ಬುಧವಾರ, 19 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತೆಲಂಗಾಣ– ಆಂಧ್ರ | ಆಸ್ತಿ ಹಂಚಿಕೆ ಕಗ್ಗಂಟು; ಬಗೆಹರಿಯದ ಸಮಸ್ಯೆಗಳು

ರಾಜ್ಯ ವಿಭಜನೆಯಾಗಿ 10 ವರ್ಷ ಸಾಮೀಪ್ಯ
Published 19 ಮೇ 2024, 13:39 IST
Last Updated 19 ಮೇ 2024, 13:39 IST
ಅಕ್ಷರ ಗಾತ್ರ

ಹೈದರಾಬಾದ್‌: ಆಂಧ್ರ ಪ್ರದೇಶ ಮತ್ತು ತೆಲಂಗಾಣ ರಾಜ್ಯಗಳು ವಿಭಜನೆಯಾಗಿ ಹತ್ತು ವರ್ಷಗಳೇ ಆಗುತ್ತಿವೆ. ಆದರೆ, ಉಭಯ ರಾಜ್ಯಗಳ ನಡುವೆ ಆಸ್ತಿ ಹಂಚಿಕೆ, ವಿದ್ಯುತ್‌ ಬಿಲ್‌ ಬಾಕಿ, ನೌಕರರ ವರ್ಗಾವಣೆ ಸೇರಿದಂತೆ ಹತ್ತಾರು ಸಮಸ್ಯೆಗಳು ಬಗೆಹರಿಯದೇ ಕಗ್ಗಂಟಾಗಿಯೇ ಉಳಿದಿವೆ.

ಉಭಯ ರಾಜ್ಯಗಳಿಗೆ ಜಂಟಿ ರಾಜಧಾನಿಯಾಗಿದ್ದ ಹೈದರಾಬಾದ್‌ ಈ ವರ್ಷದ ಜೂನ್‌ 2ರಿಂದ ತೆಲಂಗಾಣಕ್ಕೆ ಮಾತ್ರ ರಾಜಧಾನಿಯಾಗಿ ಉಳಿಯಲಿದೆ. ಆಂಧ್ರಪ್ರದೇಶ ಪುನರ್‌ ರಚನೆ ಕಾಯ್ದೆ 2014ರ ಪ್ರಕಾರ ಹೈದರಾಬಾದ್‌ ಸಂಪೂರ್ಣವಾಗಿ ತೆಲಂಗಾಣ ರಾಜ್ಯಕ್ಕೆ ಸೇರುತ್ತದೆ.

ಕಾಯ್ದೆಯ ಶೆಡ್ಯೂಲ್‌ 9 ಮತ್ತು 10ರಲ್ಲಿ ಪಟ್ಟಿ ಮಾಡಲಾಗಿರುವ ವಿವಿಧ ಸಂಸ್ಥೆಗಳು ಮತ್ತು ನಿಗಮಗಳ ವಿಭಜನೆ ಸೇರಿ ಹಲವು ವಿಷಯಗಳ ಬಗ್ಗೆ ಎರಡೂ ರಾಜ್ಯಗಳು ಒಮ್ಮತಕ್ಕೆ ಬಂದಿಲ್ಲ ಎಂದು ಮೂಲಗಳು ತಿಳಿಸಿವೆ. 

ಆಂಧ್ರ ಪ್ರದೇಶ ಪುನರ್‌ ರಚನೆ ಕಾಯ್ದೆ ಪ್ರಕಾರ 9ನೇ ಶೆಡ್ಯೂಲ್‌ನಲ್ಲಿ 89 ಸರ್ಕಾರಿ ಕಂಪನಿಗಳು ಮತ್ತು ನಿಗಮಗಳನ್ನು ಪಟ್ಟಿ ಮಾಡಲಾಗಿದೆ. ಇದರಲ್ಲಿ ಆಂಧ್ರ ಪ್ರದೇಶ ರಾಜ್ಯ ಬೀಜಗಳ ಅಭಿವೃದ್ಧಿ ನಿಗಮ, ಆಂಧ್ರ ಪ್ರದೇಶ ರಾಜ್ಯ ಕೃಷಿ ಕೈಗಾರಿಕಾ ಅಭಿವೃದ್ಧಿ ನಿಗಮ, ಆಂಧ್ರ ಪ್ರದೇಶ ರಾಜ್ಯ ಉಗ್ರಾಣ ನಿಗಮ ಸೇರಿದಂತೆ ಹಲವು ಸೇರಿವೆ.

ಶೆಡ್ಯೂಲ್‌ 10ರಲ್ಲಿ ಎಪಿ ಸ್ಟೇಟ್‌ ಕೋ–ಆಪರೇಟಿವ್‌ ಯೂನಿಯನ್‌, ಎನ್ವಿರಾನ್‌ಮೆಂಟ್‌ ಪ್ರೊಟೆಕ್ಷನ್‌ ಟ್ರೈನಿಂಗ್‌ ಅಂಡ್‌ ರಿಸರ್ಚ್‌ ಇನ್‌ಸ್ಟಿಟ್ಯೂಟ್‌, ಎಪಿ ಫಾರೆಸ್ಟ್‌ ಅಕಾಡೆಮಿ, ಸೆಂಟರ್‌ ಫಾರ್‌ ಗುಡ್‌ ಗವರ್ನೆನ್ಸ್‌ ಮತ್ತು ಆಂಧ್ರ ಪ್ರದೇಶ ಪೊಲೀಸ್‌ ಅಕಾಡೆಮಿ ಸೇರಿ 107 ತರಬೇತಿ ಸಂಸ್ಥೆಗಳು ಬರುತ್ತವೆ.

ಶೆಡ್ಯೂಲ್‌ 9 ಮತ್ತು 10ರ ಸಂಸ್ಥೆಗಳ ವಿಭಜನೆಗೆ ಸಂಬಂಧಿಸಿದಂತೆ ನಿವೃತ್ತ ಅಧಿಕಾರಿ ಶೀಲಾ ಭಿಡೆ ನೇತೃತ್ವದ ತಜ್ಞರ ಸಮಿತಿ ಶಿಫಾರಸುಗಳನ್ನು ಮಾಡಿದ್ದರೂ, ಸಮಸ್ಯೆಗಳು ಪರಿಹಾರವಾಗಿಲ್ಲ.

ವಿಭಜನೆ ಬಳಿಕ ವಿದ್ಯುತ್‌ ಪೂರೈಕೆಯ ಬಾಕಿ ಪಾವತಿಸುವ ವಿಚಾರದಲ್ಲಿ ಉಭಯ ರಾಜ್ಯಗಳ ನಡುವೆ ಗೊಂದಲಗಳು ಉಳಿದಿವೆ.

ನಡೆಯದ ಸಂಪುಟ ಸಭೆ:

ಎರಡೂ ರಾಜ್ಯಗಳ ನಡುವೆ ಬಾಕಿ ಉಳಿದಿರುವ ಸಮಸ್ಯೆಗಳ ಕುರಿತು ಚರ್ಚಿಸಲು ಮೇ 18ರಂದು ರಾಜ್ಯ ಸಂಪುಟ ಸಭೆ ನಡೆಸಲು ತೆಲಂಗಾಣ ಸರ್ಕಾರ ಪ್ರಸ್ತಾಪಿಸಿತ್ತು. ಆದರೆ, ಚುನಾವಣಾ ಆಯೋಗದಿಂದ ಈ ಕುರಿತು ಒಪ್ಪಿಗೆ ಪತ್ರ ದೊರೆಯದ ಕಾರಣ ಸಂಪುಟ ಸಭೆ ನಡೆಸಲು ಸಾಧ್ಯವಾಗಲಿಲ್ಲ. ಆಯೋಗದ ಒಪ್ಪಿಗೆ ದೊರೆತ ಕೂಡಲೇ ಸಂಪುಟ ಸಭೆ ನಡೆಸಲು ಮುಖ್ಯಮಂತ್ರಿ ರೇವಂತ್‌ ರೆಡ್ಡಿ ನಿರ್ಧರಿಸಿದ್ದಾರೆ.

ಹಿಂದಿನ ಯುಪಿಎ ಆಡಳಿತದ ಅವಧಿಯಲ್ಲಿ 2014ರ ಫೆಬ್ರುವರಿಯಲ್ಲಿ ಆಂಧ್ರ ಪ್ರದೇಶ ಪುನರ್‌ರಚನಾ ಮಸೂದೆಯನ್ನು ಅಂಗೀಕರಿಸಲಾಯಿತು. ಈ ಮೂಲಕ ತೆಲಂಗಾಣ ರಾಜ್ಯವು 2014ರ ಜೂನ್‌ 2ರಂದು ಅಸ್ತಿತ್ವಕ್ಕೆ ಬಂದಿತು. 10 ವರ್ಷಗಳ ಮಟ್ಟಿಗೆ ಹೈದರಾಬಾದ್‌ ಅನ್ನು ಎರಡೂ ರಾಜ್ಯಗಳಿಗೆ ರಾಜಧಾನಿಯನ್ನಾಗಿ ಮಾಡಲಾಗಿತ್ತು.

ಟಿಡಿಪಿ ಅಧ್ಯಕ್ಷ ಎನ್‌. ಚಂದ್ರಬಾಬು ನಾಯ್ಡು ಅವರು ಆಂಧ್ರ ಪ್ರದೇಶದ ಮುಖ್ಯಮಂತ್ರಿಯಾಗಿದ್ದಾಗ ಆಂಧ್ರದ ಸಚಿವಾಲಯ ಮತ್ತು ಬಹುತೇಕ ರಾಜ್ಯಾಡಳಿತವನ್ನು 2016ರಲ್ಲಿ ಅಮರಾವತಿಗೆ ಸ್ಥಳಾಂತರಿಸಿದ್ದರು. ನಾಯ್ಡು ಅವರು ಅಮರಾವತಿಯನ್ನು ವಿಶ್ವದರ್ಜೆಯ ರಾಜಧಾನಿಯಾಗಿ ಅಭಿವೃದ್ಧಿಪಡಿಸುವ ಯೋಜನೆ ಹೊಂದಿದ್ದರು.

ತೆಲಂಗಾಣ ಮುಖ್ಯಮಂತ್ರಿ ರೇವಂತ್‌ ರೆಡ್ಡಿ ಅವರು ಮೇ 15ರಂದು ನಡೆಸಿದ ಸಭೆಯಲ್ಲಿ, 10 ವರ್ಷಗಳ ಅವಧಿಗೆ ಆಂಧ್ರ ಪ್ರದೇಶಕ್ಕೆ ನೀಡಲಾಗಿದ್ದ ಹೈದರಾಬಾದ್‌ನ ಲೇಕ್‌ ವ್ಯೂ ಸರ್ಕಾರಿ ಅತಿಥಿ ಗೃಹ ಸೇರಿದಂತೆ ಪ್ರಮುಖ ಕಟ್ಟಡಗಳನ್ನು ಸುಪರ್ದಿಗೆ ಪಡೆಯುವಂತೆ ಅಧಿಕಾರಿಗಳಿಗೆ ನಿರ್ದೇಶಿಸಿದ್ದರು. 

ಈ ವರ್ಷದ ಮಾರ್ಚ್‌ನಲ್ಲಿ ಕೇಂದ್ರ ಸರ್ಕಾರವು, ದೆಹಲಿಯ ಆಂಧ್ರ ಪ್ರದೇಶ ಭವನದ ವಿವಾದವನ್ನು ಬಗೆಹರಿಸಿತ್ತು. ಈ ಕುರಿತು ಎರಡೂ ರಾಜ್ಯಗಳಿಗೆ ಭೂ ಹಂಚಿಕೆ ಮಾಡುವ ಮೂಲಕ ಸಮಸ್ಯೆ ಪರಿಹರಿಸಿತ್ತು.

ನೌಕರರ ಸಮಸ್ಯೆ: ದೊರೆಯದ ಪರಿಹಾರ

ನೌಕರರ ವರ್ಗಾವಣೆ ವಿಚಾರದಲ್ಲಿನ ಸಮಸ್ಯೆಗಳಿಗೂ ಅಂತಿಮ ಪರಿಹಾರ ದೊರೆತಿಲ್ಲ. ಆಂಧ್ರ‍ ಪ್ರದೇಶಕ್ಕೆ ಮಂಜೂರು ಮಾಡಿರುವ ತೆಲಂಗಾಣದ 144 ನೌಕರರನ್ನು ವಾಪಸ್‌ ಕರೆಸಿಕೊಳ್ಳುವಂತೆ ಮೇ 18ರಂದು ಸರ್ಕಾರಕ್ಕೆ ಮನವಿ ಮಾಡಿರುವುದಾಗಿ ತೆಲಂಗಾಣದ ನಾನ್‌–ಗೆಜೆಟೆಡ್‌ ಅಧಿಕಾರಿಗಳ ಒಕ್ಕೂಟದ ಅಧ್ಯಕ್ಷ ಎಂ. ಜಗದೀಶ್ವರ್‌ ಮಾಹಿತಿ ನೀಡಿದ್ದಾರೆ. ಈ ನೌಕರರು 2014ರಿಂದ ಆಂಧ್ರಪ್ರದೇಶದಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ.  ಬಾಕಿ ಉಳಿದಿರುವ ನೌಕರರ ವರ್ಗಾವಣೆ ಮತ್ತು ಆಂಧ್ರ ಪ್ರದೇಶಕ್ಕೆ ವಾಪಸಾತಿಯನ್ನು ಸೌಹಾರ್ದಯುತವಾಗಿ ಬಗೆಹರಿಸುವಂತೆ ತೆಲಂಗಾಣದ ಮುಖ್ಯಮಂತ್ರಿ ರೇವಂತ್‌ ರೆಡ್ಡಿ ಅಧಿಕಾರಿಗಳಿಗೆ ಸೂಚಿಸಿದ್ದಾರೆ.

ಸಾರಿಗೆ ಸಂಸ್ಥೆಯ ಆಸ್ತಿ ಹಂಚಿಕೆ

ಸರ್ಕಾರಿ ಸ್ವಾಮ್ಯದ ರಸ್ತೆ ಸಾರಿಗೆ ಸಂಸ್ಥೆಯ ಆಸ್ತಿಗಳ ಬಗ್ಗೆಯೂ ಎರಡೂ ರಾಜ್ಯಗಳ ನಡುವೆ ಭಿನ್ನಾಭಿಪ್ರಾಯಗಳಿವೆ. ಹೈದರಾಬಾದ್‌ನಲ್ಲಿ ಇರುವ ತೆಲಂಗಾಣ ರಾಜ್ಯ ರಸ್ತೆ ಸಾರಿಗೆ ನಿಗಮದ (ಟಿಎಸ್‌ಆರ್‌ಟಿಸಿ) ಆಸ್ತಿಯಲ್ಲಿ ಪಾಲು ನೀಡುವಂತೆ ಆಂಧ್ರ ಪ್ರದೇಶ ಕೇಳಿದೆ. ಆದರೆ ಅದನ್ನು ಟಿಎಸ್‌ಆರ್‌ಟಿಸಿ ಒಪ್ಪಿಲ್ಲ ಮತ್ತು ನಿರಾಕರಿಸಿದೆ ಎಂದು ನಿಗಮದ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಶೀಲಾ ಭಿಡೆ ಸಮಿತಿಯ ಶಿಫಾರಸಿನ ಪ್ರಕಾರ ನಿಗಮದ ಕೇಂದ್ರ ಕಚೇರಿಯ ಸ್ವತ್ತುಗಳು ತನಗೆ ಸೇರಿದ್ದು ಎಂದು ಟಿಎಸ್‌ಆರ್‌ಟಿಸಿ ಪ್ರತಿಪಾದಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT