ಶನಿವಾರ, 15 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ರೀಮಲ್‌‘ ಚಂಡಮಾರುತದ ಅಬ್ಬರ: 2 ಲಕ್ಷ ಜನ ಅತಂತ್ರ

ಪಶ್ಚಿಮ ಬಂಗಾಳದಲ್ಲಿ 6, ನೆರೆಯ ಬಾಂಗ್ಲಾದಲ್ಲಿ 10 ಸಾವು; ಆಸ್ತಿಗೆ ಭಾರಿ ಹಾನಿ
Published 28 ಮೇ 2024, 1:05 IST
Last Updated 28 ಮೇ 2024, 1:05 IST
ಅಕ್ಷರ ಗಾತ್ರ

ಕೋಲ್ಕತ್ತ (ಪಿಟಿಐ/ರಾಯಿಟರ್ಸ್‌): ಬಂಗಾಳ ಕೊಲ್ಲಿಯಲ್ಲಿ ಕಾಣಿಸಿಕೊಂಡಿರುವ ‘ರೀಮಲ್‌’ ಚಂಡಮಾರುತವು ಪಶ್ಚಿಮ ಬಂಗಾಳದ ಕರಾವಳಿ ಪ್ರದೇಶ ಹಾಗೂ ನೆರೆಯ ಬಾಂಗ್ಲಾ ದೇಶದಲ್ಲಿ ಭಾರಿ ಹಾನಿ ಉಂಟು ಮಾಡಿದೆ. 16 ಮಂದಿ ಮೃತಪಟ್ಟಿದ್ದಾರೆ.

‘ಪಶ್ಚಿಮ ಬಂಗಾಳದಲ್ಲಿ ಆರು ಮಂದಿ ಸತ್ತಿದ್ದಾರೆ. 2.07 ಲಕ್ಷ ಜನ ಅತಂತ್ರರಾಗಿದ್ದಾರೆ. ಗಾಳಿಯ ವೇಗ ಗಂಟೆಗೆ 135 ಕಿ.ಮೀ. ಇದ್ದು. 15 ಸಾವಿರ ಮನೆಗಳು ಜಖಂಗೊಂಡಿವೆ’ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ನೆರೆಯ ಬಾಂಗ್ಲಾದಲ್ಲಿ 10 ಮಂದಿ ಸತ್ತಿದ್ದಾರೆ. ಅಲ್ಲಿನ ಕರಾವಳಿ ಭಾಗದ ಬಹುತೇಕ ಗ್ರಾಮಗಳಲ್ಲಿ ವಿದ್ಯುತ್ ಪೂರೈಕೆಯಲ್ಲಿ ‌ವ್ಯತ್ಯಯವಾಗಿದೆ. ಸುಮಾರು 15 ಲಕ್ಷ ಜನರಿಗೆ ಸಮಸ್ಯೆಯಾಗಿದೆ ಎಂದು ಆ ದೇಶದ ಪ್ರಾಕೃತಿಕ ವಿಕೋಪ ನಿರ್ವಹಣಾ ಮುಖ್ಯಸ್ಥ ಮಿಜಾನುರ್ ರೆಹಮಾನ್‌ ತಿಳಿಸಿದ್ದಾರೆ.

24 ಬ್ಲಾಕ್‌ಗಳಲ್ಲಿ ಪರಿಣಾಮ: ಪಶ್ಚಿಮ ಬಂಗಾಳದಲ್ಲಿ ‘ರೀಮಲ್‌’ ಪರಿಣಾಮವು 24 ಬ್ಲಾಕ್‌ಗಳಲ್ಲಿ ಕಾಣಿಸಿಕೊಂಡಿದೆ. ಪ್ರಾಥಮಿಕ ವರದಿಗಳ ಪ್ರಕಾರ, 2,140 ಮರಗಳು, 337 ವಿದ್ಯುತ್ ಕಂಬಗಳು ಉರುಳಿವೆ. 14,941 ಮನೆಗಳು ಜಖಂಗೊಂಡಿವೆ ಎಂದು ರಾಜ್ಯ ಸರ್ಕಾರ ತಿಳಿಸಿದೆ.

ಈ ಪೈಕಿ ಒಟ್ಟು 1,003 ಮನೆಗಳು ಪೂರ್ಣವಾಗಿ ನಾಶವಾಗಿವೆ. ನಷ್ಟದ ಅಂದಾಜು ಹಾಗೂ ರಕ್ಷಣಾ ಕಾರ್ಯ ತ್ವರಿತಗತಿಯಲ್ಲಿ ನಡೆದಿದೆ. ಹಾನಿ ಪ್ರಮಾಣ ಏರಿಕೆಯಾಗಬಹುದು ಎಂದು ಅಧಿಕಾರಿಯೊಬ್ಬರು ತಿಳಿಸಿದರು.

ಮುಂಜಾಗ್ರತೆಯಾಗಿ 2.07 ಲಕ್ಷ ಜನರನ್ನು ಸ್ಥಳಾಂತರಿಸಲಾಗಿದೆ. 1,438 ನಿರಾಶ್ರಿತ ಶಿಬಿರಗಳಲ್ಲಿ 77,288 ಜನರು ಸದ್ಯ ಆಶ್ರಯ ಪಡೆದಿದ್ದಾರೆ. ನಿವಾಸಿಗಳಿಗೆ ಅಗತ್ಯ ಸೌಲಭ್ಯಗಳನ್ನು ಒದಗಿಸಲಾಗಿದೆ ಎಂದು ವಿವರಿಸಿದ್ದಾರೆ.

ಪಶ್ಚಿಮ ಬಂಗಾಳದಲ್ಲಿ ಕಾಕ್ಡ್‌ವಿಪ್‌, ನಮ್ಖಾನಾ, ಸಾಗರ್ದ್ ದ್ವೀಪ, ಡೈಮಂಡ್‌ ಹಾರ್ಬರ್, ಫ್ರಸೇರ್‌ಗಂಜ್‌, ಬಖ್ಖಾಲಿ, ಮಂದಾರ್‌ಮನಿ ಪ್ರದೇಶಗಳಲ್ಲಿ ಸಮಸ್ಯೆ ಹೆಚ್ಚಾಗಿದೆ. ಭಾರಿ ಮಳೆ, ಗಾಳಿಯಿಂದ ಮನೆಗಳಿಗೆ ಹಾನಿ ಜೊತೆಗೆ ಮೂಲಸೌಲಭ್ಯಗಳು ಹಾಳಾಗಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

‘ರೀಮಲ್’ ಎಂದರೆ...
ಢಾಕಾ: ಬಂಗಾಳ ಕೊಲ್ಲಿಯಲ್ಲಿ ಮುಂಗಾರು ಪೂರ್ವದಲ್ಲಿ ಕಾಣಿಸಿಕೊಂಡಿರುವ ಈ ಹಂಗಾಮಿನ ಮೊದಲ ಚಂಡಮಾರುತ ಇದಾಗಿದೆ. ಇದಕ್ಕೆ ‘ರೀಮಲ್‌’ ಎಂದು ಒಮಾನ್‌ ಹೆಸರಿಸಿದೆ. ರೀಮಲ್‌ ಎಂಬುದು ಅರೇಬಿಕ್‌ ಪದ. ಇದರ ಅರ್ಥ ‘ಮರಳು’ ಎಂಬುದಾಗಿದೆ ಎಂದು ಹಿಂದೂ ಮಹಾಸಾಗರ ವಲಯದಲ್ಲಿ ಚಂಡಮಾರುತಗಳಿಗೆ ಹೆಸರು ಸೂಚಿಸುವ ವ್ಯವಸ್ಥೆಯು ಮಾಹಿತಿ ನೀಡಿದೆ.

ವಿಮಾನಗಳ ಮಾರ್ಗ ಬದಲು: ಪ್ರತಿಕೂಲ ಹವಾಮಾನದಿಂದಾಗಿ ಕೋಲ್ಕತ್ತ ನಿಲ್ದಾಣದಲ್ಲಿ ಇಳಿಯಬೇಕಾಗಿದ್ದ 8 ವಿಮಾನಗಳ ಮಾರ್ಗ ಬದಲಿಸಿ, ಗಯಾ, ಗುವಾಹಟಿ, ವಾರಾಣಸಿ, ಭುವನೇಶ್ವರ ನಿಲ್ದಾಣಗಳಲ್ಲಿ ಇಳಿಸಲಾಗಿ‌ದೆ. ವಿಮಾನ ನಿಲ್ದಾಣದ ಸೇವೆಯನ್ನು 21 ಗಂಟೆ ಸ್ಥಗಿತಗೊಳಿಸಲಾಗಿತ್ತು ಎಂದು ಆಧಿಕಾರಿಗಳು ವಿವರಿಸಿದ್ದಾರೆ. 

ರೀಮಲ್ ಚಂಡಮಾರುತದಿಂದ ಕೋಲ್ಕತ್ತದ ವಿಮಾನ ನಿಲ್ದಾಣದಲ್ಲಿ ಯಾವುದೇ ಹಾನಿ ಸಂಭವಿಸಿಲ್ಲ ಹಾಗೂ ವಿಮಾನ ನಿರ್ವಹಣಾ ಆವರಣ, ರನ್‌ವೇನಲ್ಲಿ ನೀರು ಸಂಗ್ರಹವಾಗಿಲ್ಲ ಎಂದೂ ಮಾಹಿತಿ ನೀಡಿದ್ದಾರೆ.

ಮುಂಜಾಗ್ರತೆ ವಹಿಸಿ ಅಗತ್ಯ ರಕ್ಷಣಾ ಕ್ರಮ ಕೈಗೊಂಡಿದ್ದರಿಂದ ಚಂಡಮಾರುತದ ಹಾನಿ ಕಡಿಮೆಯಾಗಿದೆ. ಬಾಧಿತರಿಗೆ ತಕ್ಷಣದಲ್ಲಿ ಅಗತ್ಯ ನೆರವು ಹಾಗೂ ಬೆಳೆ ಆಸ್ತಿ ಹಾನಿ ಪ್ರಕರಣಗಳಲ್ಲಿ ನಿಯಮಾನುಸಾರ ಪರಿಹಾರ ಒದಗಿಸಲಾಗುವುದು.
–ಮಮತಾ ‌ಬ್ಯಾನರ್ಜಿ, ಮುಖ್ಯಮಂತ್ರಿ ಪಶ್ಚಿಮ ಬಂಗಾಳ

ಬಾಂಗ್ಲಾ: ವಿದ್ಯುತ್ ವ್ಯತ್ಯಯ1.5 ಕೋಟಿ ಜನರಿಗೆ ಸಮಸ್ಯೆ

ಢಾಕಾ: ಚಂಡಮಾರುತ ‘ರೀಮಲ್‌’ನಿಂದಾಗಿ ಬಾಂಗ್ಲಾದ ಕರಾವಳಿ ಪ್ರದೇಶದಲ್ಲಿ ತೀವ್ರ ಹಾನಿಯಾಗಿದೆ.  ಗಾಳಿಯ ವೇಗ ಆರಂಭದಲ್ಲಿ ಗಂಟೆಗೆ 120 ಕಿ.ಮೀ ಇದ್ದು ನೂರಾರು ಗ್ರಾಮಗಳಲ್ಲಿ ಜನಜೀವನದ ಮೇಲೆ ಪರಿಣಾಮ ಬೀರಿದೆ.  ವಿದ್ಯುತ್ ಸಂಪರ್ಕ ವ್ಯವಸ್ಥೆಯ ಮೇಲೆ ಪ್ರತಿಕೂಲ ಪರಿಣಾಮ ಬೀರಿದೆ. ಸುಮಾರು 1.5 ಕೋಟಿ ಜನರು ವಿದ್ಯುತ್‌ ಸಂಪರ್ಕದಿಂದ ವಂಚಿತರಾಗಿದ್ದಾರೆ.

‘ಸೋಮವಾರದಂದು ಗಾಳಿಯ ವೇಗವು ಗಂಟೆಗೆ 80–90 ಕಿ.ಮೀಗೆ ತಗ್ಗಿದೆ’ ಎಂದು ಹವಾಮಾನ ಇಲಾಖೆಯು ತಿಳಿಸಿದೆ. ಚಂಡಮಾರುತದಿಂದಾಗಿ ಧಾರಾಕಾರ ಮಳೆಯಾಗಿದೆ. ಸದ್ಯ ಚಂಡಮಾರುತ ತುಸು ದುರ್ಬಲಗೊಂಡಿದೆ. ಇದರ ಪರಿಣಾಮವು ಪ್ರಮುಖವಾಗಿ ಬಾಂಗ್ಲಾದ ಬರಿಸಲ್ ಭೋಲಾ ಪಟುವಾಖಾಲಿ ಸತ್ಖಿರಾ ಮತ್ತು ಛಟ್ಟೊಗ್ರಾಂ ವ್ಯಾಪ್ತಿಯಲ್ಲಿ ಕಾಣಿಸಿಕೊಂಡಿದೆ. ಗ್ರಾಮೀಣ ಭಾಗದಲ್ಲಿ ವಿದ್ಯುತ್ ಪೂರೈಕೆ ಬಹುತೇಕ ವ್ಯತ್ಯಯವಾಗಿದೆ. ಚಂಡಮಾರುತವು ಸದ್ಯ ಬಾಂಗ್ಲಾದ ಖುಲ್ನಾದ ಕೋಯ್ರಾ ಗ್ರಾಮ ವ್ಯಾಪ್ತಿಯಲ್ಲಿ ಸಕ್ರಿಯವಾಗಿದೆ. ಉತ್ತರಾಭಿಮುಖವಾಗಿ ಸಾಗುತ್ತಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ. 

ಚಂಡಮಾರುತದ ಹಾದಿ

  • ಪಶ್ಚಿಮ ಬಂಗಾಳ, ಬಾಂಗ್ಲಾದೇಶದ ಕರಾವಳಿ ಭಾಗದಲ್ಲಿ ಅಪ್ಪಳಿಸಿದ ಚಂಡಮಾರುತ

  • ಮಂಗಳವಾರ ಈಶಾನ್ಯ ದಿಕ್ಕಿನತ್ತ ಸಾಗುವ ಅಂದಾಜು

  • ಸೋಮವಾರ ಇದ್ದ ಗಾಳಿಯ ವೇಗ ಗಂಟೆಗೆ 111ರಿಂದ 150 ಕಿ.ಮೀ.

  • ಮಂಗಳವಾರ ಗಾಳಿಯ ವೇಗ ಗಂಟೆಗೆ 60–90 ಕಿ.ಮೀಗೆ ತಗ್ಗುವ ನಿರೀಕ್ಷೆ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT