ಬುಧವಾರ, 17 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಾಲ್ಯ ವಿವಾಹ, ಬಹುಪತ್ನಿತ್ವ ಕೈಬಿಡಿ: ಮುಸ್ಲಿಮರಿಗೆ ಹಿಮಂತ ಬಿಸ್ವ ಶರ್ಮ ಕರೆ

Published 24 ಮಾರ್ಚ್ 2024, 14:45 IST
Last Updated 24 ಮಾರ್ಚ್ 2024, 14:45 IST
ಅಕ್ಷರ ಗಾತ್ರ

ಗುವಾಹಟಿ: ಬಂಗಾಳಿ ಭಾಷೆಯನ್ನು ಮಾತನಾಡುವ ಮುಸ್ಲಿಮರು ಅಸ್ಸಾಂ ರಾಜ್ಯದ ಮೂಲ ನಿವಾಸಿಗಳು ಎಂದು ಕರೆಸಿಕೊಳ್ಳಬೇಕಿದ್ದರೆ ಬಾಲ್ಯ ವಿವಾಹ ಹಾಗೂ ಬಹುಪತ್ನಿತ್ವವನ್ನು ತ್ಯಜಿಸಬೇಕು ಎಂದು ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವ ಶರ್ಮ ಹೇಳಿದ್ದಾರೆ.

ರಾಜ್ಯದಲ್ಲಿ ಇರುವ ಬಂಗಾಳಿ ಭಾಷಿಕ ಮುಸ್ಲಿಂ ಸಮುದಾಯವು ಈ ಸಾಮಾಜಿಕ ಪಿಡುಗುಗಳಿಗೆ ಕಾರಣ ಎಂದು ಶರ್ಮ ಅವರು ಈ ಹಿಂದೆಯೂ ಹೇಳಿದ್ದರು. ಬಂಗಾಳಿ ಭಾಷಿಕ ಮುಸ್ಲಿಂ ಸಮುದಾಯದವರಲ್ಲಿ ಹೆಚ್ಚಿನವರು ಬಾಂಗ್ಲಾದೇಶ ಮೂಲದವರು.

‘ಮಿಯಾಗಳು (ಬಂಗಾಳಿ ಭಾಷಿಕ ಮುಸ್ಲಿಮರು) ಮೂಲನಿವಾಸಿಗಳೇ ಅಲ್ಲವೇ ಎಂಬುದು ಬೇರೆಯದೇ ವಿಚಾರ. ಅವರು ಮೂಲನಿವಾಸಿಗಳಾಗಲು ಯತ್ನಿಸಿದರೆ ನಮಗೆ ಯಾವ ಸಮಸ್ಯೆಯೂ ಇಲ್ಲ. ಆದರೆ ಆ ರೀತಿ ಆಗಬೇಕು ಎಂದಾದರೆ ಅವರು ಬಾಲ್ಯ ವಿವಾಹ ಹಾಗೂ ಬಹುಪತ್ನಿತ್ವವನ್ನು ಬಿಡಬೇಕು. ಮಹಿಳೆಯರಿಗೆ ಶಿಕ್ಷಣ ಕೊಡಿಸುವುದಕ್ಕೆ ಉತ್ತೇಜನ ನೀಡಬೇಕು’ ಎಂದು ಶರ್ಮ  ಹೇಳಿದ್ದಾರೆ.

‘ಮಿಯಾ’ ಎಂಬುದು ವಾಸ್ತವದಲ್ಲಿ ಅಸ್ಸಾಂನಲ್ಲಿ ಇರುವ ಬಂಗಾಳಿ ಭಾಷಿಕ ಮುಸ್ಲಿಮರನ್ನು ನಿಂದಿಸಲು ಬಳಸುವ ಪದ. ಬಂಗಾಳಿ ಭಾಷಿಕರಲ್ಲದವರು ಇವರನ್ನು ಬಾಂಗ್ಲಾದೇಶದಿಂದ ವಲಸೆ ಬಂದವರು ಎಂದು ಗುರುತಿಸುತ್ತಾರೆ. ಈಚಿನ ವರ್ಷಗಳಲ್ಲಿ ಬಂಗಾಳಿ ಭಾಷಿಕ ಸಮುದಾಯದ ಸಾಮಾಜಿಕ ಕಾರ್ಯಕರ್ತರು ಈ ಪದವನ್ನು ಪ್ರತಿರೋಧ ತೋರಲು ಕೂಡ ಬಳಸುತ್ತಿದ್ದಾರೆ.

ಅಸ್ಸಾಂನ ಜನರ ಸಂಸ್ಕೃತಿಯು ಹೆಣ್ಣುಮಕ್ಕಳನ್ನು ‘ಶಕ್ತಿ’ಗೆ (ದೇವತೆ) ಹೋಲಿಸುತ್ತದೆ. ಎರಡು–ಮೂರು ಬಾರಿ ಮದುವೆ ಆಗುವುದು ಅಸ್ಸಾಂನ ಸಂಸ್ಕೃತಿ ಅಲ್ಲ ಎಂದು ಶರ್ಮ ಹೇಳಿದ್ದಾರೆ. ‘ಸತ್ರವನ್ನು (ವೈಷ್ಣವ ಮಠ) ಆಕ್ರಮಿಸಿಕೊಂಡು ಮೂಲನಿವಾಸಿಗಳಾಗಲು ಬಯಸುವುದು ಹೇಗೆ ಸಾಧ್ಯ’ ಎಂದು ಅವರು ಪ್ರಶ್ನಿಸಿದ್ದಾರೆ.

ಬಂಗಾಳಿ ಭಾಷಿಕ ಮುಸ್ಲಿಮರು ಅಸ್ಸಾಂನ ಸಂಸ್ಕೃತಿಯನ್ನು ಅನುಸರಿಸಲು ಸಾಧ್ಯವಾದರೆ ಅವರನ್ನು ಕೂಡ ಮೂಲನಿವಾಸಿಗಳು ಎಂದು ಪರಿಗಣಿಸಲಾಗುತ್ತದೆ ಎಂದು ಮುಖ್ಯಮಂತ್ರಿ ಹೇಳಿದ್ದಾರೆ.

ಅಸ್ಸಾಂ ಸರ್ಕಾರವು ಬಾಲ್ಯವಿವಾಹದ ವಿರುದ್ಧ ಕಳೆದ ವರ್ಷ ಎರಡು ಹಂತಗಳಲ್ಲಿ ಕ್ರಮಕ್ಕೆ ಮುಂದಾಗಿತ್ತು. ಪುರುಷರಲ್ಲಿ ಹಲವರು ಒಂದಕ್ಕಿಂತ ಹೆಚ್ಚು ಬಾರಿ ಮದುವೆ ಆಗಿರುವುದು ಹಾಗೂ ಹೆಚ್ಚಿನ ಪ್ರಕರಣಗಳಲ್ಲಿ ಅವರ ಪತ್ನಿಯರು ಬಡ ವರ್ಗಗಳಿಗೆ ಸೇರಿದ ಬಾಲಕಿಯರಾಗಿದ್ದುದು ಆ ಸಂದರ್ಭದಲ್ಲಿ ಪತ್ತೆಯಾಗಿತ್ತು ಎಂದು ಶರ್ಮ ಅವರು ಈ ಹಿಂದೆ ಹೇಳಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT