ಗುರುವಾರ, 12 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಶಾಂತಿ ಕಾಪಾಡಲು ಯುದ್ಧಕ್ಕೂ ಸಿದ್ಧವಿರಬೇಕು: ರಾಜನಾಥ್‌

Published 5 ಸೆಪ್ಟೆಂಬರ್ 2024, 20:27 IST
Last Updated 5 ಸೆಪ್ಟೆಂಬರ್ 2024, 20:27 IST
ಅಕ್ಷರ ಗಾತ್ರ

ಲಖನೌ: ದೇಶದಲ್ಲಿ ಶಾಂತಿ ಕಾಪಾಡಿಕೊಳ್ಳಲು ಸೇನಾಪಡೆಗಳು ಯುದ್ಧಕ್ಕೂ ಸಿದ್ಧವಿರಬೇಕು ಎಂದು ರಕ್ಷಣಾ ಸಚಿವ ರಾಜನಾಥ್‌ ಸಿಂಗ್‌ ಗುರುವಾರ ಕರೆ ನೀಡಿದ್ದಾರೆ.

ಸೇನೆಯ ಮೂರು ಪಡೆಗಳ ಕಮಾಂಡರ್‌ಗಳು ಇದೇ ಮೊದಲ ಬಾರಿಗೆ ಆಯೋಜಿಸಿರುವ ಜಂಟಿ ಸಮ್ಮೇಳನದಲ್ಲಿ ಅವರು ಮಾತನಾಡಿದರು.

ಭಾರತ ಶಾಂತಿ ಪ್ರಿಯ ರಾಷ್ಟ್ರ. ಹಾಗಾಗಿ, ಶಾಂತಿ ಕಾಪಾಡಿಕೊಳ್ಳಲು ಸೇನೆಯು ಯುದ್ಧಕ್ಕೂ ಸಿದ್ಧವಿರಬೇಕು. ಭವಿಷ್ಯದಲ್ಲಿ ಎದುರಾಗಬಹುದಾದ ಭದ್ರತಾ ಸವಾಲುಗಳನ್ನು ಸಮರ್ಥವಾಗಿ ಎದುರಿಸಲು ಮೂರು ಸೇನಾಪಡೆಗಳು ಜಂಟಿಯಾಗಿ ಕಾರ್ಯನಿರ್ವಹಿಸಬೇಕಿದೆ ಎಂದು ಒತ್ತಿ ಹೇಳಿದರು.

ರಷ್ಯಾ–ಉಕ್ರೇನ್‌ ಯುದ್ಧ, ಹಮಾಸ್‌ ಹಾಗೂ ಇಸ್ರೇಲ್‌ ನಡುವಿನ ಸಮರ ಹಾಗೂ ಬಾಂಗ್ಲಾದೇಶದಲ್ಲಿನ ಬೆಳವಣಿಗೆಗಳನ್ನು ಉಲ್ಲೇಖಿಸಿದ ಸಚಿವರು, ಅವುಗಳ ವಿವಿಧ ಆಯಾಮಗಳನ್ನು ಅಧ್ಯಯನ ಮಾಡಿ ಭವಿಷ್ಯದಲ್ಲಿ ಬಂದೊದಗಬಹುದಾದ ಅನಿರೀಕ್ಷಿತ ಸವಾಲುಗಳನ್ನು ಎದುರಿಸಲು ಸಿದ್ಧವಿರಬೇಕು ಎಂದರು.

ಜಾಗತಿಕ ಚಂಚಲತೆಯ ಹೊರತಾಗಿಯೂ ಭಾರತವು ಶಾಂತಿಯುತವಾಗಿ ಅಭಿವೃದ್ಧಿ ಸಾಧಿಸುತ್ತಿದೆ. ಹಾಗಿದ್ದರೂ, ಸವಾಲುಗಳು ಹೆಚ್ಚಾಗುತ್ತಲೇ ಇದ್ದು, ನಾವು ಎಚ್ಚರವಾಗಿರಬೇಕಾದ್ದು ಅವಶ್ಯ ಎಂದು ಹೇಳಿದರು.

ಸೇನಾಪಡೆಗಳಲ್ಲಿ ಸಾಂಪ್ರದಾಯಿಕ ಹಾಗೂ ಆಧುನಿಕ ಶಸ್ತ್ರಾಸ್ತ್ರಗಳನ್ನು ಸಮತೋಲಿತವಾಗಿ ಸಂಗ್ರಹಿಸಿಟ್ಟುಕೊಳ್ಳಬೇಕು ಎಂದು ಇದೇ ವೇಳೆ ಕರೆ ಕೊಟ್ಟರು. ದತ್ತಾಂಶ ನಿರ್ವಹಣೆ ಹಾಗೂ ಕೃತಕ ಬುದ್ಧಿಮತ್ತೆ ಕ್ಷೇತ್ರಗಳಲ್ಲಿನ ಅತ್ಯಾಧುನಿಕ ತಾಂತ್ರಿಕತೆಯನ್ನು ಸೇನಾಪಡೆಗಳು ಹೆಚ್ಚಾಗಿ ಬಳಸಿಕೊಳ್ಳಬೇಕಾದ ಮಹತ್ವವನ್ನೂ ಒತ್ತಿ ಹೇಳಿದರು.

ಸೇನಾ ಪಡೆಗಳ ಮುಖ್ಯಸ್ಥ ಜನರಲ್ ಅನಿಲ್ ಚೌಹಾನ್‌, ಸೇನಾ ಮುಖ್ಯಸ್ಥ ಜನರಲ್ ಉಪೇಂದ್ರ ದ್ವಿವೇದಿ, ನೌಕಾಪಡೆಯ ಮುಖ್ಯಸ್ಥ ಅಡ್ಮಿರಲ್‌ ದಿನೇಶ್‌ ಕೆ. ತ್ರಿಪಾಠಿ, ವಾಯುಪಡೆಯ ಮುಖ್ಯಸ್ಥ ಚೀಫ್‌ ಮಾರ್ಷಲ್‌ ವಿ.ಆರ್‌. ಚೌಧರಿ ಹಾಗೂ ರಕ್ಷಣಾ ಕಾರ್ಯದರ್ಶಿ ಗಿರಿಧರ್‌ ಅರಮನೆ ಅವರು ಬುಧವಾರ ಆರಂಭಗೊಂಡ ಈ ಎರಡು ದಿನಗಳ ಜಂಟಿ ಸಮ್ಮೇಳನದಲ್ಲಿ ಭಾಗಿಯಾಗಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT