ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಛತ್ತೀಸಗಢ ಅಬಕಾರಿ ಹಗರಣ: ₹205 ಕೋಟಿ ಆಸ್ತಿ ಇ.ಡಿ ಜಪ್ತಿ

Published 3 ಮೇ 2024, 12:15 IST
Last Updated 3 ಮೇ 2024, 12:15 IST
ಅಕ್ಷರ ಗಾತ್ರ

ನವದೆಹಲಿ: ಅಬಕಾರಿ ಹಗರಣದ ನಂಟಿನ ಹಣ ಅಕ್ರಮ ವರ್ಗಾವಣೆ ಪ್ರಕರಣದಲ್ಲಿ ಛತ್ತೀಸಗಢದ ನಿವೃತ್ತ ಐಎಎಸ್‌ ಅಧಿಕಾರಿ ಅನಿಲ್‌ ಟುಟೇಜಾ ಮತ್ತು ರಾಯಪುರ ಮೇಯರ್‌ ಅವರ ಹಿರಿಯ ಸಹೋದರ ಮತ್ತು ಇತರರಿಗೆ ಸೇರಿದ ಸುಮಾರು ₹205 ಕೋಟಿಗೂ ಹೆಚ್ಚು ಮೌಲ್ಯದ ಆಸ್ತಿಯನ್ನು ಮುಟ್ಟುಗೋಲು ಹಾಕಿಕೊಂಡಿರುವುದಾಗಿ ಜಾರಿ ನಿರ್ದೇಶನಾಲಯ (ಇ.ಡಿ) ಶುಕ್ರವಾರ ಹೇಳಿದೆ. 

ಮುಟ್ಟುಗೋಲು ಹಾಕಿಕೊಂಡ ಆಸ್ತಿಗಳಲ್ಲಿ ಟುಟೇಜಾ ಅವರ ₹15.82 ಕೋಟಿ ಮೌಲ್ಯದ 14 ಆಸ್ತಿಗಳು, ರಾಯಪುರ ಮೇಯರ್ ಮತ್ತು ಕಾಂಗ್ರೆಸ್ ನಾಯಕ ಐಜಾಜ್ ಧೇಬರ್ ಅವರ ಹಿರಿಯ ಸಹೋದರ ಅನ್ವರ್ ಧೇಬರ್ ಅವರಿಗೆ ಸೇರಿದ ₹116.16 ಕೋಟಿ ಮೌಲ್ಯದ 115 ಆಸ್ತಿಗಳು, ವಿಕಾಶ್ ಅಗರ್ವಾಲ್ ಅಲಿಯಾಸ್ ಸುಬ್ಬು ಅವರ ₹1.54 ಕೋಟಿ ಮೌಲ್ಯದ ಆಸ್ತಿ ಮತ್ತು ಅರವಿಂದ್ ಸಿಂಗ್ ಅವರಿಗೆ ಸಂಬಂಧಿಸಿದ ₹12.99 ಕೋಟಿ ಮೌಲ್ಯದ 33 ಆಸ್ತಿಗಳು ಸೇರಿವೆ ಎಂದು ತನಿಖಾ ಸಂಸ್ಥೆ ಹೇಳಿಕೆಯಲ್ಲಿ ತಿಳಿಸಿದೆ.

ಅಲ್ಲದೆ, ಭಾರತೀಯ ಟೆಲಿಕಾಂ ಸೇವೆಯ (ಐಟಿಎಸ್) ಅಧಿಕಾರಿ ಮತ್ತು ಅಬಕಾರಿ ಇಲಾಖೆಯ ವಿಶೇಷ ಕಾರ್ಯದರ್ಶಿ ಅರುಣ್‌ಪತಿ ತ್ರಿಪಾಠಿ ಅವರ ₹1.35 ಕೋಟಿ ಮೌಲ್ಯದ ಆಸ್ತಿ, ತ್ರಿಲೋಕ್ ಸಿಂಗ್ ಧಿಲ್ಲೋನ್ ಅವರ ₹28.13 ಕೋಟಿ ಮೌಲ್ಯದ ಒಂಬತ್ತು ಆಸ್ತಿಗಳು, ನವೀನ್ ಕೇಡಿಯಾ ಅವರಿಗೆ ಸೇರಿದ ₹27.96 ಕೋಟಿ ಮೌಲ್ಯದ ಆಭರಣಗಳು ಮತ್ತು ಆಶೀಶ್ ಸೌರಭ್ ಕೇಡಿಯಾ/ದಿಶಿತಾ ವೆಂಚರ್ಸ್ ಪ್ರೈವೇಟ್‌ ಲಿಮಿಟೆಡ್‌ಗೆ ಸೇರಿದ ₹1.2 ಕೋಟಿ ಮೌಲ್ಯದ ಚರಾಸ್ತಿಯನ್ನೂ ಮುಟ್ಟುಗೋಲು ಹಾಕಿಕೊಳ್ಳಲಾಗಿದೆ ಎಂದು ಅದು ಹೇಳಿದೆ.

ಅನ್ವರ್ ಧೇಬರ್‌ ಅವರಿಂದ ಮುಟ್ಟುಗೋಲು ಹಾಕಿಕೊಂಡಿರುವ ಆಸ್ತಿಗಳಲ್ಲಿ ರಾಯಪುರದ ಹೋಟೆಲ್ ವೆನ್ನಿಂಗ್‌ಟನ್ ಕೋರ್ಟ್ ಕೂಡ ಸೇರಿದೆ. ಈ ಹೋಟೆಲ್‌ ಅವರ ಸಂಸ್ಥೆಯ ಅಧೀನದಲ್ಲಿ ನಡೆಯುತ್ತಿದೆ. ಜಪ್ತಿ ಮಾಡಿರುವ ಆಸ್ತಿಗಳ ಒಟ್ಟು ಮೌಲ್ಯ ₹205.49 ಕೋಟಿ ಆಗಿದೆ.

ಈ ಪ್ರಕರಣದಲ್ಲಿ ಇ.ಡಿ ಇತ್ತೀಚೆಗೆ ಟುಟೇಜಾ ಅವರನ್ನು ಬಂಧಿಸಿತ್ತು. ಅಕ್ರಮ ಮದ್ಯ ಮಾರಾಟದ ಮೂಲಕ ಗಳಿಸಿದ ಕಮಿಷನ್ ಹಣವನ್ನು ರಾಜ್ಯದ ಉನ್ನತ ರಾಜಕೀಯ ವ್ಯಕ್ತಿಗಳ ನಿರ್ದೇಶನದಂತೆ ಇವರೆಲ್ಲರೂ ಹಂಚಿಕೊಂಡಿದ್ದಾರೆ ಎಂದು ಆರೋಪಿಸಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT