ಬುಧವಾರ, 15 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದೆಹಲಿ ಸೇವಾ ವಿಷಯ: ಸುಗ್ರೀವಾಜ್ಞೆ ಬದಲಿಸುವ ಮಸೂದೆ ಮುಂದಿನ ವಾರ ಮಂಡನೆ

ಲೋಕಸಭೆಯಲ್ಲಿ ಕಾನೂನು ಸಚಿವ ಅರ್ಜುನ್ ಮೆಘವಾಲ್‌ ಹೇಳಿಕೆ
Published 28 ಜುಲೈ 2023, 12:42 IST
Last Updated 28 ಜುಲೈ 2023, 12:42 IST
ಅಕ್ಷರ ಗಾತ್ರ

ನವದೆಹಲಿ: ಆಮ್‌ ಆದ್ಮಿ ಪಕ್ಷ (ಎಎಪಿ) ಮತ್ತು ಕೇಂದ್ರ ಸರ್ಕಾರದ ನಡುವೆ ರಾಜಕೀಯ ಸಂಘರ್ಷಕ್ಕೆ ಕಾರಣವಾಗಿರುವ ದೆಹಲಿಯ ಸೇವಾ ವಿಷಯಗಳ ಆಡಳಿತಾತ್ಮಕ ನಿಯಂತ್ರಣ ಸಂಬಂಧ ಹೊರಡಿಸಿರುವ ಸುಗ್ರೀವಾಜ್ಞೆ ಬದಲಾಯಿಸುವ ಮಸೂದೆಯನ್ನು ಮುಂದಿನ ವಾರ ಲೋಕಸಭೆಯಲ್ಲಿ ಮಂಡಿಸಲಾಗುವುದು ಎಂದು ಕಾನೂನು ಸಚಿವ ಅರ್ಜುನರಾಮ್ ಮೆಘವಾಲ್ ಶುಕ್ರವಾರ ತಿಳಿಸಿದ್ದಾರೆ.

ಅಧಿವೇಶನ ಹಿನ್ನೆಲೆಯಲ್ಲಿ ಮುಂದಿನ ವಾರದ ಕಲಾಪದ ವೇಳೆ ಕೈಗೆತ್ತಿಕೊಳ್ಳಲಾಗುವ ವಿಷಯಗಳ ಕುರಿತು ಅವರು ಸದನಕ್ಕೆ ಮಾಹಿತಿ ನೀಡುವ ವೇಳೆ ಈ ವಿಷಯ ತಿಳಿಸಿದರು.

ಮಂಗಳವಾರವಷ್ಟೆ, ‘ರಾಷ್ಟ್ರ ರಾಜಧಾನಿ ದೆಹಲಿ ಪ್ರದೇಶ ಸರ್ಕಾರ (ತಿದ್ದುಪಡಿ) ಮಸೂದೆ’ಗೆ ಕೇಂದ್ರ ಸಚಿವ ಸಂಪುಟ ಅನುಮೋದನೆ ನೀಡಿತ್ತು. ಮೇ 19ರಂದು ಕೇಂದ್ರ ಸರ್ಕಾರ ಹೊರಡಿಸಿದ್ದ ಸುಗ್ರೀವಾಜ್ಞೆಯನ್ನು ಈ ಮಸೂದೆ ಬದಲಿಸುತ್ತದೆ.

ಸದನದಲ್ಲಿ ಮಂಡನೆಯಾಗಲಿರುವ ಈ ಮಸೂದೆಯನ್ನು ವಿರೋಧಿಸಿ ನಿರ್ಣಯ ಕೈಗೊಳ್ಳುವ ಕುರಿತು ಕಾಂಗ್ರೆಸ್‌ನ ಅಧಿರ್‌ ರಂಜನ್‌ ಚೌಧರಿ, ಡೀನ್ ಕುರಿಯಾಕೋಸ್‌, ಟಿಎಂಸಿಯ ಸೌಗತ ರಾಯ್, ಡಿಎಂಕೆಯ ಎ.ರಾಜಾ, ಆರ್‌ಎಸ್‌ಪಿಯ ಎನ್‌.ಕೆ.ಪ್ರೇಮಚಂದ್ರನ್ ನೋಟಿಸ್‌ ನೀಡಿದ್ದಾರೆ.

ಹಲವು ಮಸೂದೆಗಳ ಅಂಗೀಕಾರ: ಮಣಿಪುರ ವಿದ್ಯಮಾನ ಮುಂದಿಟ್ಟುಕೊಂಡು ವಿರೋಧ ಪಕ್ಷಗಳ ಸದಸ್ಯರು ಘೋಷಣೆಗಳನ್ನು ಕೂಗುತ್ತಿರುವ ನಡುವೆಯೇ, ಲೋಕಸಭೆಯಲ್ಲಿ ಶುಕ್ರವಾರ ಹಲವು ಮಸೂದೆಗಳನ್ನು ಧ್ವನಿಮತದ ಮೂಲಕ ಅಂಗೀಕರಿಸಲಾಯಿತು.

ರಾಷ್ಟ್ರೀಯ ನರ್ಸಿಂಗ್ ಮತ್ತು ಪ್ರಸೂತಿವಿಜ್ಞಾನ ಆಯೋಗ ಮಸೂದೆ–2023, ರಾಷ್ಟ್ರೀಯ ದಂತ ಆಯೋಗ ಮಸೂದೆ–2023 ಅನ್ನು ಅಂಗೀಕರಿಸಲಾಯಿತು. ಶುಶ್ರೂಷೆ ಮತ್ತು ದಂತ ವೈದ್ಯ ಶಿಕ್ಷಣದಲ್ಲಿ ಗುಣಮಟ್ಟ ವೃದ್ಧಿಗೆ ಸಂಬಂಧಿಸಿದ ಅಂಶಗಳನ್ನು ಈ ಮಸೂದೆಗಳು ಒಳಗೊಂಡಿವೆ.

ಪ್ರಮುಖ ಖನಿಜಗಳ ಸಮೀಕ್ಷೆ ನಡೆಸುವುದಕ್ಕಾಗಿ ಖಾಸಗಿ ವಲಯದ ಕಂಪನಿಗಳಿಗೆ ಪರವಾನಗಿ ನೀಡಲು ಅನುವು ಮಾಡಿಕೊಡುವ ಗಣಿ ಮತ್ತು ಖನಿಜಗಳು (ಅಭಿವೃದ್ಧಿ ಮತ್ತು ನಿಯಂತ್ರಣ) ತಿದ್ದುಪಡಿ ಮಸೂದೆಯನ್ನೂ ಅಂಗೀಕರಿಸಲಾಯಿತು.

ಕೇಂದ್ರ ಕಲ್ಲಿದ್ದಲು ಮತ್ತು ಗಣಿ ಸಚಿವ ಪ್ರಲ್ಹಾದ ಜೋಶಿ ಮಂಡಿಸಿದ ಈ ಮಸೂದೆಯನ್ನು ವಿಪಕ್ಷಗಳ ಸದಸ್ಯರ ಗದ್ದಲದ ನಡುವೆಯೇ ಅಂಗೀಕರಿಸಲಾಯಿತು.

‘ಈ ತಿದ್ದುಪಡಿ ಮಸೂದೆಯು ಭಾರಿ ಬದಲಾವಣೆಗೆ ಕಾರಣವಾಗಲಿದೆ. ಶತಕೋಟಿ ಟನ್‌ಗಳಷ್ಟು ಕಲ್ಲಿದ್ದಲನ್ನು ಉತ್ಪಾದಿಸುವ ಮೂಲಕ ಇಂಧನ ಕ್ಷೇತ್ರದಲ್ಲಿ ಭಾರತವನ್ನು ಸ್ವಾವಲಂಬಿಯನ್ನಾಗಿ ಮಾಡಲಾಗುವುದು’ ಎಂದು ಜೋಶಿ ಹೇಳಿದರು.

‘2025–26ರ ವೇಳೆಗೆ ಕಲ್ಲಿದ್ದಲು ಆಮದನ್ನು ನಿಲ್ಲಿಸಲು ನಾವು ನಿರ್ಧರಿಸಿದ್ದೇವೆ’ ಎಂದೂ ಅವರು ಸದನಕ್ಕೆ ತಿಳಿಸಿದರು.

ಮಂಡನೆ: ವಿಪಕ್ಷಗಳ ಸದಸ್ಯರ ಗದ್ದಲದ ನಡುವೆಯೇ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರು ‘ಇಂಡಿಯನ್‌ ಇನ್‌ಸ್ಟಿಟ್ಯೂಟ್ಸ್ ಆಫ್‌ ಮ್ಯಾನೇಜ್‌ಮೆಂಟ್ ಆ್ಯಕ್ಟ್‌,2017’ಕ್ಕೆ ತಿದ್ದುಪಡಿ ತರುವ ಉದ್ದೇಶದ ಮಸೂದೆಯನ್ನು ಲೋಕಸಭೆಯಲ್ಲಿ ಮಂಡಿಸಿದರು.

‘ಈ ತಿದ್ದುಪಡಿ ಮಸೂದೆಯನ್ನು ಮಂಡಿಸಲಾಗುತ್ತಿದ್ದು, ಈ ಹಂತದಲ್ಲಿ ಏನಾದರೂ ಹೇಳಲಿಕ್ಕಿದೆಯೇ’ ಎಂದು ಸ್ಪೀಕರ್‌ ಅವರು ಕಾಂಗ್ರೆಸ್‌ ಸದಸ್ಯ ಮನೀಷ್‌ ತಿವಾರಿ ಅವರನ್ನು ಉದ್ದೇಶಿಸಿ ಹೇಳಿದರು.

ಆಗ, ತಿವಾರಿ ಅವರು ಮಣಿಪುರ ವಿಷಯವನ್ನು ಪ್ರಸ್ತಾಪಿಸಿ, ಮಾತನಾಡಲು ಮುಂದಾದಾಗ, ಅವರ ಮಾತಿಗೆ ತಡೆ ಹಾಕಿದ ಸ್ಪೀಕರ್‌, ಮಸೂದೆ ಮಂಡನೆಗೆ ಅನುವು ಮಾಡಿಕೊಟ್ಟರು.

ಮಸೂದೆಗಳನ್ನು ಸೋಲಿಸಲು ಜೋಶಿ ಸವಾಲು
‘ಲೋಕಸಭೆಯಲ್ಲಿ ಅಗತ್ಯದಷ್ಟು ಸಂಖ್ಯಾಬಲ ಹೊಂದಿರುವ ವಿಶ್ವಾಸವಿದ್ದಲ್ಲಿ ಕೇಂದ್ರ ಸರ್ಕಾರ ಮಂಡಿಸಲಿರುವ ಮಸೂದೆಗಳನ್ನು ಸೋಲಿಸಿ’ ಎಂದು ಸಚಿವ ಪ್ರಲ್ಹಾದ ಜೋಶಿ ಅವರು ವಿರೋಧ ಪಕ್ಷಗಳ ಸದಸ್ಯರಿಗೆ ಸವಾಲು ಹಾಕಿದರು. ಅವಿಶ್ವಾಸ ನಿರ್ಣಯ ಕುರಿತ ಸೂಚನೆ ಲೋಕಸಭೆಯಲ್ಲಿ ಚರ್ಚೆಗೆ ಬಾಕಿ ಇರುವಾಗ ಕಲಾಪ ನಡಾವಳಿ ಕೈಗೆತ್ತಿಕೊಳ್ಳುತ್ತಿರುವುದಕ್ಕೆ ವಿರೋಧ ಪಕ್ಷಗಳು ಆಕ್ಷೇಪ ವ್ಯಕ್ತಪಡಿಸಿದಾಗ ಜೋಶಿ ಅವರಿಂದ ಈ ತೀಕ್ಷ್ಣ ಪ್ರತಿಕ್ರಿಯೆ ಕಂಡುಬಂತು. ಬಳಿಕ ಸಂಸತ್‌ ಹೊರಗಡೆ ಸುದ್ದಿಗಾರರೊಂದಿಗೆ ಮಾತನಾಡಿದ ಜೋಶಿ ‘ವಿಪಕ್ಷಗಳು ಏಕಾಏಕಿ ಅವಿಶ್ವಾಸ ನಿರ್ಣಯ ಮಂಡಿಸಿವೆ ಎಂದ ಮಾತ್ರಕ್ಕೆ ಸರ್ಕಾರ ಇತರ ವಿಷಯಗಳನ್ನು ಕೈಗೆತ್ತಿಕೊಳ್ಳಬಾರದು ಎಂದರ್ಥವೇ’ ಎಂದು ಪ್ರಶ್ನಿಸಿದರು. ವಿರೋಧ ಪಕ್ಷಗಳ ಸಂಸದರು ಮಣಿಪುರಕ್ಕೆ ಭೇಟಿ ನೀಡಲು ನಿರ್ಧರಿಸಿರುವ ಕುರಿತ ಪ್ರಶ್ನೆಗೆ ‘ಅವರು ಮಣಿಪುರಕ್ಕೆ ಹೋಗಿ ವರದಿ ಸಿದ್ಧಪಡಿಸಲಿ. ಅವರು ಚರ್ಚೆಗೆ ಅವಕಾಶ ಮಾಡಿಕೊಟ್ಟರೆ ಮಣಿಪುರ ಪರಿಸ್ಥಿತಿ ಕುರಿತ ಎಲ್ಲ ವಿಷಯವನ್ನು ಸದನದಲ್ಲಿ ಮಂಡಿಸಲು ನಾವು ಸಿದ್ಧ’ ಎಂದು ಉತ್ತರಿಸಿದರು.

ಡೆರೆಕ್– ಧನಕರ್‌ ವಾಗ್ವಾದ

ನವದೆಹಲಿ: ಮಣಿಪುರದಲ್ಲಿನ ಹಿಂಸಾಚಾರದ ಬಗ್ಗೆ ಸದನದಲ್ಲಿ ಚರ್ಚೆ ನಡೆಸುವ ವಿಷಯಕ್ಕೆ ಸಂಬಂಧಿಸಿದಂತೆ ರಾಜ್ಯಸಭೆಯಲ್ಲಿ ಶುಕ್ರವಾರ ಟಿಎಂಸಿ ಸದಸ್ಯ ಡೆರಿಕ್ ಓಬ್ರಿಯಾನ್‌ ಮತ್ತು ಸಭಾಪತಿ ಜಗದೀಪ್ ಧನಕರ್‌ ನಡುವೆ ಮಾತಿನ ಚಕಮಕಿ ನಡೆಯಿತು.

ನಿಯಮ 267ರ ಅಡಿಯಲ್ಲಿ ಮಣಿಪುರದಲ್ಲಿನ ಪರಿಸ್ಥಿತಿಯ ಬಗ್ಗೆ ಚರ್ಚೆಗೆ ಅವಕಾಶ ನೀಡುವಂತೆ ವಿರೋಧ ಪಕ್ಷಗಳ ಸದಸ್ಯರು ನೀಡಿದ ನೋಟಿಸ್‌ ಸ್ವೀಕರಿಸದಿರುವ ಬಗ್ಗೆ ಪ್ರಸ್ತಾಪಿಸುವಾಗ ಓಬ್ರಿಯಾನ್‌ ಅವರು ಮೇಜು ಕುಟ್ಟಿ, ಸಭಾಪತಿ ಅವರೊಂದಿಗೆ ವಾಗ್ವಾದಕ್ಕೆ ಇಳಿದರು. ಇದರಿಂದ ವಿಚಲಿತರಾದಂತೆ ಕಂಡುಬಂದ ಧನಕರ್‌ ಅವರು ‘ನಿಮ್ಮ ವರ್ತನೆ ನಾಟಕೀಯವಾಗಿದೆ. ಇದನ್ನು ಸಹಿಸಲಾಗದು’ ಎಂದು ಹೇಳಿ, ಕಲಾಪವನ್ನು ಹಠಾತ್ತನೆ ಸೋಮವಾರಕ್ಕೆ ಮುಂದೂಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT