ಗುರುವಾರ, 9 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಯಾವ ಬ್ಯಾಂಕ್ ಖಾತೆಯನ್ನೂ ಸ್ಥಗಿತಗೊಳಿಸಿಲ್ಲ; ಕಾಂಗ್ರೆಸ್ ಆರೋಪ ಸುಳ್ಳು: ಬಿಜೆಪಿ

Published 23 ಮಾರ್ಚ್ 2024, 13:31 IST
Last Updated 23 ಮಾರ್ಚ್ 2024, 13:46 IST
ಅಕ್ಷರ ಗಾತ್ರ

ನವದೆಹಲಿ: ‘ಕಾಂಗ್ರೆಸ್‌ ಬಳಿ ಹಲವು ಬ್ಯಾಂಕ್‌ ಖಾತೆಗಳಿದ್ದು, ಆದಾಯ ತೆರಿಗೆ ಪಾವತಿ ಬಾಕಿ ಉಳಿಸಿಕೊಂಡ ಪ್ರಕರಣದಲ್ಲಿ 3ರಿಂದ 4 ಖಾತೆಗಳನ್ನಷ್ಟೇ ವಶಕ್ಕೆ ಪಡೆಯಲಾಗಿದೆಯೇ ಹೊರತು, ಯಾವುದನ್ನೂ ಸ್ಥಗಿತಗೊಳಿಸಿಲ್ಲ’ ಎಂದು ಬಿಜೆಪಿ ಶನಿವಾರ ಹೇಳಿದೆ.

ಈ ಕುರಿತು ಸುದ್ದಿಗಾರರಿಗೆ ಮಾಹಿತಿ ನೀಡಿದ ಬಿಜೆಪಿ ರಾಷ್ಟ್ರೀಯ ವಕ್ತಾರ ಸಂಬಿತ್ ಪಾತ್ರಾ, ‘ಲೋಕಸಭಾ ಚುನಾವಣೆಯಲ್ಲಿ ಹೀನಾಯ ಸೋಲು ಖಚಿತವಾಗುತ್ತಿದ್ದಂತೆ, ಇಂಥ ಆದಾರ ರಹಿತ ಹಾಗೂ ಜನರನ್ನು ತಪ್ಪು ದಾರಿಗೆ ಎಳೆಯುವ ಹೇಳಿಕೆಗಳನ್ನು ವಿರೋಧ ಪಕ್ಷದ ನಾಯಕರು ನೀಡುತ್ತಿದ್ದಾರೆ’ ಎಂದು ಆರೋಪಿಸಿದ್ದಾರೆ.

‘ಈ ಬ್ಯಾಂಕ್ ಖಾತೆಗಳು ಸದ್ಯ ಕಾರ್ಯಾಚರಣೆಯಲ್ಲಿದ್ದು, ಯಾವುದನ್ನೂ ಸ್ಥಗಿತಗೊಳಿಸಿಲ್ಲ. ಈ ಖಾತೆಗಳಿಗೆ ಹಣ ಹಾಕಲೂ ಬಹುದು, ತೆಗೆಯಲೂ ಬಹುದು. ಆದರೆ ಆದಾಯ ತೆರಿಗೆ ಕಾಯ್ದೆಯಡಿ ತೆರಿಗೆ ಬಾಕಿ ಇರುವ ವಿವಾದಿತ ₹125 ಕೋಟಿಯನ್ನು ಹೊರತುಪಡಿಸಿ ಉಳಿದ ಮೊತ್ತವನ್ನು ತೆಗೆಯಲು ಯಾವುದೇ ನಿರ್ಬಂಧವಿಲ್ಲ’ ಎಂದಿದ್ದಾರೆ.

‘ಮಾಧ್ಯಮಗಳಲ್ಲಿ ವರದಿಯಾಗಿರುವಂತೆ ಕಾಂಗ್ರೆಸ್‌ನ ಹಲವು ಖಾತೆಗಳಲ್ಲಿ ಸುಮಾರು ₹1 ಸಾವಿರ ಕೋಟಿ ಇದೆ. ಇವುಗಳಿಗೆ ಹಲವು ಪ್ಯಾನ್ ಸಂಖ್ಯೆಯನ್ನು ನೀಡಲಾಗಿದೆ. ಇದು ಆ ಪಕ್ಷದ ಸಿದ್ಧಾಂತಕ್ಕೇ ವಿರುದ್ಧವಾದದ್ದು. ಇದರೊಂದಿಗೆ ಅವರ ಸ್ಥಿರಾಸ್ತಿ ಮೊತ್ತ ₹500 ಕೋಟಿಯಷ್ಟಿದೆ’ ಎಂದು ಸಂಬಿತ್ ಹೇಳಿದ್ದಾರೆ.

‘ಬ್ಯಾಂಕ್ ಖಾತೆಗಳನ್ನು ಸ್ಥಗಿತಗೊಳಿಸಿದ್ದರಿಂದ ರೈಲು ಟಿಕೆಟ್ ಪಡೆಯಲೂ ಪಕ್ಷದ ಬಳಿ ಹಣ ಇಲ್ಲದಂತಾಗಿದೆ’ ಎಂಬ ರಾಹುಲ್ ಗಾಂಧಿ ಹೇಳಿಕೆಗೆ ಆಕ್ಷೇಪ ವ್ಯಕ್ತಪಡಿಸಿರುವ ಸಂಬಿತ್ ಪಾತ್ರಾ, ‘ಹಣ ಇಲ್ಲದಿದ್ದರೆ ಖಾಸಗಿ ವಿಮಾನದಲ್ಲಿ ಪ್ರತಿದಿನ ಹೇಗೆ ಪ್ರಯಾಣಿಸುತ್ತಿದ್ದಾರೆ. ಇಂಥ ಪ್ರಕರಣಗಳನ್ನು ರಾಜಕೀಯಗೊಳಿಸುವುದನ್ನು ಬಿಟ್ಟು, ತಾಂತ್ರಿಕವಾದ ಮತ್ತು ಸರಿಯಾದ ಆರೋಪ ಮಾಡಬೇಕು’ ಎಂದಿದ್ದಾರೆ.

ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಪಕ್ಷದ ಮುಖಂಡರಾದ ಸೋನಿಯಾ ಗಾಂಧಿ ಮತ್ತು ರಾಹುಲ್ ಗಾಂಧಿ ಅವರು ಸುದ್ದಿಗೋಷ್ಠಿ ನಡೆಸಿ ಆರೋಪ ಮಾಡಿದ್ದಾರೆ. ಮತ್ತೊಂದೆಡೆ ತಮ್ಮ ಆರೋಪಗಳಿಗೆ ಪ್ರತಿಯಾಗಿ ನಿರೀಕ್ಷಣಾ ಜಾಮೀನನ್ನೂ ನ್ಯಾಯಾಲಯದಿಂದ ಪಡೆದಿದ್ದಾರೆ. ಇವೆಲ್ಲವೂ ಲೋಕಸಭಾ ಚುನಾವಣೆಯಲ್ಲಿ ಅವರ ಸೋಲಿನ ಭೀತಿಯನ್ನು ತೋರಿಸುತ್ತದೆ’ ಎಂದು ಆರೋಪಿಸಿದ್ದಾರೆ.

ಚುನಾವಣೆಯಲ್ಲಿ ಸ್ಪರ್ಧೆಗೆ ಎಲ್ಲರಿಗೂ ಸರಿಸಮವಾದ ಕಣವಿರಬೇಕು ಎಂಬ ಹೇಳಿಕೆಗೆ ಪ್ರತಿಕ್ರಿಯಿಸಿದ ಪಾತ್ರಾ, ‘ಪೊಲೀಸರು ಮತ್ತು ಡಕಾಯಿತರಿಗೆ ಒಂದೇ ರೀತಿಯ ಕದನ ಕಣ ಇರಲು ಹೇಗೆ ಸಾಧ್ಯ. ಭ್ರಷ್ಟಾಚಾರದ ಕಣದಲ್ಲಿರುವವರಿಗೆ ಸರಿಸಮನಾದ ಕದನ ಕಣ ಬೇಕೇ? ಒಬ್ಬರು ಭ್ರಷ್ಟಚಾರವನ್ನು ಒಪ್ಪಿಕೊಂಡು ಹಲವು ಹಗರಣಗಳನ್ನು ಮಾಡುತ್ತಾ ಸಾಗುತ್ತಿದ್ದರೆ, ಅವರ ವಿರುದ್ಧ ಕ್ರಮ ಕೈಗೊಳ್ಳುವ ಮತ್ತೊಂದು ತಂಡ ಕೆಲಸ ಮಾಡಲೇಬೇಕಾಗುತ್ತದೆ. ಒಂದೊಮ್ಮೆ ಸರಿಸಮನಾದ ಕಣ ಬೇಕೆಂದಾದರೆ, ಅಭಿವೃದ್ಧಿಯ ಕಣದಲ್ಲಿ ಹೋರಾಡುವುದನ್ನು ಕಲಿಯಿರಿ’ ಎಂದು ವಿರೋಧಪಕ್ಷದವರ ವಿರುದ್ಧ ಹರಿಹಾಯ್ದಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT