ಸೋಮವಾರ, 17 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅತ್ಯಾಚಾರ ಬೆದರಿಕೆ: ಸ್ಕ್ರೀನ್‌ಶಾಟ್ ಹಂಚಿಕೊಂಡು AAP ವಿರುದ್ಧ ಗುಡುಗಿದ ಮಾಲಿವಾಲ್

Published 26 ಮೇ 2024, 13:36 IST
Last Updated 26 ಮೇ 2024, 13:36 IST
ಅಕ್ಷರ ಗಾತ್ರ

ನವದೆಹಲಿ: ತಮಗೆ ಅತ್ಯಾಚಾರ ಮತ್ತು ಕೊಲೆ ಬೆದರಿಕೆ ಎದುರಾಗಿದೆ ಎಂದು ಆಮ್‌ ಆದ್ಮಿ ಪಕ್ಷದ (ಎಎಪಿ) ರಾಜ್ಯಸಭಾ ಸದಸ್ಯೆ ಸ್ವಾತಿ ಮಾಲಿವಾಲ್ ಕಳವಳ ವ್ಯಕ್ತಪಡಿಸಿದ್ದಾರೆ.

ಸಾಮಾಜಿಕ ಮಾಧ್ಯಮಗಳಲ್ಲಿ ಬಂದಿರುವ ಆಕ್ಷೇಪಾರ್ಹ ಸಂದೇಶಗಳ ಸ್ಕ್ರೀನ್‌ಶಾಟ್‌ಗಳನ್ನು ಎಕ್ಸ್‌/ಟ್ವಿಟರ್‌ನಲ್ಲಿ ಹಂಚಿಕೊಂಡಿರುವ ಸ್ವಾತಿ, ತಮ್ಮದೇ ಪಕ್ಷದ ನಾಯಕರು ಹಾಗೂ ಕಾರ್ಯಕರ್ತರು ತಮ್ಮ ಚಾರಿತ್ರ್ಯಕ್ಕೆ ಮಸಿ ಬಳಿಯುತ್ತಿದ್ದಾರೆ. ಯುಟ್ಯೂಬರ್‌ ಧ್ರುವ್‌ ರಾಠೆ ತಮ್ಮ ವಿರುದ್ಧ ದ್ವೇಷ ಹರಡುತ್ತಿದ್ದಾರೆ ಎಂದು ದೂರಿದ್ದಾರೆ.

'ನನ್ನದೇ ಪಕ್ಷದ, ಅಂದರೆ ಎಎಪಿ ನಾಯಕರು ಹಾಗೂ ಕಾರ್ಯಕರ್ತರು ನನ್ನ ಚಾರಿತ್ರ್ಯಕ್ಕೆ ಮಸಿ ಬಳಿಯುವ, ಸಂತ್ರಸ್ತೆಯನ್ನು ಅವಮಾನಿಸುವ ಹಾಗೂ ಜನರ ಭಾವನೆಗಳನ್ನು ಕೆರಳಿಸುವಂತಹ ಅಭಿಯಾನ ನಡೆಸಿದ ಬಳಿಕ, ನನಗೆ ಕೊಲೆ ಮತ್ತು ಅತ್ಯಾಚಾರದ ಬೆದರಿಕೆ ಎದುರಾಗಿದೆ. ಯುಟ್ಯೂಬರ್‌ ಧ್ರುವ್‌ ರಾಠೆ ಅವರು ನನ್ನ ವಿರುದ್ಧ ಏಕಪಕ್ಷೀಯವಾದ ಅವಹೇಳನಕಾರಿ ವಿಡಿಯೊಗಳನ್ನು ಹಂಚಿಕೊಂಡ ನಂತರ ಅದು ಮತ್ತಷ್ಟು ಹೆಚ್ಚಾಗಿದೆ' ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ದೆಹಲಿ ಮಹಿಳಾ ಆಯೋಗದ (ಡಿಸಿಡಬ್ಲ್ಯು) ಮುಖ್ಯಸ್ಥೆಯೂ ಆಗಿರುವ ಮಾಲಿವಾಲ್‌, ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಹಾಗೂ ಅವರ ಆಪ್ತ ಸಹಾಯಕ ಬಿಭವ್‌ ಕುಮಾರ್‌ ವಿರುದ್ಧ ನೀಡಿರುವ ಪ್ರಕರಣವನ್ನು ಹಿಂಪಡೆಯುವಂತೆ ಪಕ್ಷದ ನಾಯಕತ್ವ ಒತ್ತಡ ಹೇರುತ್ತಿದೆ ಎಂದು ಆರೋಪಿಸಿದ್ದಾರೆ.

'ನನ್ನ ನಿಲುವನ್ನು ಸ್ಪಷ್ಟಪಡಿಸುವುದಕ್ಕಾಗಿ ಧ್ರುವ್‌ ಅವರನ್ನು ಸಂಪರ್ಕಿಸಲು ಸಾಧ್ಯವಾದಮಟ್ಟಿಗೆ ಪ್ರಯತ್ನಿಸಿದ್ದೇನೆ. ಆದರೆ, ಅವರು ನನ್ನ ಕರೆ ಅಥವಾ ಸಂದೇಶಗಳಿಗೆ ಉತ್ತರಿಸುತ್ತಿಲ್ಲ. ತಮ್ಮನ್ನು ತಾವು ಸ್ವತಂತ್ರ ಪತ್ರಕರ್ತರು ಎಂದು ಹೇಳಿಕೊಳ್ಳುವ ಇಂತಹ ವ್ಯಕ್ತಿಗಳು, ಎಎಪಿಯ ವಕ್ತಾರರಂತೆ ವರ್ತಿಸುತ್ತಿದ್ದಾರೆ' ಎಂದು ಕಿಡಿಕಾರಿದ್ದಾರೆ.

'ಧ್ರುವ್‌ ಅವರು ಹಂಚಿಕೊಂಡಿರುವ ವಿಡಿಯೊದಲ್ಲಿ ವಾಸ್ತವ ವಿಚಾರಗಳನ್ನು ಕೈಬಿಡಲಾಗಿದೆ' ಎಂದು ಆರೋಪಿಸಿರುವ ಮಾಲಿವಾಲ್‌, ಕೆಲವು ಅಂಶಗಳನ್ನು ಪಟ್ಟಿಮಾಡಿದ್ದಾರೆ.

'1. ಘಟನೆ ನಡೆದಿರುವುದನ್ನು ಒಪ್ಪಿಕೊಂಡಿದ್ದ ಪಕ್ಷ, ಬಳಿಕ ಯೂಟರ್ನ್‌ ಹೊಡೆದಿದೆ. 2. ಹಲ್ಲೆಯಿಂದಾಗಿ ಗಾಯವಾಗಿರುವುದು ವಿಧಾನ ಪರಿಷತ್ ಸದಸ್ಯರ ವರದಿಯಿಂದ ಬಹಿರಂಗವಾಗಿದೆ. 3. ನೈಜ ವಿಡಿಯೊದಲ್ಲಿನ ಆಯ್ದ ಕೆಲವು ಭಾಗವನ್ನಷ್ಟೇ ಪ್ರಕಟಿಸಲಾಗಿದೆ. 4. ಆರೋಪಿಯನ್ನು ಅಪರಾಧ ಕೃತ್ಯ ಸಂಬಂಧ ಬಂಧಿಸಲಾಗಿತ್ತು. ಆದರೆ, ಆತ ಮತ್ತೆ ಘಟನಾ ಸ್ಥಳಕ್ಕೆ ತೆರಳಲು ಅವಕಾಶ ನೀಡಿದ್ದೇಕೆ? ಸಾಕ್ಷ್ಯ ನಾಶ ಮಾಡುವುದಕ್ಕಾ? 5. ಸದಾ ಸರಿಯಾದ ವಿಚಾರಗಳ ಪರ ನಿಲ್ಲುವ, (ಹಿಂಸಾಚಾರ ಪೀಡಿತ) ಮಣಿಪುರಕ್ಕೂ ಯಾವುದೇ ಭದ್ರತೆ ಇಲ್ಲದೆ ಏಕಾಂಗಿಯಾಗಿ ಹೋಗಿದ್ದ ಮಹಿಳೆಯನ್ನು ಬಿಜೆಪಿಯವರು ಖರೀದಿಸಲು ಹೇಗೆ ಸಾಧ್ಯ?' ಎಂದು ಕೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT