ಶುಕ್ರವಾರ, 24 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಯೋಧ್ಯೆಯಲ್ಲಿ ರಾಮನವಮಿ ಸಂಭ್ರಮ: ಬಾಲರಾಮನಿಗೆ ‘ಸೂರ್ಯ ತಿಲಕ’ದ ಗೌರವ

Published 17 ಏಪ್ರಿಲ್ 2024, 7:05 IST
Last Updated 17 ಏಪ್ರಿಲ್ 2024, 7:05 IST
ಅಕ್ಷರ ಗಾತ್ರ

ಅಯೋಧ್ಯಾ: ಬಾಲರಾಮನ ಹಣೆಗೆ ಸೂರ್ಯನ ಕಿರಣಗಳು ಸ್ಪರ್ಶಿಸುವ ಮೂಲಕ ‘ಸೂರ್ಯ ತಿಲಕ’ ವನ್ನಿಟ್ಟ ಸಂಭ್ರಮದ ಘಳಿಗೆಗೆ ಅಯೋಧ್ಯಾ ಬುಧವಾರ ಸಾಕ್ಷಿಯಾಯಿತು.

ಕನ್ನಡಿಗಳು, ಮಸೂರಗಳನ್ನು ಬಳಸಿ ರೂಪಿಸಿರುವ ಯಾಂತ್ರಿಕ ವ್ಯವಸ್ಥೆ ಮೂಲಕ ಸಾಗಿದ ಸೂರ್ಯನ ಕಿರಣಗಳು, ಹಲವು ಬಾರಿ ಪ್ರತಿಫಲನಗೊಂಡು ಕೊನೆಗೆ ಬಾಲರಾಮನ ಹಣೆ ಮೇಲೆ ಬಿದ್ದ ಪರಿಯನ್ನು ಭಕ್ತರು ಕಣ್ತುಂಬಿಕೊಂಡರು.

ಜನವರಿ 22ರಂದು ನೂತನ ಮಂದಿರದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಬಾಲರಾಮನ ಮೂರ್ತಿಯ ಪ್ರಾಣ ಪ್ರತಿಷ್ಠಾಪನೆ ನೆರವೇರಿಸಿದ ನಂತರ ಆಚರಿಸಲಾದ ಮೊದಲ ರಾಮ ನವಮಿ ಇದು ಎಂಬುದು ಗಮನಾರ್ಹ.

‘ಬಾಲರಾಮನ ಮೂರ್ತಿಯ ಹಣೆ ಮೇಲೆ 4–5 ನಿಮಿಷಗಳ ಕಾಲ ಸೂರ್ಯರಶ್ಮಿಗಳು ಬಿದ್ದವು. ಆ ಮೂಲಕ  ‘ಸೂರ್ಯ ತಿಲಕ’ವನ್ನಿಟ್ಟ ವಿಧಿಯನ್ನು ನೆರವೇರಿಸಿದಂತಾಯಿತು’ ಎಂದು ರಾಮ ಮಂದಿರದ ವಕ್ತಾರ ಪ್ರಕಾಶ್‌ ಗುಪ್ತ ಹೇಳಿದ್ದಾರೆ.

‘ಸೂರ್ಯ ತಿಲಕ’ ಕೌತುಕ ವೀಕ್ಷಿಸಲು ಭಾರಿ ಸಂಖ್ಯೆಯಲ್ಲಿ ಭಕ್ತರು ಸೇರುವ ಸಾಧ್ಯತೆ ಇದ್ದ ಕಾರಣ, ಮಂದಿರದ ಆಡಳಿತ ಮಂಡಳಿಯು ಈ ಅವಧಿಯಲ್ಲಿ ಭಕ್ತರು ಗರ್ಭ ಗುಡಿ ಪ್ರವೇಶಿಸುವುದಕ್ಕೆ ನಿರ್ಬಂಧ ಹೇರಿತ್ತು’ ಎಂದು ಹೇಳಿದರು.

ಈ ‘ಸೂರ್ಯ ತಿಲಕ’ದ ವಿನ್ಯಾಸವನ್ನು ರೂರ್ಕಿಯ ವೈಜ್ಞಾನಿಕ ಮತ್ತು ಔದ್ಯೋಗಿಕ ಸಂಶೋಧನಾ ಪರಿಷತ್ತಿನ ಕೇಂದ್ರೀಯ ನಿರ್ಮಾಣ ಸಂಶೋಧನಾ ಸಂಸ್ಥೆ (ಸಿಎಸ್‌ಐಆರ್‌–ಸಿಬಿಆರ್‌ಐ) ಮಾಡಿದೆ.

‘ಯೋಜಿಸಿದಂತೆಯೇ, ಮಧ್ಯಾಹ್ನ 12 ಗಂಟೆಗೆ ಬಾಲರಾಮನ ಮೂರ್ತಿಯ ಹಣೆ ಮೇಲೆ ‘ಸೂರ್ಯ ತಿಲಕ’ ಕಂಡುಬಂತು’ ಎಂದು ಸಿಎಸ್‌ಐಆರ್‌–ಸಿಬಿಆರ್‌ಐನ ಮುಖ್ಯ ವಿಜ್ಞಾನಿ ಡಾ.ಡಿ.ಪಿ.ಕನುಂಗೊ ಹೇಳಿದ್ದಾರೆ.

ಮೊಳಗಿದ ಜಯಘೋಷಗಳು: ಸೂರ್ಯ ಕಿರಣಗಳು ಗರ್ಭಗುಡಿಯಲ್ಲಿರುವ ಬಾಲರಾಮನ ಮೂರ್ತಿಯ ಹಣೆಯನ್ನು ಸ್ಪರ್ಶಿಸುತ್ತಿದ್ದಂತೆಯೇ, ಭಕ್ತರು ಜೈ ಶ್ರೀರಾಮ್ ಎಂಬ ಘೋಷಣೆಗಳನ್ನು ಕೂಗಿ, ಸಂಭ್ರಮಿಸಿದರು. ಇದೇ ವೇಳೆ, ಅರ್ಚಕರು ಆರತಿ ನೆರವೇರಿಸಿದರು.

ಈ ವಿಶೇಷ ಸಂದರ್ಭಕ್ಕಾಗಿ, ಬಾಲರಾಮನ ಮೂರ್ತಿಗೆ ರತ್ನಖಚಿತ ಕಿರೀಟವನ್ನು ತೊಡಿಸಲಾಗಿತ್ತು. ಈ ಕಿರೀಟವನ್ನು ಆ್ಯಪಲ್‌ ಗ್ರೀನ್‌ ಡೈಮಂಡ್‌ ಎಂಬ ಕಂಪನಿ ತಯಾರಿಸಿದೆ ಎಂದು ಮಂದಿರದ ಆಡಳಿತ ತಿಳಿಸಿದೆ.

ನಸುಕಿನಲ್ಲಿಯೇ, ಭಾರಿ ಸಂಖ್ಯೆಯಲ್ಲಿ ಭಕ್ತರು ರಾಮ ಮಂದಿರ ಬಳಿ ಸರದಿ ಸಾಲಿನಲ್ಲಿ ನಿಂತು, ದರ್ಶನ ಪಡೆದರು. ಭಕ್ತರಿಗಾಗಿ ವಿಶೇಷ ವ್ಯವಸ್ಥೆಯನ್ನು ಮಾಡಲಾಗಿತ್ತು ಎಂದು ಜಿಲ್ಲಾಡಳಿತ ತಿಳಿಸಿದೆ.

ಬೆಂಗಳೂರು ವಿಜ್ಞಾನಿಗಳ ನೆರವು

ಸೂರ್ಯ ಕಿರಣಗಳು ಬಾಲರಾಮನ ಮೂರ್ತಿಯ ಹಣೆ ಮೇಲೆ ಬೀಳುವಂತಹ ಯಾಂತ್ರಿಕ ವ್ಯವಸ್ಥೆಯನ್ನು ಅಭಿವೃದ್ಧಿಪಡಿಸುವ ಕಾರ್ಯಕ್ಕೆ ಸಿಎಸ್‌ಐಆರ್‌–ಸಿಬಿಆರ್‌ಐ ಜೊತೆ ಬೆಂಗಳೂರು ಮೂಲದ ಭಾರತೀಯ ಖಭೌತವಿಜ್ಞಾನ ಸಂಸ್ಥೆ (ಐಐಎ) ವಿಜ್ಞಾನಿಗಳು ಕೂಡ ಕೈಜೋಡಿಸಿದ್ದಾರೆ. 

ಈ ವ್ಯವಸ್ಥೆ ಮೂಲಕ 19 ವರ್ಷಗಳ ಕಾಲ ರಾಮ ನವಮಿಯಂದು ರಾಮ ಮಂದಿರದ ಮೂರನೇ ಮಹಡಿ ಮೂಲಕ ಹಾಯ್ದು ಹೋಗುವ ಸೂರ್ಯ ಕಿರಣಗಳು ಗರ್ಭ ಗೃಹದಲ್ಲಿರುವ ಬಾಲರಾಮನ ಮೂರ್ತಿಯ ಹಣೆಯನ್ನು ಸ್ಪರ್ಶಿಸಲಿವೆ. ಸೂರ್ಯಕಿರಣಗಳು ಗರ್ಭಗೃಹ ತಲುಪುವಂತೆ ಮಾಡಲು ಅಗತ್ಯವಿರುವ ಯಾಂತ್ರಿಕ ವ್ಯವಸ್ಥೆಯನ್ನು ಸಿಬಿಆರ್‌ಐ ಮಾಡಿದ್ದರೆ ಬೆಳಕಿನ ಕಿರಣಗಳ ಚಲನೆ ಪ್ರತಿಫಲನಕ್ಕೆ ಬೇಕಾದ ವ್ಯವಸ್ಥೆಯ ವಿನ್ಯಾಸವನ್ನು ಐಐಎ ಒದಗಿಸಿದೆ. ಇಡೀ ವ್ಯವಸ್ಥೆಯ ಪರೀಕ್ಷೆಯನ್ನು ವಿಜ್ಞಾನಿಗಳು ಮಂಗಳವಾರ ನಡೆಸಿದ್ದರು. ‘ಪ್ರತಿ ವರ್ಷ ಚೈತ್ರ ಮಾಸದಲ್ಲಿ ರಾಮ ನವಮಿ ದಿನ ಸೂರ್ಯ ಕಿರಣಗಳು ಬಾಲ ರಾಮನ ಮೂರ್ತಿಯ ಹಣೆ ಸ್ಪರ್ಶಿಸಿ ‘ಸೂರ್ಯ ತಿಲಕ’ ಮೂಡಿಸುವ ವ್ಯವಸ್ಥೆಯೊಂದನ್ನು ವಿನ್ಯಾಸಗೊಳಿಸುವುದೇ ಯೋಜನೆಯ ಉದ್ದೇಶವಾಗಿತ್ತು. ಯೋಜನೆಯಂತೆ ಸೂರ್ಯ ಕಿರಣವು  ರಾಮ ನವಮಿಯಂದೇ ಬಾಲರಾಮನ ಮೂರ್ತಿಯ ಹಣೆ ಮೇಲೆ ಬೀಳುವಂತೆ ಮಾಡಲಾಗಿದೆ’ ಎಂದು ಈ ಯೋಜನೆಯ ಅಭಿವೃದ್ಧಿಪಡಿಸಿದ ತಂಡದ ಭಾಗವಾಗಿದ್ದ ಸಿಎಸ್‌ಐಆರ್‌–ಸಿಬಿಆರ್‌ಐನ ವಿಜ್ಞಾನಿ ಡಾ.ಎಸ್‌.ಕೆ.ಪಾಣಿಗ್ರಾಹಿ ಹೇಳಿದ್ದಾರೆ.

ಭಾವನಾತ್ಮಕ ಕ್ಷಣ: ಮೋದಿ

ನಲ್ಬಾರಿ(ಅಸ್ಸಾಂ): ಲೋಕಸಭಾ ಚುನಾವಣೆ ಪ್ರಚಾರಕ್ಕಾಗಿ ಅಸ್ಸಾಂನ ನಲ್ಬಾರಿಯಲ್ಲಿದ್ದ ಪ್ರಧಾನಿ ನರೇಂದ್ರ ಮೋದಿ ಅವರು ಪ್ರಚಾರ ಕಾರ್ಯಕ್ರಮಕ್ಕೆ ತೆರಳುವ ವೇಳೆಯೇ  ಕಂಪ್ಯೂಟರ್‌ ಪರದೆಯಲ್ಲಿ ‘ಸೂರ್ಯ ತಿಲಕ’ದ ನೇರ ಪ್ರಸಾರವನ್ನು ವೀಕ್ಷಿಸಿದರು.

ಈ ಕುರಿತ ಚಿತ್ರಗಳನ್ನು ಅವರು ಸಾಮಾಜಿಕ ಜಾಲತಾಣ ‘ಎಕ್ಸ್‌’ನಲ್ಲಿ ಪೋಸ್ಟ್‌ ಮಾಡಿದ್ದಾರೆ. ‘ಅಸ್ಸಾಂನ ನಲ್ಬಾರಿಯಲ್ಲಿ ರ‍್ಯಾಲಿ ಮುಗಿದ ಬಳಿಕ ಬಾಲರಾಮನ ಮೂರ್ತಿಯ ಹಣೆ ಮೇಲೆ ಬಿದ್ದ ಸೂರ್ಯ ತಿಲಕವನ್ನು ನಾನು ವೀಕ್ಷಿಸಿದೆ. ಕೋಟ್ಯಂತರ ಭಾರತೀಯರಂತೆ ಇದು ಕೂಡ ನನಗೆ ಅತ್ಯಂತ ಭಾವನಾತ್ಮಕ ಕ್ಷಣವಾಗಿದೆ’ ಎಂದು ಪೋಸ್ಟ್‌ ಮಾಡಿದ್ದಾರೆ.

‘ಅಯೋಧ್ಯೆಯಲ್ಲಿ ವೈಭವ–ಸಂಭ್ರಮದಿಂದ ರಾಮ ನವಮಿ ಆಚರಣೆ ನಡೆದಿದ್ದು ಐತಿಹಾಸಿಕ. ಈ ಸೂರ್ಯ ತಿಲಕ ನಮ್ಮ ಜೀವನಕ್ಕೆ ಚೈತನ್ಯ ತುಂಬಲಿ ದೇಶ ಹೊಸ ಎತ್ತರಕ್ಕೆ ಏರುವಂತೆ ಪ್ರೇರಣೆ ನೀಡಲಿ’ ಎಂದೂ ಅವರು ಹಾರೈಸಿದ್ದಾರೆ. ಇದಕ್ಕೂ ಮುನ್ನ ನಡೆದ ಬಹಿರಂಗ ಸಭೆಯಲ್ಲಿ ಮಾತನಾಡಿದ ಅವರು ‘500 ವರ್ಷಗಳ ನಂತರ ಅಯೋಧ್ಯೆಯಲ್ಲಿ ಭಗವಾನ್‌ ರಾಮನ ಜನ್ಮೋತ್ಸವವನ್ನು ಸೂರ್ಯ ತಿಲಕದ ಮೂಲಕ ಆಚರಿಸಲಾಗುತ್ತಿದೆ’ ಎಂದರು.

‘500 ವರ್ಷಗಳ ನಂತರ ರಾಮ ಜನಿಸಿದ ಸ್ಥಳದಲ್ಲಿಯೇ ಜನ್ಮೋತ್ಸವ ಆಚರಿಸುತ್ತಿರುವ ಕಾರಣ ದೇಶದಾದ್ಯಂತ ಹೊಸ ವಾತಾವರಣವೇ ನಿರ್ಮಾಣವಾಗಿದೆ. ಇದು ಶತಮಾನಗಳ ಭಕ್ತಿ–ನಿಷ್ಠೆ ಹಾಗೂ ಅನೇಕ ತಲೆಮಾರುಗಳ ತ್ಯಾಗದ ಪರಾಕಾಷ್ಠೆಯಾಗಿದೆ’ ಎಂದರು. ವಿಡಿಯೊ ಹಂಚಿಕೆ: ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಅವರು ಕೂಡ ಈ ವಿದ್ಯಮಾನದ ವಿಡಿಯೊವನ್ನು ‘ಎಕ್ಸ್‌’ನಲ್ಲಿ ಹಂಚಿಕೊಂಡು ಜೈ ಶ್ರೀರಾಮ್ ಎಂದು ಬರೆದುಕೊಂಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT