ಗುರುವಾರ, 22 ಫೆಬ್ರುವರಿ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಂಡೀಗಢ ಮೇಯರ್‌ ಚುನಾವಣೆ: ‘ಇಂಡಿಯಾ’ ಮೈತ್ರಿಕೂಟಕ್ಕೆ ಸೋಲು, ಬಿಜೆಪಿ ಜಯಭೇರಿ

* 8 ಮತಗಳು ಅಸಿಂಧು * ಹೈಕೋರ್ಟ್‌ ಮೊರೆಹೋದ ಎಎಪಿ
Published 30 ಜನವರಿ 2024, 14:09 IST
Last Updated 30 ಜನವರಿ 2024, 14:18 IST
ಅಕ್ಷರ ಗಾತ್ರ

ಚಂಡೀಗಢ: ಚಂಡೀಗಢ ಮುನ್ಸಿಪಲ್‌ ಕಾರ್ಪೊರೇಷನ್‌ ಚುನಾವಣೆಯಲ್ಲಿ ಮೇಯರ್‌, ಹಿರಿಯ ಉಪ ಮೇಯರ್‌ ಮತ್ತು ಉಪ ಮೇಯರ್ ಸ್ಥಾನಗಳನ್ನು ತನ್ನ ತೆಕ್ಕೆಗೆ ತೆಗೆದುಕೊಳ್ಳುವಲ್ಲಿ ಬಿಜೆಪಿ ಯಶಸ್ವಿಯಾಗಿದೆ. ಈ ಚುನಾವಣೆಯಲ್ಲಿ ‘ಇಂಡಿಯಾ’ ಮೈತ್ರಿಕೂಟವನ್ನು ಪ್ರತಿನಿಧಿಸಿದ್ದ ಎಎಪಿ ಮತ್ತು ಕಾಂಗ್ರೆಸ್‌ ಪಕ್ಷಗಳಿಗೆ ಭಾರಿ ಹಿನ್ನಡೆ ಆಗಿದೆ.

ಚುನಾವಣಾ ಪ್ರಕ್ರಿಯೆಯಲ್ಲಿ ಅಕ್ರಮ, ವಂಚನೆ ನಡೆದಿದೆ ಎಂದು ಆರೋಪಿಸಿರುವ ಎಎಪಿ, ಚುನಾವಣೆಯನ್ನು ಅನೂರ್ಜಿತಗೊಳಿಸಿ ಹೊಸದಾಗಿ ಚುನಾವಣೆ ನಡೆಸಬೇಕು ಎಂದು ಕೋರಿ ಹೈಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಿದೆ.

ಎಂಟು ಮತಗಳು ಅಸಿಂಧು, ಬಿಜೆಪಿಗೆ ಜಯ: ಬಿಜೆಪಿ ಅಭ್ಯರ್ಥಿ ಮನೋಜ್‌ ಸೋಂಕರ್‌ ಅವರು ಎಎಪಿಯ ಕುಲದೀಪ್‌ ಕುಮಾರ್‌ ಅವರನ್ನು ಸೋಲಿಸಿ ಚಂಡೀಗಢದ ಮೇಯರ್‌ ಆಗಿ ಮಂಗಳವಾರ ಆಯ್ಕೆಯಾದರು. ಚುನಾವಣೆಯಲ್ಲಿ ಮನೋಜ್‌ 16 ಮತಗಳನ್ನು ಪಡೆದರೆ, ಕುಲದೀಪ್‌ 12 ಮತಗಳನ್ನು ಪಡೆದರು. ಎಂಟು ಮತಗಳನ್ನು ಅಸಿಂಧು ಎಂದು ಘೋಷಿಸಲಾಯಿತು.

ಫಲಿತಾಂಶ ಪ್ರಕಟವಾಗುತ್ತಿದ್ದಂತೆಯೇ ‘ಇಂಡಿಯಾ’ ಮೈತ್ರಿಕೂಟದ ಎಎಪಿ ಮತ್ತು ಕಾಂಗ್ರೆಸ್‌ ಪಕ್ಷಗಳು ಪ್ರತಿಭಟನೆ ನಡೆಸಿದವು. ಅಲ್ಲದೆ, ಹಿರಿಯ ಉಪ ಮೇಯರ್‌ ಮತ್ತು ಉಪ ಮೇಯರ್‌ ಸ್ಥಾನದ ಚುನಾವಣೆಗಳನ್ನು ಬಹಿಷ್ಕರಿಸಿದವು. ಇದರಿಂದ ಈ ಹುದ್ದೆಗಳೂ ಬಿಜೆಪಿ ಪಾಲಾದವು.

ಬಿಜೆಪಿ ಅಭ್ಯರ್ಥಿಗಳಾದ ಕುಲ್ಜಿತ್‌ ಸಂಧು ಮತ್ತು ರಾಜಿಂದರ್‌ ಶರ್ಮಾ ಅವರು ಕ್ರಮವಾಗಿ ಹಿರಿಯ ಉಪ ಮೇಯರ್‌ ಮತ್ತು ಉಪ ಮೇಯರ್‌ ಸ್ಥಾನಗಳಿಗೆ ಸುಲಭವಾಗಿ ಆಯ್ಕೆಯಾದರು.

ಚುನಾವಣಾ ಅಧಿಕಾರಿ ವಿರುದ್ಧ ಆರೋಪ: ಚುನಾವಣಾ ಅಧಿಕಾರಿ ಅನಿಲ್‌ ಮಸಿಹ್‌ ಅವರು ಮತ ಎಣಿಕೆಯ ಸಮಯದಲ್ಲಿ ಮತಪತ್ರಗಳ ಮೇಲೆ ಕೆಲವು ಗುರುತುಗಳನ್ನು ಮಾಡಿ, ಅವುಗಳನ್ನು ಅಸಿಂಧುಗೊಳಿಸಿದ್ದಾರೆ ಎಂದು ಎಎಪಿ ಮತ್ತು ಕಾಂಗ್ರೆಸ್‌ ಪಕ್ಷಗಳು ಆರೋಪ‍ ಮಾಡಿವೆ. ಈ ಮತಗಳು ಅಸಿಂಧು ಆದ ಕಾರಣ, ಬಿಜೆಪಿ ಅಭ್ಯರ್ಥಿ ಗೆಲುವು ಸಾಧ್ಯವಾಯಿತು ಎಂದು ಅವು ದೂರಿವೆ.

‘ಪೂರ್ವಯೋಜಿತ ರೀತಿಯಲ್ಲಿ ಚುನಾವಣಾ ಅಧಿಕಾರಿಯನ್ನು ದುರ್ಬಳಕೆ ಮಾಡಿಕೊಂಡು ಒಳಸಂಚು ನಡೆಸುವ ಮೂಲಕ ಬಿಜೆಪಿಯು ಪ್ರಜಾಪ್ರಭುತ್ವವನ್ನು ಕೊಲೆ ಮಾಡಿದೆ’ ಎಂದು ಕಾಂಗ್ರೆಸ್‌ ನಾಯಕ ಪವನ್‌ ಕುಮಾರ್‌ ಬನ್ಸಾಲ್‌ ಆರೋಪಿಸಿದರು.

ಮತಪತ್ರಗಳನ್ನು ಪರಿಶೀಲಿಸಲು ಕಾಂಗ್ರೆಸ್‌– ಎಎಪಿ ಪಕ್ಷಗಳ ಏಜೆಂಟರಿಗೆ ಅನುಮತಿ ನೀಡಲಿಲ್ಲ ಎಂದು ಅವರು ದೂರಿದರು.

‘ಎಂಟು ಮತಗಳು ತಿರಸ್ಕೃತಗೊಂಡಿದ್ದು, ಬಿಜೆಪಿ ಅಭ್ಯರ್ಥಿ ವಿಜೇತರಾಗಿದ್ದಾರೆ ಎಂದು ಘೋಷಿಸಿದ ಚುನಾವಣಾ ಅಧಿಕಾರಿ ಅಲ್ಲಿಂದ ಹೊರಟುಹೋದರು. ಅಷ್ಟರಲ್ಲಿಯೇ ಟೇಬಲ್‌ ಬಳಿ ನುಗ್ಗಿದ ಬಿಜೆಪಿ ಸದಸ್ಯರು ಅಲ್ಲಿದ್ದ ಮತಪತ್ರಗಳನ್ನು ಹರಿದು ಹಾಕಿದರು’ ಎಂದು ಅವರು ಆರೋಪಿಸಿದರು.

ಮತ ಎಣಿಕೆಗಾಗಿ ಮತಪೆಟ್ಟಿಗೆ ತೆರೆದಾಗ ಚುನಾವಣಾ ಅಧಿಕಾರಿಯು ಪಕ್ಷದ ಚುನಾವಣಾ ಏಜೆಂಟರನ್ನು ಕರೆಯಲಿಲ್ಲ ಎಂದು ದೂರಿದ ಕಾಂಗ್ರೆಸ್‌ ಸದಸ್ಯ ಗುರ್ಬಕ್ಸ್‌ ರಾವತ್‌ ಅವರು, ‘ಈ ಫಲಿತಾಂಶವನ್ನು ನಾವು ಒಪ್ಪಿಕೊಳ್ಳುವುದಿಲ್ಲ’ ಎಂದರು.

ತನಿಖೆಗೆ ಒತ್ತಾಯ: ಇಡೀ ಚುನಾವಣಾ ಪ್ರಕ್ರಿಯೆಗೆ ಸಂಬಂಧಿಸಿದಂತೆ ಸ್ವತಂತ್ರ ಸಂಸ್ಥೆಯೊಂದರಿಂದ ತನಿಖೆ ನಡೆಸಬೇಕು. ಅಲ್ಲದೆ ಹೊಸದಾಗಿ ಮುಕ್ತ ಮತ್ತು ನ್ಯಾಯ ಸಮ್ಮತ ರೀತಿಯಲ್ಲಿ ಚುನಾವಣೆಯನ್ನು ಹೈಕೋರ್ಟ್‌ನ ನಿವೃತ್ತ ನ್ಯಾಯಮೂರ್ತಿಯೊಬ್ಬರ ನೇತೃತ್ವದಲ್ಲಿ ನಡೆಸಲು ನಿರ್ದೇಶನ ನೀಡಬೇಕು ಎಂದು ಮೇಯರ್‌ ಚುನಾವಣೆಯ ಎಎಪಿ ಅಭ್ಯರ್ಥಿ ಕುಲದೀಪ್‌ ಕುಮಾರ್‌ ಅವರು ಹೈಕೋರ್ಟ್‌ಗೆ ಸಲ್ಲಿಸಿರುವ ಅರ್ಜಿಯಲ್ಲಿ ಕೋರಿದ್ದಾರೆ.

35 ಸದಸ್ಯ ಬಲದ ಪಾಲಿಕೆಯಲ್ಲಿ ಬಿಜೆಪಿ 14, ಎಎಪಿ 13, ಕಾಂಗ್ರೆಸ್‌ ಏಳು, ಶಿರೋಮಣಿ ಅಕಾಲಿದಳದ ಒಬ್ಬ ಸದಸ್ಯರನ್ನು ಹೊಂದಿದೆ. ಚಂಡೀಗಢ ಸಂಸದ ಕಿರಣ್ ಖೇರ್ ಅವರು ಮತದಾನದ ಹಕ್ಕು ಹೊಂದಿದ್ದಾರೆ.

ಈ ಚುನಾವಣೆ ಜನವರಿ 18ರಂದು ನಿಗದಿಯಾಗಿತ್ತು. ಆದರೆ ಚುನಾವಣಾ ಅಧಿಕಾರಿಯ ಅನಾರೋಗ್ಯದ ಕಾರಣ ಫೆಬ್ರುವರಿ 6ಕ್ಕೆ ಮುಂದೂಡಲಾಗಿತ್ತು. ಇದನ್ನು ಎಎಪಿ ಹೈಕೋರ್ಟ್‌ನಲ್ಲಿ ಪ್ರಶ್ನಿಸಿತ್ತು. ಚುನಾವಣೆ ಮುಂದೂಡಿಕೆ ಆದೇಶವನ್ನು ರದ್ದುಗೊಳಿಸಿದ ಹೈಕೋರ್ಟ್‌, ಜನವರಿ 30ರಂದು ಬೆಳಿಗ್ಗೆ 10 ಗಂಟೆಗೆ ಮೇಯರ್‌ ಚುನಾವಣೆ ನಡೆಸಬೇಕು ಎಂದು ಚಂಡೀಗಢ ಆಡಳಿತಕ್ಕೆ ನಿರ್ದೇಶನ ನೀಡಿತ್ತು.

ಮೇಯರ್‌ ಚುನಾವಣೆಯಲ್ಲಿ ಗೆದ್ದಿದ್ದಕ್ಕಾಗಿ ಚಂಡೀಗಢದ ಬಿಜೆಪಿ ಘಟಕಕ್ಕೆ ಅಭಿನಂದನೆಗಳು. ‘ಇಂಡಿಯಾ’ ಮೈತ್ರಿಕೂಟದ ಅಭ್ಯರ್ಥಿಯ ಸೋಲು ಅವರ ಅಂಕಗಣಿತ ಅಥವಾ ‘ಕೆಮಿಸ್ಟ್ರಿ’ ಕೆಲಸ ಮಾಡುತ್ತಿಲ್ಲ ಎಂಬುದನ್ನು ತೋರಿಸುತ್ತದೆ.
– ಜೆ.ಪಿ.ನಡ್ಡಾ, ಬಿಜೆಪಿ ಅಧ್ಯಕ್ಷ
ಮೇಯರ್‌ ಚುನಾವಣೆಯಲ್ಲಿ ಅವರು (ಬಿಜೆಪಿ) ಈ ಮಟ್ಟಕ್ಕೆ ಇಳಿಯುತ್ತಾರೆ ಎಂದರೆ, ರಾಷ್ಟ್ರೀಯ ಚುನಾವಣೆಯಲ್ಲಿ ಯಾವ ಮಟ್ಟಕ್ಕೆ ಇಳಿಯಬಹುದು.
– ಅರವಿಂದ ಕೇಜ್ರಿವಾಲ್‌, ದೆಹಲಿ ಮುಖ್ಯಮಂತ್ರಿ
ಮೇಯರ್ ಚುನಾವಣೆಯಲ್ಲಿ ಪರಾಭವಗೊಂಡ ಎಎಪಿಯ ಕುಲದೀಪ್‌ ಸಿಂಗ್‌ ಅವರನ್ನು ಬೆಂಬಲಿಗರು ಸಮಾಧಾನಪಡಿಸಿದರು

ಮೇಯರ್ ಚುನಾವಣೆಯಲ್ಲಿ ಪರಾಭವಗೊಂಡ ಎಎಪಿಯ ಕುಲದೀಪ್‌ ಸಿಂಗ್‌ ಅವರನ್ನು ಬೆಂಬಲಿಗರು ಸಮಾಧಾನಪಡಿಸಿದರು

ಪಿಟಿಐ ಚಿತ್ರ

ಮರು ಚುನಾವಣೆ ನಡೆಸಲು ಕೋರಿ ಹೈಕೋರ್ಟ್ ಮೊರೆ: ರಾಘವ ಛಡ್ಡಾ

ಚಂಡೀಗಢ ಮೇಯರ್ ಚುನಾವಣೆಯ ಪ್ರಕ್ರಿಯೆಯನ್ನು ಪ್ರಶ್ನಿಸಿ ಹಾಗೂ ಮರು ಚುನಾವಣೆ ನಡೆಸಲು ಆದೇಶಿಸುವಂತೆ ಪಂಜಾಬ್ ಮತ್ತು ಹರಿಯಾಣ ಹೈಕೋರ್ಟ್ ಮೊರೆ ಹೋಗುವುದಾಗಿ ರಾಘವ್ ಚಡ್ಡಾ ಹೇಳಿದ್ದಾರೆ. 

‘ಚುನಾವಣಾ ಪ್ರಕ್ರಿಯೆಯನ್ನು ಸಂವಿಧಾನಾತ್ಮಕವಾಗಿ ನಡೆಸಿಲ್ಲ. ಇದು ಅಕ್ರಮ ಮಾತ್ರವಲ್ಲ, ದೇಶದ್ರೋಹವೂ ಹೌದು. ಸೋಲು ಗ್ರಹಿಸಿದ ಬಿಜೆಪಿಯು, ಇಡೀ ಚುನಾವಣಾ ಪ್ರಕ್ರಿಯೆಯನ್ನೇ ತಿರುಚಿದೆ’ ಎಂದು ಆರೋಪಿಸಿದ್ದಾರೆ.

‘ಒಟ್ಟು ಮತಗಳಲ್ಲಿ ಎಎಪಿ ಮತ್ತು ಕಾಂಗ್ರೆಸ್‌ 20 ಮತಗಳನ್ನು ಹೊಂದಿದ್ದವು. ಹೀಗಾಗಿ ಗೆಲುವು ಖಚಿತವಾಗಿತ್ತು. ಇದನ್ನು ಅರಿತ ಬಿಜೆಪಿ ವಾಮಮಾರ್ಗ ಅನುಸರಿಸಿದೆ. ಮೊದಲ ತಪ್ಪು ಚುನಾವಣಾಧಿಕಾರಿಯಿಂದ ನಡೆದಿದೆ. ನಂತರ ಎಎಪಿ ಸದಸ್ಯರನ್ನು ಖರೀದಿಸುವ ಪ್ರಕ್ರಿಯೆಯೂ ನಡೆದಿದೆ. ಆಪರೇಷನ್ ಕಮಲ ವಿಫಲಗೊಂಡ ನಂತರ, ಮತಗಳನ್ನು ಅನರ್ಹಗೊಳಿಸುವ ಕೆಟ್ಟ ಪದ್ಧತಿಗೆ ಬಿಜೆಪಿ ಕೈಹಾಕಿದೆ’ ಎಂದು ದೂರಿದ್ದಾರೆ. ಚುನಾವಣಾಧಿಕಾರಿ ವಿರುದ್ಧ ಎಫ್‌ಐಆರ್ ದಾಖಲಿಸಬೇಕು ಎಂದು ಛಡ್ಡಾ ಒತ್ತಾಯಿಸಿದರು. 

ಕಾಂಗ್ರೆಸ್ ಮುಖಂಡ ಪವನ್ ಕುಮಾರ್ ಬನ್ಸಲ್‌ ಪ್ರತಿಕ್ರಿಯಿಸಿ, ‘ಬಿಜೆಪಿಯ ಇಂಥ ‘ಜಂಗಲ್ ರಾಜ್‌’ ಕಾನೂನನ್ನು ಹಿಂದೆಂದೂ ನೋಡಿಲ್ಲ. ಇದು ಯಾವುದೇ ಪಕ್ಷ ಅಥವಾ ಮೈತ್ರಿಗೆ ಆದ ಹಿನ್ನೆಡೆ. ಇದು ಭಾರತದ ಪ್ರಜಾಪ್ರಭುತ್ವಕ್ಕೆ ಆಗಿರುವ ಹಿನ್ನೆಡೆ. ಈ ಘಟನೆಯಿಂದ ನಾವು ತೀವ್ರ ನೊಂದಿದ್ದೇವೆ. ಆಘಾತಗೊಂಡಿದ್ದೇವೆ’ ಎಂದಿದ್ದಾರೆ.

’ಈ ಘಟನೆ ನಂತರ ಬರಲಿರುವ ಲೋಕಸಭಾ ಚುನಾವಣೆಯು ಹೇಗೆ ನಡೆಯಬಹುದು ಎಂಬುದನ್ನು ಊಹಿಸುವುದೂ ಅಸಾಧ್ಯ. ಅಕ್ರಮ ಹಾಗೂ ನಕಲು ಮೂಲಕ ಬಿಜೆಪಿ ಇಂಥ ಕೀಳುಮಟ್ಟಕ್ಕೆ ಇಳಿಯಲಿದೆ ಎಂದು ಎಂದಿಗೂ ಯೋಚಿಸಿರಲಿಲ್ಲ. ಇದನ್ನು ನೋಡಿದರೆ ಚುನಾವಣೆಯಲ್ಲಿ ಗೆಲುವು ಸಾಧಿಸಲು ಬಿಜೆಪಿ ಯಾವ ಮಟ್ಟಕ್ಕಾದರೂ ಇಳಿಯುವ ಎಲ್ಲಾ ಸಾಧ್ಯತೆಗಳೂ ನಿಚ್ಚಳವಾಗಿವೆ’ ಎಂದಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT