ಶುಕ್ರವಾರ, 3 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಿಬಿಐ, ಸಿಐಡಿಗೆ ಬಾಂಬೆ ಹೈಕೋರ್ಟ್ ತರಾಟೆ

ವಿಚಾರವಾದಿ ದಾಭೋಲ್ಕರ್‌, ಪಾನ್ಸರೆ ಹತ್ಯೆ ಪ್ರಕರಣ ತನಿಖೆ
Last Updated 2 ಆಗಸ್ಟ್ 2018, 18:04 IST
ಅಕ್ಷರ ಗಾತ್ರ

ಮುಂಬೈ : ವಿಚಾರವಾದಿಗಳಾದ ನರೇಂದ್ರ ದಾಭೋಲ್ಕರ್ ಮತ್ತು ಗೋವಿಂದ ಪಾನ್ಸರೆ ಹತ್ಯೆ ಪ್ರಕರಣದ ತನಿಖೆಗೆ ಅವಸರ ತೋರುತ್ತಿಲ್ಲವೆಂದು ಬಾಂಬೆ ಹೈಕೋರ್ಟ್ ಗುರುವಾರ ಸಿಬಿಐ ಮತ್ತು ಸಿಐಡಿಗೆ ಚಾಟಿ ಬೀಸಿದೆ.

ದೇಶದಲ್ಲಿ ಜನರು ಮುಕ್ತವಾಗಿ ಮಾತನಾಡುವ ಮತ್ತು ಮುಕ್ತವಾಗಿ ಸಂಚರಿಸದಂತಹ ‘ದುರಂತ ಪರಿಸ್ಥಿತಿ’ ನಿರ್ಮಾಣವಾಗಿದೆ. ಆದರೂ ತನಿಖಾ ಸಂಸ್ಥೆಗಳು ಈ ಪ್ರಕರಣಗಳ ತನಿಖೆಯನ್ನು ತ್ವರಿತಗೊಳಿಸುತ್ತಿಲ್ಲ ಎಂದು ನ್ಯಾಯಮೂರ್ತಿ ಧರ್ಮಾಧಿಕಾರಿ ಮತ್ತು ಭಾರತಿ ಡಾಂಗ್ರೆ ಅವರಿದ್ದ ದ್ವಿಸದಸ್ಯ ಪೀಠವು ಅಸಮಾಧಾನ ಹೊರಹಾಕಿತು.

ಪ್ರಕರಣ ಸಂಬಂಧ ಸಿಬಿಐ ಮತ್ತು ಮಹಾರಾಷ್ಟ್ರದ ಸಿಐಡಿ ಸಲ್ಲಿಸಿದ್ದ ತನಿಖಾ ಪ್ರಗತಿಯ ‘ರಹಸ್ಯ ವರದಿ’ ಪರಿಶೀಲಿಸಿದ ಪೀಠವು, ಈ ಹಿಂದಿನ ತನಿಖಾ ವರದಿಗೂ ಈಗ ಸಲ್ಲಿಸಿರುವ ವರದಿಗೂ ಅಂತಹ ವ್ಯತ್ಯಾಸಗಳೇನೂ ಇಲ್ಲ. ಇದರಲ್ಲಿ ರಹಸ್ಯವಾದದ್ದು ಏನೂ ಇಲ್ಲ ಎಂದು ತನಿಖಾ ಅಧಿಕಾರಿಗಳನ್ನು ಪೀಠ ತೀವ್ರ ತರಾಟೆಗೆ ತೆಗೆದುಕೊಂಡಿತು.

ಗೃಹ ಸಚಿವಾಲಯದ ಹೆಚ್ಚುವರಿ ಮುಖ್ಯಕಾರ್ಯದರ್ಶಿ ನೇತೃತ್ವದಲ್ಲಿ ಸಿಬಿಐ, ಸಿಐಡಿ ಅಧಿಕಾರಿಗಳು ಬುಧವಾರ ನ್ಯಾಯಮೂರ್ತಿಗಳ ಕೊಠಡಿಯಲ್ಲಿ ರಹಸ್ಯ ವರದಿ ಸಲ್ಲಿಸಿದ್ದರು.

‘ರಾಜ್ಯದ ಉನ್ನತ ನ್ಯಾಯಾಲಯವೇ ಈ ಪ್ರಕರಣಗಳಲ್ಲಿ ಮಧ್ಯ ಪ್ರವೇಶ ಮಾಡಿದ್ದಾಗ್ಯೂ ನೀವು ನೀಡುವುದು ಇಂತಹ ಫಲಿತಾಂಶವನ್ನಾ? ತನಿಖೆಯ ಪ್ರಗತಿ ನಮಗೆ ತೃಪ್ತಿ ನೀಡಿಲ್ಲ. ಸಮಾಜದಲ್ಲಿ ನಡೆಯುವ ಅಪರಾಧ ಪ್ರಕರಣಗಳನ್ನು ನೀವು ಹೇಗೆ ನಿಭಾಯಿಸುತ್ತಿದ್ದೀರಿ ಎನ್ನುವುದನ್ನು ಇದು ತೋರಿಸುತ್ತಿದೆ’ ಎಂದು ಪೀಠ ಅಸಮಾಧಾನ ವ್ಯಕ್ತಪಡಿಸಿತು.

2013ರ ಆಗಸ್ಟ್ 20ರಂದು ಪುಣೆಯಲ್ಲಿ ಬೆಳಿಗ್ಗೆ ವಾಯು ವಿಹಾರ ಮಾಡುತ್ತಿದ್ದ ನರೇಂದ್ರ ದಾಭೋಲ್ಕರ್ ಅವರನ್ನು ಬೈಕ್‌ನಲ್ಲಿ ಬಂದ ದುಷ್ಕರ್ಮಿಗಳು ಗುಂಡಿಕ್ಕಿ ಹತ್ಯೆ ಮಾಡಿದ್ದರು. 2015ರ ಫೆಬ್ರುವರಿ 16ರಂದು ಪಾನ್ಸರೆ ಅವರ ಮೇಲೆ ದು‌ಷ್ಕರ್ಮಿಗಳು ಗುಂಡಿನ ದಾಳಿ ಮಾಡಿದ್ದರು. ತೀವ್ರ ಗಾಯಗೊಂಡಿದ್ದ ಪಾನ್ಸರೆ ಫೆ.20ರಂದು ಕೊನೆ ಉಸಿರೆಳೆದಿದ್ದರು.

ದಾಭೋಲ್ಕರ್‌ ಮತ್ತು ಪಾನ್ಸರೆ ಕುಟುಂಬದ ಸದಸ್ಯರ ಮನವಿ ಮೇರೆಗೆ ನ್ಯಾಯಾಲಯದ ಮೇಲ್ವಿಚಾರಣೆಯಲ್ಲಿ ಸಿಬಿಐ ಮತ್ತು ಸಿಐಡಿ ಈ ಪ್ರಕರಣಗಳ ತನಿಖೆ ನಡೆಸುತ್ತಿವೆ.

*ಸೂಕ್ಷ್ಮ ಪ್ರಕರಣದಲ್ಲಿ ತನಿಖಾಧಿಕಾರಿಗಳು ಸಂಪೂರ್ಣ ಅಸೂಕ್ಷ್ಮ ಮತ್ತು ಅನುಚಿತವಾಗಿ ನಡೆದುಕೊಳ್ಳುತ್ತಿದ್ದಾರೆ. ತನಿಖೆಗೆ ಸರಿಯಾದ ಕ್ರಮ ತೆಗೆದುಕೊಂಡಿಲ್ಲ. ನಮಗೆ ಬಹಳ ಬೇಸರವಾಗಿದೆ.

–ದ್ವಿಸದಸ್ಯ ಪೀಠ,ಬಾಂಬೆ ಹೈಕೋರ್ಟ್‌

ದ್ವಿಸದಸ್ಯ ಪೀಠ ಹೇಳಿದ್ದೇನು?

ನಾಗರಿಕರು ಭಯಮುಕ್ತವಾಗಿ ಅಭಿಪ್ರಾಯ ಹಂಚಿಕೊಳ್ಳಲಾಗದ ಮತ್ತು ಕಾಳಜಿಯಿಂದ ಧ್ವನಿ ಎತ್ತದ ಪರಿಸ್ಥಿತಿ ಎದುರಿಸುತ್ತಿದ್ದಾರೆ. ಪ್ರತಿ ಜನರಿಗೂ ಮುಕ್ತವಾಗಿ ಮಾತನಾಡಲು ಮತ್ತು ಓಡಾಡಲು ಪೊಲೀಸ್‌ ರಕ್ಷಣೆ ನೀಡಬೇಕಾದ ದಿನಗಳು ಬರಬೇಕೇ ಎಂದು ಪೀಠ ತನಿಖಾಧಿಕಾರಿಗಳನ್ನು ಪ್ರಶ್ನಿಸಿತು.

ರಾಜ್ಯದಲ್ಲಿ ಇಂದು ಏನಾಗುತ್ತಿದೆ? ಜನರು ಬಸ್‌ಗಳಿಗೆ ಬೆಂಕಿ ಹಚ್ಚುತ್ತಿ ದ್ದಾರೆ. ಕಲ್ಲು ತೂರುತ್ತಿದ್ದಾರೆ. ಇದಕ್ಕೆ ಎಲ್ಲರಿಗೂ ಮುಕ್ತ ಅವಕಾಶವಿದೆಯೇ? ನೀವು ಯಾವುದಕ್ಕೆ ಆದ್ಯತೆ ನೀಡುತ್ತಿದ್ದೀರಿ? ಎಂದು ಪೀಠ ಕಿಡಿಕಾರಿತು.

ಇದು ಒಂದು ರಾಜ್ಯ, ಇಲ್ಲಿಯೂ ಸರ್ಕಾರ ಇದೆ. ನಾಳೆ ಆ ಸರ್ಕಾರ ಬದಲಾಗಬಹುದು. ಇಲ್ಲಿ ವಾಸಿಸುವ ಲಕ್ಷಾಂತರ ಜನರ ಪರಿಸ್ಥಿತಿ ಏನಾಗಬೇಕು? ನಾಳೆ ಅವರೆಲ್ಲರೂ ಪೊಲೀಸ್‌ ರಕ್ಷಣೆ ಪಡೆದುಕೊಂಡೇ ಮಾತನಾಡಬೇಕೆಂಬ ಇಚ್ಛೆ ನಿಮಗಿದೆಯೇ? ಮೊದಲು ಈ ಪ್ರಕರಣಗಳ ತನಿಖೆ ಚುರುಕುಗೊಳಿಸಿ ಎಂದು ತನಿಖಾಧಿಕಾರಿಗಳಿಗೆ ತಾಕೀತು ಮಾಡಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT