ಪಟ್ನಾ: ಬಿಹಾರದ ಹಲವೆಡೆ ಬಿರುಗಾಳಿ ಸಹಿತ ಧಾರಾಕಾರ ಮಳೆಯಾಗಿದ್ದು, ನಾಲ್ಕು ಜಿಲ್ಲೆಗಳಲ್ಲಿ ಸಿಡಿಲು ಬಡಿದು 8 ಜನರು ಮೃತಪಟ್ಟಿದ್ದಾರೆ. ಘಟನೆ ಸಂಬಂಧ ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಸಂತಾಪ ವ್ಯಕ್ತಪಡಿಸಿದ್ದಾರೆ. ಜತೆಗೆ, ಮೃತರ ಕುಟುಂಬಕ್ಕೆ ತಲಾ ₹4 ಲಕ್ಷ ಪರಿಹಾರ ಪ್ರಕಟಿಸಿದ್ದಾರೆ.
‘ರಾಜ್ಯದ ಜನರು ಪ್ರತಿಕೂಲ ಹವಾಮಾನದಂತಹ ಸಂದರ್ಭದಲ್ಲಿ ವಿಪತ್ತು ನಿರ್ವಹಣಾ ಇಲಾಖೆ ನೀಡುವ ಸೂಚನೆಗಳನ್ನು ತಪ್ಪದೆ ಪಾಲಿಸಬೇಕು. ಇದರಿಂದಾಗಿ ಸಿಡಿಲು ಸೇರಿದಂತೆ ಮಳೆ ಸಂಬಂಧಿತ ಅವಘಡಗಳಿಂದಾಗಿ ಸುರಕ್ಷಿತವಾಗಿರಬಹುದು’ ಎಂದು ಅವರು ‘ಎಕ್ಸ್’ನಲ್ಲಿ ಪೋಸ್ಟ್ ಮಾಡಿದ್ದಾರೆ.
ಸಿಡಿಲು ಬಡಿದು ಪಟ್ನಾ ಮತ್ತು ಔರಂಗಾಬಾದ್‌ನಲ್ಲಿ ತಲಾ ಮೂವರು ಹಾಗೂ ನವಡಾ, ಸರನ್‌ನಲ್ಲಿ ತಲಾ ಒಬ್ಬರು ಮೃತಪಟ್ಟಿದ್ದಾರೆ ಎಂದು ಮುಖ್ಯಮಂತ್ರಿಗಳ ಕಚೇರಿ ಪ್ರಕಟಣೆ ತಿಳಿಸಿದೆ.
ಮುಂದಿನ 36 ಗಂಟೆ ರಾಜ್ಯದ 9 ಜಿಲ್ಲೆಗಳಿಗೆ ಹವಾಮಾನ ಇಲಾಖೆ ‘ರೆಡ್ ಅಲರ್ಟ್’ ಘೋಷಿಸಿದೆ. ಗುಡುಗು–ಸಿಡಿಲಿನೊಂದಿಗೆ ಭಾರಿ ಮಳೆಯಾಗಲಿದೆ ಎಂದಿದೆ.
ಗುರುವಾರ ಬಿಹಾರದ ನಾಲ್ಕು ಜಿಲ್ಲೆಗಳಲ್ಲಿ ಸಿಡಿಲು ಬಡಿದು 12 ಮಂದಿ ಮೃತಪಟ್ಟಿದ್ದರು. ಗಯಾ ಜಿಲ್ಲೆಯಲ್ಲಿ ಐವರು, ಜೆಹನಾಬಾದ್‌ನಲ್ಲಿ ಮೂವರು, ನಳಂದಾ ಮತ್ತು ರೋಹ್ತಾಸ್‌ನಲ್ಲಿ ತಲಾ ಇಬ್ಬರು ಅಸುನೀಗಿದ್ದರು.
ಜುಲೈ 7ರಂದು ಬಿಹಾರದಲ್ಲಿ ಸಿಡಿಲು ಬಡಿದು 10 ಜನರು ಮೃತಪಟ್ಟಿದ್ದರು. ನಳಂದ ಜಿಲ್ಲೆಯಲ್ಲಿ ಇಬ್ಬರು, ವೈಶಾಲಿ, ಭಾಗಲ್ಪುರ, ಸಹರ್ಶ, ರೋಹತಾಸ್, ಸರಣ್, ಜಮುಯಿ, ಭೋಜ್‌ಪುರ ಮತ್ತು ಗೋಪಾಲ್‌ಗಂಜ್‌ನಲ್ಲಿ ತಲಾ ಒಬ್ಬರು ಮೃತಪಟ್ಟಿದ್ದರು.