ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂದೇಶ್‌ಖಾಲಿ ಪ್ರಕರಣ | ಮಹಿಳೆಯರ ಧ್ವನಿ ಹತ್ತಿಕ್ಕುತ್ತಿರುವ ಬಂಗಾಳ ಸರ್ಕಾರ: ರೇಖಾ

ಸಂದೇಶ್‌ಖಾಲಿಗೆ ರಾಷ್ಟ್ರೀಯ ಮಹಿಳಾ ಆಯೋಗದ ನಿಯೋಗ ಭೇಟಿ
Published 19 ಫೆಬ್ರುವರಿ 2024, 14:37 IST
Last Updated 19 ಫೆಬ್ರುವರಿ 2024, 14:37 IST
ಅಕ್ಷರ ಗಾತ್ರ

ಕೋಲ್ಕತ್ತ: ಸಂದೇಶ್‌ಖಾಲಿಯಲ್ಲಿ ದೌರ್ಜನ್ಯದ ವಿರುದ್ಧ ಪ್ರತಿಭಟನೆ ನಡೆಸುತ್ತಿರುವ ಮಹಿಳೆಯರ ಧ್ವನಿಯನ್ನು ಪಶ್ಚಿಮ ಬಂಗಾಳ ಸರ್ಕಾರವು ಹತ್ತಿಕ್ಕುತ್ತಿದೆ ಎಂದು ರಾಷ್ಟ್ರೀಯ ಮಹಿಳಾ ಆಯೋಗದ (ಎನ್‌ಸಿಡಬ್ಲ್ಯು) ಅಧ್ಯಕ್ಷೆ ರೇಖಾ ಶರ್ಮಾ ಸೋಮವಾರ ಆರೋಪಿಸಿದರು.

ಸಂದೇಶ್‌ಖಾಲಿಗೆ ಭೇಟಿ ನೀಡಿದ ಬಳಿಕ ಮಾತನಾಡಿದ ಅವರು, ‘ಸತ್ಯ ಹೊರಬರದಂತೆ ತಡೆಯಲು ಸರ್ಕಾರ ಪ್ರಯತ್ನಿಸುತ್ತಿದೆ’ ಎಂದು ಹೇಳಿದರು.

ರೇಖಾ ಶರ್ಮಾ ಅವರ ನೇತೃತ್ವದಲ್ಲಿ ಎನ್‌ಸಿಡಬ್ಲ್ಯು ನಿಯೋಗವು ಉತ್ತರ 24 ಪರಗಣ ಜಿಲ್ಲೆಯ ಸಂದೇಶ್‌ಖಾಲಿಗೆ ಭೇಟಿ ನೀಡಿ, ಮಹಿಳೆಯರ ಜೊತೆ ಮಾತುಕತೆ ನಡೆಸಿದೆ.

‘ದೌರ್ಜನ್ಯ ನಡೆದಿರುವ ಪ್ರದೇಶದ ಮಹಿಳೆಯರ ಸಂಕಷ್ಟ ಆಲಿಸಿದ್ದೇನೆ. ಆರೋಪಿ ಶಹಜಹಾನ್‌ ಶೇಖ್‌ರನ್ನು ಕೂಡಲೇ ಬಂಧಿಸಬೇಕು. ಅವರನ್ನು ಬಂಧಿಸಿದರೆ ಇನ್ನಷ್ಟು ಮಹಿಳೆಯರು ದೂರು ನೀಡಲು ಮುಂದೆ ಬರಬಹುದು. ನಾವು ಮಹಿಳೆಯರಿಗೆ ಧೈರ್ಯ ತುಂಬಿದ್ದೇವೆ’ ಎಂದು ರೇಖಾ ಶರ್ಮಾ ತಿಳಿಸಿದರು.

ಪಶ್ಚಿಮ ಬಂಗಾಳದಲ್ಲಿ ರಾಷ್ಟ್ರಪತಿ ಆಳ್ವಿಕೆ ಹೇರಬೇಕೆಂದೂ ಅವರು ಒತ್ತಾಯಿಸಿದರು.

ಟಿಎಂಸಿ ನಾಯಕ ಶಹಜಹಾನ್‌ ಶೇಖ್‌ ಹಾಗೂ ಬೆಂಬಲಿಗರು ಲೈಂಗಿಕ ದೌರ್ಜನ್ಯ ಎಸಗಿದ್ದಾರೆ ಮತ್ತು ಭೂಮಿ ಕಬಳಿಸಿದ್ದಾರೆ ಎಂದು ಆರೋಪಿಸಿ ಮಹಿಳೆಯರು ಸಂದೇಶ್‌ಖಾಲಿಯಲ್ಲಿ ಪ್ರತಿಭಟನೆ ನಡೆಸುತ್ತಿದ್ದಾರೆ. ಶಹಜಹಾನ್‌ ಶೇಖ್‌ ಅವರು ತಲೆಮರೆಸಿಕೊಂಡಿದ್ದಾರೆ.

‘ಮಮತಾ ಸರ್ಕಾರವನ್ನು ಕಿತ್ತೆಸೆಯಬೇಕು’: ಪಶ್ಚಿಮ ಬಂಗಾಳವನ್ನು ಉಳಿಸಲು ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ನೇತೃತ್ವದ ಸರ್ಕಾರವನ್ನು ಕಿತ್ತೆಸೆಯಬೇಕು ಎಂದು ಬಿಜೆಪಿ ಸಂಸದೆ ಲಾಕೆಟ್‌ ಚಟರ್ಜಿ ಹೇಳಿದರು.

‘ಸಂದೇಶ್‌ಖಾಲಿಯಲ್ಲಿ ಅಶಾಂತಿ ಸೃಷ್ಟಿಸಲು ಬಿಜೆಪಿ ಯತ್ನಿಸುತ್ತಿದೆ’ ಎಂಬ ಮಮತಾ ಬ್ಯಾನರ್ಜಿ ಅವರ ಹೇಳಿಕೆಗೆ ಪ್ರತಿಕ್ರಿಯಿಸಿರುವ ಅವರು, ಮಮತಾ ಅವರು ಕೀಳುಮಟ್ಟದ ಹೇಳಿಕೆ ನೀಡಿದ್ದಾರೆ ಎಂದು ತಿಳಿಸಿದರು.

ಹಕ್ಕುಬಾಧ್ಯತಾ ಸಮಿತಿಯ ನೋಟಿಸ್‌ಗೆ ತಡೆ

ನವದೆಹಲಿ (ಪಿಟಿಐ): ಸಂದೇಶ್‌ಖಾಲಿ ಪ್ರಕರಣಕ್ಕೆ ಸಂಬಂಧಿಸಿ ವಿಚಾರಣೆಗೆ ಹಾಜರಾಗಬೇಕೆಂದು ಸೂಚಿಸಿ ಲೋಕಸಭೆಯ ಹಕ್ಕುಬಾಧ್ಯತಾ ಸಮಿತಿಯು ಪಶ್ಚಿಮ ಬಂಗಳದ ಅಧಿಕಾರಿಗಳಿಗೆ ನೀಡಿದ್ದ ನೋಟಿಸ್‌ಗೆ ಸುಪ್ರೀಂ ಕೋರ್ಟ್‌ ತಡೆಯಾಜ್ಞೆ ನೀಡಿದೆ.

ಅಧಿಕಾರಿಗಳ ಅರ್ಜಿಯ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ಡಿ.ವೈ ಚಂದ್ರಚೂಡ್‌ ನೇತೃತ್ವದ ನ್ಯಾಯಪೀಠವು ಮುಂದಿನ ವಿಚಾರಣೆಯನ್ನು ನಾಲ್ಕು ವಾರಗಳ ನಂತರಕ್ಕೆ ನಿಗದಿಪಡಿಸಿದೆ.

ನೋಟಿಸ್‌ಗೆ ತಡೆಯಾಜ್ಞೆ ನೀಡಿರುವ ಕಾರಣ ಅಧಿಕಾರಿಗಳು ಸಮಿತಿ ಮುಂದೆ ಹಾಜರಾಗಿರಲಿಲ್ಲ. ಕೋರಂನ ಕೊರತೆಯಿಂದಲೂ ಹಕ್ಕುಬಾಧ್ಯತಾ ಸಮಿತಿಯ ಸಭೆ ನಡೆದಿಲ್ಲ ಎಂದು ಮೂಲಗಳು ತಿಳಿಸಿವೆ.

ಪಶ್ಚಿಮ ಬಂಗಾಳದ ಅಧಿಕಾರಿಗಳ ವಿರುದ್ಧ ಬಿಜೆಪಿ ಸಂಸದ ಸುಕಾಂತ ಮಜುಂದಾರ್‌ ಅವರು ಸಮಿತಿಗೆ ದೂರು ನೀಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT