ಗುರುವಾರ, 19 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ನಟ ನಾಗಾರ್ಜುನ ಒಡೆತನದ ಕನ್ವೆನ್ಷನ್‌ ಸೆಂಟರ್‌ ನೆಲಸಮ

Published : 24 ಆಗಸ್ಟ್ 2024, 14:31 IST
Last Updated : 24 ಆಗಸ್ಟ್ 2024, 14:31 IST
ಫಾಲೋ ಮಾಡಿ
Comments

ಹೈದರಾಬಾದ್: ತೆಲುಗು ನಟ ಅಕ್ಕಿನೇನಿ ನಾಗಾರ್ಜುನ ಅವರ ಜಂಟಿ ಮಾಲೀಕತ್ವದ ಎನ್-ಕನ್ವೆನ್ಷನ್ ಸೆಂಟರ್‌ ಅನ್ನು ಕೆರೆ ಒತ್ತುವರಿ ಜಾಗದಲ್ಲಿ ನಿರ್ಮಿಸಲಾಗಿದೆ ಎಂಬ ಆರೋಪದಲ್ಲಿ ನೆಲಸಮಗೊಳಿಸಲಾಯಿತು.

ಹೈದರಾಬಾದ್‌ ವಿಕೋಪ ಸ್ಪಂದನೆ, ಆಸ್ತಿಗಳ ನಿಗಾ ಹಾಗೂ ರಕ್ಷಣಾ ಏಜೆನ್ಸಿಯ (ಹೈದ್ರಾ) ಅಧಿಕಾರಿಗಳು ಪೊಲೀಸರ ಬಿಗಿ ಬಂದೋಬಸ್ತ್‌ನೊಂದಿಗೆ ಶನಿವಾರ ಬೆಳಿಗ್ಗೆ ಒತ್ತುವರಿ ತೆರವು ಕಾರ್ಯಾಚರಣೆ ನಡೆಸಿದ್ದಾರೆ. ತುಮ್ಮಿಡಿಕುಂಟಾ ಕೆರೆಯ ಜಾಗವನ್ನು ಒತ್ತುವರಿ ಮಾಡಿಕೊಂಡು ಎನ್-ಕನ್ವೆನ್ಷನ್ ಸೆಂಟರ್‌ ನಿರ್ಮಿಸಲಾಗಿದೆ ಎಂಬ ಆರೋಪ ಇದೆ.

ಇಲ್ಲಿನ ಮಾದಾಪುರದಲ್ಲಿರುವ ಕನ್ವೆನ್ಷನ್‌ ಸೆಂಟರ್‌ ಎನ್‌3 ಎಂಟರ್‌ಪ್ರೈಸಸ್‌ನ ಒಡೆತನದಲ್ಲಿದೆ. ಈ ಸಂಸ್ಥೆಯು ನಾಗಾರ್ಜುನ ಮತ್ತು ನಲ್ಲಾ ಪ್ರೀತಂ ಅವರ ಜಂಟಿ ಮಾಲೀಕತ್ವದಲ್ಲಿದೆ. 

ಎನ್‌– ಕನ್ವೆನ್ಷನ್‌ ಸೆಂಟರ್‌ ಅನ್ನು 2010–12ರ ಅವಧಿಯಲ್ಲಿ ನಿರ್ಮಿಸಲಾಗಿದ್ದು, ಸುಮಾರು 10 ಎಕರೆ ಪ್ರದೇಶದಲ್ಲಿ ಹರಡಿಕೊಂಡಿದೆ. ತುಮ್ಮಿಡಿಕುಂಟಾ ಕೆರೆಗೆ ಸೇರಿದ 1.12 ಎಕರೆ ಭೂಮಿ ಮತ್ತು ಬಫರ್‌ ವಲಯದ ಎರಡು ಎಕರೆ ಜಾಗವನ್ನು ಒತ್ತುವರಿ ಮಾಡಲಾಗಿದೆ ಎಂದು ಆರೋಪಿಸಲಾಗಿದೆ. 

ನಾಗಾರ್ಜುನ ಅವರು ಒತ್ತುವರಿ ತೆರವು ಪ್ರಕ್ರಿಯೆಗೆ ಶನಿವಾರ ಮಧ್ಯಾಹ್ನದ ವೇಳೆಗೆ ಹೈಕೋರ್ಟ್‌ನಿಂದ ತಡೆಯಾಜ್ಞೆ ತಂದರಾದರೂ, ಆ ವೇಳೆಗಾಗಲೇ ಇಡೀ ಕನ್ವೆನ್ಷನ್‌ ಸೆಂಟರ್‌ ಅನ್ನು ಕೆಡವಲಾಗಿತ್ತು. 

‘ನಾವು ಕಾನೂನು ಉಲ್ಲಂಘಿಸಿ ಯಾವುದೇ ನಿರ್ಮಾಣ ಕೆಲಸ ಮಾಡಿಲ್ಲ. ಕನ್ವೆನ್ಷನ್‌ ಇರುವ ಜಮೀನು ಪಟ್ಟಾ ಭೂಮಿಯಾಗಿದ್ದು, ಕೆರೆಯ ಒಂದಿಂಚು ಜಾಗವೂ ಒತ್ತುವರಿಯಾಗಿಲ್ಲ’ ಎಂದು ನಾಗಾರ್ಜುನ ಅವರು ‘ಎಕ್ಸ್’ನಲ್ಲಿ ಪ್ರತಿಕ್ರಿಯಿಸಿದ್ದಾರೆ.

ನೆಲಸಮ ಕಾರ್ಯಾಚರಣೆಗೆ ಮುನ್ನ ಯಾವುದೇ ನೋಟಿಸ್‌ ಕೂಡಾ ನೀಡಿಲ್ಲ. ತಪ್ಪು ಮಾಹಿತಿಯಿಂದ ಕನ್ವೆನ್ಷನ್‌ ಸೆಂಟರ್‌ ಅನ್ನು ಕೆಡವಲಾಗಿದೆ. ಈ ಕ್ರಮದ ವಿರುದ್ಧ ಕಾನೂನು ಹೋರಾಟ ನಡೆಸಲಾಗುವುದು ಎಂದು ತಿಳಿಸಿದ್ದಾರೆ.

ನ್ಯಾಯಾಲಯದ ತಡೆಯಾಜ್ಞೆಯಿದ್ದರೂ ಎನ್‌–ಕನ್ವೆನ್ಷನ್‌ ಸೆಂಟರ್‌ಅನ್ನು ‘ಕಾನೂನುಬಾಹಿರ’ ರೀತಿಯಲ್ಲಿ ಕೆಡವಿರುವುದು ನೋವುಂಟು ಮಾಡಿದೆ.
–ನಾಗಾರ್ಜುನ, ನಟ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT