ಸೋಮವಾರ, 29 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಇಸ್ರೇಲ್ ಮೇಲಿನ ಉಗ್ರರ ದಾಳಿ ಖಂಡಿಸುವಲ್ಲಿ ಕಾಂಗ್ರೆಸ್ ವಿಫಲ: ತೇಜಸ್ವಿ ಸೂರ್ಯ

Published 11 ಅಕ್ಟೋಬರ್ 2023, 11:12 IST
Last Updated 11 ಅಕ್ಟೋಬರ್ 2023, 11:12 IST
ಅಕ್ಷರ ಗಾತ್ರ

ರಾಯ್‌ಪುರ (ಛತ್ತೀಸಗಢ): ವೋಟ್‌ ಬ್ಯಾಂಕ್‌ ರಾಜಕಾರಣ ಮಾಡುತ್ತಿರುವ ಕಾಂಗ್ರೆಸ್‌ ಪಕ್ಷವು ಇಸ್ರೇಲ್‌ ಮೇಲೆ ಹಮಾಸ್ ಉಗ್ರರು ನಡೆಸಿರುವ ದಾಳಿಯನ್ನು ಸಮರ್ಥವಾಗಿ ಖಂಡಿಸುವಲ್ಲಿ ವಿಫಲವಾಗಿದೆ ಎಂದು ಬಿಜೆಪಿ ಸಂಸದ ತೇಜಸ್ವಿ ಸೂರ್ಯ ಆರೋಪಿಸಿದ್ದಾರೆ.

ಭಾರತೀಯ ಜನತಾ ಯುವ ಮೋರ್ಚಾ (ಬಿಜೆವೈಎಂ) ಅಧ್ಯಕ್ಷರೂ ಆಗಿರುವ ಸೂರ್ಯ, ರಾಯ್‌ಪುರದ ಸ್ವಾಮಿ ವಿವೇಕಾನಂದ ವಿಮಾನ ನಿಲ್ದಾಣದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ್ದಾರೆ.

ರಾಜ್ಯದಲ್ಲಿ ಅಧಿಕಾರದಲ್ಲಿರುವ ಕಾಂಗ್ರೆಸ್‌ ಸರ್ಕಾರ, ಸಾರ್ವಜನಿಕ ಸೇವೆ ಆಯೋಗದ ನೇಮಕಾತಿಯಲ್ಲಿ ಹಗರಣದಲ್ಲಿ ಭಾಗಿಯಾಗಿದೆ ಎಂದು ಕಿಡಿಕಾರಿದ್ದಾರೆ.

ಬಿಜೆವೈಎಂ ರಾಜ್ಯ ಘಟಕದ ಕಾರ್ಯಾಗಾರದಲ್ಲಿ ಪಾಲ್ಗೊಳ್ಳಲು ಅವರು ಇಲ್ಲಿಗೆ ಆಗಮಿಸಿದ್ದಾರೆ.

ಇಸ್ರೇಲ್‌ ಮೇಲಿನ ದಾಳಿ ಹಾಗೂ ಅಲ್ಲಿ ಸಿಲುಕಿರುವ ಭಾರತೀಯರ ಸ್ಥಿತಿಗತಿ ಕುರಿತು ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಸೂರ್ಯ, 'ಇಸ್ರೇಲ್‌ನಲ್ಲಿ ಏನು ಸಂಭವಿಸಿದೆಯೋ ಅದು ಹಿಂದೆಂದೂ ನಡೆದಿರದಂತಹ ಅಮಾನುಷ ದಾಳಿಯಾಗಿದೆ. ಸಣ್ಣ ಮಕ್ಕಳೂ ಸೇರಿದಂತೆ ಸಾವಿರಾರು ಜನರು ಬೀಕರ ದಾಳಿಗೆ ತುತ್ತಾಗಿದ್ದಾರೆ. ನಾವು ಹಮಾಸ್‌ ಮತ್ತು ಪ್ಯಾಲೆಸ್ಟೀನ್‌ ವಿಚಾರವಾಗಿ ಗೊಂದಲಕ್ಕೊಳಗಾಗಬೇಕಿಲ್ಲ. ಹಮಾಸ್‌ ಎಂಬುದು ಲಷ್ಕರ್‌ ಇ–ತಯಬಾ ಅಥವಾ ಐಎಸ್‌ಐಎಸ್‌ನಂತಹ ಉಗ್ರ ಸಂಘಟನೆ' ಎಂದಿದ್ದಾರೆ.

ಇಂದಿನ ನಾಗರಿಕ ಪ್ರಪಂಚದಲ್ಲಿ ಉಗ್ರವಾದಕ್ಕೆ ಒಂದಿಂಚೂ ಜಾಗ ನೀಡಬಾರದು ಎಂದು ಮನವಿ ಮಾಡಿದ್ದಾರೆ.

'ಇಡೀ ಜಗತ್ತು ಹಮಾಸ್‌ ಉಗ್ರರ ದಾಳಿಯನ್ನು ಒಕ್ಕೊರಳಿನಿಂದ ಖಂಡಿಸುತ್ತಿದೆ. ದುಃಖದ ಸಂಗತಿ ಎಂದರೆ, ವೋಟ್‌ ಬ್ಯಾಂಕ್‌ ರಾಜಕಾರಣ ಮಾಡುತ್ತಿರುವ ಕಾಂಗ್ರೆಸ್‌ ಪಕ್ಷ ತನ್ನ ಸಿಡಬ್ಲ್ಯುಸಿ ನಿರ್ಣಯದಲ್ಲಿ ಉಗ್ರರ ದಾಳಿಯನ್ನು ಸೂಕ್ತ ರೀತಿಯಲ್ಲಿ ಖಂಡಿಸಲು ವಿಫಲವಾಗಿದೆ' ಎಂದು ಆರೋಪಿಸಿದ್ದಾರೆ.

ರಾಯ್‌ಪುರ ಭೇಟಿ ಕುರಿತು ಮಾತನಾಡಿರುವ ಸೂರ್ಯ, ವಿಧಾನಸಭೆ ಚುನಾವಣೆಯಲ್ಲಿ ಯುವ ಮೋರ್ಚಾ ಪಾತ್ರವೇನು ಎಂಬ ಬಗ್ಗೆ ಕಾರ್ಯಕರ್ತರು ಬಿಜೆವೈಎಂ ಕಾರ್ಯಾಗಾರದಲ್ಲಿ ವಿಸ್ತೃತವಾಗಿ ಚರ್ಚಿಸಲಿದ್ದಾರೆ. ಮತದಾರರನ್ನು, ಮುಖ್ಯವಾಗಿ ಮೊದಲ ಬಾರಿ ಮತ ಚಲಾಯಿಸಲಿರುವವರೊಂದಿಗೆ ಕಾರ್ಯಕರ್ತರು ಹೇಗೆ ಸಂಪರ್ಕ ಸಾಧಿಸಲಿದ್ದಾರೆ ಎಂಬುದರ ಬಗ್ಗೆಯೂ ಚರ್ಚೆಯಾಗಲಿದೆ ಎಂದಿದ್ದಾರೆ.

ಛತ್ತೀಸಗಢ ವಿಧಾನಸಭೆಗೆ ನವೆಂಬರ್‌ 7 ಹಾಗೂ 17ರಂದು ಎರಡು ಹಂತದಲ್ಲಿ ಚುನಾವಣೆ ನಿಗದಿಯಾಗಿದೆ. ಡಿಸೆಂಬರ್‌ 3ರಂದು ಮತ ಎಣಿಕೆ ನಡೆಯಲಿದೆ.

ಇಸ್ರೇಲ್‌–ಹಮಾಸ್‌ ಉಗ್ರರ ನಡುವಣ ಬಿಕ್ಕಟ್ಟು ಉಲ್ಬಣಗೊಂಡಿರುವುದರ ನಡುವೆಯೇ ಸೋಮವಾರ ಕಾಂಗ್ರೆಸ್‌ ಕಾರ್ಯಕಾರಿಣಿ ಸಮಿತಿ (ಸಿಡಬ್ಲ್ಯುಸಿ) ಸಭೆ ನಡೆದಿದೆ. ಪ್ಯಾಲೆಸ್ಟೀನ್‌ ಜನರಿಗೆ ನೆಲೆ, ಸ್ವಯಂ ಆಡಳಿತದ ಹಕ್ಕು ಹಾಗೂ ಘನತೆಯ ಬದುಕನ್ನು ಕಲ್ಪಿಸಬೇಕು ಎಂಬ ತನ್ನ ಬಹುಕಾಲದ ನಿಲುವನ್ನು ಸಭೆಯಲ್ಲಿ ಪುನರುಚ್ಚರಿಸಿದೆ. ಹಾಗೆಯೇ, ಇಸ್ರೇಲ್–ಹಮಾಸ್ ನಡುವಿನ ಕದನಕ್ಕೆ ತಕ್ಷಣ ವಿರಾಮ ಘೋಷಿಸಬೇಕು, ಎಲ್ಲ ವಿಷಯಗಳನ್ನು ಮಾತುಕತೆ ಮೂಲಕ ಬಗೆಹರಿಸಿಕೊಳ್ಳಬೇಕು ಎಂಬ ನಿರ್ಣಯ ಕೈಗೊಂಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT