ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸುಳ್ಳುಸುದ್ದಿಯನ್ನು ನಂಬುತ್ತಿರುವುದರಿಂದ ಗುಂಪು ದಾಳಿ ಹೆಚ್ಚಳ: ಮಿಶ್ರಾ

ಸಾಮಾಜಿಕ ಜಾಲತಾಣಗಳ ಮೇಲೆ ಅತಿಯಾದ ಅವಲಂಬನೆ ಬೇಡ ಎಂದ ಸಿಜೆಐ
Last Updated 25 ಜುಲೈ 2018, 14:34 IST
ಅಕ್ಷರ ಗಾತ್ರ

ನವದೆಹಲಿ: ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ಹರಿದಾಡುವ ಸುಳ್ಳುಸುದ್ದಿಗಳನ್ನು ಕೂಲಂಕಷವಾಗಿ ಪರಿಶೀಲಿಸದೆ, ಕುರುಡಾಗಿ ನಂಬುತ್ತಿರುವುದರಿಂದ ದೇಶದಲ್ಲಿ ಗುಂಪುದಾಳಿ ಪ್ರಕರಣಗಳು ಹೆಚ್ಚಾಗುತ್ತಿವೆ ಎಂದು ಸುಪ್ರೀಂ ಕೋರ್ಟ್‌ನ ಮುಖ್ಯ ನ್ಯಾಯಮೂರ್ತಿ ದೀಪಕ್‌ ಮಿಶ್ರಾ ಹೇಳಿದ್ದಾರೆ.

ಅಂತರರಾಷ್ಟ್ರೀಯ ಕಾನೂನು ಸಂಘ (ಐಎಲ್‌ಎ) ಬುಧವಾರ ಆಯೋಜಿಸಿದ್ದ ಸಮಾರಂಭದಲ್ಲಿ ಮಾತನಾಡಿದ ಅವರು, ಸಾಮಾಜಿಕ ಜಾಲತಾಣಗಳ ಸುಳ್ಳುಸುದ್ದಿಗಳ ವಿಷಯದಲ್ಲಿ ಜನರು ಮತ್ತು ಮಾಧ್ಯಮಗಳು ಹೆಚ್ಚು ಜವಾಬ್ದಾರಿಯಿಂದ ನಡೆದುಕೊಳ್ಳಬೇಕಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ.

ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುವ ಸುದ್ದಿಗಳ ನೈಜತೆ, ಹಿನ್ನೆಲೆ, ಉದ್ದೇಶಗಳನ್ನು ಪರಾಮರ್ಶಿಸುವ ಮನೋಭಾವವನ್ನು ಜನರು ಬೆಳಸಿಕೊಳ್ಳಬೇಕು. ಜೀವಕ್ಕೆ ಎರವಾಗುವ ಸಂದೇಶಗಳನ್ನು ಹಂಚಿಕೊಳ್ಳುವ ಮುನ್ನ ಅದರಿಂದಾಗುವ ದುಷ್ಪರಿಣಾಮಗಳ ಬಗ್ಗೆ ಯೋಚಿಸಬೇಕು.ದೇಶದಲ್ಲಿ ಹೆಚ್ಚಾಗುತ್ತಿರುವ ಸಾಮಾಜಿಕ ಜಾಲತಾಣಗಳ ಮೇಲಿನ ಅತಿಯಾದ ಅವಲಂಬನೆ ಪ್ರವೃತ್ತಿಗೆ ಜನರು ಸ್ವಯಂನಿಯಂತ್ರಣ ಹೇರಿಕೊಳ್ಳುವ ಅಗತ್ಯವಿದೆ ಎಂದು ಮಿಶ್ರಾ ಸಲಹೆ ನೀಡಿದ್ದಾರೆ.

ದೇಶದ ಮಾಧ್ಯಮಗಳು ಕೂಡ ಈ ಬಗ್ಗೆ ಆತ್ಮಾವಲೋಕನ ಮಾಡಿಕೊಳ್ಳುವ ಅಗತ್ಯವಿದೆ. ಸಾಮಾಜಿಕ ಸಾಮರಸ್ಯ ಕದಡುವ ಮತ್ತು ಅಮಾಯಕ ಜೀವಗಳನ್ನು ಬಲಿ ಪಡೆಯುವ ಸುದ್ದಿಗಳನ್ನು ಪ್ರಕಟಿಸುವಾಗ ಪ್ರಬುದ್ಧತೆ ಪ್ರದರ್ಶಿಸುವ ಅಗತ್ಯವಿದೆ ಎಂದರು.

ದೇಶದ ಮಾಧ್ಯಮಗಳು ಎಲ್ಲ ಗಡಿ, ಕಟ್ಟುಪಾಡುಗಳನ್ನು ಮೀರಿ ನಡೆಯುತ್ತಿವೆ. ನ್ಯಾಯಾಲಯ ಮತ್ತು ತನಿಖಾ ಸಂಸ್ಥೆಗಳಿಗೆ ಪರ್ಯಾಯ ಸಂಸ್ಥೆಗಳಂತೆ ವರ್ತಿಸುತ್ತಿವೆ. ಇದರಿಂದಾಗಿ ಪ್ರಕರಣಗಳ ತನಿಖೆ ಮತ್ತು ನ್ಯಾಯದಾನ ಪ್ರಕ್ರಿಯೆ ಮೇಲೆ ಪರಿಣಾಮವಾಗುತ್ತಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

‘ಮಾಧ್ಯಮಗಳನ್ನು ನಿಯಂತ್ರಿಸಬೇಕು ಎನ್ನುವುದು ನನ್ನ ಉದ್ದೇಶವಲ್ಲ. ಆದರೆ, ಮಾಧ್ಯಮಗಳು ತಮ್ಮ ಹೊಣೆಗಾರಿಕೆ ಅರಿತು ನಡೆದುಕೊಳ್ಳಬೇಕು’ ಎಂದು ಮಿಶ್ರಾ ಸಲಹೆ ಮಾಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT