ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

Assembly Election Results 2023: 5 ರಾಜ್ಯಗಳ ಚುನಾವಣೆ ಫಲಿತಾಂಶಕ್ಕೆ ಕ್ಷಣಗಣನೆ

Published 1 ಡಿಸೆಂಬರ್ 2023, 11:38 IST
Last Updated 1 ಡಿಸೆಂಬರ್ 2023, 11:38 IST
ಅಕ್ಷರ ಗಾತ್ರ

ಬೆಂಗಳೂರು: 2024ರ ಮಹಾ ಚುನಾವಣೆಯ ಸೆಮಿ ಫೈನಲ್ ಎಂದೇ ಬಿಂಬಿತವಾಗಿರುವ ಪಂಚ ರಾಜ್ಯಗಳ ವಿಧಾನಸಭೆ ಚುನಾವಣೆ ಫಲಿತಾಂಶವು ಭಾನುವಾರ ಪ್ರಕಟವಾಗಲಿದೆ. ನವೆಂಬರ್ 7ರಿಂದ 30ರ ನಡುವೆ ಈ ರಾಜ್ಯಗಳಲ್ಲಿ ಮತದಾನ ನಡೆದಿತ್ತು.

ಗುರುವಾರ ಪ್ರಕಟವಾದ ಮತಗಟ್ಟೆ ಸಮೀಕ್ಷೆಯಲ್ಲಿ ಮಧ್ಯಪ್ರದೇಶ ಹಾಗೂ ರಾಜಸ್ಥಾನಗಳಲ್ಲಿ ಬಿಜೆಪಿ, ಛತ್ತೀಸಗಢ ಹಾಗೂ ತೆಲಂಗಾಣ ರಾಜ್ಯಗಳಲ್ಲಿ ಕಾಂಗ್ರೆಸ್ ಅಧಿಕಾರದ ಚುಕ್ಕಾಣಿ ಹಿಡಿಯಲಿದ್ದು, ಈಶಾನ್ಯದ ಮಿಜೋರಾಂ ರಾಜ್ಯದಲ್ಲಿ ಅತಂತ್ರ ವಿಧಾನಸಭೆ ಸೃಷ್ಟಿಯಾಗಲಿರುವ ಸಾಧ್ಯತೆ ವ್ಯಕ್ತವಾಗಿದೆ.

ರಾಜಸ್ಥಾನ, ಮಧ್ಯಪ್ರದೇಶ, ಛತ್ತೀಸಗಢ, ತೆಲಂಗಾಣ ಹಾಗೂ ಮಿಜೋರಾಂ ವಿಧಾನಸಭೆಗೆ ಇತ್ತೀಚೆಗೆ ನಡೆದ ಚುನಾವಣೆಗಳಲ್ಲಿ ಸುಮಾರು 16.1 ಕೋಟಿ ಪ್ರಜೆಗಳು ಮತ ಚಲಾಯಿಸಿದ್ದರು. ಇವುಗಳಲ್ಲಿ ರಾಜಸ್ಥಾನ, ಮಧ್ಯಪ್ರದೇಶ, ಛತ್ತೀಸಗಢ, ತೆಲಂಗಾಣಗಳ ವಿಧಾನಸಭೆ ಅವಧಿಯು 2024ರ ಜನವರಿ ತಿಂಗಳಲ್ಲಿ ಕೊನೆಯಾಗಲಿದ್ದರೆ, ಮಿಜೋರಾಂ ವಿಧಾನಸಭೆಯ ಅವಧಿ ಇದೇ ತಿಂಗಳು ಕೊನೆಯಾಗುತ್ತಿದೆ.

ಈ ಐದೂ ರಾಜ್ಯಗಳಲ್ಲಿ ಮಧ್ಯಪ್ರದೇಶದ ವಿಜಯ್‌ಪುರ ವಿಧಾನಸಭಾ ಕ್ಷೇತ್ರವು 4546 ಚದರ ಕಿ.ಮೀ. ವಿಸ್ತೀರ್ಣದೊಂದಿಗೆ ಅತಿ ದೊಡ್ಡ ಕ್ಷೇತ್ರವಾಗಿದ್ದರೆ, ಜಬಲ್‌ಪುರ ಪೂರ್ವ ಕ್ಷೇತ್ರವು ಕೇವಲ 11 ಚದರ ಕಿ.ಮೀ. ವ್ಯಾಪ್ತಿಯೊಂದಿಗೆ ಅತಿ ಸಣ್ಣ ಕ್ಷೇತ್ರವೆಂದು ಪರಿಗಣಿತವಾಗಿದೆ.

Assembly Election Results 2023: ಮತದಾನೋತ್ತರ ಅಥವಾ ಮತಗಟ್ಟೆ ಸಮೀಕ್ಷೆಗಳೇನು ಸೂಚಿಸಿವೆ?

  • ರಾಜಸ್ಥಾನದಲ್ಲಿ ಕಾಂಗ್ರೆಸ್ ಅಧಿಕಾರ ಕಳೆದುಕೊಂಡು ಬಿಜೆಪಿಯು ಗದ್ದುಗೆಯೇರಬಹುದು

  • ಛತ್ತೀಸಗಢದಲ್ಲಿ ಕಾಂಗ್ರೆಸ್ ಅಧಿಕಾರದಲ್ಲಿ ಉಳಿಯಬಹುದು

  • ಮಧ್ಯಪ್ರದೇಶದಲ್ಲಿ ಬಿಜೆಪಿಯು ಅಧಿಕಾರದ ಗದ್ದುಗೆ ಉಳಿಸಿಕೊಳ್ಳಬಹುದು

  • ತೆಲಂಗಾಣದಲ್ಲಿ ಹಾಲಿ ಮುಖ್ಯಮಂತ್ರಿ ಕೆ.ಸಿ.ಚಂದ್ರಶೇಖರ ರಾವ್ ಅಧಿಕಾರ ಕಳೆದುಕೊಂಡು ಕಾಂಗ್ರೆಸ್‌ಗೆ ಮೇಲುಗೈ ಆಗಬಹುದು

  • ಮಿಜೋರಾಂನಲ್ಲಿ ಝಡ್‌ಪಿಎಂ ಎದುರು ಎಂಎನ್ಎಫ್ ಮಂಕಾಗುತ್ತದೆ, ಆದರೆ ಪ್ರಬಲ ಪೈಪೋಟಿ ಇರಬಹುದು

ಐದು ರಾಜ್ಯಗಳ ಮತದಾನೋತ್ತರ ಸಮೀಕ್ಷೆಯ ಪೂರ್ಣ ವಿವರ ಇಲ್ಲಿದೆ ನೋಡಿ.

ಅಂತಿಮ ಫಲಿತಾಂಶ ಯಾವಾಗ ಲಭ್ಯ?

ರಾಜಸ್ಥಾನ, ಮಧ್ಯಪ್ರದೇಶ, ಛತ್ತೀಸಗಢ, ತೆಲಂಗಾಣ ಹಾಗೂ ಮಿಜೋರಾಂ ವಿಧಾನಸಭೆಗೆ ನಡೆದ ಚುನಾವಣೆಯ ಮತ ಎಣಿಕೆಯು 2023 ಡಿಸೆಂಬರ್ 3ರ ಭಾನುವಾರ ಬೆಳಿಗ್ಗೆ ಆರಂಭವಾಗಲಿದ್ದು, ಸಂಜೆಯ ವೇಳೆಗೆ ಲಭ್ಯವಾಗಲಿದೆ. ಪ್ರಜಾವಾಣಿಯಲ್ಲಿ ಆ ದಿನವಿಡೀ ಕ್ಷಣ ಕ್ಷಣದ ತಾಜಾ ಮಾಹಿತಿ ಲಭ್ಯವಾಗಲಿದೆ.

ಮಧ್ಯಪ್ರದೇಶ ವಿಧಾನಸಭಾ ಕ್ಷೇತ್ರದ ಚುನಾವಣೆ, ಫಲಿತಾಂಶ, ಮತದಾನೋತ್ತರ ಸಮೀಕ್ಷೆ ವಿವರ

ಮಧ್ಯಪ್ರದೇಶದ 230 ಕ್ಷೇತ್ರಗಳಿಗೆ ಚುನಾವಣೆ ನಡೆದಿದ್ದು, ಸರ್ಕಾರ ರಚಿಸಲು ಬಹುಮತಕ್ಕೆ ಬೇಕಿರುವ ಸಂಖ್ಯೆ 116. ಹೆಚ್ಚಿನ ಮತದಾನೋತ್ತರ ಸಮೀಕ್ಷೆಗಳು ಇಲ್ಲಿ ಆಡಳಿತಾರೂಢ ಬಿಜೆಪಿಗೆ ಬಹುಮತದ ಸಾಧ್ಯತೆ ಹೆಚ್ಚಿದೆ ಎಂದು ತೋರಿಸಿವೆ.

ರಾಜಸ್ಥಾನ ವಿಧಾನಸಭಾ ಕ್ಷೇತ್ರದ ಚುನಾವಣೆ, ಫಲಿತಾಂಶ, ಮತದಾನೋತ್ತರ ಸಮೀಕ್ಷೆ ವಿವರ

ರಾಜಸ್ಥಾನದ 199 ವಿಧಾನಸಭಾ ಕ್ಷೇತ್ರಗಳಿಗೆ ನಡೆದ ಚುನಾವಣೆಯಲ್ಲಿ ಬಹುಮತಕ್ಕೆ ಬೇಕಿರುವ ಅಗತ್ಯ ಸಂಖ್ಯೆ 100. ಬಹುತೇಕ ಮತದಾನೋತ್ತರ ಸಮೀಕ್ಷೆಗಳು ಅಧಿಕಾರಾರೂಢ ಕಾಂಗ್ರೆಸ್‌ಗೆ ಹಿನ್ನಡೆ ತೋರಿಸಿದ್ದರೆ, ಬಿಜೆಪಿಯು ಮರಳಿ ಅಧಿಕಾರಕ್ಕೇರಬಹುದು ಎಂದು ಹೇಳಿವೆ.

ತೆಲಂಗಾಣ ವಿಧಾನಸಭಾ ಕ್ಷೇತ್ರದ ಚುನಾವಣೆ, ಫಲಿತಾಂಶ, ಮತದಾನೋತ್ತರ ಸಮೀಕ್ಷೆ ವಿವರ

ತೆಲಂಗಾಣ ವಿಧಾನಸಭೆಯ 119 ಕ್ಷೇತ್ರಗಳಿಗೆ ನಡೆದ ಚುನಾವಣೆಯಲ್ಲಿ ಸರ್ಕಾರ ರಚನೆಗೆ ಬೇಕಿರುವ ಬಹುಮತದ ಸಂಖ್ಯೆ 60. ಇಲ್ಲಿ ಆಡಳಿತಾರೂಢ ಭಾರತ ರಾಷ್ಟ್ರ ಸಮಿತಿ (ಬಿಆರ್‌ಎಸ್) ಅಧಿಕಾರ ಕಳೆದುಕೊಳ್ಳಲಿದೆ ಮತ್ತು ಕಾಂಗ್ರೆಸ್ ಮುನ್ನಡೆಯಲ್ಲಿದೆ ಎಂದು ಹೆಚ್ಚಿನ ಸಮೀಕ್ಷೆಗಳು ಹೇಳಿವೆ.

ಛತ್ತೀಸಗಢ ವಿಧಾನಸಭಾ ಕ್ಷೇತ್ರದ ಚುನಾವಣೆ, ಫಲಿತಾಂಶ, ಮತದಾನೋತ್ತರ ಸಮೀಕ್ಷೆ ವಿವರ

ಛತ್ತೀಸಗಢ ವಿಧಾನಸಭೆಯ 90 ಕ್ಷೇತ್ರಗಳಿಗೆ ನಡೆದ ಚುನಾವಣೆಯಲ್ಲಿ ಬಹುಮತಕ್ಕೆ ಬೇಕಾಗಿರುವುದು 46 ಸ್ಥಾನಗಳು. ಇಲ್ಲಿ ಬಿಜೆಪಿ ಮತ್ತು ಕಾಂಗ್ರೆಸ್ ನಡುವೆ ಅಧಿಕಾರಕ್ಕೆ ಪ್ರಬಲ ಪೈಪೋಟಿ ಏರ್ಪಟ್ಟಿದ್ದು, ಕಾಂಗ್ರೆಸ್ ಅಧಿಕಾರಕ್ಕೇರುವ ಸಾಧ್ಯತೆಗಳು ಹೆಚ್ಚು ಎಂದು ಬಹುತೇಕ ಮತದಾನೋತ್ತರ ಸಮೀಕ್ಷೆಗಳು ಹೇಳಿವೆ.

ಮಿಜೋರಾಂ ವಿಧಾನಸಭಾ ಕ್ಷೇತ್ರದ ಚುನಾವಣೆ, ಫಲಿತಾಂಶ, ಮತದಾನೋತ್ತರ ಸಮೀಕ್ಷೆ ವಿವರ

ಮಿಜೋರಾಂ ವಿಧಾನಸಭೆಯ 40 ಕ್ಷೇತ್ರಗಳಲ್ಲಿ ಮತದಾನ ನಡೆದಿದ್ದು, ಬಹುಮತಕ್ಕೆ ಅಗತ್ಯವಿರುವ ಸಂಖ್ಯೆ 21. ಈಶಾನ್ಯ ಭಾರತದ ರಾಜ್ಯವಾಗಿರುವ ಮಿಜೋರಾಂನಲ್ಲಿ ರಾಷ್ಟ್ರೀಯ ಪಕ್ಷಗಳ ಅಸ್ತಿತ್ವ ಅಷ್ಟಕ್ಕಷ್ಟೇ. ಅಲ್ಲಿ ಮಿಜೋ ನ್ಯಾಷನಲ್ ಫ್ರಂಟ್ (ಎಂಎನ್ಎಫ್) ಹಾಗೂ ಜೋರಾಂ ಪೀಪಲ್ಸ್ ಫ್ರಂಟ್ (ಝಡ್‌ಪಿಎಫ್) ನಡುವೆ ಅಧಿಕಾರಕ್ಕೆ ಪ್ರಬಲ ಪೈಪೋಟಿ ಇರಲಿದೆ ಎಂದು ಮತಗಟ್ಟೆ ಸಮೀಕ್ಷೆಗಳು ಹೇಳಿವೆ. ಜೊತೆಗೆ ಕಾಂಗ್ರೆಸ್ ಕೂಡ ಎರಡಂಕಿ ಸ್ಥಾನಗಳನ್ನು ಪಡೆಯುವ ಬಗ್ಗೆ ಸಮೀಕ್ಷೆಗಳು ಸೂಚನೆ ನೀಡಿವೆ.

ಆಮಿಷ: ₹2,000 ಕೋಟಿ ಮೌಲ್ಯದ ಸೊತ್ತು ವಶ

ಐದು ರಾಜ್ಯಗಳ ವಿಧಾನಸಭೆಗೆ ನಡೆದ ಚುನಾವಣೆಗಳಲ್ಲಿ ಮತದಾರರಿಗೆ ಹಂಚಲೆಂದು ವಿವಿಧ ರಾಜಕೀಯ ಪಕ್ಷಗಳು ದಾಸ್ತಾನು ಮಾಡಿಕೊಂಡಿರುವ ಸುಮಾರು ₹2,000 ಕೋಟಿ ಮೌಲ್ಯದ ಉಡುಗೊರೆಗಳು, ಮಾದಕ ವಸ್ತು, ಮದ್ಯ ಹಾಗೂ ನಗದು ಹಣವನ್ನು ಚುನಾವಣಾ ಆಯೋಗವು ವಶಪಡಿಸಿಕೊಂಡಿದೆ. ಚುನಾವಣಾ ಆಯೋಗದ ಕಟ್ಟುನಿಟ್ಟಿನ ಕ್ರಮಗಳಿಂದ ಇದು ಸಾಧ್ಯವಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT