ಭಾನುವಾರ, 19 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

3 ರಾಜ್ಯಗಳಲ್ಲಿ ಕಾಂಗ್ರೆಸ್–ಎಎಪಿ ಸೀಟು ಹಂಚಿಕೆ ಅಂತಿಮ; ಘೋಷಣೆಯಷ್ಟೇ ಬಾಕಿ!

Published 22 ಫೆಬ್ರುವರಿ 2024, 11:53 IST
Last Updated 22 ಫೆಬ್ರುವರಿ 2024, 11:53 IST
ಅಕ್ಷರ ಗಾತ್ರ

ನವದೆಹಲಿ: ಮುಂಬರುವ ಸಾರ್ವತ್ರಿಕ ಚುನಾವಣೆಗೆ ದೆಹಲಿ, ಗುಜರಾತ್, ಹರಿಯಾಣದಲ್ಲಿ ಅಭ್ಯರ್ಥಿಗಳನ್ನು ಕಣಕ್ಕಿಳಿಸಲು ಕಾಂಗ್ರೆಸ್‌ ಮತ್ತು ಎಎಪಿ ನಡೆಸಿರುವ ಸೀಟು ಹಂಚಿಕೆ ಮಾತುಕತೆ ಬಹುತೇಕ ಮುಕ್ತಾಯವಾಗಿದೆ. ಘೋಷಣೆಯಷ್ಟೇ ಬಾಕಿ ಇದೆ ಎಂದು ಮೂಲಗಳು ತಿಳಿಸಿವೆ.

ರಾಷ್ಟ್ರ ರಾಜಧಾನಿಯ ದಕ್ಷಿಣ ದೆಹಲಿ, ಪಶ್ಚಿಮ ದೆಹಲಿ, ವಾಯವ್ಯ ದೆಹಲಿ ಹಾಗೂ ನವದೆಹಲಿ ಸ್ಥಾನಗಳಲ್ಲಿ ಎಎಪಿ ಸ್ಪರ್ಧಿಸಲಿದೆ. ಚಾಂದಿನಿ ಚೌಕ್‌, ಪೂರ್ವ ದೆಹಲಿ ಮತ್ತು ಈಶಾನ್ಯ ದೆಹಲಿ ಕ್ಷೇತ್ರಗಳಲ್ಲಿ ಕಾಂಗ್ರೆಸ್‌ ಅಭ್ಯರ್ಥಿ ಸ್ಪರ್ಧಿಸಲಿದ್ದಾರೆ ಎಂದು ಎಎಪಿ ಮೂಲಗಳು ಮಾಹಿತಿ ನೀಡಿವೆ.

2019ರ ಲೋಕಸಭೆ ಚುನಾವಣೆಯಲ್ಲಿ ಇಲ್ಲಿನ ಎಲ್ಲ ಕ್ಷೇತ್ರಗಳಲ್ಲಿ ಬಿಜೆಪಿ ಜಯ ಸಾಧಿಸಿತ್ತು.

ಹರಿಯಾಣದಲ್ಲಿ ಒಂದು ಹಾಗೂ ಗುಜರಾತ್‌ನಲ್ಲಿ ಎರಡು ಸ್ಥಾನಗಳನ್ನು ಎಎಪಿಗೆ ಬಿಟ್ಟುಕೊಡಲು ಕಾಂಗ್ರೆಸ್‌ ನಿರ್ಧರಿಸಿದೆ. ಅದರಂತೆ ಹರಿಯಾಣದಲ್ಲಿ ಗುರುಗ್ರಾಮ ಇಲ್ಲವೇ ಫರಿದಾಬಾದ್‌ ಎಎಪಿ ಪಾಲಾಗಲಿದೆ. ಗುಜರಾತ್‌ನಲ್ಲಿ ಭರೂಚ್‌ ಹಾಗೂ ಭಾವನಗರ ಕ್ಷೇತ್ರಗಳನ್ನು ಬಿಟ್ಟುಕೊಡುವ ಬಗ್ಗೆ ಚರ್ಚೆ ನಡೆದಿದೆ ಎನ್ನಲಾಗಿದೆ.

ಕಾಂಗ್ರೆಸ್‌ನ ಪ್ರಬಲ ನಾಯಕರಾಗಿದ್ದ ದಿವಂಗತ ಅಹ್ಮದ್‌ ಪಟೇಲ್‌ ಅವರ ಮಗ ಹಾಗೂ ಮಗಳು ಭರೂಚ್‌ ಕ್ಷೇತ್ರಕ್ಕಾಗಿ ಪೈಪೋಟಿ ನಡೆಸುತ್ತಿದ್ದಾರೆ.

ದೆಹಲಿ ಮುಖ್ಯಮಂತ್ರಿ ಹಾಗೂ ಎಎಪಿ ಸಂಚಾಲಕರೂ ಆಗಿರುವ ಅರವಿಂದ ಕೇಜ್ರಿವಾಲ್‌ ಅವರು, ಮೈತ್ರಿ ಕುರಿತ ಮಾತುಕತೆ ವಿಳಂಬವಾಗುತ್ತಿದೆ ಎಂದು ಬುಧವಾರ ಹೇಳಿದ್ದರು. ಇನ್ನೆರಡು ದಿನಗಳಲ್ಲಿ ಹೊಸ ಬೆಳವಣಿಗೆಗಳು ನಡೆಯಲಿವೆ ಎಂದೂ ತಿಳಿಸಿದ್ದರು.

ಎಎಪಿಯ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಂದೀಪ್‌ ಪಾಠಕ್‌ ಅವರು, ಗೋವಾದ ಬೆನೌಲಿಮ್‌ ಶಾಸಕ ವೆಂಜಿ ವೀಗಸ್‌ ಅವರು ದಕ್ಷಿಣ ಗೋವಾ ಕ್ಷೇತ್ರದಿಂದ ಕಣಕ್ಕಿಳಿಯಲಿದ್ದಾರೆ. ಗುಜರಾತ್‌ನ ಶಾಸಕರಾದ ಚೈತರ್‌ ವಾಸವ ಮತ್ತು ಉಮೇಶ್‌ಭಾಯ್‌ ಮಕ್ವಾನ ಕ್ರಮವಾಗಿ ಭರೂಜ್‌ ಮತ್ತು ಭಾವನಗರ ಕ್ಷೇತ್ರಗಳಲ್ಲಿ ಸ್ಪರ್ಧಿಸಲಿದ್ದಾರೆ ಎಂದು ಈ ತಿಂಗಳ ಆರಂಭದಲ್ಲೇ ಘೋಷಿಸಿದ್ದರು. ಅಸ್ಸಾಂನ ಮೂರು ಸ್ಥಾನಗಳಿಗೂ ಅಭ್ಯರ್ಥಿಗಳನ್ನು ಪ್ರಕಟಿಸಿದ್ದರು.

ಗುಜರಾತ್‌ನಲ್ಲಿ 26 ಹಾಗೂ ಹರಿಯಾಣದಲ್ಲಿ 10 ಲೋಕಸಭೆ ಕ್ಷೇತ್ರಗಳಿವೆ. ಸಾರ್ವತ್ರಿಕ ಚುನಾವಣೆಯು ಏಪ್ರಿಲ್‌–ಮೇ ತಿಂಗಳಲ್ಲಿ ನಡೆಯುವ ಸಾಧ್ಯತೆ ಇದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT