ಶುಕ್ರವಾರ, 11 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ವಂದೇ ಮೆಟ್ರೊಗೆ 'ನಮೋ ಭಾರತ್ ರ‍್ಯಾಪಿಡ್‌ ರೈಲು' ಎಂದು ಮರುನಾಮಕರಣ

Published : 16 ಸೆಪ್ಟೆಂಬರ್ 2024, 7:37 IST
Last Updated : 16 ಸೆಪ್ಟೆಂಬರ್ 2024, 7:37 IST
ಫಾಲೋ ಮಾಡಿ
Comments

ಭುಜ್ (ಗುಜರಾತ್): ‘ಇಲ್ಲಿನ ಭುಜ್‌ ಹಾಗೂ ಅಹಮದಾಬಾದ್‌ ನಡುವೆ ಸೋಮವಾರದಿಂದ ಆರಂಭಗೊಂಡ ‘ವಂದೇ ಮೆಟ್ರೊ’ ರೈಲಿನ ಹೆಸರನ್ನು ಉದ್ಘಾಟನೆಗೆ ಕೆಲವು ಗಂಟೆಗೂ ಮುನ್ನ ‘ನಮೋ ಭಾರತ್‌ ಕ್ಷಿಪ್ರವೇಗದ ರೈಲು’ ಎಂದು ರೈಲ್ವೆ ಇಲಾಖೆಯು ಹೆಸರು ಬದಲಾಯಿಸಿದೆ’ ಎಂದು ವಕ್ತಾರರು ತಿಳಿಸಿದ್ದಾರೆ.

ಭುಜ್‌ನಿಂದ ಸಂಜೆ 4.15ಕ್ಕೆ ಹೊರಟ ಮೊದಲ ರೈಲಿಗೆ ಪ್ರಧಾನಿ ನರೇಂದ್ರ ಮೋದಿ ಅವರು ಅಹಮದಾಬಾದ್‌ನಿಂದಲೇ ಚಾಲನೆ ನೀಡಿದರು.

ಈ ರೈಲು ಎರಡು ನಗರಗಳ ನಡುವಿನ 359 ಕಿ.ಮೀ ದೂರವನ್ನು 5.45 ಗಂಟೆಗಳಲ್ಲಿ ಕ್ರಮಿಸಲಿದೆ. ಮಾರ್ಗದಲ್ಲಿ 9 ನಿಲ್ದಾಣಗಳಲ್ಲಿ ನಿಲ್ಲಲಿದೆ. ಸೆ.17ರಿಂದ ಅಹಮದಾಬಾದ್‌ನಿಂದ ಸೇವೆ ಆರಂಭಿಸಲಿದ್ದು, ₹455 ಪ್ರಯಾಣದರ ವಿಧಿಸಲಾಗಿದೆ.

ಕಡಿಮೆ ಅಂತರದ ಪ್ರಯಾಣಕ್ಕೆ ಅನುಕೂಲವಾಗುವಂತೆ ದೇಶದಾದ್ಯಂತ ಮತ್ತಷ್ಟು ‘ನಮೋ ಮೆಟ್ರೊ’ ಆರಂಭಿಸಲು ರೈಲ್ವೆ ಇಲಾಖೆಯು ನಿರ್ಧರಿಸಿದೆ. 

12 ಬೋಗಿಗಳನ್ನು ಹೊಂದಿರುವ ಈ ರೈಲಿನಲ್ಲಿ ಒಮ್ಮೆಗೆ 1,150 ಮಂದಿ ಪ್ರಯಾಣಿಕರು ಪ್ರಯಾಣಿಸಬಹುದಾಗಿದೆ. ಸಂಪೂರ್ಣ ಹವಾನಿಯಂತ್ರಿತ ಕ್ಯಾಬಿನ್‌ ಜತೆಗೆ ಪರಿಸರ ಸ್ನೇಹಿ, ಅಂಗವಿಕಲರಿಗೆ ಅನುಕೂಲವಾಗುವ ಶೌಚಾಲಯ ಸಹಿತ ಎಲ್‌ಇಡಿ ದೀಪ, ಸಿಸಿಟಿ.ವಿ ವ್ಯವಸ್ಥೆ, ಸ್ವಯಂಚಾಲಿತ ದ್ವಾರ ವ್ಯವಸ್ಥೆ, ರೈಲು ಸುರಕ್ಷತಾ ವ್ಯವಸ್ಥೆ ‘ಕವಚ್‌’  ಸೌಲಭ್ಯಗಳನ್ನು ಹೊಂದಿದೆ. 

ಎರಡನೇ ಹಂತದ ಮೆಟ್ರೊಗೆ ಚಾಲನೆ: ಅಹಮದಾಬಾದ್‌ನಿಂದ ಗಾಂಧಿ ನಗರಕ್ಕೆ ಸಂಪರ್ಕ ಕಲ್ಪಿಸುವ ಎರಡನೇ ಹಂತದ ಮೆಟ್ರೊ ಯೋಜನೆಗೆ ಸೋಮವಾರ ಪ್ರಧಾನಿ ಮೋದಿ ಚಾಲನೆ ನೀಡಿದರು.

ಸ್ವತಃ ಟಿಕೆಟ್‌ ಪಡೆದು ಮೆಟ್ರೊ ರೈಲಿನಲ್ಲಿ ಪ್ರಯಾಣಿಸಿದ ಪ್ರಧಾನಿ ಮೋದಿ ಅವರು ವಿದ್ಯಾರ್ಥಿಗಳ ಜತೆ ಸಂವಾದ ನಡೆಸಿದರು.

₹5,384 ಕೋಟಿ ವೆಚ್ಚದಲ್ಲಿ 21 ಕಿ.ಮೀ ಉದ್ದದ ಎರಡನೇ ಹಂತದ ಮೆಟ್ರೊ ರೈಲು ಸೇವೆ ಆರಂಭಗೊಂಡಿದ್ದು, 8 ನಿಲ್ದಾಣಗಳನ್ನು ಒಳಗೊಂಡಿದೆ. ಪ್ರಮುಖ ವಹಿವಾಟು ಕೇಂದ್ರಗಳಾದ ಎಪಿಎಂಸಿ, ಗಿಫ್ಟ್‌ ಸಿಟಿಗೆ ಸುಗಮ ಸಂಪರ್ಕ ಕಲ್ಪಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT