ಭಾನುವಾರ, 14 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಪರೀಕ್ಷೆ ಅಕ್ರಮ ತಡೆ | ಎಐ–ಸಿ.ಸಿ.ಟಿ.ವಿ. ನಿಗಾಕ್ಕೆ ಮುಂದಾದ ಯುಪಿಎಸ್‌ಸಿ

ಪರೀಕ್ಷೆಯಲ್ಲಿ ಅಕ್ರಮ ತಡೆಗೆ ತಂತ್ರಜ್ಞಾನ ಬಳಕೆಗೆ ಯೋಜನೆ, ಟೆಂಡರ್‌ ಆಹ್ವಾನಿಸಿದ ಆಯೋಗ
Published 24 ಜೂನ್ 2024, 14:37 IST
Last Updated 24 ಜೂನ್ 2024, 14:37 IST
ಅಕ್ಷರ ಗಾತ್ರ

ನವದೆಹಲಿ: ನೀಟ್‌, ನೆಟ್‌ ಅಕ್ರಮಗಳು ವಿವಾದದ ಸ್ವರೂಪ ಪಡೆದಿರುವ ಬೆನ್ನಲ್ಲೇ, ದೇಶದ ಪ್ರಮುಖ ನೇಮಕಾತಿ ಸಂಸ್ಥೆ ಕೇಂದ್ರ ಲೋಕಸೇವಾ ಆಯೋಗವು (ಯುಪಿಎಸ್‌ಸಿ) ವಿವಿಧ ಪರೀಕ್ಷೆಗಳಲ್ಲಿ ಪರೀಕ್ಷಾ ವಂಚನೆ ತಡೆಗಟ್ಟಲು ಮುಖ ಚಹರೆ ಗುರುತಿಸುವ ತಂತ್ರಜ್ಞಾನ ಮತ್ತು ಕೃತಕ ಬುದ್ಧಿಮತ್ತೆ (ಎಐ) ಆಧಾರಿತ ಸಿ.ಸಿ.ಟಿ.ವಿ. ನಿಗಾ ವ್ಯವಸ್ಥೆ ಅಳವಡಿಸಲು ಚಿಂತನೆ ನಡೆಸಿದೆ.   

ಆಧಾರ್‌ ಆಧರಿತ ಬೆರಳಚ್ಚು ದೃಢೀಕರಣ (ಅಥವಾ ಡಿಜಿಟಲ್‌ ಬೆರಳಚ್ಚು ಸೆರೆಹಿಡಿಯುವುದು) ಮತ್ತು ಅಭ್ಯರ್ಥಿಗಳ ಮುಖಚಹರೆ ಗುರುತು ಹಿಡಿಯುವುದು ಹಾಗೂ ಇ–ಪ್ರವೇಶಪತ್ರದ ಕ್ಯುಆರ್‌ ಕೋಡ್‌ ಸ್ಕ್ಯಾನಿಂಗ್‌ ಮಾಡುವ ವ್ಯವಸ್ಥೆ ಅಭಿವೃದ್ಧಿಪಡಿಸಲು ಅನುಭವಿ ಸರ್ಕಾರಿ ಸ್ವಾಮ್ಯದ ಸಂಸ್ಥೆಗಳಿಂದ ಯುಪಿಎಸ್‌ಸಿ ಇತ್ತೀಚೆಗೆ ಟೆಂಡರ್‌ ಆಹ್ವಾನಿಸಿದೆ. 

ಸಾಂವಿಧಾನಿಕ ಸಂಸ್ಥೆಯಾಗಿರುವ ಯುಪಿಎಸ್‌ಸಿಯು ಐಎಎಸ್‌, ಐಪಿಎಸ್‌, ಐಎಫ್‌ಎಸ್‌ ಅಧಿಕಾರಿಗಳನ್ನು ನೇಮಕಾತಿ ಮಾಡಲು ಸೇರಿದಂತೆ ದೇಶದ ಪ್ರತಿಷ್ಠಿತ ನಾಗರಿಕ ಸೇವಾ ಪರೀಕ್ಷೆ, ಕೇಂದ್ರ ಸರ್ಕಾರದ ‘ಎ‘ ಮತ್ತು ‘ಬಿ’ ಶ್ರೇಣಿಯ ಅಧಿಕಾರಿಗಳ ನೇಮಕಾತಿಗಾಗಿ ಪ್ರತಿ ವರ್ಷ ಪರೀಕ್ಷೆ, ಸಂದರ್ಶನ ಸೇರಿದಂತೆ ವಿವಿಧ ರೀತಿಯ 14 ಪ್ರಮುಖ ‍ಪರೀಕ್ಷೆಗಳನ್ನು ನಡೆಸುತ್ತದೆ.

ಇಂತಹ ನೇಮಕಾತಿಗಳಲ್ಲಿ ಅಂದಾಜು 26 ಲಕ್ಷದಷ್ಟು ಅಭ್ಯರ್ಥಿಗಳು ಪಾಲ್ಗೊಳ್ಳುತ್ತಾರೆ. ಲೇಹ್, ಕಾರ್ಗಿಲ್‌, ಶ್ರೀನಗರ, ಇಂಫಾಲ, ಅಗರ್ತಲಾ, ಆಯಿಜಾಲ್‌ ಮತ್ತು ಗ್ಯಾಂಗ್ಟಕ್‌ ಸೇರಿದಂತೆ ದೇಶದಾದ್ಯಂತ ಪ್ರಮುಖ ನಗರಗಳ 80ಕ್ಕೂ ಹೆಚ್ಚು ಕೇಂದ್ರಗಳಲ್ಲಿ ಪರೀಕ್ಷೆ ನಡೆಯುತ್ತವೆ.

‘ಪರೀಕ್ಷೆಗಳನ್ನು ಮುಕ್ತ, ಪಾರದರ್ಶಕ ಮತ್ತು ನಿಷ್ಪಕ್ಷಪಾತವಾಗಿ ನಡೆಸಲು ಯುಪಿಎಸ್‌ಸಿ ಹೆಚ್ಚು ಪ್ರಾಮುಖ್ಯ ನೀಡುತ್ತದೆ. ತನ್ನ ಈ ಉದ್ದೇಶವನ್ನು ಈಡೇರಿಸುವುದಕ್ಕಾಗಿ ಆಯೋಗವು ಅತ್ಯಾಧುನಿಕ ಡಿಜಿಟಲ್‌ ತಂತ್ರಜ್ಞಾನವನ್ನು ಬಳಸಲು ಬಯಸಿದೆ. ಅದರ ಆಧಾರದಲ್ಲಿ ಅಭ್ಯರ್ಥಿಗಳ ಬಯೊಮೆಟ್ರಿಕ್‌ ವಿವರಗಳನ್ನು ಪರಿಶೀಲಿಸಲು ಮತ್ತು ಪರೀಕ್ಷಾ ಸಮಯದಲ್ಲಿ ಅಭ್ಯರ್ಥಿಗಳು ಮಾಡಬಹುದಾದ ವಂಚನೆ, ಅಕ್ರಮ, ನಕಲಿ ಅಭ್ಯರ್ಥಿ ಹಾಜರಿ ಸೇರಿದಂತೆ ವಿವಿಧ ಚಟುವಟಿಕೆಗಳ ಮೇಲೆ ನಿಗಾ ಇಡಲು ಉದ್ದೇಶಿಸಿದೆ’ ಎಂದು ಯುಪಿಎಸ್‌ಸಿಯು ಜೂನ್ 3ರಂದು ಹೊರಡಿಸಿರುವ ಟೆಂಡರ್‌ ದಾಖಲೆಯಲ್ಲಿ ಹೇಳಲಾಗಿದೆ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT