ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

80 ಕೋಟಿ ಜನರಿಗೆ ಉಚಿತ ಪಡಿತರ: ಕೇಂದ್ರದ ಮಹತ್ವದ ಘೋಷಣೆ

Last Updated 23 ಏಪ್ರಿಲ್ 2021, 12:57 IST
ಅಕ್ಷರ ಗಾತ್ರ

ನವದೆಹಲಿ: ‘ಕೋವಿಡ್‌ ಎರಡನೇ ಅಲೆಯಲ್ಲಿ ಆರ್ಥಿಕ ಸಂಕಷ್ಟ ಎದುರಿಸುತ್ತಿರುವ ಬಡವರಿಗೆ ಮುಂದಿನ ಎರಡು ತಿಂಗಳುಗಳ ಕಾಲ (ಮೇ, ಜೂನ್‌) ‘ಪ್ರಧಾನ ಮಂತ್ರಿ ಗರೀಬ್ ಕಲ್ಯಾಣ್ ಅನ್ನ ಯೋಜನೆ’ ಅಡಿ ಉಚಿತ ಆಹಾರ ಧಾನ್ಯ ವಿತರಿಸುವುದನ್ನು ಪುನರಾರಂಭಿಸಲಾಗುವುದು’ ಎಂದು ಕೇಂದ್ರ ಸರ್ಕಾರವು ಶುಕ್ರವಾರ ಹೇಳಿದೆ.

‘ಒಟ್ಟು 80 ಕೋಟಿ ಫಲಾನುಭವಿಗಳಿಗೆ ಪ್ರತಿ ತಿಂಗಳು 5 ಕೆ.ಜಿ.ಉಚಿತ ಆಹಾರ ಧಾನ್ಯ ವಿತರಿಸಲಾಗುವುದು. ಈ ಬಾರಿ ಯೋಜನೆಯಡಿ ದ್ವಿದಳ ಧಾನ್ಯಗಳನ್ನು ವಿತರಿಸುವುದಿಲ್ಲ’ ಎಂದು ಕೇಂದ್ರ ಆಹಾರ ಮತ್ತು ಸಾರ್ವಜನಿಕ ಪಡಿತರ ವಿತರಣಾ ಸಚಿವಾಲಯದ ಕಾರ್ಯದರ್ಶಿ ಸುಧಾಂಶು ಪಾಂಡೆ ತಿಳಿಸಿದ್ದಾರೆ.

‘ಈ ಹಿಂದೆ ರಾಷ್ಟ್ರೀಯ ಆಹಾರ ಭದ್ರತಾ ಕಾಯ್ದೆ (ಎನ್ಎಫ್ಎಸ್ಎ) ಅಡಿಯಲ್ಲಿ ನೋಂದಾಯಿತ ಫಲಾನುಭವಿಗಳಿಗೆ ಹೆಚ್ಚುವರಿಯಾಗಿ ತಿಂಗಳಿಗೆ 5 ಕೆಜಿ ಗೋಧಿ, ಅಕ್ಕಿಯ ಜೊತೆಗೆ 1 ಕೆಜಿ ದ್ವಿದಳ ವಿತರಿಸಲಾಗುತ್ತಿತ್ತು. ಆದರೆ, ಈ ಬಾರಿ ದ್ವಿದಳ ಧಾನ್ಯ ವಿತರಿಸಲಾಗುವುದಿಲ್ಲ’ ಎಂದು ಅವರು ಹೇಳಿದ್ದಾರೆ.

‘80 ಕೋಟಿ ಜನರಿಗೆ ಎರಡು ತಿಂಗಳುಗಳ ಕಾಲ ಉಚಿತ ಆಹಾರ ಧಾನ್ಯ ವಿತರಣೆಗೆ ಸುಮಾರು 80 ಲಕ್ಷ ಟನ್ ಆಹಾರ ಧಾನ್ಯ ಬೇಕಾಗುತ್ತದೆ. ಆಹಾರ ಧಾನ್ಯ ವಿತರಣೆಗೆ ಒಟ್ಟು₹ 26,000 ಕೋಟಿ ವೆಚ್ಚವಾಗಲಿದೆ’ ಎಂದೂ ಸುಧಾಂಶು ಮಾಹಿತಿ ನೀಡಿದ್ದಾರೆ.

‘ಪ್ರಧಾನ ಮಂತ್ರಿ ಗರೀಬ್ ಕಲ್ಯಾಣ್ ಅನ್ನ ಯೋಜನೆ’ಯನ್ನು (ಪಿಎಂಜಿಕೆಎ) 2020ರಲ್ಲಿ ಘೋಷಿಸಲಾಯಿತು. ಈ ಯೋಜನೆ ಅಡಿ ಜುಲೈವರೆಗೆ ಮೂರು ತಿಂಗಳ ಕಾಲ ಬಡವರಿಗೆ ಉಚಿತ ಆಹಾರ ಧಾನ್ಯ ವಿತರಿಸಲಾಗಿತ್ತು. ಕೋವಿಡ್‌–19ನಿಂದಾಗಿ ಆರ್ಥಿಕ ಪರಿಸ್ಥಿತಿ ಹದಗೆಟ್ಟಿದ್ದರಿಂದ ಈ ಯೋಜನೆಯನ್ನು ನವೆಂಬರ್‌ವರೆಗೆ ವಿಸ್ತರಿಸಲಾಗಿತ್ತು.

ರಾಜಸ್ಥಾನ, ಕೇರಳ, ಉತ್ತರಾಖಂಡ ಸರ್ಕಾರ ಮತ್ತು ಎನ್‌ಸಿಪಿ ಮುಖ್ಯಸ್ಥ ಶರದ್ ಪವಾರ್ ಹಾಗೂ ಟಿಎಂಸಿ ಮುಖಂಡ ಸೌಗತಾ ರಾಯ್ ಸೇರಿದಂತೆ ಹಲವು ಸಂಸದರ ಬೇಡಿಕೆಯ ಮೇರೆಗೆ ಪಿಎಂಜಿಕೆಎಯನ್ನು ಪುನಃ ಜಾರಿಗೊಳಿಸಲಾಗುತ್ತಿದೆ.

ದೇಶವು ಕೋವಿಡ್ ಎರಡನೇ ಅಲೆ ಎದುರಿಸುತ್ತಿರುವ ಸಮಯದಲ್ಲಿ ಬಡವರಿಗೆ ಪೌಷ್ಟಿಕ ಆಹಾರ ದೊರೆಯುವುದು ಮುಖ್ಯ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT