ಮಂಗಳವಾರ, 18 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಾಲಿವಾಲ್ ಪ್ರಕರಣ:ಇಂದು ಕೇಜ್ರಿವಾಲ್ ಪೋಷಕರ ವಿಚಾರಣೆ ನಡೆಸದಿರಲು ಪೊಲೀಸರ ನಿರ್ಧಾರ

Published 23 ಮೇ 2024, 8:10 IST
Last Updated 23 ಮೇ 2024, 8:10 IST
ಅಕ್ಷರ ಗಾತ್ರ

ನವದೆಹಲಿ: ಎಎಪಿ ಸಂಸದೆ ಸ್ವಾತಿ ಮಾಲಿವಾಲ್ ಮೇಲಿನ ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಇಂದು ದೆಹಲಿ ಸಿಎಂ ಅರವಿಂದ ಕೇಜ್ರಿವಾಲ್ ಅವರ ತಂದೆ, ತಾಯಿಯ ವಿಚಾರಣೆಗೆ ಇಂದು ದೆಹಲಿ ಪೊಲೀಸರು ಅವರ ಮನೆಗೆ ಭೇಟಿ ನೀಡುವುದಿಲ್ಲ ಎಂದು ಮೂಲಗಳು ತಿಳಿಸಿವೆ.

ದೆಹಲಿ ಪೊಲೀಸರು ನಾಳೆ ನನ್ನ ವೃದ್ಧ ಮತ್ತು ಅನಾರೋಗ್ಯಪೀಡಿತ ಪೋಷಕರನ್ನು ವಿಚಾರಣೆಗೆ ಒಳಪಡಿಸಲಿದ್ದಾರೆ ಎಂದು ಕೇಜ್ರಿವಾಲ್ ಬುಧವಾರ ಹೇಳಿದ್ದರು.

ಅರವಿಂದ ಕೇಜ್ರಿವಾಲ್ ಅವರ ಮನೆಯಲ್ಲಿ ಸ್ವಾತಿ ಮಾಲಿವಾಲ್ ಅವರ ಮೇಲೆ ಹಲ್ಲೆ ನಡೆಸಿದ ಆರೋಪ ಸಂಬಂಧ ಕೇಜ್ರಿವಾಲ್ ಅವರ ಆಪ್ತ ಸಹಾಯಕ ಬಿಭವ್ ಕುಮಾರ್ ಅವರನ್ನು ಪೊಲೀಸರು ಬಂಧಿಸಿದ್ದಾರೆ.

ಮುಂದಿನ ದಿನಗಳಲ್ಲಿ ಪೊಲೀಸರು, ಕೇಜ್ರಿವಾಲ್ ಮತ್ತು ಅವರ ಪೋಷಕರ ವಿಚಾರಣೆ ನಡೆಸಲಿದ್ದಾರೆ. ಆದರೆ, ಇಂದು ಅವರ ಮನೆಗೆ ತೆರಳುತ್ತಿಲ್ಲ ಎಂದು ಮೂಲಗಳು ತಿಳಿಸಿವೆ.

‘ನನ್ನ ಪೋಷಕರು ಮತ್ತು ಪತ್ನಿಯೊಂದಿಗೆ ಪೊಲೀಸರಿಗಾಗಿ ಕಾಯುತ್ತಿದ್ದೇನೆ. ನಿನ್ನೆ ಪೊಲೀಸರು ನನಗೆ ಕರೆ ಮಾಡಿ, ನನ್ನ ಪೋಷಕರ ವಿಚಾರಣೆಗಾಗಿ ಮನೆಗೆ ಬರಲು ಸಮಯ ಕೇಳಿದ್ದರು. ಅವರು ಬರುತ್ತಾರಾ? ಇಲ್ಲವಾ? ಎಂಬ ಬಗ್ಗೆ ಈವರೆಗೆ ಯಾವುದೇ ಮಾಹಿತಿ ನೀಡಿಲ್ಲ’ ಎಂದು ಎಕ್ಸ್ ಪೋಸ್ಟ್‌ನಲ್ಲಿ ಕೇಜ್ರಿವಾಲ್ ತಿಳಿಸಿದ್ದರು.

‘ಅರವಿಂದ ಕೇಜ್ರಿವಾಲ್ ಅವರಿಗೆ ಜಾಮೀನು ಸಿಕ್ಕಿದಾಗಿನಿಂದ ಬಿಜೆಪಿ ಚಡಪಡಿಸುತ್ತಿದೆ. ಕೇಜ್ರಿವಾಲ್ ಮತ್ತು ಎಎಪಿ ವಿರುದ್ಧ ಅವರು ದಾಳಿ ಮತ್ತು ಸಂಚು ರೂಪಿಸುತ್ತಿದ್ದಾರೆ. ದೆಹಲಿ ಪೊಲೀಸರು ಕೇಜ್ರಿವಾಲ್ ಪೋಷಕರ ವಿಚಾರಣೆಗೆ ಮುಂದಾಗುವ ಮೂಲಕ ಎಲ್ಲ ಮಿತಿಗಳನ್ನು ಮೀರಿದ್ದಾರೆ’ ಎಂದು ಸಚಿವೆ ಅತಿಶಿ ದೂರಿದ್ದಾರೆ.

‘ಕೇಜ್ರಿವಾಲ್ ಅವರ ವಯಸ್ಸಾದ ಮತ್ತು ಅನಾರೋಗ್ಯಪೀಡಿತ ಪೋಷಕರ ಮೇಲೆ ದೌರ್ಜನ್ಯಕ್ಕೆ ಮುಂದಾಗುವ ಮೂಲಕ ದೆಹಲಿ ಪೊಲೀಸರು, ಅತ್ಯಂತ ಕೆಳಮಟ್ಟಕ್ಕೆ ಇಳಿದಿದ್ದಾರೆ. ಅವರ ತಂದೆಗೆ 84 ವರ್ಷ, ನಡೆದಾಡುವುದೂ ಕಷ್ಟ. ಕಿವಿ ಕೇಳಿಸುವುದಿಲ್ಲ. ಅವರ ತಾಯಿ ಕೇಜ್ರಿವಾಲ್ ಬಂಧನಕ್ಕೂ ಎರಡು ದಿನ ಮೊದಲು ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದರು.ಈ ದೌರ್ಜನ್ಯಕ್ಕೆ ಜನ ಮತಗಳ ಮೂಲಕ ಉತ್ತರಿಸಲಿದ್ದಾರೆ’ ಎಂದು ಎಎಪಿ ರಾಜ್ಯಸಭ ಸದಸ್ಯ ಸಂಜಯ್ ಸಿಂಗ್ ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT