ಸೋಮವಾರ, 17 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಹಿಳೆಯರನ್ನು ಬಿಜೆಪಿ ಎರಡನೇ ದರ್ಜೆ ‍‍ಪ್ರಜೆಗಳನ್ನಾಗಿ ಕಾಣುತ್ತದೆ: ರಾಹುಲ್ ಗಾಂಧಿ

Published 23 ಮೇ 2024, 13:50 IST
Last Updated 23 ಮೇ 2024, 13:50 IST
ಅಕ್ಷರ ಗಾತ್ರ

ನವದೆಹಲಿ: ಮಹಿಳೆಯರನ್ನು ಎರಡನೇ ದರ್ಜೆಯ ಪ್ರಜೆಗಳನ್ನಾಗಿ ಕಾಣಬೇಕು ಎಂದು ಬಿಜೆಪಿ ನಂಬುತ್ತದೆ. ಅದಕ್ಕಾಗಿಯೇ ಆರ್‌ಎಸ್‌ಎಸ್‌ ಶಾಖೆಗಳಲ್ಲಿ ಮಹಿಳೆಯರಿಗೆ ಪ್ರವೇಶ ಇಲ್ಲ ಎಂದು ಕಾಂಗ್ರೆಸ್ ಸಂಸದ ರಾಹುಲ್ ಗಾಂಧಿ ಹೇಳಿದರು.

ವಾಯವ್ಯ ದೆಹಲಿ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಉದಿತ್‌ ರಾಜ್ ಅವರ ಪರವಾಗಿ ನಡೆದ ಮಹಿಳೆಯರ ಚುನಾವಣಾ ಸಮಾವೇಶದಲ್ಲಿ ರಾಹುಲ್ ಗಾಂಧಿ ಮಾತನಾಡಿದರು.

ಭಾರಿ ಆಡಂಬರದಿಂದ ಮಹಿಳಾ ಮೀಸಲಾತಿ ಮಸೂದೆಯನ್ನು ಬಿಜೆ‍ಪಿ ಸಂಸತ್‌ನಲ್ಲಿ ಅಂಗೀಕರಿಸಿತು. ಹತ್ತು ವರ್ಷಗಳ ಬಳಿಕ ಜಾರಿಗೆ ತರುವುದಾಗಿ ಆ ಬಳಿಕ ಹೇಳಿತು ಎಂದು ವಾಗ್ದಾಳಿ ನಡೆಸಿದರು.

‘ಮಹಿಳಾ ಮೀಸಲಾತಿ ಮಸೂದೆಯ ಹಿಂದೆಯೂ ಒಂದು ಸಿದ್ಧಾಂತವಿದೆ. ಆರ್‌ಎಸ್‌ಎಸ್‌ ಶಾಖೆಗಳಿಗೆ ಮಹಿಳೆಯರು ಪ್ರವೇಶಿಸುವಂತಿಲ್ಲ. ಮಹಿಳೆಯರನ್ನು ಎರಡನೇ ದರ್ಜೆಯ ನಾಗರಿಕರನ್ನಾಗಿ ಪರಿಗಣಿಸಬೇಕು ಎಂಬ ನಂಬಿಕೆ ಅವರ ಮನಸ್ಸಿನಲ್ಲಿ ಆಳವಾಗಿ ಬೇರೂರಿದೆ’ ಎಂದು ಆರೋಪಿಸಿದರು.

‘ಕೆಲಸ ಮಾಡುವ ಮಹಿಳೆಯರು ಮನೆಗೆ ಬಂದ ನಂತರ ಎರಡನೇ ಪಾಳಿಯಲ್ಲಿ ಕೆಲಸಗಳನ್ನು ಮಾಡಬೇಕಾಗುತ್ತದೆ. ಅವರ ಪ್ರಯತ್ನಗಳು ಗಮನಕ್ಕೆ ಬರುವುದಿಲ್ಲ’ ಎಂದು ಅವರು ಹೇಳಿದರು.

‘ಭಾರತದಲ್ಲಿ ನಾವು ಸಮಾಜದ ಎಲ್ಲಾ ವರ್ಗದವರ ಬಗ್ಗೆ ಮಾತನಾಡುತ್ತೇವೆ. ಆದರೆ ಕೆಲಸಕ್ಕೆ ಹೋಗುವ ಮಹಿಳೆಯರ ಬಗ್ಗೆ ಮಾತನಾಡುವುದಿಲ್ಲ. ದಿನವಿಡೀ ಕೆಲಸ ಮಾಡಿ ಮನೆಗೆ ಬಂದ ಬಳಿಕ ಎರಡನೇ ಪಾಳಿಯಲ್ಲಿ ಮತ್ತೆ ಮನೆಕೆಲಸ ಮಾಡುತ್ತಾರೆ. ಮಕ್ಕಳನ್ನು ಅವರೇ ನೋಡಿಕೊಳ್ಳಬೇಕು. ಆಹಾರ ತಯಾರಿಸಬೇಕು. ಇನ್ನಿತರ ಕೆಲಸಗಳನ್ನು ಮಾಡಬೇಕು. ಈ ಪಾಲಿಯಲ್ಲಿ ಅವರು ಮಾಡುವ ಕೆಲಸಗಳಿಗೆ ವೇತನ ಇಲ್ಲ’ ಎಂದು ರಾಹುಲ್ ನುಡಿದರು.

‘ಪುರುಷರು 8 ಗಂಟೆ ಕೆಲಸ ಮಾಡುತ್ತಾರೆ. ಆದರೆ ಮಹಿಳೆಯರು 16 ಗಂಟೆ ಕೆಲಸ ಮಾಡುತ್ತಾರೆ. ಅವರ ಕೆಲಸಕ್ಕೆ ಯಾವುದೇ ಪಾವತಿ ಇಲ್ಲ. ಗುರುತಿಸುವವರೂ ಇಲ್ಲ. ನಾವು ಅಧಿಕಾರಕ್ಕೆ ಬಂದರೆ ಮಹಾಲಕ್ಷ್ಮಿ ಯೋಜನೆಯಡಿ ಕುಟುಂಬದ ಯಜಮಾನಿಗೆ ಪ್ರತಿ ತಿಂಗಳು ₹8500 ನೀಡುತ್ತೇವೆ’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT