ಬುಧವಾರ, 1 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪಪ್ಪಾ, JEE ಪಾಸ್ ಆಗಲಾರೆ: ಕೋಟಾದಲ್ಲಿ ಪತ್ರ ಬರೆದಿಟ್ಟು ವಿದ್ಯಾರ್ಥಿ ಆತ್ಯಹತ್ಯೆ

Published 8 ಮಾರ್ಚ್ 2024, 14:04 IST
Last Updated 8 ಮಾರ್ಚ್ 2024, 14:04 IST
ಅಕ್ಷರ ಗಾತ್ರ

ಕೋಟಾ (ರಾಜಸ್ಥಾನ): 'ಪಪ್ಪಾ, ನಾನು ಜೆಇಇ ಪರೀಕ್ಷೆಯಲ್ಲಿ ತೇರ್ಗಡೆಯಾಗಲಾರೆ. ಕ್ಷಮಿಸಿ, ನಾನು ಹೊರಡುತ್ತಿದ್ದೇನೆ'

– 16 ವರ್ಷದ ವಿದ್ಯಾರ್ಥಿಯೊಬ್ಬ ಇಲ್ಲಿನ ಹಾಸ್ಟೆಲ್‌ ಕೋಣೆಯಲ್ಲಿ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಳ್ಳುವ ಮುನ್ನ ತನ್ನ ತಂದೆಗೆ ಬರೆದ ಪತ್ರದ ಸಾಲುಗಳಿವು.

ಮೃತ ವಿದ್ಯಾರ್ಥಿಯನ್ನು ಬಿಹಾರದ ಭಗಲ್‌ಪುರದ ಅಭಿಷೇಕ್‌ ಮಂಡಲ್‌ ಎಂದು ಗುರುತಿಸಲಾಗಿದೆ. ಆತನ ಶವ ವಿಜ್ಞಾನ ನಗರ ಪ್ರದೇಶದಲ್ಲಿರುವ ಪಿಜಿ ಕೇಂದ್ರದಲ್ಲಿ ಇಂದು ಬೆಳಿಗ್ಗೆ ಪತ್ತೆಯಾಗಿದೆ. ಅಭಿಷೇಕ್‌, ಗುರುವಾರ ರಾತ್ರಿಯೇ ಆತ್ಮಹತ್ಯೆ ಮಾಡಿಕೊಂಡಿರಬಹುದು ಎಂದು ಪೊಲೀಸರು ಶುಕ್ರವಾರ ತಿಳಿಸಿದ್ದಾರೆ.

ತಮ್ಮ ಮಗ ಫೋನ್‌ ಕರೆ ಸ್ವೀಕರಿಸುತ್ತಿಲ್ಲ ಎಂದು ಪೋಷಕರು ಪಿಜಿ ಕೇಂದ್ರಕ್ಕೆ ಮಾಹಿತಿ ನೀಡಿದ್ದರು. ಅದರಂತೆ ಪರಿಶೀಲನೆ ನಡೆಸಿದಾಗ ಘಟನೆ ಬೆಳಕಿಗೆ ಬಂದಿದೆ. ಕೇಂದ್ರದ ಮೇಲ್ವಿಚಾರಕರು ಬೆಳಿಗ್ಗೆ ಕಿಟಕಿ ಮೂಲಕ ಇಣುಕಿ ನೋಡಿದಾಗ, ಮಂಡಲ್‌ ಪ್ರಜ್ಞೆ ಇಲ್ಲದೆ ಬಿದ್ದಿದ್ದದ್ದು ಕಾಣಿಸಿದೆ. ಕೂಡಲೇ ಆತನನ್ನು ಆಸ್ಪತ್ರೆಗೆ ಕರೆದೊಯ್ಯಲಾಗಿದೆಯಾದರೂ, ಬದುಕುಳಿಯಲಿಲ್ಲ ಎಂದು ಅಲ್ಲಿನ ವೃತ್ತಾಧಿಕಾರಿ ಧರ್ಮವೀರ್‌ ಸಿಂಗ್‌ ಮಾಹಿತಿ ನೀಡಿದ್ದಾರೆ.

ತರಬೇತಿ ಕೇಂದ್ರದಿಂದ ಲಭ್ಯವಾದ ಮಾಹಿತಿ ಪ್ರಕಾರ, ಮಂಡಲ್‌ ಕಳೆದ ಒಂದು ವರ್ಷದಿಂದ ಅಭ್ಯಾಸ ನಡೆಸುತ್ತಿದ್ದ. ಜನವರಿ 29ರಂದು ಜೆಇಇ ಸೆಷನ್‌–1 ಪರೀಕ್ಷೆ ಬರೆಯಬೇಕಿತ್ತು. ಆದರೆ, ಪರೀಕ್ಷೆಗೆ ಹಾಜರಾಗಿರಲಿಲ್ಲ ಎಂದು ಸಿಂಗ್ ವಿವರಿಸಿದ್ದಾರೆ.

ವಿದ್ಯಾರ್ಥಿಯು ತನ್ನ ತಂದೆಯನ್ನುದ್ದೇಶಿಸಿ ಬರೆದ ಡೆತ್‌ನೋಟ್‌, ಕೋಣೆಯಲ್ಲಿ ಸಿಕ್ಕಿದೆ. ಮೃತದೇಹವನ್ನು ಶವಾಗಾರಕ್ಕೆ ರವಾನಿಸಲಾಗಿದೆ. ಬಿಹಾರದಿಂದ ಪೋಷಕರು ಬಂದ ಬಳಿಕ ಶವಪರೀಕ್ಷೆ ನಡೆಸಲಾಗುವುದು ಎಂದು ಮಾಹಿತಿ ನೀಡಿದ್ದಾರೆ.

ಜನವರಿಯಿಂದ ಈಚೆಗೆ ಕೋಟಾದಲ್ಲಿ ವರದಿಯಾದ 5ನೇ ಆತ್ಮಹತ್ಯೆ ಪ್ರಕರಣ ಇದು. 2023ರಲ್ಲಿ 23 ವಿದ್ಯಾರ್ಥಿಗಳು ಆತ್ಮಹತ್ಯೆ ಮಾಡಿಕೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT