ಭಾನುವಾರ, 1 ಅಕ್ಟೋಬರ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಯಮುನಾ ನದಿ ನೀರಿನ ಮಟ್ಟ ಏರಿಕೆ; ದೆಹಲಿಯಲ್ಲಿ ಕಟ್ಟೆಚ್ಚರ

Published 11 ಜುಲೈ 2023, 7:19 IST
Last Updated 11 ಜುಲೈ 2023, 7:19 IST
ಅಕ್ಷರ ಗಾತ್ರ

ನವದೆಹಲಿ: ಯಮುನಾ ನದಿ ನೀರಿನ ಮಟ್ಟ 206.24 ಮೀಟರ್‌ಗೆ ಏರಿಕೆಯಾಗಿದ್ದು, ಅಪಾಯಕಾರಿ ಮಟ್ಟ ತಲುಪಿದೆ. ದೆಹಲಿಯಲ್ಲಿ ಹೈ ಅಲರ್ಟ್‌ ಘೋಷಿಸಲಾಗಿದೆ ಎಂದು ಕೇಂದ್ರ ಜಲ ಆಯೋಗ (ಸಿಡಬ್ಲ್ಯುಸಿ) ತಿಳಿಸಿದೆ.

ಸಿಡಬ್ಲ್ಯುಸಿ ಮಾಹಿತಿ ಪ್ರಕಾರ, ಅಪಾಯಕಾರಿ ಮಟ್ಟ 205.33 ಮೀಟರ್ ಆಗಿದೆ. ಹರಿಯಾಣದ ಯಮುನಾ ನಗರ್‌ ಜಿಲ್ಲೆಯಲ್ಲಿರುವ ಹಥಿನಿಕುಂಡ್‌ ಬ್ಯಾರೇಜ್‌ನಿಂದ ಮಂಗಳವಾರ (ಇಂದು) ಬೆಳಗ್ಗೆ 8ರ ಹೊತ್ತಿಗೆ 3.21 ಲಕ್ಷ ಕ್ಯೂಸೆಕ್‌ ನೀರನ್ನು ಹೊರ ಬಿಡಲಾಗಿದೆ.

ಸಿಡಬ್ಲ್ಯುಸಿ ಜೊತೆ ನಿರಂತರ ಸಂಪರ್ಕದಲ್ಲಿರುವುದಾಗಿ ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ತಿಳಿಸಿದ್ದಾರೆ.

'ತಜ್ಞರ ಪ್ರಕಾರ ಪ್ರವಾಹ ಪರಿಸ್ಥಿತಿ ಇಲ್ಲ. ಒಂದು ವೇಳೆ ಅಂತಹ ಸ್ಥಿತಿ ಎದುರಾದರೆ ಸನ್ನದ್ಧರಾಗಿದ್ದೇವೆ. ನೀರಿನ ಮಟ್ಟ 206 ಮೀಟರ್‌ಗೆ ಏರಿಕೆಯಾದರೆ, ಜನರನ್ನು ಸ್ಥಳಾಂತರಿಸುವ ಕಾರ್ಯ ಆರಂಭಿಸುತ್ತೇವೆ. ನದಿ ತೀರದಲ್ಲಿ ವಾಸಿಸುವ 41 ಸಾವಿರ ಜನರನ್ನು ಗುರುತಿಸಲಾಗಿದ್ದು, ಅವರಿಗಾಗಿ ಪರಿಹಾರ ಶಿಬಿರಗಳನ್ನು ತೆರೆಯಲಾಗಿದೆ' ಎಂದು ಕೇಜ್ರಿವಾಲ್ ಹೇಳಿದ್ದಾರೆ.

ಜುಲೈ 9ರಂದು 45 ಸಾವಿರ ಕ್ಯುಸೆಕ್‌ ನೀರನ್ನು ಹಥಿನಿಕುಂಡ್‌ ಬ್ಯಾರೇಜ್‌ನಿಂದ ಯಮುನಾ ನದಿಗೆ ಹರಿಬಿಡಲಾಗಿತ್ತು. ಕಳೆದ (ಜು.10 ಸೋಮವಾರ) ರಾತ್ರಿ ಹೆಚ್ಚುವರಿಯಾಗಿ 3 ಲಕ್ಷ ಮತ್ತು ಇಂದು ಬೆಳಗ್ಗೆ 2.5 ಲಕ್ಷ ಕ್ಯೂಸೆಕ್‌ ನೀರನ್ನು ಬಿಡುಗಡೆ ಮಾಡಲಾಗಿದೆ.

ಇದೇ ಬ್ಯಾರೇಜ್‌ನಿಂದ 1978ರಲ್ಲಿ 3.21 ಲಕ್ಷ ಕ್ಯೂಸೆಕ್‌ ನೀರನ್ನು ಹೊರಬಿಟ್ಟ ಪರಿಣಾಮ ಯಮುನಾ ನದಿ ನೀರಿನ ಮಟ್ಟ 207.49ಕ್ಕೆ ತಲುಪಿತ್ತು. ಅದರಿಂದ ಉಂಟಾಗಿದ್ದ ಪ್ರವಾಹಕ್ಕೆ ದೆಹಲಿ ಸಾಕ್ಷಿಯಾಗಿತ್ತು.

2013ರಲ್ಲಿ 8 ಲಕ್ಷ ಕ್ಯೂಸೆಕ್‌ ನೀರನ್ನು ಹೊರಬಿಟ್ಟದ್ದರಿಂದ ಯಮುನಾ ಮಟ್ಟ 207.32ಕ್ಕೆ ತಲುಪಿತ್ತು. 2019ರಲ್ಲಿ  8.28 ಲಕ್ಷ ಕ್ಯೂಸೆಕ್‌ ನೀರನ್ನು ಹೊರಬಿಡಲಾಗಿ ನೀರಿನ ಮಟ್ಟ 206.6ಕ್ಕೆ ತಲುಪಿತ್ತು. ಆದರೆ ಈ ಎರಡೂ ಸಂದರ್ಭದಲ್ಲಿ ಪ್ರವಾಹ ಸ್ಥಿತಿ ಎದುರಾಗಿರಲಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT