ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಅತಿ ಹೆಚ್ಚು ಚುನಾವಣಾ ಬಾಂಡ್ ಖರೀದಿಸಿದ ಮೇಘಾ ಎಂಜಿನಿಯರಿಂಗ್ ವಿರುದ್ಧ ಸಿಬಿಐ FIR

Published 13 ಏಪ್ರಿಲ್ 2024, 13:32 IST
Last Updated 13 ಏಪ್ರಿಲ್ 2024, 13:32 IST
ಅಕ್ಷರ ಗಾತ್ರ

ನವದೆಹಲಿ: ರಾಜಕೀಯ ಪಕ್ಷಗಳಿಗೆ ದೇಣಿಗೆ ರೂಪದಲ್ಲಿ ನೀಡಲು ₹966 ಕೋಟಿ ಮೌಲ್ಯದ ಚುನಾವಣಾ ಬಾಂಡ್ ಖರೀದಿಸಿದ ಹೈದರಾಬಾದ್ ಮೂಲದ ಮೇಘಾ ಎಂಜಿನಿಯರಿಂಗ್ ಆ್ಯಂಡ್ ಇನ್‌ಫ್ರಾಸ್ಟ್ರಕ್ಚರ್‌ ಕಂಪನಿ ವಿರುದ್ಧ ಲಂಚ ಪ್ರಕರಣದ ಆರೋಪದಡಿ ಸಿಬಿಐ ಪ್ರಕರಣ ದಾಖಲಿಸಿದೆ.

‘ಜಗದಾಲ್ಪುರ ಅಂತರ್ಗತ ಉಕ್ಕು ತಯಾರಿಕಾ ಘಟಕ ನಿರ್ಮಾಣಕ್ಕೆ ಸಂಬಂಧಿಸಿದಂತೆ ₹174 ಕೋಟಿ ಬಿಲ್ ಮಂಜೂರು ಮಾಡಲು ₹78 ಲಕ್ಷ ಲಂಚ ನೀಡಿದ ಆರೋಪದಡಿ ಪ್ರಕರಣ ದಾಖಲಿಸಲಾಗಿದೆ. ಇದರಲ್ಲಿ ಭಾಗಿಯಾದ ಎನ್‌ಐಎಸ್‌ಪಿ ಹಾಗೂ ಎನ್‌ಎಂಡಿಸಿ ಹಾಗೂ ಇಬ್ಬರು ಎಂಇಕಾನ್‌ ಅಧಿಕಾರಿಗಳ ಹೆಸರನ್ನೂ ಎಫ್‌ಐಆರ್‌ನಲ್ಲಿ ಉಲ್ಲೇಖಿಸಲಾಗಿದೆ’ ಎಂದು ಅಧಿಕಾರಿಗಳು ಶನಿವಾರ ತಿಳಿಸಿದ್ದಾರೆ.

ಮಾರ್ಚ್ 21ರಂದು ಚುನಾವಣಾ ಆಯೋಗ ಬಿಡುಗಡೆ ಮಾಡಿದ ವರದಿಯಂತೆ ಚುನಾವಣಾ ಬಾಂಡ್ ಖರೀದಿಸಿದ 2ನೇ ಅತಿ ದೊಡ್ಡ ಕಂಪನಿಯಾದ ಮೇಘಾ ಎಂಜಿನಿಯರಿಂಗ್ ಒಟ್ಟು ₹586 ಕೋಟಿಯನ್ನು ಬಿಜೆಪಿಗೆ ನೀಡಿದೆ. ಬಿಆರ್‌ಎಸ್‌ ಪಕ್ಷಕ್ಕೆ ₹196 ಕೋಟಿ, ಡಿಎಂಕೆ ಪಕ್ಷಕ್ಕೆ ₹85 ಕೋಟಿ, ವೈಎಸ್‌ಆರ್‌ಪಿಗೆ ₹37 ಕೋಟಿ, ಟಿಡಿಪಿಗೆ ₹25 ಕೋಟಿ ಮತ್ತು ಕಾಂಗ್ರೆಸ್‌ಗೆ ₹17 ಕೋಟಿ ನೀಡಿದೆ. ಜೆಡಿಎಸ್‌, ಜನ ಸೇನಾ ಪಕ್ಷ ಮತ್ತು ಜೆಡಿಯು ಪಕ್ಷಕ್ಕೆ ₹5ಕೋಟಿಯಿಂದ ₹10ಕೋಟಿವರೆಗೂ ದೇಣಿಗೆ ನೀಡಿದೆ.

‘ಜಗದಾಲ್ಪುರ ಉಕ್ಕು ತಯಾರಿಕಾ ಘಟಕದಲ್ಲಿ ಪಂಪ್ ಹೌಸ್ ಹಾಗೂ ಕ್ರಾಸ್ ಕಂಟ್ರಿ ಪೈಪ್‌ಲೈನ್‌ ಜೋಡಣೆಗಾಗಿ ₹315 ಕೋಟಿ ಮೊತ್ತದ ಯೋಜನೆಗೆ ಸಂಬಂಧಿಸಿದಂತೆ 2023ರ ಆ. 10ರಂದು ಸಿಬಿಐ ಪ್ರಾಥಮಿಕ ತನಿಖೆ ನಡೆಸಿತ್ತು. ಇದರ ವರದಿ ಆಧರಿಸಿ ಮಾರ್ಚ್ 18ರಂದು ಪ್ರಕರಣ ದಾಖಲಿಸಲು ನಿರ್ಧರಿಸಲಾಯಿತು. ಅದರಂತೆಯೇ ಮಾರ್ಚ್ 31ರಂದು ಪ್ರಕರಣ ದಾಖಲಿಸಲಾಗಿದೆ’ ಎಂದು ಶನಿವಾರ ಬಹಿರಂಗಗೊಂಡಿರುವ ಎಫ್‌ಐಆರ್‌ನಲ್ಲಿ ಹೇಳಲಾಗಿದೆ.

ಈ ಪ್ರಕರಣದಲ್ಲಿ ಎನ್‌ಐಎಸ್‌ಪಿ ಹಾಗೂ ಎನ್‌ಎಂಡಿಸಿಯ ಎಂಟು ಅಧಿಕಾರಿಗಳ ಹೆಸರನ್ನು ಸಿಬಿಐ ಹೆಸರಿಸಿದೆ. ನಿವೃತ್ತ ಕಾರ್ಯನಿರ್ವಾಹಕ ನಿರ್ದೇಶಕ ಪ್ರಶಾಂತ್ ದಾಸ್, ತಯಾರಿಕಾ ವಿಭಾಗದ ನಿರ್ದೇಶಕ ಡಿ.ಕೆ.ಮೊಹಾಂತಿ, ಡಿಜಿಪಿ ಪಿ.ಕೆ.ಭುಯನ್, ಜಿಲ್ಲಾಧಿಕಾರಿ ನರೇಶ್ ಬಾಬು, ಹಿರಿಯ ವ್ಯವಸ್ಥಾಪಕ ಸುಬ್ರೊ ಬ್ಯಾನರ್ಜಿ, ಹಣಕಾಸು ವಿಭಾಗದ ನಿವೃತ್ತ ಸಿಜಿಎಂ ಎಲ್.ಕೃಷ್ಣ ಮೋಹನ್, ಇದೇ ವಿಭಾಗದ ಮುಖ್ಯ ವ್ಯವಸ್ಥಾಪಕ ಕೆ.ರಾಜಶೇಖರ್, ವ್ಯವಸ್ಥಾಪಕ ಸೋಮನಾಥ್ ಘೋಷ್ ಇವರು ಒಟ್ಟು ₹73.85 ಲಕ್ಷ ಲಂಚ ಪಡೆದಿದ್ದಾರೆ ಎಂದು ಎಫ್‌ಐಆರ್‌ನಲ್ಲಿ ಉಲ್ಲೇಖಿಸಲಾಗಿದೆ.

ಎಂಇಕಾನ್‌ ಕಂಪನಿಯ ಇಬ್ಬರು ಅಧಿಕಾರಿಗಳಾದ ಸಹಾಯಕ ಮುಖ್ಯ ವ್ಯವಸ್ಥಾಪಕ ಸಂಜೀವ್ ಸಹಾಯ್ ಹಾಗೂ ಡಿಜಿಎಂ ಇಲ್ಲವರಸು ಇವರು 73 ಇನ್‌ವಾಯ್ಸ್‌ಗಳಿರುವ ₹174.41 ಕೋಟಿ ಮೊತ್ತವನ್ನು ಬಿಡುಗಡೆ ಮಾಡಲು ಮೇಘಾ ಎಂಜಿನಿಯರಿಂಗ್ ಕಂಪನಿಯ ಮುಖ್ಯ ವ್ಯವಸ್ಥಾಪಕ ಸುಭಾಶ್ ಚಂದ್ರ ಸಂಗ್ರಾಸ್ ಅವರಿಂದ ₹5.01 ಲಕ್ಷ ಲಂಚ ಸ್ವೀಕರಿಸಿದ್ದಾರೆ ಎಂದು ಸಿಬಿಐ ಆರೋಪಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT