ಭಾನುವಾರ, 6 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಅಸಾಂವಿಧಾನಿಕ ತುರ್ತು ಪರಿಸ್ಥಿತಿ ಇದೆ: ಕೇಜ್ರಿವಾಲ್‌ ಬಂಧನಕ್ಕೆ ದಿಗ್ವಿಜಯ ಖಂಡನೆ

Published : 22 ಮಾರ್ಚ್ 2024, 10:55 IST
Last Updated : 22 ಮಾರ್ಚ್ 2024, 10:55 IST
ಫಾಲೋ ಮಾಡಿ
Comments

ಭೋಪಾಲ್‌: ದೆಹಲಿ ಮುಖ್ಯಮಂತ್ರಿ ಹಾಗೂ ಎಎಪಿ ನಾಯಕ ಅರವಿಂದ ಕೇಜ್ರಿವಾಲ್‌ ಅವರ ಬಂಧನ ಕುರಿತು ವಿಷಾದ ವ್ಯಕ್ತಪಡಿಸಿರುವ ಕಾಂಗ್ರೆಸ್‌ ಹಿರಿಯ ನಾಯಕ ದಿಗ್ವಿಜಯ ಸಿಂಗ್‌, ವಿರೋಧ ಪಕ್ಷಗಳ ಮತ್ತು ಪ್ರಜಾಪ್ರಭುತ್ವದ ಧ್ವನಿಯನ್ನು ಹತ್ತಿಕ್ಕುತ್ತಿರುವ ‘ಅಸಾಂವಿಧಾನಿಕ ತುರ್ತು ಪರಿಸ್ಥಿತಿ’ ದೇಶದಲ್ಲಿ ನಿರ್ಮಾಣವಾಗಿದೆ ಎಂದು ಆರೋಪಿಸಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಲೋಕಸಭೆ ಚುನಾವಣೆಗೆ ದೆಹಲಿಯಲ್ಲಿ ಆಮ್‌ ಆದ್ಮಿ ಪಕ್ಷ ಹಾಗೂ ಕಾಂಗ್ರೆಸ್‌ ಮೈತ್ರಿ ಮಾಡಿಕೊಂಡಿದೆ. ಅರವಿಂದ ಕೇಜ್ರಿವಾಲ್ 'ಇಂಡಿಯಾ' ಮೈತ್ರಿಕೂಟದ ಭಾಗವಾಗಿದ್ದಾರೆ. ಇದು ಅವರು ಮಾಡಿದ ತಪ್ಪು. ಇದೇ ಕಾರಣಕ್ಕೆ ಬಂಧನವಾಗಿದೆ. ಕೇಜ್ರಿವಾಲ್‌ ಅವರ ಬಂಧನವನ್ನು ನಾನು ಖಂಡಿಸುತ್ತೇನೆ’ ಎಂದು ಹೇಳಿದ್ದಾರೆ.

ದೆಹಲಿ ಅಬಕಾರಿ ನೀತಿ ಹಗರಣದ ಜೊತೆ ನಂಟಿರುವ ಹಣ ಅಕ್ರಮ ವರ್ಗಾವಣೆ ಆರೋಪದಲ್ಲಿ ಜಾರಿ ನಿರ್ದೇಶನಾಲಯದ (ಇ.ಡಿ) ಅಧಿಕಾರಿಗಳು ಅರವಿಂದ ಕೇಜ್ರಿವಾಲ್‌ ಅವರನ್ನು ಗುರುವಾರ ರಾತ್ರಿ ಬಂಧಿಸಿದ್ದಾರೆ.

‘ಜಾರಿ ನಿರ್ದೇಶನಾಲಯ ಹಲವು ಸಮನ್ಸ್‌ಗಳನ್ನು ನೀಡಿದ ಬಳಿಕವೂ ವಿಚಾರಣೆಗೆ ಹಾಜರಾಗದೆ ಇರುವುದು ಅವರ ತಪ್ಪು. ಆದ್ದರಿಂದ ಅವರನ್ನು ಬಂಧಿಸಲಾಗಿದೆ’ ಎಂದು ಸಿಂಗ್‌ ಹೇಳಿದ್ದಾರೆ.

‘ದೇಶದ ಇತಿಹಾಸದಲ್ಲಿ, ಇಬ್ಬರು ಹಾಲಿ ಮುಖ್ಯಮಂತ್ರಿಗಳನ್ನು ಜೈಲಿಗೆ ಕಳುಹಿಸಿರುವುದು ಇದೇ ಮೊದಲು. ಪ್ರಕರಣಗಳನ್ನು ರದ್ದುಗೊಳಿಸುವ ಭರವಸೆಯೊಂದಿಗೆ ಜಾರ್ಖಂಡ್ ಮುಖ್ಯಮಂತ್ರಿ ಹೇಮಂತ್ ಸೊರೇನ್ ಬಿಜೆಪಿಗೆ ಸೇರುವಂತೆ ಒತ್ತಡ ಹೇರಲಾಯಿತು. ಆದರೆ ಅದನ್ನು ನಿರಾಕರಿಸಿದ್ದ ಸೊರೇನ್ ಅವರನ್ನು ಜೈಲಿಗೆ ಕಳುಹಿಸಲಾಯಿತು. ಅವರು ಬುಡಕಟ್ಟು ಜನಾಂಗದ ನೈಜ ನಾಯಕ’ ಎಂದು ಸಿಂಗ್ ಉಲ್ಲೇಖಿಸಿದ್ದಾರೆ.

‘ಕೆಲವರು 70ರ ದಶಕದ ತುರ್ತು ಪರಿಸ್ಥಿತಿ ಮತ್ತು ಇಂದಿನ ಪರಿಸ್ಥಿತಿಯನ್ನು ಹೋಲಿಸುತ್ತಿದ್ದಾರೆ. ಅಂದಿನ ತುರ್ತು ಪರಿಸ್ಥಿತಿಯನ್ನು ಕಾನೂನಿನಡಿಯಲ್ಲಿ ಜಾರಿಗೊಳಿಸಲಾಗಿತ್ತು. ಆದರೆ, ಇಂದಿನ ತುರ್ತು ಪರಿಸ್ಥಿತಿಯು ಅಸಾಂವಿಧಾನಿಕವಾಗಿದೆ. ಈ ಮೂಲಕ ಜಾರಿ ನಿರ್ದೇಶನಾಲಯ (ಇ.ಡಿ), ಆದಾಯ ತೆರಿಗೆ ಇಲಾಖೆ ಮತ್ತು ಕೇಂದ್ರೀಯ ತನಿಖಾ ದಳ (ಸಿಬಿಐ) ಜನರ ಮೇಲೆ ದಬ್ಬಾಳಿಕೆ ನಡೆಸಿ, ಅವರನ್ನು ಸುಲಿಗೆ ಮಾಡುತ್ತಿದೆ’ ಎಂದು ಆರೋಪಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT