ಗುರುವಾರ, 2 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆಗೆ ಝಡ್‌ ಪ್ಲಸ್ ಭದ್ರತೆ

Published 22 ಫೆಬ್ರುವರಿ 2024, 15:10 IST
Last Updated 22 ಫೆಬ್ರುವರಿ 2024, 15:10 IST
ಅಕ್ಷರ ಗಾತ್ರ

ನವದೆಹಲಿ: ಲೋಕಸಭಾ ಚುನಾವಣೆ ಸನಿಹದಲ್ಲಿರುವಾಗಲೇ ಗುಪ್ತಚರ ಇಲಾಖೆಯ ಮಾಹಿತಿ ಆಧರಿಸಿ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರಿಗೆ ಕೇಂದ್ರ ಗೃಹ ಇಲಾಖೆ ಝಡ್ ಪ್ಲಸ್ ಭದ್ರತೆ ನೀಡಿದೆ.

ಖರ್ಗೆ ಅವರಿಗಿರುವ ಬೆದರಿಕೆ ಪ್ರಮಾಣವನ್ನು ಪರಿಗಣಿಸಿರುವ ಗೃಹ ಇಲಾಖೆಯು ಈ ನಿರ್ಣಯವನ್ನು ಕೈಗೊಂಡಿದೆ ಎಂದು ಇಲಾಖೆ ಮೂಲಗಳು ತಿಳಿಸಿವೆ.

ಕೇಂದ್ರ ಮೀಸಲು ಪೊಲೀಸ್ ಪಡೆಯ 30 ಕಮಾಂಡೊಗಳು ಖರ್ಗೆ ಅವರಿಗೆ ದೇಶವ್ಯಾಪಿ ಝಡ್‌ ಪ್ಲಸ್ ಭದ್ರತೆ ಒದಗಿಸಲಿದ್ದಾರೆ. ಒಟ್ಟು ಮೂರು ಪಾಳಿಯಲ್ಲಿ ಇವರು ಕೆಲಸ ಮಾಡಲಿದ್ದಾರೆ. ಜತೆಗೆ ಬುಲೆಟ್‌ಪ್ರೂಫ್ ವಾಹನ, ಪೈಲಟ್ ಮತ್ತು ಎಸ್ಕಾರ್ಟ್ ಕೂಡಾ ಇರಲಿದೆ.

ದೇಶದ ಪ್ರಧಾನ ವಿರೋಧ ಪಕ್ಷದ ನಾಯಕರಾಗಿರುವ ಖರ್ಗೆ ಅವರು ಚುನಾವಣಾ ಸಂದರ್ಭದಲ್ಲಿ ದೇಶವ್ಯಾಪಿ ಸಂಚರಿಸುವ ಸಾಧ್ಯತೆ ಇದೆ. ಈ ಸಂದರ್ಭದಲ್ಲಿ ಅವರಿಗೆ ಸುರಕ್ಷತೆಯ ಅಗತ್ಯವನ್ನು ಪರಿಗಣಿಸಿ, ಭದ್ರತೆ ಹೆಚ್ಚಿಸಲಾಗಿದೆ ಎಂದೆನ್ನಲಾಗಿದೆ.

ಗುಪ್ತಚರ ಇಲಾಖೆಯ ಮಾಹಿತಿ ಆಧರಿಸಿ ನೀಡಲಾಗುವ ಝಡ್‌ ಪ್ಲಸ್ ಭದ್ರತೆಯು ದೇಶದಲ್ಲೇ ಉನ್ನತ ಮಟ್ಟದ್ದಾಗಿದೆ. ಅತಿ ಗಣ್ಯ ವ್ಯಕ್ತಿಗಳಿಗೆ ಅವರಿಗಿರುವ ಬೆದರಿಕೆಯ ಪ್ರಮಾಣವನ್ನು ಪರಿಗಣಿಸಿ ಝಡ್‌ ಪ್ಲಸ್, ಝಡ್‌, ವೈ ಹಾಗೂ ಎಕ್ಸ್‌ ಬದ್ರತೆಯನ್ನು ಕೇಂದ್ರ ಗೃಹ ಇಲಾಖೆ ಒದಗಿಸುತ್ತದೆ. 

ಪ್ರಧಾನಮಂತ್ರಿಗೆ ವಿಶೇಷ ಭದ್ರತಾ ತಂಡ (SPG) ಒಳಗೊಂಡ ಅತ್ಯುನ್ನತ ಭದ್ರತೆಯನ್ನು ಒದಗಿಸಲಾಗುತ್ತದೆ. ಮಾಜಿ ಪ್ರಧಾನಿ ಮನಮೋಹನ ಸಿಂಗ್, ಕಾಂಗ್ರೆಸ್‌ನ ಮಾಜಿ ಅಧ್ಯಕ್ಷೆ ಸೋನಿಯಾ ಗಾಂಧಿ ಮತ್ತು ರಾಹುಲ್ ಗಾಂಧಿ, ಕಾಂಗ್ರೆಸ್‌ನ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ಅವರಿಗೂ ಸಿಆರ್‌ಪಿಎಫ್ ಕಮಾಂಡೊಗಳನ್ನು ಒಳಗೊಂಡ ಝಡ್‌ ಪ್ಲಸ್ ಭದ್ರತೆ ಒದಗಿಸಲಾಗಿದೆ.

2019ರಲ್ಲಿ ಹಾಲಿ ಹಾಗೂ ಮಾಜಿ ರಾಜಕಾರಣಿಗಳಿಗೆ ಒದಗಿಸಿದ್ದ ಭದ್ರತೆಯನ್ನು ಮರುಪರಿಶೀಲಿಸಿದ ಕೇಂದ್ರ ಸರ್ಕಾರವು 350 ಜನರ ಭದ್ರತೆಯನ್ನು ಕಡಿತಗೊಳಿಸಿತ್ತು. ಇದರಿಂದಾಗಿ 1300 ಕಮಾಂಡೊಗಳನ್ನು ಭದ್ರತಾ ಕಾರ್ಯದಿಂದ ಮುಕ್ತಗೊಳಿಸಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT