ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಸಿಕ್ಕಿಂ ಸಮೀಪದ ಗಡಿಯಲ್ಲಿ 6 ಜೆ–20 ಯುದ್ಧವಿಮಾನ ನಿಯೋಜಿಸಿದ ಚೀನಾ

Published 31 ಮೇ 2024, 16:57 IST
Last Updated 31 ಮೇ 2024, 16:57 IST
ಅಕ್ಷರ ಗಾತ್ರ

ನವದೆಹಲಿ: ಪೂರ್ವ ಲಡಾಖ್ ಗಡಿಗೆ ಸಂಬಂಧಿಸಿ ಭಾರತ–ಚೀನಾ ನಡುವಿನ ಸಂಘರ್ಷ ಮುಂದುವರಿದಿರುವ ನಡುವೆಯೇ, ಸಿಕ್ಕಿಂಗೆ ಹತ್ತಿರದ ತನ್ನ ಗಡಿಯಲ್ಲಿ ಚೀನಾ ಅತ್ಯಾಧುನಿಕ 6 ಜೆ–20 ಯುದ್ಧವಿಮಾನಗಳನ್ನು ನಿಯೋಜನೆ ಮಾಡಿದೆ.

ಸಿಕ್ಕಿಂಗೆ ಹೊಂದಿಕೊಂಡ ಗಡಿಗೆ ಸಮೀಪವಿರುವ ಶಿಗಟ್ಸೆ ವಾಯುನೆಲೆಯಲ್ಲಿ ಚೀನಾ ಈ ಯುದ್ಧವಿಮಾನಗಳನ್ನು ನಿಯೋಜನೆ ಮಾಡಿದ್ದು, ಭಾರತೀಯ ರಕ್ಷಣಾ ಪಡೆಗಳು ಪರಿಸ್ಥಿತಿಯನ್ನು ಸೂಕ್ಷ್ಮವಾಗಿ ಗಮನಿಸುತ್ತಿವೆ.

ಇವುಗಳ ಜೊತೆಗೆ, 8 ಜೆ–10 ಯುದ್ಧವಿಮಾನಗಳು, ವೈಮಾನಿಕ ದಾಳಿ ಕುರಿತು ಸಾಕಷ್ಟು ಮುಂಚಿತವಾಗಿ ಎಚ್ಚರಿಕೆ ನೀಡಬಲ್ಲ ಕೆಜೆ–500 ವಿಮಾನವನ್ನು ಗಡಿಯಲ್ಲಿ ನಿಯೋಜನೆ ಮಾಡಿರುವುದು ಉಪಗ್ರಹ ಸೆರೆಹಿಡಿದ ಚಿತ್ರದಲ್ಲಿ ಕಾಣಿಸುತ್ತದೆ ಎಂದು ‘ಆಲ್‌ ಸೋರ್ಸ್‌ ಅನಲಿಸಿಸ್‌’ ಎಂಬ ಗುಪ್ತಚರ ಸಂಸ್ಥೆ ತಿಳಿಸಿದೆ. ಈ ಚಿತ್ರವನ್ನು ಸಂಸ್ಥೆಯೇ ಬಿಡುಗಡೆ ಮಾಡಿದೆ.

ರೇಡಾರ್‌ ಸೇರಿದಂತೆ ಇತರ ವ್ಯವಸ್ಥೆಗಳು ಪತ್ತೆ ಮಾಡುವುದನ್ನು ತಡೆಯಲು ಅಗತ್ಯವಿರುವ ತಂತ್ರಜ್ಞಾನದಿಂದ ಈ ಜೆ–20 ಯುದ್ಧವಿಮಾನಗಳನ್ನು ವಿನ್ಯಾಸಗೊಳಿಸಲಾಗಿದೆ.

12 ಸಾವಿರ ಅಡಿಗಳಷ್ಟು ಎತ್ತರದಲ್ಲಿರುವ ಶಿಗಟ್ಸೆ, ಟಿಬೆಟ್‌ನ ಎರಡನೇ ದೊಡ್ಡ ನಗರವಾಗಿದೆ. ಇಲ್ಲಿರುವ ವಿಮಾನ ನಿಲ್ದಾಣವನ್ನು ನಾಗರಿಕ ವಿಮಾನಯಾನ ಹಾಗೂ ಸೇನೆಯ ಕಾರ್ಯಾಚರಣೆಗೂ ಬಳಸಬಹುದಾಗಿದೆ.

ಚೀನಾ, ಟಿಬೆಟ್‌ನ ಪೂರ್ವಭಾಗದಲ್ಲಿ ರಸ್ತೆ ಹಾಗೂ ರೈಲ್ವೆ ಮೂಲಸೌಕರ್ಯಗಳ ಅಭಿವೃದ್ಧಿಗೂ ಒತ್ತು ನೀಡುತ್ತಿದೆ. ಈ ಭಾಗವು ಭಾರತ ಹಾಗೂ ಭೂತಾನ್‌ ಸನಿಹದಲ್ಲಿದೆ. 

ಚೀನಾದ ಈ ನಡೆ ಕುರಿತು ಭಾರತೀಯ ವಾಯುಪಡೆ ಹಾಗೂ ರಕ್ಷಣಾ ಸಚಿವಾಲಯ ಈ ವರೆಗೆ ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಈ ಬಗ್ಗೆ ಚೀನಾ ಸರ್ಕಾರದಿಂದಲೂ ಪ್ರತಿಕ್ರಿಯೆ ಇಲ್ಲ.

ಆದರೆ, ಎತ್ತರ ಪ್ರದೇಶಗಳಲ್ಲಿ ಕೈಗೊಳ್ಳುವ ತರಬೇತಿಗಾಗಿ ಈ ಯುದ್ಧವಿಮಾನಗಳನ್ನು ನಿಯೋಜನೆ ಮಾಡಿರುವ ಸಾಧ್ಯತೆ ಇದೆ ಎಂದು ಮೂಲಗಳು ಹೇಳಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT