ಇಂಫಾಲ್, ಗುವಾಹಟಿ: ರಾಜ್ಯದಲ್ಲಿ ಇತ್ತೀಚಿಗೆ ನಡೆದ ಡ್ರೋನ್ ದಾಳಿಯನ್ನು ಖಂಡಿಸಿ ಮಂಗಳವಾರವೂ ವಿದ್ಯಾರ್ಥಿಗಳು ಹಿಂಸಾತ್ಮಕ ಪ್ರತಿಭಟನೆ ನಡೆಸುವ ಸಾಧ್ಯತೆ ಹಿನ್ನೆಲೆಯಲ್ಲಿ ಮೈತೇಯಿ ಸಮುದಾಯದ ಪ್ರಾಬಲ್ಯವಿರುವ ತೌಬಲ್, ಇಂಫಾಲ್ ಪೂರ್ವ ಮತ್ತು ಇಂಫಾಲ್ ಪಶ್ಚಿಮ ಜಿಲ್ಲೆಗಳಲ್ಲಿ ಕರ್ಫ್ಯೂ ಜಾರಿಗೊಳಿಸಿ ಮಣಿಪುರ ಸರ್ಕಾರ ಆದೇಶ ಹೊರಡಿಸಿದೆ.
ಮಂಗಳವಾರ ಬೆಳಗ್ಗೆ 11 ಗಂಟೆಯಿಂದ ಮುಂದಿನ ಆದೇಶದವರೆಗೆ ಕರ್ಫ್ಯೂ ಜಾರಿಯಲ್ಲಿರುತ್ತದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ರಾಜಭವನ, ಮುಖ್ಯಮಂತ್ರಿ ನಿವಾಸದ ಸಮೀಪ ಪ್ರತಿಭಟನೆ ನಡೆಸುತ್ತಿದ್ದವರ ಮೇಲೆ ಸೋಮವಾರ ಭದ್ರತಾ ಪಡೆಗಳು ಹಲವು ಸುತ್ತಿನ ಅಶ್ರುವಾಯು ಪ್ರಯೋಗಿಸಿ, ಗುಂಪು ಚದುರಿಸಿದ್ದವು.
ಸುಮಾರು 3 ಕಿ.ಮೀ ಉದ್ದ ಸಾಗಿಬಂದ ಪ್ರತಿಭಟನಾಕಾರರನ್ನು ಪೊಲೀಸರು ತಡೆದಿದ್ದರು. ಪೊಲೀಸ್ ಇಲಾಖೆಯ ಕೇಂದ್ರ ಕಚೇರಿ, ರಾಜ್ಯ ಸಚಿವಾಲಯ ಹಾಗೂ ಬಿಜೆಪಿ ಕಚೇರಿ ಸಮೀಪ ಭಾರಿ ಸಂಖ್ಯೆಯಲ್ಲಿ ಪ್ರತಿಭಟನಕಾರರು ಜಮಾಯಿಸಿದ್ದರು. ಗುಂಪು ಚದುರಿಸಲು ಅಶ್ರುವಾಯು ಪ್ರಯೋಗಿಸಿದ್ದರು.
ವಿದ್ಯಾರ್ಥಿಗಳು ಮುಖ್ಯಮಂತ್ರಿ ಎನ್.ಬಿರೇನ್ ಸಿಂಗ್, ರಾಜ್ಯಪಾಲ ಎಲ್. ಆಚಾರ್ಯ ಅವರನ್ನು ಭೇಟಿಯಾಗಿ ಮನವಿ ಸಲ್ಲಿಸಿದ್ದರು.
ಪಶ್ಚಿಮ ಇಂಫಾಲ್ ಜಿಲ್ಲೆಯ ಕೌಟ್ರಕ್ ಗ್ರಾಮದಲ್ಲಿ ಸೆ.1ರಂದು ರಿಮೋಟ್ ನಿಯಂತ್ರಿತ ಡ್ರೋನ್ ದಾಳಿಯಿಂದ ಇಬ್ಬರು ಮೃತಪಟ್ಟು, 9 ಮಂದಿ ಗಾಯಗೊಂಡಿದ್ದರು. ಮರುದಿನ ಸೆಂಜಮ್ ಚಿರಾಂಗ್ ಗ್ರಾಮದಲ್ಲಿ ಮತ್ತೆ ಡ್ರೋನ್ ಮೂಲಕ ದಾಳಿ ನಡೆದಿದ್ದರಿಂದ ಮೂವರು ಗಾಯಗೊಂಡಿದ್ದರು.
ಕುಕಿ ಮತ್ತು ಮೈತೇಯಿ ಜನಾಂಗಗಳ ನಡುವೆ ಸಂಘರ್ಷ ಆರಂಭವಾದಾಗಿನಿಂದ 226 ಜನರು ಮೃತಪಟ್ಟಿದ್ದು, 60,000ಕ್ಕೂ ಹೆಚ್ಚು ಜನರು ಸ್ಥಳಾಂತರಗೊಂಡಿದ್ದಾರೆ.
ಕರ್ಫ್ಯೂ ಆದೇಶ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.