ಗುರುವಾರ, 2 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಉತ್ತರಧ್ರುವ: ಚಳಿಗಾಲದ ಚಾರಣಕ್ಕೆ ಸಜ್ಜು

Published 18 ಡಿಸೆಂಬರ್ 2023, 16:28 IST
Last Updated 18 ಡಿಸೆಂಬರ್ 2023, 16:28 IST
ಅಕ್ಷರ ಗಾತ್ರ

ನವದೆಹಲಿ: ಉತ್ತರ ಧ್ರುವ ವಲಯಕ್ಕೆ ಚಳಿಗಾಲದ ಚಾರಣ ಕಾರ್ಯ ಕೈಗೊಳ್ಳಲು ಭಾರತ ಸಜ್ಜಾಗಿದೆ. ಮೊದಲ ಹಂತ ಮಂಗಳವಾರ ಆರಂಭವಾಗಲಿದೆ. ನಾಲ್ವರು ವಿಜ್ಞಾನಿಗಳು ನಾರ್ವೆಯ ನೈ ಅಲೆಸುಂಡ್‌ನಲ್ಲಿ ಭಾರತೀಯ ತಾಣ ‘ಹಿಮಾದ್ರಿ’ಗೆ  ಪ್ರಯಾಣ ಆರಂಭಿಸುವರು.

ಬೆಂಗಳೂರಿನ ರಾಮನ್‌ ಸಂಶೋಧನಾ ಸಂಸ್ಥೆಯ ವಿಜ್ಞಾನಿಯೊಬ್ಬರು ತಂಡದ ಭಾಗವಾಗಿದ್ದಾರೆ. ದೇಶ ಈ ಮೂಲಕ  ಧ್ರುವ ವಲಯದಲ್ಲಿ ವರ್ಷಪೂರ್ತಿ ನೆಲೆಸಿದ ಏಷಿಯಾದ ಪ್ರಥಮ ದೇಶ ಎಂಬ ಹಿರಿಮೆಗೆ ಪಾತ್ರವಾಗಲಿದೆ.

ಉತ್ತರಧ್ರುವ ಮಂಡಳಿಯಲ್ಲಿ (ಅರ್ಕ್‌ಟಿಕ್‌ ಕೌನ್ಸಿಲ್‌) ಭಾರತದ ಧ್ವನಿಗೂ ಬಲ ನೀಡಲಿದೆ. ‘ಹಿಮಾದ್ರಿ’ಯು ನಾರ್ವೆಯ ಸ್ವಾಲ್‌ಬಾರ್ಡ್‌ನಲ್ಲಿ ಉತ್ತರ ಅಕ್ಷಾಂಶದ 78.55 ಡಿಗ್ರಿ ಕೋನದಲ್ಲಿದೆ.

ಈಗ ಉತ್ತರಧ್ರುವದ ಚಾರಣ ಬೇಸಿಗೆಯಲ್ಲಿ ಮುಖ್ಯವಾಗಿ ಜೂನ್‌–ಅಕ್ಟೋಬರ್‌ನಲ್ಲಿ ನಡೆಯುತ್ತಿತ್ತು. ಇನ್ನು ವರ್ಷಪೂರ್ತಿ ನಡೆಯಲಿದೆ. ಮೊದಲ ತಂಡ ಜನವರಿ ಅಂತ್ಯಕ್ಕೆ ವಾಪಸಾದಂತೆ  ಮತ್ತೊಂದು ತಂಡ ತೆರಳಲಿದೆ ಎಂದು ಕೇಂದ್ರ ಭೂವಿಜ್ಞಾನ ಸಚಿವಾಲಯದ ಕಾರ್ಯದರ್ಶಿ ಎಂ.ರವಿಚಂದ್ರನ್‌ ಅವರು ತಿಳಿಸಿದರು.

ಭಾರತೀಯ ಸಂಶೋಧನಾ ಕೇಂದ್ರ ‘ಹಿಮಾದ್ರಿ’ಯಲ್ಲಿ ಏಕಕಾಲಕ್ಕೆ 10 ಮಂದಿ ನೆಲೆಸಬಹುದಾಗಿದ್ದು, ಉತ್ತರಧ್ರುವದಲ್ಲಿ 2008ರಿಂದಲೂ ಬಳಕೆಯಲ್ಲಿದೆ. ದೇಶದ ಅಂಟಾರ್ಟಿಕಾ ಕಾರ್ಯಕ್ರಮದ 40ನೇ ವಾರ್ಷಿಕೋತ್ಸವ ಸಂದರ್ಭದಲ್ಲಿಯೇ ಭಾರತ ಚಳಿಗಾಲದ ಚಾರಣ ಕೈಗೊಳ್ಳುವ ತೀರ್ಮಾನ ಕೈಗೊಂಡಿದೆ.

ರಾಮನ್‌ ಸಂಸೋಧನಾ ಸಂಸ್ಥೆಯ ವಿಜ್ಞಾನಿಯಲ್ಲದೆ ವಾಸ್ಕೊದ ರಾಷ್ಟ್ರೀಯ ಧ್ರುವ ಅಧ್ಯಯನ ಸಂಸ್ಥೆ, ಮಂಡಿಯ ಭಾರತೀಯ ತಂತ್ರಜ್ಞಾನ ಸಂಸ್ಥೆ, ಪುಣೆಯ ಭಾರತೀಯ ಉಷ್ಣವಲಯದ ಹವಾಮಾನ ವಿಜ್ಞಾನ ಕೇಂದ್ರದ ತಲಾ ಒಬ್ಬರು ವಿಜ್ಞಾನಿ ಈ ತಂಡದಲ್ಲಿ ಇರುತ್ತಾರೆ.

ಭಾರತೀಯ ಹವಾಮಾನ ಮತ್ತು ಉತ್ತರಧ್ರುವದ ಹವಾಮಾನ ನಡುವಣ ವ್ಯತ್ಯಾಸ, ಅಂತರಿಕ್ಷ ಹವಾಮಾನ  ಸಂಬಂಧಿತ ಅಧ್ಯಯನ ಸೇರಿದಂತೆ ವೈಜ್ಞಾನಿಕ ಪ್ರಯೋಗ ಕುರಿತು ಈ ಅಧ್ಯಯನ ನಡೆಯಲಿದೆ ಎಂದು ರವಿಚಂದ್ರನ್‌ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT