು ಎಲ್ಲ ಭ್ರಷ್ಟಾಚಾರದ ದಾಖಲೆಗಳನ್ನು ಮುರಿದಿದೆ. ಕಾಂಗ್ರೆಸ್‌ ಸರ್ಕಾರ ತನ್ನ ವೋಟ್‌ ಬ್ಯಾಂಕ್‌ ರಾಜಕಾರಣಕ್ಕಾಗಿ ರಾಜ್ಯದ ಬುಡಕಟ್ಟು ಪ್ರದೇಶಗಳಲ್ಲಿ ಧಾರ್ಮಿಕ ಮತಾಂತರವನ್ನು ತಡೆಯುತ್ತಿಲ್ಲ ಎಂದು ಶಾ ಆರೋಪಿಸಿದರು.

ಕೇಂದ್ರದ ತನಿಖಾ ಏಜೆನ್ಸಿಗಳು ರಾಜ್ಯದಲ್ಲಿ ತನಿಖೆ ಮಾಡುತ್ತಿರುವ ಕಲ್ಲಿದ್ದಲು, ಮದ್ಯ, ಆನ್‌ಲೈನ್‌ ಬೆಟ್ಟಿಂಗ್‌ನಂತಹ ಹಗರಣಗಳನ್ನು ಉಲ್ಲೇಖಿಸಿದ ಸಚಿವರು, ಕಾಂಗ್ರೆಸ್‌ನ ಹಗರಣಗಳು, ದೌರ್ಜನ್ಯಗಳು ಹಾಗೂ ದುರಾಡಳಿತದಿಂದ ರಾಜ್ಯವನ್ನು ಬಿಜೆಪಿ ಮಾತ್ರ ಪಾರುಮಾಡಲು ಸಾಧ್ಯ. ಪಕ್ಷವು ರಾಜ್ಯದಲ್ಲಿ ಅಧಿಕಾರಕ್ಕೆ ಬಂದರೆ, ಭ್ರಷ್ಟಾಚಾರ ತಡೆಯಲು ಬಿಗಿ ಕ್ರಮಗಳನ್ನು ಜಾರಿಗೆ ತರಲಿದೆ. ಅಲ್ಲದೆ, ಎರಡು ವರ್ಷಗಳಲ್ಲಿ ರಾಜ್ಯದ ಪ್ರತಿ ಮನೆಗೆ ಶುದ್ಧ ಕುಡಿಯುವ ನೀರು ಪೂರೈಸಲಿದೆ ಎಂದು ಭರವಸೆ ನೀಡಿದರು.

ಅಕ್ರಮ ಬೆಟ್ಟಿಂಗ್ ಆ್ಯಪ್‌ ‘ಮಹದೇವ್‌ ಆನ್‌ಲೈನ್‌ ಬುಕ್‌’ಗೆ ಸಂಬಂಧಿಸಿದ ಹಣ ಅಕ್ರಮ ವರ್ಗಾವಣೆ ಪ್ರಕರಣ ಉಲ್ಲೇಖಿಸಿದ ಅಮಿತ್‌ ಶಾ ಅವರು, ಆನ್‌ಲೈನ್‌ ಜೂಜಿಗೆ ಯುವಜನರನ್ನು ತಳ್ಳುತ್ತಿರುವ, ಸಾವಿರಾರು ಕೋಟಿಯ ಭ್ರಷ್ಟಾಚಾರ ನಡೆಸಿರುವ, ಆದಿವಾಸಿಗಳ ಹಕ್ಕುಗಳ ಬಗ್ಗೆ ಬರೀ ಬಾಯಿಮಾತು ಆಡುವ ಬಘೇಲ್‌ ನೇತೃತ್ವದ ಸರ್ಕಾರ ಬೇಕೆ? ಅಥವಾ ಯುವಜನರ ಅಭಿವೃದ್ಧಿಯ ಕೆಲಸ ಮಾಡುವ, ರಾಜ್ಯದ ಅಭಿವೃದ್ಧಿಗೆ ನಾಂದಿ ಹಾಡುವ ಹಾಗೂ ಆದಿವಾಸಿಗಳ ಹಕ್ಕುಗಳು ಮತ್ತು ಸಂಸ್ಕೃತಿಯನ್ನು ಬಿಜೆಪಿ ಸರ್ಕಾರ ಬೇಕೆ? ಎನ್ನುವುದನ್ನು ರಾಜ್ಯದ ಜನತೆಯೇ ನಿರ್ಧರಿಸಲಿ ಎಂದರು.

ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ರಾಷ್ಟ್ರೀಯ ಪ್ರಜಾಸತ್ತಾತ್ಮಕ ಒಕ್ಕೂಟದ (ಎನ್‌ಡಿಎ) ಸರ್ಕಾರವೇ ಮತ್ತೆ ಕೇಂದ್ರದಲ್ಲಿ ಅಧಿಕಾರಕ್ಕೆ ಬರಲಿದೆ ಎಂದು ಅಮಿತ್‌ ಶಾ ಇದೇ ವೇಳೆ ವಿಶ್ವಾಸ ವ್ಯಕ್ತಪಡಿಸಿದರು. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT