ಶನಿವಾರ, 23 ಸೆಪ್ಟೆಂಬರ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಧಿಕ ಬೆಲೆಗೆ ಡ್ರೋನ್ ಖರೀದಿಗೆ ಅಮೆರಿಕ ಜೊತೆ ಒಪ್ಪಂದ: ಕಾಂಗ್ರೆಸ್‌ ಆರೋಪ

‘ಎಂಕ್ಯೂ–9ಬಿ ಪ್ರಿಡೇಟರ್ ಯುಎವಿ ಡ್ರೋನ್‌’: ಅಮೆರಿಕದೊಂದಿಗೆ ಒಪ್ಪಂದ
Published 28 ಜೂನ್ 2023, 12:27 IST
Last Updated 28 ಜೂನ್ 2023, 12:27 IST
ಅಕ್ಷರ ಗಾತ್ರ

ನವದೆಹಲಿ: ಅಮೆರಿಕ ಉತ್ಪಾದಿಸುವ 31 ‘ಎಂಕ್ಯೂ–9ಬಿ ಪ್ರಿಡೇಟರ್ ಯುಎವಿ’ ಡ್ರೋನ್‌ಗಳನ್ನು ಅಧಿಕ ಬೆಲೆಗೆ ಖರೀದಿ ಮಾಡಲಾಗುತ್ತಿದೆ ಕಾಂಗ್ರೆಸ್‌ ಬುಧವಾರ ಆರೋಪಿಸಿದೆ.

‘ಕೋಟ್ಯಂತರ ರೂಪಾಯಿ ವೆಚ್ಚದಲ್ಲಿ ಡ್ರೋನ್‌ಗಳನ್ನು ಖರೀದಿಸುವ ಸಂಬಂಧ ಅಮೆರಿಕದೊಂದಿಗೆ ಭಾರತ ಮಾಡಿಕೊಂಡಿರುವ ಒಪ್ಪಂದವು ಸಂಪೂರ್ಣ ಪಾರದರ್ಶಕವಾಗಿರಬೇಕು’ ಎಂದು ಕಾಂಗ್ರೆಸ್‌ ಆಗ್ರಹಿಸಿದೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಪಕ್ಷದ ವಕ್ತಾರ ಪವನ್‌ ಖೇರಾ, ‘ರಾಷ್ಟ್ರದ ಭದ್ರತೆ ಮುಖ್ಯ ಎಂಬುದರಲ್ಲಿ ಎರಡು ಮಾತಿಲ್ಲ. ಆದರೆ, ಪ್ರಿಡೇಟರ್‌ ಡ್ರೋನ್‌ಗಳ ಖರೀದಿಯು ಹಲವು ಸಂಶಯಗಳಿಗೆ ಎಡೆ ಮಾಡಿಕೊಡುತ್ತಿದೆ’ ಎಂದು ದೂರಿದರು.

‘ಪ್ರಧಾನಿ ಮೋದಿ ನೇತೃತ್ವದ ಸರ್ಕಾರವು ರಾಷ್ಟ್ರೀಯ ಹಿತಾಸಕ್ತಿಗಳಿಗೆ ಅಪಾಯ ತಂದೊಡ್ಡುವ ಕೆಲಸ ಮಾಡುತ್ತದೆ. ರಫೇಲ್‌ ಯುದ್ಧವಿಮಾನ ಖರೀದಿ ವೇಳೆಯೂ ಇದು ಗೊತ್ತಾಗಿದೆ. ಈ ಯುದ್ಧವಿಮಾನಗಳ ತಂತ್ರಜ್ಞಾನವನ್ನು ಎಚ್‌ಎಎಲ್‌ಗೆ ವರ್ಗಾಯಿಸುವುದನ್ನು ಹೇಗೆ ನಿರಾಕರಿಸಲಾಯಿತು ಎಂಬುದನ್ನು ನಾವು ನೋಡಿದ್ದೇವೆ’ ಎಂದರು.

‘ರಕ್ಷಣಾ ಖರೀದಿ ಸಮಿತಿ ಹಾಗೂ ವಾಯುಪಡೆಯ ಆಕ್ಷೇಪಗಳನ್ನು ನಿರ್ಲಕ್ಷಿಸಿದ ಸರ್ಕಾರ ರಕ್ಷಣಾ ವ್ಯವಸ್ಥೆಯ ಖರೀದಿಗೆ ಸಂಬಂಧಿಸಿ ಏಕಪಕ್ಷೀಯವಾಗಿ ತೀರ್ಮಾನಗಳನ್ನು ತೆಗೆದುಕೊಂಡಿದ್ದನ್ನೂ ನಾವು ನೋಡಿದ್ದೇವೆ. ರಫೇಲ್‌ ಖರೀದಿಯ ಕುರಿತು ಫ್ರಾನ್ಸ್‌ನಲ್ಲಿ ಇನ್ನೂ ತನಿಖೆ ನಡೆಯುತ್ತಿದೆ’ ಎಂದು ಖೇರಾ ಟೀಕಿಸಿದರು.

‘ಪ್ರಿಡೇಟರ್‌ ಡ್ರೋನ್‌ಗಳ ಖರೀದಿಗೆ ಸಂಬಂಧಿಸಿ ಪಾರದರ್ಶಕತೆ ಇರಬೇಕು. ಈ ಖರೀದಿ ಒಪ್ಪಂದ ಕುರಿತ ಪ್ರಶ್ನೆಗಳಿಗೆ ಸರ್ಕಾರ ಉತ್ತರಿಸಬೇಕು. ಇಲ್ಲದಿದ್ದರೆ ಮೋದಿ ಸರ್ಕಾರದ ಮತ್ತೊಂದು ಹಗರಣದಲ್ಲಿ ನಾವು ಸಿಕ್ಕಿಹಾಕಿಕೊಳ್ಳುತ್ತೇವೆ’ ಎಂದು ಎಚ್ಚರಿಸಿದರು.

‘ಪರಿಶೀಲನೆ ನಂತರ ಅಂತಿಮ ನಿರ್ಧಾರ’: ಅಮೆರಿಕದಿಂದ ಖರೀದಿಸಲಾಗುತ್ತಿರುವ ಡ್ರೋನ್‌ಗಳ ಬೆಲೆಗೆ ಸಂಬಂಧಿಸಿದ ವರದಿಗಳನ್ನು ರಕ್ಷಣಾ ಸಚಿವಾಲಯ ಭಾನುವಾರ ತಳ್ಳಿಹಾಕಿತ್ತು.

‘31 ಪ್ರಿಡೇಟರ್‌ ಡ್ರೋನ್‌ಗಳ ಬೆಲೆ ಹಾಗೂ ಖರೀದಿಗೆ ಸಂಬಂಧಿಸಿದ ಷರತ್ತುಗಳ ಕುರಿತು ಅಂತಿಮ ನಿರ್ಧಾರ ಕೈಗೊಳ್ಳಬೇಕಿದೆ. ಅಮೆರಿಕದ ಕಂಪನಿ ಹಾಗೂ ಇತರ ದೇಶಗಳು ನೀಡಿರುವ ಬೆಲೆಗಳನ್ನು ಪರಿಶೀಲಿಸಿದ ನಂತರ ಖರೀದಿಯ ಬಗ್ಗೆ ನಿರ್ಧರಿಸಲಾಗುವುದು’ ಎಂದೂ ಸಚಿವಾಲಯ ಹೇಳಿತ್ತು.

‘ಖರೀದಿಸಲು ಉದ್ದೇಶಿಸಲಾಗಿರುವ ಡ್ರೋನ್‌ಗಳ ಬೆಲೆ ₹ 25,200 ಕೋಟಿ ಎಂದು ಅಮೆರಿಕ ಸರ್ಕಾರ ತಿಳಿಸಿದೆ. ಆದರೆ, ಖರೀದಿ ಬಗ್ಗೆ ಅಮೆರಿಕ ಅನುಮೋದನೆ ನೀಡಿದ ನಂತರ ಬೆಲೆ ಕುರಿತು ಮಾತುಕತೆ ನಡೆಸಿ, ಅಂತಿಮ ನಿರ್ಧಾರ ಕೈಗೊಳ್ಳಲಾಗುತ್ತದೆ’ ಎಂದೂ ಹೇಳಿತ್ತು.

ಖೇರಾ ಹೇಳಿದ್ದೇನು?

* ₹ 25,200 ಕೋಟಿ ವೆಚ್ಚದಲ್ಲಿ ಅಮೆರಿಕದ ಜನರಲ್ ಅಟಾಮಿಕ್ಸ್ ಕಂಪನಿಯಿಂದ ‘ಎಂಕ್ಯೂ–9ಬಿ ಪ್ರಿಡೇಟರ್ ಯುಎವಿ’ ಡ್ರೋನ್‌ಗಳನ್ನು ಖರೀದಿ ಮಾಡಲಾಗುತ್ತಿದೆ.

* ಈ ಡ್ರೋನ್‌ಗಳನ್ನು ಮೊದಲು 2017ರಲ್ಲಿ ನಡೆದ ಯುದ್ಧವೊಂದರಲ್ಲಿ ಬಳಲಾಗಿತ್ತು. ಇವುಗಳಲ್ಲಿ ಬಳಸಿರುವುದಕ್ಕಿಂತಲೂ ಅತ್ಯಾಧುನಿಕ ತಂತ್ರಜ್ಞಾನವಿರುವ ಡ್ರೋನ್‌ಗಳು ಈಗ ಲಭ್ಯ

* ಪ್ರತಿ ಡ್ರೋನ್‌ನ ಬೆಲೆ ₹ 812 ಆಗಲಿದೆ. ಆದರೆ, ಈ ಬೆಲೆಗಿಂತ ಶೇ 10–20ರಷ್ಟು ಕಡಿಮೆ ವೆಚ್ಚದಲ್ಲಿ ಇಂಥದೇ ತಂತ್ರಜ್ಞಾನವಿರುವ ಡ್ರೋನ್‌ಗಳನ್ನು ಡಿಆರ್‌ಡಿಒ ತಯಾರಿಸಬಲ್ಲದು

* ಈ ಡ್ರೋನ್‌ಗಳ ಖರೀದಿಗೆ ಭದ್ರತೆ ಕುರಿತ ಸಚಿವ ಸಂಪುಟ ಸಮಿತಿ (ಸಿಸಿಎಸ್‌)ಯ ಅನುಮೋದನೆಯನ್ನು ಪಡೆದಿಲ್ಲ ಏಕೆ?

Cut-off box - null

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT