ಶುಕ್ರವಾರ, 12 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೇಜ್ರಿವಾಲ್‌ ಬಂಧನ: EDಯ ವಾದವೇನು? ಕಾನೂನು ತಜ್ಞರು ಏನಂತಾರೆ?

Published 22 ಮಾರ್ಚ್ 2024, 23:53 IST
Last Updated 22 ಮಾರ್ಚ್ 2024, 23:53 IST
ಅಕ್ಷರ ಗಾತ್ರ

ನವದೆಹಲಿ: ಅಬಕಾರಿ ನೀತಿ ಹಗರಣದಲ್ಲಿ ಅರವಿಂದ ಕೇಜ್ರಿವಾಲ್‌ ಅವರು ಪ್ರಮುಖ ಸಂಚುಕೋರ. ಅವರು ಅಬಕಾರಿ ನೀತಿ ರೂಪಿಸುವ ಕಾರ್ಯದಲ್ಲಿ ನೇರವಾಗಿ ಭಾಗಿಯಾಗಿದ್ದರು. ಜತೆಗೆ, ಅವರು ಪಕ್ಷದ ಮುಖ್ಯಸ್ಥರು ಎಂದು ಜಾರಿ ನಿರ್ದೇಶನಾಲಯ ಹೇಳಿದೆ. 

ಇ.ಡಿ. ಪರ ವಾದ ಮಂಡಿಸಿದ ಹೆಚ್ಚುವರಿ ಸಾಲಿಸಿಟರ್ ಜನರಲ್‌ ಎಸ್‌.ವಿ.ರಾಜು, ‘2021–22ರ ದೆಹಲಿ ಅಬಕಾರಿ ನೀತಿ ರೂಪಿಸಲು ಹಾಗೂ ಅನುಷ್ಠಾನಗೊಳಿಸಲು ಕೇಜ್ರಿವಾಲ್ ಅವರು ‘ಸೌತ್‌ ಗ್ರೂಪ್’ನಿಂದ (ಬಂಧಿತ ಬಿಆರ್‌ಎಸ್‌ ನಾಯಕಿ ಕೆ.ಕವಿತಾ ಹಾಗೂ ಇತರ ಹಲವು ಮಂದಿಯನ್ನು ಒಳಗೊಂಡಿರುವ ಕಂಪನಿ) ಹಲವಾರು ಕೋಟಿ ಕಿಕ್‌ ಬ್ಯಾಕ್‌ ಪಡೆದಿದ್ದಾರೆ’ ಎಂದರು. 

‘ಪಂಜಾಬ್ ಚುನಾವಣೆಗಾಗಿ ‘ಸೌತ್‌ ಗ್ರೂಪ್‌’ನ ಕೆಲವು ಆರೋಪಿಗಳಿಂದ ₹100 ಕೋಟಿಗೆ ಬೇಡಿಕೆ ಇಟ್ಟಿದ್ದರು. ನಾಲ್ಕು ಹವಾಲಾ ಮಾರ್ಗಗಳಿಂದ ಬಂದ ₹45 ಕೋಟಿಯನ್ನು ಗೋವಾ ಚುನಾವಣೆಗೆ ಬಳಸಲಾಗಿತ್ತು. ಗೋವಾ ಚುನಾವಣೆಯಲ್ಲಿ ಎಎಪಿ ಅಭ್ಯರ್ಥಿ ಗಳಿಗೆ ಹಣ ನೀಡಲು ಅಬಕಾರಿ ನೀತಿಯನ್ನು ಬದಲಾಯಿಸಲಾಗಿತ್ತು. ಹಗರಣ ನಡೆದಿರುವ ಬಗ್ಗೆ ಸಾಕಷ್ಟು ಪುರಾವೆಗಳಿವೆ. ಗೋವಾ ಚುನಾವಣೆಯ ಸಂದರ್ಭದಲ್ಲಿ ಪ್ರಚಾರ ಕಾರ್ಯದಲ್ಲಿ ತೊಡಗಿದ್ದ ಹಲವು ಜನರ ಹೇಳಿಕೆಗಳನ್ನು ದಾಖಲಿಸಲಾಗಿದೆ. ಈ ಆರೋಪಗಳನ್ನು ಎಎಪಿ ಅಭ್ಯರ್ಥಿಯೊಬ್ಬರು ದೃಢೀಕರಿಸಿದ್ದಾರೆ. 

ಆರೋಪಿಗಳು ಹಾಗೂ ಸಾಕ್ಷಿಗಳ ಹೇಳಿಕೆಗಳನ್ನು ಕರೆ ವಿವರ ದಾಖಲೆಗಳ (ಸಿಡಿಆರ್‌) ಮೂಲಕ ದೃಢೀಕರಿಸ ಲಾಗಿದೆ’ ಎಂದು ಅವರು ತಿಳಿಸಿದರು. 

ಈ ಪ್ರಕರಣವು ವ್ಯಾಪಕ ಎಲೆಕ್ಟ್ರಾನಿಕ್ ಸಾಕ್ಷ್ಯಗಳನ್ನು ನಾಶಪಡಿಸಿದ ಇತಿಹಾಸವನ್ನು ಹೊಂದಿದೆ. ಹೆಚ್ಚಿನ ಸಂಖ್ಯೆಯ ಫೋನ್‌ಗಳು ನಾಶವಾಗಿವೆ. ಅದರ ಹೊರತಾಗಿಯೂ ಇ.ಡಿ. ಅದ್ಭುತ ಸೇವೆಯನ್ನು ಮಾಡಿದೆ. ಅವರಿಗೆ ಒಂಬತ್ತು ಬಾರಿ ಸಮನ್ಸ್‌ ನೀಡಲಾಗಿತ್ತು. ಅವರು ತನಿಖೆಗೆ ಸಹಕರಿಸಲಿಲ್ಲ. ಹೀಗಾಗಿ, ಅವರನ್ನು ವಿಚಾರಣೆ ಗೊಳಪಡಿಸಿ ಮಾಹಿತಿ ಸಂಗ್ರಹಿಸಲು ಬಯಸಿದ್ದೇವೆ’ ಎಂದು ಬಂಧನವನ್ನು ಸಮರ್ಥಿಸಿಕೊಂಡರು.

ದಿನದ ಬೆಳವಣಿಗೆ

  • ಬಂಧನ ಪ್ರಶ್ನಿಸಿ ಸುಪ್ರೀಂ ಕೋರ್ಟ್‌ಗೆ ಸಲ್ಲಿಸಿದ್ದ ಅರ್ಜಿ ಹಿಂಪಡೆದ ಕೇಜ್ರಿವಾಲ್‌

  • ಆಪ್‌ ನಾಯಕನ ಬಂಧನ ಖಂಡಿಸಿ ದೇಶದಾದ್ಯಂತ ವಿಪಕ್ಷಗಳ ಕೂಟದಿಂದ ಪ್ರತಿಭಟನೆ, ಎಎಪಿ ನಾಯಕರ ಹಾಗೂ ಕಾರ್ಯಕರ್ತರ ಬಂಧನ

  • ಕೇಜ್ರಿವಾಲ್ ಕುಟುಂಬಕ್ಕೆ ಧೈರ್ಯ ತುಂಬಿದ ಎಎಪಿ ಹಾಗೂ ವಿಪಕ್ಷಗಳ ನಾಯಕರು

  • ವಿಶೇಷ ನ್ಯಾಯಾಲಯಕ್ಕೆ ಕೇಜ್ರಿವಾಲ್ ಅವರನ್ನು ಹಾಜರುಪಡಿಸಿದ ಜಾರಿ ನಿರ್ದೇಶನಾಲಯ

  • ತೀರ್ಪು ಕಾಯ್ದಿರಿಸಿದ ವಿಶೇಷ ನ್ಯಾಯಾಲಯ

  • ಕೇಜ್ರಿವಾಲ್ ಅವರನ್ನು ಮುಖ್ಯಮಂತ್ರಿ ಸ್ಥಾನದಿಂದ ವಜಾಗೊಳಿಸುವಂತೆ ಕೋರಿ ದೆಹಲಿ ಹೈಕೋರ್ಟ್‌ಗೆ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಕೆ

  • ಭಾರತೀಯ ಚುನಾವಣಾ ಆಯೋಗಕ್ಕೆ ‘ಇಂಡಿಯಾ’ ಮೈತ್ರಿಕೂಟದ ನಿಯೋಗದಿಂದ ಮನವಿ

ಕೇಜ್ರಿವಾಲ್‌ ಪ್ರಮುಖ ಸಂಚುಕೋರ: ಇ.ಡಿ. 

ಅಬಕಾರಿ ನೀತಿ ಹಗರಣದಲ್ಲಿ ಅರವಿಂದ ಕೇಜ್ರಿವಾಲ್‌ ಅವರು ಪ್ರಮುಖ ಸಂಚುಕೋರ. ಅವರು ಅಬಕಾರಿ ನೀತಿ ರೂಪಿಸುವ ಕಾರ್ಯದಲ್ಲಿ ನೇರವಾಗಿ ಭಾಗಿಯಾಗಿದ್ದರು. ಜತೆಗೆ, ಅವರು ಪಕ್ಷದ ಮುಖ್ಯಸ್ಥರು ಎಂದು ಜಾರಿ ನಿರ್ದೇಶನಾಲಯ ಹೇಳಿದೆ. 

ಇ.ಡಿ. ಪರ ವಾದ ಮಂಡಿಸಿದ ಹೆಚ್ಚುವರಿ ಸಾಲಿಸಿಟರ್ ಜನರಲ್‌ ಎಸ್‌.ವಿ.ರಾಜು, ‘2021–22ರ ದೆಹಲಿ ಅಬಕಾರಿ ನೀತಿ ರೂಪಿಸಲು ಹಾಗೂ ಅನುಷ್ಠಾನಗೊಳಿಸಲು ಕೇಜ್ರಿವಾಲ್ ಅವರು ‘ಸೌತ್‌ ಗ್ರೂಪ್’ನಿಂದ (ಬಂಧಿತ ಬಿಆರ್‌ಎಸ್‌ ನಾಯಕಿ ಕೆ.ಕವಿತಾ ಹಾಗೂ ಇತರ ಹಲವು ಮಂದಿಯನ್ನು ಒಳಗೊಂಡಿರುವ ಕಂಪನಿ) ಹಲವಾರು ಕೋಟಿ ಕಿಕ್‌ ಬ್ಯಾಕ್‌ ಪಡೆದಿದ್ದಾರೆ’ ಎಂದರು. 

‘ಪಂಜಾಬ್ ಚುನಾವಣೆಗಾಗಿ ‘ಸೌತ್‌ ಗ್ರೂಪ್‌’ನ ಕೆಲವು ಆರೋಪಿಗಳಿಂದ ₹100 ಕೋಟಿಗೆ ಬೇಡಿಕೆ ಇಟ್ಟಿದ್ದರು. ನಾಲ್ಕು ಹವಾಲಾ ಮಾರ್ಗಗಳಿಂದ ಬಂದ ₹45 ಕೋಟಿಯನ್ನು ಗೋವಾ ಚುನಾವಣೆಗೆ ಬಳಸಲಾಗಿತ್ತು. ಗೋವಾ ಚುನಾವಣೆಯಲ್ಲಿ ಎಎಪಿ ಅಭ್ಯರ್ಥಿಗಳಿಗೆ ಹಣ ನೀಡಲು ಅಬಕಾರಿ ನೀತಿಯನ್ನು ಬದಲಾಯಿಸಲಾಗಿತ್ತು. ಹಗರಣ ನಡೆದಿರುವ ಬಗ್ಗೆ ಸಾಕಷ್ಟು ಪುರಾವೆಗಳಿವೆ. ಗೋವಾ ಚುನಾವಣೆಯ ಸಂದರ್ಭದಲ್ಲಿ ಪ್ರಚಾರ ಕಾರ್ಯದಲ್ಲಿ ತೊಡಗಿದ್ದ ಹಲವು ಜನರ ಹೇಳಿಕೆಗಳನ್ನು ದಾಖಲಿಸಲಾಗಿದೆ. ಈ ಆರೋಪಗಳನ್ನು ಎಎಪಿ ಅಭ್ಯರ್ಥಿಯೊಬ್ಬರು ದೃಢೀಕರಿಸಿದ್ದಾರೆ. 

ಆರೋಪಿಗಳು ಹಾಗೂ ಸಾಕ್ಷಿಗಳ ಹೇಳಿಕೆಗಳನ್ನು ಕರೆ ವಿವರ ದಾಖಲೆಗಳ (ಸಿಡಿಆರ್‌) ಮೂಲಕ ದೃಢೀಕರಿಸಲಾಗಿದೆ’ ಎಂದು ಅವರು ತಿಳಿಸಿದರು. 

ಈ ‍ಪ್ರಕರಣವು ವ್ಯಾಪಕ ಎಲೆಕ್ಟ್ರಾನಿಕ್ ಸಾಕ್ಷ್ಯಗಳನ್ನು ನಾಶಪಡಿಸಿದ ಇತಿಹಾಸವನ್ನು ಹೊಂದಿದೆ. ಹೆಚ್ಚಿನ ಸಂಖ್ಯೆಯ ಫೋನ್‌ಗಳು ನಾಶವಾಗಿವೆ. ಅದರ ಹೊರತಾಗಿಯೂ ಇ.ಡಿ. ಅದ್ಭುತ ಸೇವೆಯನ್ನು ಮಾಡಿದೆ. ಅವರಿಗೆ ಒಂಬತ್ತು ಬಾರಿ ಸಮನ್ಸ್‌ ನೀಡಲಾಗಿತ್ತು. ಅವರು ತನಿಖೆಗೆ ಸಹಕರಿಸಲಿಲ್ಲ. ಹೀಗಾಗಿ, ಅವರನ್ನು ವಿಚಾರಣೆಗೊಳಪಡಿಸಿ ಮಾಹಿತಿ ಸಂಗ್ರಹಿಸಲು ಬಯಸಿದ್ದೇವೆ’ ಎಂದು ಬಂಧನವನ್ನು ಸಮರ್ಥಿಸಿಕೊಂಡರು. 

ಇ.ಡಿ ಮುಖವಾಡ ತೆಗೆಯಲಿ: ಕೇಜ್ರಿವಾಲ್‌ ವಕೀಲರು 

‘ಹಾಲಿ ಮುಖ್ಯಮಂತ್ರಿಯೊಬ್ಬರನ್ನು ಬಂಧಿಸಿರುವುದು ಭಾರತದ ಇತಿಹಾಸದಲ್ಲಿ ಇದೇ ಮೊದಲು. ಅವರ ಪಕ್ಷದ ನಾಲ್ವರು ಹಿರಿಯ ನಾಯಕರನ್ನು ಬಂಧಿಸಲಾಗಿದೆ. ಅಂದರೆ, ಮೊದಲ ಮತ ಚಲಾವಣೆಯಾಗುವ ಮುನ್ನವೇ ಫಲಿತಾಂಶ ಬಂದಿದೆ. ಅವರನ್ನು ಬಂಧಿಸುವ ಅಗತ್ಯ ಇರಲಿಲ್ಲ’ ಎಂದು ಹಿರಿಯ ವಕೀಲ ಅಭಿಷೇಕ್ ಮನುಸಿಂಘ್ವಿ ಅಭಿಪ್ರಾಯಪಟ್ಟರು. 

ಕೇಜ್ರಿವಾಲ್‌ ಪರ ವಾದ ಮಂಡಿಸಿದ ಅವರು, ‘ನಾನು ಕೇಜ್ರಿವಾಲ್ ಅವರನ್ನು ಭೇಟಿ ಮಾಡಿದ್ದೇನೆ ಎಂಬಿತ್ಯಾದಿ ಹೇಳಿಕೆಗಳನ್ನು ಹೊರತುಪಡಿಸಿದರೆ ಯಾವುದೇ ನೇರ ಪುರಾವೆಗಳಿಲ್ಲ. ಶೇ 80ರಷ್ಟು ಜನರು ತಮ್ಮ ಹೇಳಿಕೆಗಳಲ್ಲಿ ಕೇಜ್ರಿವಾಲ್ ಹೆಸರನ್ನು ಪ್ರಸ್ತಾಪಿಸಿಲ್ಲ. ಜನರನ್ನು ಬಂಧಿಸಿ ಕ್ಷಮಿಸಿದರೆ ಅವರು ಖಂಡಿತವಾಗಿಯೂ ಯಾರನ್ನಾದರೂ ಹೆಸರಿಸುತ್ತಾರೆ’ ಎಂದರು. 

‘ಈ ಬಂಧನವನ್ನು ಒಂದು ಸಹಜ ಪ್ರಕ್ರಿಯೆ ಎಂದು ಭಾವಿಸಬೇಡಿ. ಇದಕ್ಕೆ ಸೂಕ್ತ ನ್ಯಾಯಾಂಗ ಪ್ರಕ್ರಿಯೆಯ ಅಗತ್ಯವಿದೆ. ಇದು ದೊಡ್ಡ ಪ್ರಮಾಣದ ಪ್ರಜಾಪ್ರಭುತ್ವದ ವಿಷಯಗಳನ್ನು ಒಳಗೊಂಡಿದೆ’ ಎಂದು ಅವರು ಪ್ರತಿಪಾದಿಸಿದರು. 

ಕೇಜ್ರಿವಾಲ್ ಪರ ವಾದ ಮಂಡಿಸಿದ ಮತ್ತೊಬ್ಬ ಹಿರಿಯ ವಕೀಲ ವಿಕ್ರಮ್‌ ಚೌಧರಿ, ‘ಜಾರಿ ನಿರ್ದೇಶನಾಲಯದವರು ತಮ್ಮ ಮುಖವಾಡವನ್ನು ತೆಗೆದು ಹಾಕಬೇಕು. ಅವರು ನಿಖರವಾಗಿ ಯಾರನ್ನು ಪ್ರತಿನಿಧಿಸುತ್ತಾರೆ ಎಂಬುದನ್ನು ಬಹಿರಂಗಪಡಿಸಬೇಕು’ ಎಂದರು. 

‘ಕೇಜ್ರಿವಾಲ್‌ ವಿರುದ್ಧ ಸಾಕಷ್ಟು ಸಾಕ್ಷ್ಯಗಳಿವೆ ಎಂದು ಜಾರಿ ನಿರ್ದೇಶನಾಲಯದವರು ಹೇಳುತ್ತಿದ್ದಾರೆ. ಹಾಗಿದ್ದರೆ ಮಾದರಿ ನೀತಿಸಂಹಿತೆ ಜಾರಿಯಾಗುವ ತನಕ ಕಾದಿದ್ದು ಏಕೆ. ಚುನಾವಣೆಯಲ್ಲಿ ಭಾಗವಹಿಸುವುದು ರಾಜಕಾರಣಿಯ ಹಕ್ಕು’ ಎಂದು ‍ಪ‍್ರತಿಪಾದಿಸಿದರು.  

ಕಾನೂನು ತಜ್ಞರು ಏನಂತಾರೆ? 

‘ಬಂಧನದ ಬಳಿಕವೂ ಕೇಜ್ರಿವಾಲ್ ಅವರು ತಮ್ಮ ಹುದ್ದೆಯಲ್ಲಿ ಮುಂದುವರಿಯಲು ಕಾನೂನಿನ ಯಾವುದೇ ಅಡೆತಡೆ ಇಲ್ಲ. ಆದರೆ, ಜೈಲಿನಿಂದ ಕಾರ್ಯನಿರ್ವಹಿಸುವುದು ತಾಂತ್ರಿಕವಾಗಿ ಅಸಾಧ್ಯ’  ಎಂದು ಹಿರಿಯ ವಕೀಲ ಗೋಪಾಲ್‌ ಶಂಕರನಾರಾಯಣ್‌ ಅಭಿಪ್ರಾಯಪಟ್ಟರು. 

ಸುಪ್ರೀಂ ಕೋರ್ಟ್‌ ವಕೀಲ ಕೆ.ವಿ.ಧನಂಜಯ್‌, ‘75 ವರ್ಷಗಳಲ್ಲಿ ಮೊದಲ ಬಾರಿಗೆ ಇಂತಹ ಸನ್ನಿವೇಶ ನಿರ್ಮಾಣವಾಗಿದೆ. ಸಂವಿಧಾನ ಇದಕ್ಕೆ ಸ್ಪಷ್ಟವಾದ ಉತ್ತರ ಕೊಟ್ಟಿಲ್ಲ. ಆದರೆ, ಜೈಲು ಎಂಬುದು ಕಾಪಿ ಶಾಪ್‌ ಅಲ್ಲ. ಅಧಿಕಾರಿಗಳು ಜೈಲಿಗೆ ಮುಕ್ತವಾಗಿ ಹೋಗಿ ಬರಲು ಆಗುವುದಿಲ್ಲ. ಅಲ್ಲಿ ಗೋಪ್ಯತೆಯ ಪ್ರಶ್ನೆಯೂ ಉದ್ಭವಿಸುತ್ತದೆ. ಈ ಪ್ರಕರಣವನ್ನು ಲೆಪ್ಟಿನೆಂಟ್‌ ಗವರ್ನರ್‌ ಅವರು ಗಂಭೀರವಾಗಿ ಪರಿಗಣಿಸಿ ರಾಜೀನಾಮೆ ನೀಡುವಂತೆ ಕೇಜ್ರಿವಾಲ್ ಅವರಿಗೆ ಸೂಚಿಸಬಹುದು. ಹೊಸ ಮುಖ್ಯಮಂತ್ರಿಯನ್ನು ಆಯ್ಕೆ ಮಾಡಿಕೊಳ್ಳುವಂತೆ ಶಾಸಕಾಂಗ ಪಕ್ಷಕ್ಕೆ ಸಲಹೆ ನೀಡಬಹುದು. ಇದಕ್ಕೆ ಒಪ್ಪದಿದ್ದರೆ 2–3 ದಿನ ಕಾದು ಮುಖ್ಯಮಂತ್ರಿಯನ್ನು ವಜಾ ಮಾಡಲು ಅವಕಾಶ ಇದೆ. ಜತೆಗೆ, ರಾಜ್ಯದಲ್ಲಿ ಸಾಂವಿಧಾನಿಕ ಬಿಕ್ಕಟ್ಟು ಎದುರಾಗಿದೆ ಎಂಬ ಕಾರಣ ನೀಡಿ ರಾಷ್ಟ್ರಪತಿ ಆಳ್ವಿಕೆ ಶಿಫಾರಸು ಮಾಡಬಹುದು’ ಎಂದು ವಿಶ್ಲೇಷಿಸಿದರು.

ಕೇಜ್ರಿವಾಲ್ ಅವರು ಮುಖ್ಯಮಂತ್ರಿಯಾಗಿ ಮುಂದುವರಿಯಬಹುದು. ಆದರೆ, ಇದು ಆಡಳಿತಾತ್ಮಕವಾಗಿ ಅಸಾಧ್ಯ ಎಂದು ಮತ್ತೊಬ್ಬ ವಕೀಲ ವಿಕಾಸ್‌ ಸಿಂಗ್‌ ಅಭಿಪ್ರಾಯಪಟ್ಟರು.  

‘ಜನಪ್ರತಿನಿಧಿಗಳ ಕಾಯ್ದೆ ಸೆಕ್ಷನ್‌ 8ರ ಪ್ರಕಾರ, ಬಂಧಿತ ವ್ಯಕ್ತಿಯು ಎರಡು ಅಥವಾ ಹೆಚ್ಚಿನ ವರ್ಷಗಳವರೆಗೆ ಶಿಕ್ಷೆಗೊಳಗಾದಲ್ಲಿ ಮಾತ್ರ ತೀರ್ಪು ಹೊರಬಿದ್ದ ದಿನದಿಂದ ಅವರು ಅನರ್ಹರಾಗುತ್ತಾರೆ. ಅವರು ಜೈಲಿನಿಂದ ಹೊರಬಂದ ನಂತರದ 6 ವರ್ಷಗಳ ಕಾಲ ಅವರ ಅನರ್ಹತೆ ಮುಂದುವರಿಯಲಿದೆ’ ಎಂದರು. 

‘ಸಂವಿಧಾನದ 361ನೇ ಪರಿಚ್ಛೇದದ ಅನುಸಾರ, ದೇಶದ ರಾಷ್ಟ್ರಪತಿ ಮತ್ತು ರಾಜ್ಯಪಾಲರಿಗೆ ಮಾತ್ರ ಕಾನೂನಾತ್ಮಕ ಕ್ರಮದಿಂದ ರಕ್ಷಣೆ ದೊರೆಯಲಿದೆ. ಪ್ರಧಾನಿ ಹಾಗೂ ಮುಖ್ಯಮಂತ್ರಿಗಳಿಗೆ ಯಾವುದೇ ರಕ್ಷಣೆ ದೊರೆಯುವುದಿಲ್ಲ’ ಎಂದೂ ಅವರು ಹೇಳಿದರು. 

ಚುನಾವಣಾ ಆಯೋಗಕ್ಕೆ ‘ಇಂಡಿಯಾ’ ಮೊರೆ  

ಕೇಜ್ರಿವಾಲ್‌ ಬಂಧನದ ಬೆನ್ನಲ್ಲೇ, ಇಂಡಿಯಾ ಮೈತ್ರಿಕೂಟದ ಪಕ್ಷಗಳು ಒಗ್ಗಟ್ಟು ಪ್ರದರ್ಶಿಸಿದವು. ವಿಪಕ್ಷಗಳ ನಾಯಕರನ್ನು ಹಣಿಯಲು ಕೇಂದ್ರದ ಬಿಜೆಪಿ ಸರ್ಕಾರವು ತನಿಖಾ ಸಂಸ್ಥೆಗಳನ್ನು ದುರ್ಬಳಕೆ ಮಾಡಿಕೊಳ್ಳುತ್ತಿದೆ. ಇದನ್ನು ತಡೆಯಲು ಆಯೋಗ ಕಠಿಣ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಆಗ್ರಹಿಸಿ ವಿಪಕ್ಷಗಳ ನಿಯೋಗವು ಮುಖ್ಯ ಚುನಾವಣಾ ಅಧಿಕಾರಿಯವರಿಗೆ ಮನವಿ ಸಲ್ಲಿಸಿತು. ಬಳಿಕ ಕಾಂಗ್ರೆಸ್‌ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಮಾಜಿ ಅಧ್ಯಕ್ಷ ರಾಹುಲ್‌ ಗಾಂಧಿ ಮತ್ತಿತರ ನಾಯಕರು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದರು. 

ಕಾಂಗ್ರೆಸ್‌ ಜತೆಗಿನ ಸೀಟು ಹಂಚಿಕೆಯ ಜಟಾಪಟಿಯ ಬಳಿಕ ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ‘ಇಂಡಿಯಾ’ ಮೈತ್ರಿಕೂಟದಿಂದ ಅಂತರ ಕಾಯ್ದುಕೊಂಡಿದ್ದರು. ವಿಪಕ್ಷಗಳ ನಿಯೋಗದ ಭಾಗವಾಗಲು ಹಿರಿಯ ನಾಯಕ ಡೆರೆಕ್‌ ಒಬ್ರಯಾನ್ ಅವರನ್ನು ಮಮತಾ ದೆಹಲಿಗೆ ಕಳುಹಿಸಿಕೊಟ್ಟರು. ಕಾಂಗ್ರೆಸ್‌ನ ಮುಖಂಡ ಅಧೀರ್ ರಂಜನ್‌ ಚೌಧರಿ ಅವರು ಪಕ್ಷದ ವಿರುದ್ಧ ಕಟು ಟೀಕೆ ಮಾಡುತ್ತಿರುವುದರಿಂದ ಮಮತಾ ಮುನಿಸಿಕೊಂಡಿದ್ದಾರೆ. ಅವರಿಗೆ ಕಾಂಗ್ರೆಸ್‌ ಬಗ್ಗೆ ಅಸಮಾಧಾನವಿಲ್ಲ ಎಂದು ಪಕ್ಷದ ಮೂಲಗಳು ತಿಳಿಸಿವೆ. ರಾಹುಲ್‌ ಗಾಂಧಿ ಅವರು ಕೇಜ್ರಿವಾಲ್‌ ಕುಟುಂಬದ ಸದಸ್ಯರ ಜತೆಗೆ ಗುರುವಾರ ರಾತ್ರಿ ಮಾತನಾಡಿ ಧೈರ್ಯ ತುಂಬಿದರು. ಮಮತಾ ಅವರು ಕುಟುಂಬ ಸದಸ್ಯರಿಗೆ ಶುಕ್ರವಾರ ಕರೆ ಮಾಡಿದರು. 

ಮೈತ್ರಿಕೂಟದ ‍ಪ್ರಮುಖರಾದ ಕೆ.ಸಿ.ವೇಣುಗೋಪಾಲ್‌, ಅಭಿಷೇಕ್‌ ಮನುಸಿಂಘ್ವಿ, ಡೆರೆಕ್ ಒಬ್ರಯಾನ್, ಸೀತಾರಾಮ ಯೆಚೂರಿ, ನದಿಮುಲ್ ಹಕ್‌, ಸಂದೀಪ್‌ ಪಾಠಕ್‌, ಪಂಕಜ್‌ ಗುಪ್ತ, ಪಿ.ವಿಲ್ಸನ್ ಮತ್ತಿತರರು ಇದ್ದರು. 

‘ಮದ್ಯದ ನೀತಿಯಿಂದ ದೂರ ಇರಲು ಹೇಳಿದ್ದೆ’

‘ಮದ್ಯ ಕೆಟ್ಟದ್ದು ಎಂಬುದು ಚಿಕ್ಕ ಮಗುವಿಗೂ ಗೊತ್ತು. ಅಬಕಾರಿ ನೀತಿ ರೂಪಿಸಿ, ಜಾರಿಗೆ ತರುವುದು ನಮ್ಮ ಕೆಲಸವಲ್ಲ. ಹೀಗಾಗಿ, ಇದರಿಂದ ದೂರ ಇರುವಂತೆ ಅರವಿಂದ ಕೇಜ್ರಿವಾಲ್‌ಗೆ ಹೇಳಿದ್ದೆ. ಅವರು ನನ್ನ ಮಾತು ಕೇಳಲಿಲ್ಲ’ ಎಂದು ಸಾಮಾಜಿಕ ಹೋರಾಟಗಾರ ಅಣ್ಣಾ ಹಜಾರೆ ಶುಕ್ರವಾರ ಹೇಳಿದ್ದಾರೆ.

ಮಹಾರಾಷ್ಟ್ರದ ರಾಲೇಗಣ ಸಿದ್ಧಿ ಗ್ರಾಮದಲ್ಲಿ ಪಿಟಿಐ ಜೊತೆ ಮಾತನಾಡಿದ ಅವರು, ‘ಮದ್ಯ ವ್ಯಸನದ ವಿರುದ್ಧ ನಾನು ಧ್ವನಿ ಎತ್ತಿದಾಗ, ಕೇಜ್ರಿವಾಲ್‌ ಹೋರಾಟದಲ್ಲಿ ಪಾಲ್ಗೊಂಡಿದ್ದರು. ಆದರೆ, ಅವರೇ ಅಬಕಾರಿ ನೀತಿಯನ್ನು ಜಾರಿಗೊಳಿಸಿದ್ದನ್ನು ಕೇಳಿ ಬೇಸರವಾಗಿತ್ತು. ಈ ವಿಚಾರವಾಗಿ ಅವರಿಗೆ ಎರಡು ಬಾರಿ ಪತ್ರ ಬರೆದಿದ್ದೆ’ ಎಂದು ಹೇಳಿದ್ದಾರೆ.

ಲೋಕಪಾಲ ವ್ಯವಸ್ಥೆ ಜಾರಿಗೆ ಒತ್ತಾಯಿಸಿ 2010ರಲ್ಲಿ ಅಣ್ಣಾ ಹಜಾರೆ ನೇತೃತ್ವದಲ್ಲಿ ನಡೆದಿದ್ದ ಹೋರಾಟದಲ್ಲಿ ಕೇಜ್ರಿವಾಲ್‌ ಕೂಡ ಪಾಲ್ಗೊಂಡು ಗಮನ ಸೆಳೆದಿದ್ದರು.

‘ಅಬಕಾರಿ ನೀತಿ ಜಾರಿ ಮೂಲಕ ಸಾಕಷ್ಟು ಹಣ ಗಳಿಸಬಹುದು ಎಂದು ಭಾವಿಸಿ, ಅವರು ಈ ನೀತಿಯನ್ನು ಜಾರಿಗೊಳಿಸಿರಬಹುದು. ತಾನು ಮಾಡಿದ ಕಾರ್ಯದಿಂದಾಗಿಯೇ ಕೇಜ್ರಿವಾಲ್ ಈಗ ಬಂಧನಕ್ಕೆ ಒಳಗಾಗಿದ್ದಾರೆ. ಈಗ ಅವರ ವಿರುದ್ಧ ಕಾನೂನು ಪ್ರಕಾರವೇ ಕ್ರಮ ಜರುಗಿಸಲಾಗುತ್ತದೆ’ ಎಂದು ಹೇಳಿದ್ದಾರೆ.

ಪ್ರತಿಭಟನೆ: ಸೌರಭ್‌, ಅತಿಶಿ ಬಂಧನ 

ಕೇಜ್ರಿವಾಲ್‌ ಬಂಧನ ವಿರೋಧಿಸಿ ಆಮ್‌ ಆದ್ಮಿ ಪಕ್ಷದ ಕಾರ್ಯಕರ್ತರು ಹಾಗೂ ವಿರೋಧ ಪಕ್ಷಗಳ ಕಾರ್ಯಕರ್ತರು ದೇಶದ ವಿವಿಧ ಕಡೆಗಳಲ್ಲಿ ಪ್ರತಿಭಟನೆ ನಡೆಸಿದರು. ಕೇಂದ್ರದ ಬಿಜೆಪಿ ಸರ್ಕಾರದ ಕುಮ್ಮಕ್ಕಿನಿಂದ ಕೇಜ್ರಿವಾಲ್ ಅವರನ್ನು ಬಂಧಿಸಲಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು. ಸೆಕ್ಷನ್‌ 144 ಉಲ್ಲಂಘಿಸಿ ನವದೆಹಲಿಯಲ್ಲಿ ಪ್ರತಿಭಟನೆ ನಡೆಸಿದ ದೆಹಲಿ ಸರ್ಕಾರದ ಸಚಿವರಾದ ಅತಿಶಿ ಹಾಗೂ ಸೌರಭ್ ಭಾರದ್ವಾಜ್ ಅವರನ್ನು ಬಂಧಿಸಲಾಯಿತು. 

‘ಐಟಿಒದಲ್ಲಿ ಶಾಂತಿಯುತವಾಗಿ ಪ್ರತಿಭಟನೆ ನಡೆಸುತ್ತಿದ್ದ ನಮ್ಮನ್ನು ದೆಹಲಿ ಪೊಲೀಸರು ಬಂಧಿಸಿದ್ದಾರೆ. ಮೊದಲು, ಸುಳ್ಳು ಪ್ರಕರಣದಲ್ಲಿ ಅರವಿಂದ ಕೇಜ್ರಿವಾಲ್‌ ಅವರನ್ನು ಬಂಧಿಸಲಾಗಿತ್ತು. ಈಗ ಶಾಂತಿಯುತ ಪ್ರತಿಭಟನೆಯಲ್ಲಿ ಭಾಗವಹಿಸಿದವರನ್ನೂ ಬಂಧಿಸಲಾಗಿದೆ. ಇದು ಪ್ರಜಾಪ್ರಭುತ್ವದ ಕೊಲೆಯಲ್ಲ, ಹಾಗಾದರೆ ಏನು?’ ಎಂದು ಅತಿಶಿ ಪ್ರಶ್ನಿಸಿದ್ದಾರೆ. ಕೇಜ್ರಿವಾಲ್‌ ಕುಟುಂಬವನ್ನು ಗೃಹ ಬಂಧನದಲ್ಲಿ ಇರಿಸಲಾಗಿದೆ ಎಂದು ಎಎಪಿ ಮುಖಂಡರು ಆರೋಪಿಸಿದರು. 

ಜಾರಿ ನಿರ್ದೇಶನಾಲಯವನ್ನು ಕೇಂದ್ರ ಸರ್ಕಾರ ದುರುಪಯೋಗಪಡಿಸಿಕೊಳ್ಳುತ್ತಿದೆ ಎಂದು ಆರೋಪಿಸಿ ಯುವ ಕಾಂಗ್ರೆಸ್‌ ರಾಷ್ಟ್ರೀಯ ಅಧ್ಯಕ್ಷ ಬಿ.ವಿ.ಶ್ರೀನಿವಾಸ್‌ ನೇತೃತ್ವದಲ್ಲಿ ಕಾಂಗ್ರೆಸ್‌ ಕಾರ್ಯಕರ್ತರು ರಾಷ್ಟ್ರ ರಾಜಧಾನಿಯಲ್ಲಿ ಪ್ರತಿಭಟನೆ ನಡೆಸಿದರು. ಪಂಜಾಬ್‌ ಮುಖ್ಯಮಂತ್ರಿ ಭಗವಂತ್‌ ಮಾನ್ ಅವರು ಕೇಜ್ರಿವಾಲ್‌ ಕುಟುಂಬ ಸದಸ್ಯರನ್ನು ಭೇಟಿ ಮಾಡಿ ಧೈರ್ಯ ತುಂಬಿದರು.

ಕೇಜ್ರಿವಾಲ್ ಬಂಧನ: ಯಾರು ಏನೆಂದರು?

ಕೇಜ್ರಿವಾಲ್ ಅವರು ಜೈಲಿನಿಂದಲೇ ಆಡಳಿತ ನಡೆಸುವುದು ಜನರಿಗೆ, ಕಾನೂನು ಹಾಗೂ ಪ್ರಜಾಪ್ರಭುತ್ವಕ್ಕೆ ಮಾಡಿದ ಅವಮಾನ – ಅನುರಾಗ್‌ ಠಾಕೂರ್‌, ಕೇಂದ್ರ ಸಚಿವ

ನನ್ನ ಪತಿಯನ್ನು ಬಂಧಿಸುವ ಮೂಲಕ ಕೇಂದ್ರ ಸರ್ಕಾರವು ದೆಹಲಿಯ ಜನರಿಗೆ ದ್ರೋಹ ಎಸಗಿದೆ. ದೆಹಲಿ ಜನರು ಮೂರು ಬಾರಿ ಚುನಾಯಿಸಿದ ಮುಖ್ಯಮಂತ್ರಿಯನ್ನು ಅಧಿಕಾರ ದರ್ಪದಿಂದ ಕೇಂದ್ರ ಬಂಧಿಸಿದೆ– ಸುನಿತಾ ಕೇಜ್ರಿವಾಲ್‌

ಪಕ್ಷವು ಈ ವರ್ಷ ಹೋಳಿ ಆಚರಿಸುವುದಿಲ್ಲ. ಕೇಜ್ರಿವಾಲ್‌ ಬಂಧನ ವಿರೋಧಿಸಿ ಮಾರ್ಚ್‌ 26ರಂದು ಪ್ರಧಾನಿ ನಿವಾಸಕ್ಕೆ ಮುತ್ತಿಗೆ ಹಾಕಲಾಗುವುದು– ಗೋಪಾಲ್‌ ರಾಯ್‌, ಎಎಪಿ ದೆಹಲಿ ಸಂಚಾಲಕ

ಇಂಡಿಯಾ ಮೈತ್ರಿಕೂಟದ ಬಲದಿಂದ ಪ್ರಧಾನಿ ನರೇಂದ್ರ ಮೋದಿ ಕಂಪಿಸುತ್ತಿದ್ದಾರೆ ಎಂಬುದನ್ನು ಕೇಜ್ರಿವಾಲ್‌ ಬಂಧನ ತೋರಿಸುತ್ತದೆ– ಜೈರಾಮ್‌ ರಮೇಶ್‌, ಕಾಂಗ್ರೆಸ್‌ ಪ್ರಧಾನ ಕಾರ್ಯದರ್ಶಿ (ಸಂವಹನ)

ಕೇಜ್ರಿವಾಲ್‌ ದೇಶಭಕ್ತ. ಅವರು ಈಗಿನ ಸಂಚಿನಿಂದ ಇನ್ನಷ್ಟು ದೊಡ್ಡ ನಾಯಕರಾಗಿ ಹೊರಹೊಮ್ಮಲಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಸರ್ವಾಧಿಕಾರಿ ಧೋರಣೆ ಅನುಸರಿಸುತ್ತಿದ್ದಾರೆ. ಈ ದೇಶದಲ್ಲಿ ಪ್ರಜಾಪ್ರಭುತ್ವ ಎಲ್ಲಿದೆ? – ಭಗವಂತ್‌ ಮಾನ್‌, ಪಂಜಾಬ್‌ ಮುಖ್ಯಮಂತ್ರಿ

ಕೇಜ್ರಿವಾಲ್‌ ಬಂಧನ ಕಾನೂನುಬಾಹಿರ. ಲೋಕಸಭಾ ಚುನಾವಣೆಯಲ್ಲಿ ವಿಪಕ್ಷಗಳ ಕೂಟವನ್ನು ದುರ್ಬಲಗೊಳಿಸಲು ಜಾರಿ ನಿರ್ದೇಶನಾಲಯವನ್ನು ಬಿಜೆಪಿ ದುರ್ಬಳಕೆ ಮಾಡಿಕೊಳ್ಳುತ್ತಿದೆ – ಬೃಂದಾ ಕಾರಟ್‌, ಸಿಪಿಎಂ ನಾಯಕಿ

ಕೇಜ್ರಿವಾಲ್ ಬಂಧನ ಅನ್ಯಾಯ. ಜನರು ಅವರಿಗೆ ಪಾಠ ಕಲಿಸಲಿದ್ದಾರೆ. ಪ್ರಜಾಪ್ರಭುತ್ವದ ಹೆಸರಿನಲ್ಲಿ ಈ ದೇಶದಲ್ಲಿ ಏನು ನಡೆಯುತ್ತಿದೆ? ಇದನ್ನೆಲ್ಲ ನೋಡಿ ಆಶ್ಚರ್ಯವಾಗುತ್ತಿದೆ– ಯೋಗೆಂದ್ರ ಯಾದವ್‌, ಸಾಮಾಜಿಕ ಕಾರ್ಯಕರ್ತ

ಅಬಕಾರಿ ನೀತಿ ಪ್ರಕರಣದಲ್ಲಿ ಸಂಸ್ಥೆಯ ನಿರ್ದೇಶಕರನ್ನು ಬಂಧಿಸಿದ ಬಳಿಕ ಫಾರ್ಮಸಿ ಸಂಸ್ಥೆಯೊಂದು ಚುನಾವಣಾ ಬಾಂಡ್‌ಗಳ ಮೂಲಕ ಬಿಜೆಪಿಗೆ ₹25 ಕೋಟಿ ಪಾವತಿಸಿದೆ– ಸೌರಭ್‌ ಭಾರದ್ವಾಜ್‌, ದೆಹಲಿ ಸಚಿವ

‘ಎಎಪಿ ನಾಯಕರಿಗೆ ಹೆಚ್ಚಿದ ಜವಾಬ್ದಾರಿ’

ಲೋಕಸಭೆ ಚುನಾವಣೆ ಘೋಷಣೆಯಾಗಿ ವಾರವಾಗುವುದಕ್ಕೂ ಮುನ್ನವೇ ಎಎಪಿ ಮುಖ್ಯಸ್ಥ, ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್‌ ಅವರ ಬಂಧನ ಆಗಿರುವುದರಿಂದ, ಆ ಪಕ್ಷದ ಇತರ ಹಿರಿಯ ನಾಯಕರ ಮೇಲೆ ಜವಾಬ್ದಾರಿ ಹೆಚ್ಚಾಗುವ ಸಾಧ್ಯತೆಗಳಿವೆ.

ಪಕ್ಷದ ರಾಷ್ಟ್ರೀಯ ಸಂಘಟನೆಯ ಕಾರ್ಯದರ್ಶಿ ಸಂದೀಪ್‌ ಪಾಠಕ್‌, ಪಂಜಾಬ್‌ ಮುಖ್ಯಮಂತ್ರಿ ಭಗವಂತ್‌ ಮಾನ್‌, ದೆಹಲಿಯ ಸಚಿವರಾದ ಆತಿಶಿ ಮತ್ತು ಸೌರಭ್‌ ಭಾರದ್ವಾಜ್‌ ಸೇರಿದಂತೆ ಪಕ್ಷದ ಹಿರಿಯ ನಾಯಕರ ಪಾತ್ರ ಮತ್ತು ಜವಾಬ್ದಾರಿಗಳು ಹೆಚ್ಚಲಿದ್ದು, ನಾಯಕತ್ವ ಬೆಳೆಯಬಹುದು ಎಂದು ವಿಶ್ಲೇಷಿಸಲಾಗುತ್ತಿದೆ.

ಕೇಜ್ರಿವಾಲ್‌ ಪತ್ನಿ ಅಖಾಡಕ್ಕೆ?: ಇಲ್ಲಿಯ ವರೆಗೂ ರಾಜಕೀಯದಿಂದ ಅಂತರ ಕಾಯ್ದುಕೊಂಡಿರುವ ಕೇಜ್ರಿವಾಲ್‌ ಅವರ ಪತ್ನಿ ಸುನಿತಾ ಕೇಜ್ರಿವಾಲ್‌ ಅವರು ಹೊಸ ಪಾತ್ರ ನಿಭಾಯಿಸಬಹುದು ಎಂಬ ನಿರೀಕ್ಷೆ ಕುರಿತು ಜನರಲ್ಲಿ ಚರ್ಚೆಯಾಗುತ್ತಿದೆ.

‘ನನ್ನ ಪತಿ ಯಾವಾಗಲೂ ದೆಹಲಿಯ ಜನರೊಂದಿಗೆ ನಿಲ್ಲುತ್ತಾರೆ. ಅವರ ಬಂಧನವು ದೆಹಲಿ ಜನರಿಗೆ ಮಾಡಿದ ದ್ರೋಹ’ ಎಂದು ಸುನಿತಾ ಕೇಜ್ರಿವಾಲ್‌ ಅವರು ‘ಎಕ್ಸ್‌’ನಲ್ಲಿ ಪೋಸ್ಟ್‌ ಮಾಡಿದ್ದಾರೆ.

ನಿವೃತ್ತ ಐಆರ್‌ಎಸ್‌ ಅಧಿಕಾರಿಯೂ ಆಗಿರುವ ಅವರು, ‘ನಿಮ್ಮ ಮೂರು ಬಾರಿಯ ಮುಖ್ಯಮಂತ್ರಿಯನ್ನು ಮೋದಿಜಿ ಅವರು ಅಧಿಕಾರದ ದುರಹಂಕಾರದಿಂದ ಬಂಧಿಸಿದ್ದಾರೆ. ಹೀಗೆ ಎಲ್ಲರನ್ನೂ ಅವರು ತುಳಿಯಲು ಪ್ರಯತ್ನಿಸುತ್ತಿದ್ದಾರೆ. ಇದು ದೆಹಲಿ ಜನರಿಗೆ ಮಾಡಿದ ದ್ರೋಹ. ನಿಮ್ಮ ಮುಖ್ಯಮಂತ್ರಿ ಯಾವಾಗಲೂ ನಿಮ್ಮೊಂದಿಗೆ ಇರುತ್ತಾರೆ. ಅವರು ಒಳಗಿರಲಿ ಅಥವಾ ಹೊರಗಿರಲಿ, ಅವರ ಜೀವನ ದೇಶಕ್ಕಾಗಿ ಸಮರ್ಪಿತ. ಸಾರ್ವಜನಿಕರಿಗೆ ಪರಮಾಧಿಕಾರ ಇದ್ದು, ಅವರಿಗೆ ಎಲ್ಲವೂ ತಿಳಿದಿದೆ. ಜೈ ಹಿಂದ್‌’ ಎಂದು ಪೋಸ್ಟ್‌ನಲ್ಲಿ ಹೇಳಿದ್ದಾರೆ.

‘ಇಂಡಿಯಾ’ ಮೈತ್ರಿಕೂಟದ ಮುಂದಿನ ಸಭೆಯಲ್ಲಿ ತಾನು ಭಾಗವಹಿಸುವುದಾಗಿ ಭಗವಾನ್‌ ಮಾನ್‌ ತಿಳಿಸಿದ್ದಾರೆ. ‘ಕೇಜ್ರಿವಾಲ್‌ ನನ್ನ ಹಿರಿಯ ಸಹೋದರ. ನಾನು ಪಕ್ಷದ ನಿಷ್ಠಾವಂತ ಸೈನಿಕ. ಮುಂದಿನ ದಿನಗಳಲ್ಲಿ ಗುಜರಾತ್‌, ಕುರುಕ್ಷೇತ್ರದಲ್ಲಿ ಪ್ರಚಾರಕ್ಕೆ ಹೋಗುತ್ತೇನೆ. ಪಕ್ಷವು ನನ್ನನ್ನು ಎಲ್ಲಿಗೆ ಕಳುಹಿಸುತ್ತದೆಯೋ ಅಲ್ಲಿಗೆ ಹೋಗುತ್ತೇನೆ’ ಎಂದು ಅವರು ಪ್ರತಿಕ್ರಿಯಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT