ನವದೆಹಲಿ: ‘ಮಧ್ಯಪ್ರದೇಶದಲ್ಲಿ ಸೇನಾ ಅಧಿಕಾರಿಯನ್ನು ಒತ್ತೆಯಾಳಾಗಿರಿಸಿ, ಅವರ ಗೆಳತಿಯರ ಮೇಲೆ ಲೈಂಗಿಕ ದೌರ್ಜನ್ಯ ಎಸಗಲಾಗಿದೆ. ಉತ್ತರ ಪ್ರದೇಶದ ಹೆದ್ದಾರಿಯಲ್ಲಿ ರುಂಡವಿಲ್ಲದ ಮಹಿಳೆಯ ಮೃತ ದೇಹ ಪತ್ತೆಯಾದ ಹೃದಯ ವಿದ್ರಾವಕ ಘಟನೆಗಳು ಮಹಿಳೆಯರ ಮಾನಸಿಕ ಸ್ಥೈರ್ಯವನ್ನು ಪ್ರತಿದಿನವೂ ಕುಸಿಯುವಂತೆ ಮಾಡುತ್ತಿವೆ’ ಎಂದು ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ ವಾದ್ರಾ ಆತಂಕ ವ್ಯಕ್ತಪಡಿಸಿದ್ದಾರೆ.
ಈ ವಿಷಯ ಕುರಿತಂತೆ ಸಾಮಾಜಿಕ ಮಾಧ್ಯಮ ಎಕ್ಸ್‌ನಲ್ಲಿ ಆಘಾತ ವ್ಯಕ್ತಪಡಿಸಿರುವ ಅವರು, ‘ಪ್ರತಿ ದಿನ 86 ಮಹಿಳೆಯರು ಅತ್ಯಾಚಾರಕ್ಕೊಳಗಾಗಿ ಹತ್ಯೆಯಾಗುತ್ತಿದ್ದಾರೆ. ಇದು ಕೊಟ್ಯಂತರ ಮಹಿಳೆಯರನ್ನು ಮಾನಸಿಕವಾಗಿ ಜರ್ಝರಿತರನ್ನಾಗಿಸಿದೆ’ ಎಂದಿದ್ದಾರೆ.
‘ಮನೆಯಿಂದ ಬೀದಿಯವರೆಗೂ ಮಹಿಳೆಯರು ಸುರಕ್ಷಿತರಾಗಿಲ್ಲ. ಕಚೇರಿ ಸೇರಿದಂತೆ ಸಾರ್ವಜನಿಕ ಸ್ಥಳಗಳಲ್ಲೂ ಮಹಿಳೆಯರ ಸುರಕ್ಷತೆಗೆ ಖಾತ್ರಿ ಇಲ್ಲ. ಎಲ್ಲೆಡೆ ಮಹಿಳೆ ಅಸುರಕ್ಷಿತವಾಗಿದ್ದಾಳೆ. ದೇಶದ ಜನಸಂಖ್ಯೆಯ ಅರ್ಧದಷ್ಟಿರುವ ಮಹಿಳೆಯರ ಸುರಕ್ಷತೆಯ ಪ್ರಶ್ನೆ ಮಾತ್ರವಲ್ಲ, ಇಂಥ ಘಟನೆಗಳ ಮೂಲಕ ಅವರನ್ನು ನಿತ್ಯ ಹತ್ತಿಕ್ಕುವ ಪ್ರಯತ್ನ ನಡೆಸುತ್ತಿದೆ’ ಎಂದಿದ್ದಾರೆ.
‘ಪ್ರಧಾನಿ ನರೇಂದ್ರ ಮೋದಿ ಅವರು ಮಹಿಳೆಯರ ಸುರಕ್ಷತೆ, ಘನತೆ ಕುರಿತು ದೊಡ್ಡ ದೊಡ್ಡ ಮಾತುಗಳನ್ನಾಡುತ್ತಾರೆ. ಆದರೆ, ವಾಸ್ತವದಲ್ಲಿ ಮಹಿಳೆಯರ ಸುರಕ್ಷತೆ ಕುರಿತು ಅವರು ಗಂಭೀರವಾದ ಕ್ರಮ ಕೈಗೊಳ್ಳುವ ತುರ್ತು ಅಗತ್ಯ ಈಗಿದೆ’ ಎಂದಿದ್ದಾರೆ.
मध्य प्रदेश में सेना के अधिकारियों को बंधक बनाकर महिला से गैंगरेप एवं उत्तर प्रदेश में हाईवे पर एक महिला का निर्वस्त्र शव मिलने की घटनाएं दिल दहलाने वाली हैं।
— Priyanka Gandhi Vadra (@priyankagandhi) September 12, 2024
देश में हर दिन 86 महिलाएं बलात्कार और बर्बरता का शिकार हो रही हैं। घर से लेकर बाहर तक, सड़क से लेकर दफ्तर तक, महिलाएं…
ಮಧ್ಯಪ್ರದೇಶದಲ್ಲಿ ಯುವ ಸೇನಾಧಿಕಾರಿ ಹಾಗೂ ಅವರ ಸ್ನೇಹಿತೆಯರ ಮೇಲೆ ಹಲ್ಲೆ ನಡೆಸಿದ ಆರೋಪದಡಿ ಇಬ್ಬರನ್ನು ಪೊಲೀಸರು ಬಂಧಿಸಿದ್ದಾರೆ.
‘ಇನ್‌ಫ್ಯಾಂಟ್ರಿ ಶಾಲೆಯ ಸೇನಾ ಪ್ರಧಾನ ಕಚೇರಿಯಲ್ಲಿ ಕರ್ತವ್ಯ ನಿರ್ವಹಿಸುವ ಯುವ ಅಧಿಕಾರಿ ಹಾಗೂ ಅವರ ಇಬ್ಬರು ಸ್ನೇಹಿತೆಯರ ಮೇಲೆ 7ರಿಂದ 8 ಜನ ಹಲ್ಲೆ ನಡೆಸಿ, ಲೈಂಗಿಕ ದೌರ್ಜನ್ಯ ಎಸಗಿರುವ ಕುರಿತು ಪ್ರಕರಣ ದಾಖಲಾಗಿತ್ತು. ತನಿಖೆಗಾಗಿ ಹತ್ತು ತಂಡವನ್ನು ರಚಿಸಲಾಗಿದೆ. ಆರು ಜನ ಆರೋಪಿಗಳನ್ನು ಪತ್ತೆ ಮಾಡಲಾಗಿದೆ. ಇಬ್ಬರನ್ನು ಬಂಧಿಸಲಾಗಿದೆ. ಉಳಿದವರನ್ನು ಬಂಧಿಸುವ ಪ್ರಕ್ರಿಯೆ ಜಾರಿಯಲ್ಲಿದೆ’ ಎಂದು ಇಂದೋರ್ ಗ್ರಾಮೀಣ ವಿಭಾಗದ ಪೊಲೀಸ್ ವರಿಷ್ಠಾಧಿಕಾರಿ ಹಿತಿಕಾ ವಾಸಲ್ ತಿಳಿಸಿದ್ದಾರೆ.
‘ತನ್ನನ್ನು ಕಟ್ಟಿಹಾಕಿ, ಸ್ನೇಹಿತೆಯರನ್ನು ದೂರಕ್ಕೆ ಎಳೆದೊಯ್ದರು. ₹10 ಲಕ್ಷಕ್ಕೆ ಆರೋಪಿಗಳು ಬೇಡಿಕೆ ಇಟ್ಟಿದ್ದಾರೆ. ನಂತರ ದೂರುದಾರರ ಸ್ನೇಹಿತೆಯರು ಕಿರುಚುವುದು ಕೇಳಿಸಿತು ಎಂದಿದ್ದಾರೆ. ಏನೋ ಅನಾಹುತ ನಡೆದಿದೆ ಎಂಬ ಶಂಕೆಯನ್ನು ದೂರುದಾರ ವ್ಯಕ್ತಪಡಿಸಿದ್ದಾರೆ’ ಎಂದು ಹಿತಿಕಾ ಹೇಳಿದ್ದಾರೆ.
ಘಟನೆಗೆ ಸಂಬಂಧಿಸಿದಂತೆ ಮಹಿಳೆಯರ ಹೇಳಿಕೆಯನ್ನು ದಾಖಲಿಸಿಕೊಂಡಿಲ್ಲ. ತನಿಖೆ ಪ್ರಗತಿಯಲ್ಲಿದೆ ಎಂದು ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.