ಶನಿವಾರ, 30 ಸೆಪ್ಟೆಂಬರ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ED, CBI, IT: ಎನ್‌ಡಿಎ ಮೂರು ಪ್ರಮುಖ ಪಕ್ಷಗಳು: ಉದ್ಧವ್ ಠಾಕ್ರೆ ವಾಗ್ದಾಳಿ

Published 26 ಜುಲೈ 2023, 9:50 IST
Last Updated 26 ಜುಲೈ 2023, 9:50 IST
ಅಕ್ಷರ ಗಾತ್ರ

ಮುಂಬೈ: ‘ಜಾರಿ ನಿರ್ದೇಶನಾಲಯ (ಇಡಿ), ಆದಾಯ ತರಿಗೆ ಇಲಾಖೆ (ಐಟಿ) ಹಾಗೂ ಕೇಂದ್ರೀಯ ತನಿಖಾದಳ (ಸಿಬಿಐ) ಮಾತ್ರ ರಾಷ್ಟ್ರೀಯ ಪ್ರಜಾಸತ್ತಾತ್ಮಕ ಒಕ್ಕೂಟ (ಎನ್‌ಡಿಎ) ದಲ್ಲಿರುವ ಮೂರು ಪ್ರಮುಖ ಪಕ್ಷಗಳು’ ಎಂದು ಬಿಜೆಪಿ ವಿರುದ್ಧ ಶಿವಸೇನೆಯ (ಉದ್ಧವ್ ಬಾಳಾಸಾಹೇಬ್ ಠಾಕ್ರೆ) ಮುಖ್ಯಸ್ಥ ಉದ್ಧವ್ ಠಾಕ್ರೆ ವಾಗ್ದಾಳಿ ನಡೆಸಿದ್ದಾರೆ.

ರಾಜ್ಯ ಸಭಾ ಸದಸ್ಯರಾಗಿರುವ ಶಿವಸೇನಾದ ಸಂಜಯ್ ರಾವುತ್‌ ಸಂಪಾದಕತ್ವದ ಸಾಮನಾ ಮಾಧ್ಯಮಕ್ಕೆ ನೀಡಿರುವ ಸಂದರ್ಶನದಲ್ಲಿ ಪಾಲ್ಗೊಂಡು, ‘ಎನ್‌ಡಿಎನಲ್ಲಿ ಒಟ್ಟು 36 ಪಕ್ಷಗಳಿವೆ. ಇಡಿ, ಸಿಬಿಐ ಹಾಗೂ ಆದಾಯ ತೆರಿಗೆ ಕೂಡಾ ಎನ್‌ಡಿಎಗೆ ಸೇರಿದ ಮೂರು ಪ್ರಬಲ ಪಕ್ಷಗಳೇ ಆಗಿವೆ. ಹಾಗಿದ್ದರೆ ಉಳಿದ ಪಕ್ಷಗಳೆಲ್ಲಿ? ಕೆಲ ಪಕ್ಷಗಳಿಂದ ಒಬ್ಬ ಸಂಸದನೂ ಇಲ್ಲ’ ಎಂದಿದ್ದಾರೆ.

‘ಮಣಿಪುರದಲ್ಲಿ ನಡೆಯುತ್ತಿರುವ ಜನಾಂಗೀಯ ಗಲಭೆ ಆರಂಭವಾದ ನಂತರ ಈಶಾನ್ಯ ರಾಜ್ಯಗಳಿಗೆ ಭೇಟಿ ನೀಡಲೂ ಪ್ರಧಾನಿ ಸಿದ್ಧರಿಲ್ಲ. ಚುನಾವಣೆ ಸಮೀಪಿಸಿದಾಗ ಮಾತ್ರ ಬಿಜೆಪಿಯು ಇದು ಎನ್‌ಡಿಎ ಸರ್ಕಾರ ಎನ್ನುತ್ತದೆ. ನಂತರ ಅದು ಮೋದಿ ಸರ್ಕಾರವಾಗಿ ಬದಲಾಗುತ್ತದೆ’ ಎಂದು ಆರೋಪಿಸಿದ್ದಾರೆ. 

ಏಕರೂಪ ನಾಗರಿಕ ಸಂಹಿತೆ ಕುರಿತ ಪ್ರಶ್ನೆಗೆ ಪ್ರತಿಕ್ರಿಯಿಸಿದ ಠಾಕ್ರೆ, ‘ಕಾಶ್ಮೀರದಿಂದ ಕನ್ಯಾಕುಮಾರಿಯವರೆಗೆ ಗೋವುಗಳ ವಧೆಯನ್ನು ಬಿಜೆಪಿ ಸರ್ಕಾರ ಮೊದಲು ನಿಷೇಧಿಸಬೇಕು. ಒಂದೊಮ್ಮೆ ಎಲ್ಲರೂ ಕಾನೂನಿನ ಎದುರು ಒಂದೇ ಆದರೆ, ಬಿಜೆಪಿಯಲ್ಲಿರುವ ಭ್ರಷ್ಟರನ್ನೂ ಕಾನೂನಿನ ಚೌಕಟ್ಟಿನೊಳಗೆ ಶಿಕ್ಷೆಗೆ ಗುರಿಪಡಿಸಬೇಕು’ ಎಂದು ಆಗ್ರಹಿಸಿದ್ದಾರೆ.

ಶಿವಸೇನೆ ಕುರಿತೂ ಮಾತನಾಡಿರುವ ಅವರು, ‘ಠಾಕ್ರೆ ಕುಟುಂಬ ಎಲ್ಲಿದೆಯೋ ಅದೇ ನಿಜವಾದ ಶಿವಸೇನೆ. ಶಿವಸೇನೆಯನ್ನು ಒಡೆದವರು ನಾಶವಾಗುತ್ತಾರೆ. ಮತ್ತೆ ಶಿವಸೇನೆ ಮೇಲೆದ್ದು ಬರಲಿದೆ’ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT