ಸೋಮವಾರ, 6 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

Chhattisgarh Result: ಪ್ರಧಾನಿ ಮೋದಿ ಗ್ಯಾರಂಟಿ ಮೇಲೆ ಜನರ ನಂಬಿಕೆ: ರಮಣ್ ಸಿಂಗ್

Published 3 ಡಿಸೆಂಬರ್ 2023, 3:22 IST
Last Updated 3 ಡಿಸೆಂಬರ್ 2023, 3:22 IST
ಅಕ್ಷರ ಗಾತ್ರ

ಪ್ರಧಾನಿ ಮೋದಿ ಗ್ಯಾರಂಟಿ ಮೇಲೆ ಜನರ ನಂಬಿಕೆ: ರಮಣ್‌ ಸಿಂಗ್‌

ರಾಜ್ಯದಲ್ಲಿ ಬಿಜೆಪಿ ಮುನ್ನಡೆ ಸಾಧಿಸುತ್ತಿದ್ದಂತೆಯೇ ಬಿಜೆಪಿ ನಾಯಕ ರಮಣ್‌ ಸಿಂಗ್‌ ಕಾಂಗ್ರೆಸ್‌ ಅನ್ನು ಟೀಕಿಸಿದ್ದಾರೆ. ಜನರಿಗೆ ಕಾಂಗ್ರೆಸ್‌ ನೀಡಿರುವ ಭರವಸೆಗಳು ಹುಸಿ ಎಂದು ತಿಳಿದಿದೆ. ಮುಖ್ಯಮಂತ್ರಿ ಭೂಪೇಶ್‌ ಬಘೇಲ್‌ ಅವರು ತಾವು ನೀಡಿರುವ ಭರವಸೆಗಳನ್ನು ಈಡೇರಿಸಲಿಲ್ಲ ಎಂಬುದು ಜನರಿಗೆ ಗೊತ್ತಿದೆ. ಆದ್ದರಿಂದಲೇ, ಜನತೆ ಪ್ರಧಾನಿ ನರೇಂದ್ರ ಮೋದಿ ಅವರ ಭರವಸೆಗಳನ್ನು ನಂಬುತ್ತಾರೆ ಎಂದು ಮಾಜಿ ಸಿಎಂ, ಬಿಜೆಪಿ ನಾಯಕ ರಮಣ್‌ ಸಿಂಗ್‌ ಹೇಳಿದ್ದಾರೆ.

ಮಧ್ಯಾಹ್ನ 1 ಗಂಟೆಗೆ ಹೊತ್ತಿಗೆ ಛತ್ತೀಸಗಢದಲ್ಲಿ ಬಿಜೆಪಿ 53 ಮತ್ತು ಕಾಂಗ್ರೆಸ್‌ 34 ಸ್ಥಾನಗಳಲ್ಲಿ ಮುನ್ನಡೆ ಸಾಧಿಸಿದೆ. ರಾಜ್‌ನಂದಗಾವ್‌ ಕ್ಷೇತ್ರದಿಂದ ಸ್ಪರ್ಧಿಸಿದ್ದ ಮಾಜಿ ಮುಖ್ಯಮಂತ್ರಿ ರಮಣ್‌ ಸಿಂಗ್‌ ಅವರು ಕಾಂಗ್ರೆಸ್‌ ಅಭ್ಯರ್ಥಿ ಗಿರೀಶ್‌ ದೇವಾಂಗನ್‌ ಅವರ ವಿರುದ್ಧ ಮುನ್ನಡೆ ಸಾಧಿಸಿದ್ದಾರೆ.

ಕಾಂಗ್ರೆಸ್‌ನ್ನು ಹಿಂದಿಕ್ಕಿದ ಬಿಜೆಪಿ

ಛತ್ತೀಸ್‌ಗಢ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿಯು 54 ಸ್ಥಾನಗಳ ಮುನ್ನಡೆ ಪಡೆಯುವ ಮೂಲಕ ಕಾಂಗ್ರೆಸ್‌ನ್ನು ಹಿಂದಿಕ್ಕಿದೆ. ಸರ್ಕಾರ ರಚನೆಗೆ ಬೇಕಾಗಿರುವ ಮ್ಯಾಜಿಕ್‌ ಸಂಖ್ಯೆ 46. ಸದ್ಯ 12 ಗಂಟೆಗೆ ಹೊತ್ತಿಗೆ ಹೊರಬಿದ್ದಿರುವ ಚುನಾವಣಾ ಆಯೋಗದ ತಾಜಾ ಟ್ರೆಂಡ್‌ ಪ್ರಕಾರ ಬಿಜೆಪಿಯು 54 ಸ್ಥಾನಗಳಲ್ಲಿ ಮುನ್ನಡೆ ಸಾಧಿಸಿದೆ. ಕಾಂಗ್ರೆಸ್‌ 34 ಸ್ಥಾನಗಳಲ್ಲಿ ಮುನ್ನಡೆ ಗಳಿಸಿದೆ. ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರದ ಆಡಳಿತ ಜಾರಿಯಲ್ಲಿದ್ದು, ಈ ಬಾರಿಯ ಆಡಳಿತ ಪಟ್ಟ ಬಿಜೆಪಿಗೆ ಒಲಿಯುವ ಸಾಧ್ಯತೆ ಹೆಚ್ಚಾಗಿದೆ.

ಮುಖ್ಯಮಂತ್ರಿ ಭೂಪೇಶ್‌ ಬಘೇಲ್‌ಗೆ ಹಿನ್ನಡೆ

ಛತ್ತೀಸ್‌ಗಢ ಮತ ಎಣಿಕೆಯಲ್ಲಿ ಸದ್ಯ ಬಿಜೆಪಿ ಮುನ್ನಡೆ ಕಾಯ್ದುಕೊಂಡಿದ್ದು, ಕಾಂಗ್ರೆಸ್‌ ಹಾಗೂ ಬಿಜೆಪಿ ನಡುವೆ ಪ್ರಬಲ ಪೈಪೋಟಿ ಏರ್ಪಟ್ಟಿದೆ. ರಾಜ್ಯ ಮುಖ್ಯಮಂತ್ರಿ ಭೂಪೇಶ್‌ ಬಘೇಲ್‌ ಪಟಾನ್‌ ಕ್ಷೇತ್ರದಲ್ಲಿ ವಿಜಯ್‌ ಬಘೇಲ್‌ ಅವರ ವಿರುದ್ಧ 484 ಮತಗಳ ಅಂತರದಿಂದ ಹಿಂದುಳಿದಿದ್ದಾರೆ ಎಂದು ಚುನಾವಣಾ ಆಯೋಗ ತಿಳಿಸಿದೆ.

ಛತ್ತೀಸ್‌ಗಢದಲ್ಲಿ ಮುನ್ನಡೆ ಸಾಧಿಸಿರುವ ಬಿಜೆಪಿ

ಛತ್ತೀಸಗಢದಲ್ಲಿ ಬಿಜೆಪಿ ಮತ್ತು ಕಾಂಗ್ರೆಸ್‌ ನಡುವೆ ಪ್ರಬಲ ಪೈಪೋಟಿ ಏರ್ಪಟ್ಟಿದೆ. ಚುನಾವಣಾ ಆಯೋಗ ನೀಡಿರುವ ತಾಜಾ ಟ್ರೆಂಡ್‌ ಪ್ರಕಾರ ಸದ್ಯ ಛತ್ತೀಸಗಢದಲ್ಲಿ ಬಿಜೆಪಿಯು ಮುನ್ನಡೆ ಸಾಧಿಸಿದೆ. ಸದ್ಯ 11 ಗಂಟೆ ಹೊತ್ತಿಗೆ ಬಿಜೆಪಿ 43 ಸ್ಥಾನಗಳಲ್ಲಿ ಮುನ್ನಡೆ ಸಾಧಿಸಿದರೆ, ಕಾಂಗ್ರೆಸ್‌ 37 ಸ್ಥಾನಗಳಲ್ಲಿ ಮುನ್ನಡೆ ಗಳಿಸಿದೆ. ಹಮಾರ್‌ ರಾಜ್‌ ಪಾರ್ಟಿ ಮತ್ತು ಕಮ್ಯುನಿಸ್ಟ್‌ ಪಾರ್ಟಿ ಆಫ್‌ ಇಂಡಿಯಾ ತಲಾ ಒಂದೊಂದು ಕ್ಷೇತ್ರಗಳಲ್ಲಿ ಬಹುಮತ ಸಾಧಿಸಿವೆ.

ರಾಯ್‌ಪುರ: ಛತ್ತೀಸ್‌ಗಢದ 90 ಸದಸ್ಯ ಬಲದ ವಿಧಾನಸಭೆಗೆ ನಡೆದ ಚುನಾವಣೆಯ ಮತ ಎಣಿಕೆಗೆ ಬೆಳಿಗ್ಗೆ 8 ಗಂಟೆಯಿಂದ ಆರಂಭವಾಗಿದೆ. ಎಡಪಂಥೀಯ ಪ್ರತ್ಯೇಕತಾವಾದಿಗಳ (ಎಲ್‌ಡಬ್ಲ್ಯುಇ) ಹಿಡಿತವಿರುವ ರಾಜ್ಯದ 33 ಜಿಲ್ಲೆಗಳ ಮತ ಎಣಿಕೆ ಕೇಂದ್ರಗಳಲ್ಲಿ ಭದ್ರತಾ ಸಿಬ್ಬಂದಿ ಕಟ್ಟುನಿಟ್ಟಿನ ನಿಗಾ ವಹಿಸಿದ್ದಾರೆ ಚುನಾವಣಾಧಿಕಾರಿಯೊಬ್ಬರು ತಿಳಿಸಿದ್ದಾರೆ.

ನವೆಂಬರ್ 7 ಮತ್ತು 17 ರಂದು ಎರಡು ಹಂತಗಳಲ್ಲಿ ಛತ್ತೀಸ್‌ಗಢ ವಿಧಾನಸಭೆ ಚುನಾವಣೆಗಳು ನಡೆದಿದ್ದವು. ಶೇಕಡ 76.31 ರಷ್ಟು ಮತದಾನವಾಗಿತ್ತು,

‘ಎಲ್ಲ 90 ಕ್ಷೇತ್ರಗಳ ಮತ ಎಣಿಕೆಯು 33 ಜಿಲ್ಲಾ ಕೇಂದ್ರಗಳಲ್ಲಿ ಬೆಳಿಗ್ಗೆ 8 ಗಂಟೆಗೆ ಪ್ರಾರಂಭವಾಯಿತು. ಪ್ರತಿ ಮತ ಎಣಿಕೆ ಕೇಂದ್ರದಲ್ಲಿ ಮೂರು ಪದರಗಳ ಭದ್ರತಾ ವ್ಯವಸ್ಥೆಯು ಜಾರಿಯಲ್ಲಿದೆ’ ಎಂದು ಛತ್ತೀಸ್‌ಗಢದ ಮುಖ್ಯ ಚುನಾವಣಾಧಿಕಾರಿ ರೀನಾ ಕಂಗಳೆ ತಿಳಿಸಿದ್ದಾರೆ. ಬೆಳಗ್ಗೆ 8 ಗಂಟೆಗೆ ಅಂಚೆ ಮತಗಳ ಎಣಿಕೆ ನಡೆದಿದ್ದು, ಅರ್ಧ ಗಂಟೆ ಬಳಿಕ ಇವಿಎಂಗಳ ಮತ ಎಣಿಕೆ ಪ್ರಕ್ರಿಯೆ ಆರಂಭವಾಗಿದೆ.ಒಟ್ಟು 90 ಚುನಾವಣಾಧಿಕಾರಿಗಳು, 416 ಸಹಾಯಕ ಚುನಾವಣಾಧಿಕಾರಿಗಳು, 4596 ಮಂದಿ ಮತ ಎಣಿಕೆ ಎಣಿಕೆ ಸಿಬ್ಬಂದಿ ಮತ್ತು 1698 ಸೂಕ್ಷ್ಮ ವೀಕ್ಷಕರನ್ನು ನೇಮಿಸಲಾಗಿದೆ ಎಂದು ಅಧಿಕಾರಿ ತಿಳಿಸಿದ್ದಾರೆ.ಒಟ್ಟು 1,181 ಅಭ್ಯರ್ಥಿಗಳು ಕಣದಲ್ಲಿದ್ದಾರೆ.

ಮುಖ್ಯಮಂತ್ರಿ ಭೂಪೇಶ್ ಬಘೇಲ್, ಉಪಮುಖ್ಯಮಂತ್ರಿ ಟಿ ಎಸ್ ಸಿಂಗ್ ದೇವೋ ಮತ್ತು ಭಾರತೀಯ ಜನತಾ ಪಕ್ಷದ ಮಾಜಿ ಸಿಎಂ ರಮಣ್ ಸಿಂಗ್ ಸೇರಿದಂತೆ ಘಟಾನುಘಟಿಗಳು ಕಣದಲ್ಲಿದ್ದಾರೆ.

ಛತ್ತೀಸ್‌ಗಢದ ಒಂಬತ್ತು ಎಕ್ಸಿಟ್ ಪೋಲ್‌ಗಳಲ್ಲಿ ಹಲವು ಭೂಪೇಶ್ ಬಘೇಲ್‌ ನೇತೃತ್ವದ ಕಾಂಗ್ರೆಸ್ ಪಕ್ಷವು ಎರಡನೇ ಅವಧಿಗೆ ಅಧಿಕಾರದ ಗದ್ದುಗೆ ಏರಲಿದೆ ಎಂದು ಭವಿಷ್ಯ ನುಡಿದಿವೆ. 90 ಸ್ಥಾನಗಳ ರಾಜ್ಯದಲ್ಲಿ ಬಹುಮತಕ್ಕೆ 46 ಸ್ಥಾನ ಗೆಲ್ಲಬೇಕಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT