ಭಾನುವಾರ, 3 ಡಿಸೆಂಬರ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮುಂಬೈ ಡ್ರಗ್ಸ್‌ ಪ್ರಕರಣ: ಆರ್ಯನ್‌ ಖಾನ್‌ ಆರೋಪ ಮುಕ್ತ, ಎನ್‌ಸಿಬಿ ಚಾರ್ಜ್‌ಶೀಟ್‌

Last Updated 27 ಮೇ 2022, 19:57 IST
ಅಕ್ಷರ ಗಾತ್ರ

ನವದೆಹಲಿ/ಮುಂಬೈ: ‘ಐಷಾರಾಮಿ ಹಡಗಿನಲ್ಲಿ ಡ್ರಗ್ಸ್‌’ ಪ್ರಕರಣಕ್ಕೆ ಸಂಬಂಧಿಸಿದಂತೆ ಬಾಲಿವುಡ್‌ ಸೂಪರ್‌ಸ್ಟಾರ್‌ ಶಾರುಕ್‌ ಖಾನ್‌ ಮಗ ಆರ್ಯನ್‌ ಖಾನ್‌ ಅವರನ್ನು ಮಾದಕವಸ್ತು ನಿಯಂತ್ರಣ ಘಟಕವು (ಎನ್‌ಸಿಬಿ) ಶುಕ್ರವಾರ ಆರೋಪ ಮುಕ್ತಗೊಳಿಸಿದೆ.

ಮುಂಬೈ ಕೋರ್ಟ್‌ನಲ್ಲಿ ಎನ್‌ಸಿಬಿ ಅಧಿಕಾರಿಗಳು ಚಾರ್ಜ್‌ಶೀಟ್‌ ಸಲ್ಲಿಸಿದ್ದಾರೆ. ‘ಸಾಕ್ಷ್ಯಾಧಾರಗಳ ಕೊರತೆಯಿಂದಾಗಿ ಆರ್ಯನ್‌ ಖಾನ್‌ ಮತ್ತು ಇತರ ಐವರ ಹೆಸರುಗಳನ್ನು ಚಾರ್ಜ್‌ಶೀಟ್‌ನಲ್ಲಿ ಸೇರಿಸಿಲ್ಲ’ ಎಂದು ತಿಳಿಸಿದ್ದಾರೆ.

2021ರ ಅಕ್ಟೋಬರ್ 2ರಂದು ಮುಂಬೈನ ಎನ್‌ಸಿಬಿ ವಲಯದ ಆಗಿನ ಮುಖ್ಯಸ್ಥ ಸಮೀರ್ ವಾಂಖೆಡೆ ನೇತೃತ್ವದ ತಂಡವು ಐಷಾರಾಮಿ ಹಡಗಿನ ಮೇಲೆ ದಾಳಿ ನಡೆಸಿತ್ತು.ಡ್ರಗ್ಸ್ ಸೇವಿಸಿದ ಆರೋಪದ ಮೇಲೆ ಆರ್ಯನ್ ಖಾನ್ ಸೇರಿ ಎಂಟು ಜನರನ್ನು ಈ ತಂಡ ಬಂಧಿಸಿತ್ತು. ವಿಚಾರಣೆ ಬಳಿಕ ಅವರನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿತ್ತು.

ನಂತರ, ಆರ್ಯನ್‌ ಖಾನ್‌ ಅವರನ್ನು ಮುಂಬೈನ ಆರ್ಥರ್‌ ರೋಡ್ ಜೈಲಿನಲ್ಲಿರಿಸಲಾಗಿತ್ತು. ಅಕ್ಟೋಬರ್‌ 28 ರಂದು ಜಾಮೀನು ಮಂಜೂರಾಗಿತ್ತು. ಅಕ್ಟೋಬರ್‌ 30ರಂದು ಅವರನ್ನು ಜೈಲಿನಿಂದ ಬಿಡುಗಡೆ ಮಾಡಲಾಗಿತ್ತು.

ವಿಶೇಷ ತನಿಖಾ ತಂಡವು (ಎಸ್‌ಐಟಿ) ವಸ್ತುನಿಷ್ಠ ರೀತಿಯಲ್ಲಿ ತನಿಖೆ ನಡೆಸಿದೆ ಎಂದು ಎನ್‌ಸಿಬಿ ಪ್ರಕಟಣೆಯಲ್ಲಿ ತಿಳಿಸಿದೆ.

ಡ್ರಗ್ಸ್ ಹೊಂದಿದ್ದ ಆರೋಪದ ಮೇಲೆ ವಿಕ್ರಾಂತ್‌, ಇಶ್ಮೀತ್‌, ಅರ್ಬಾಜ್‌, ಆರ್ಯನ್‌, ಗೋಮಿತ್‌, ನೂಪುರ್‌, ಮೋಹಕ್‌ಜೈಸ್ವಾಲ್‌ ಹಾಗೂ ಮುನ್ಮುನ್‌ ಎಂಬುವವರನ್ನು ಎನ್‌ಸಿಬಿಯ ಮುಂಬೈ ವಲಯ ಕಚೇರಿ ಅಧಿಕಾರಿಗಳು ಬಂಧಿಸಿದ್ದರು. ಬಂಧಿತರ ಪೈಕಿ, ಆರ್ಯನ್‌ ಖಾನ್‌ ಮತ್ತು ಮೋಹಕ್‌ ಜೈಸ್ವಾಲ್‌ ಹೊರತುಪಡಿಸಿ ಉಳಿದವರ ವಿರುದ್ಧ ಆರೋಪ ಪಟ್ಟಿ ಸಲ್ಲಿಕೆಯಾಗಿದೆ.

'14 ಜನರ ವಿರುದ್ಧ ಭೌತಿಕ ಹಾಗೂ ಸಾಂದರ್ಭಿಕ ಸಾಕ್ಷ್ಯಾಧಾರಗಳು ಪತ್ತೆಯಾಗಿವೆ. 6 ಜನರ ವಿರುದ್ಧ ಪ್ರಬಲ ಸಾಕ್ಷ್ಯಾಧಾರಗಳು ಸಿಕ್ಕಿಲ್ಲ’ ಎಂದು ಎನ್‌ಸಿಬಿ ಮುಖ್ಯಸ್ಥ ಎಸ್‌.ಎನ್‌.ಪ್ರಧಾನ್‌ ಅವರು ನವದೆಹಲಿಯಲ್ಲಿ ಹೇಳಿದ್ದಾರೆ.

‘ತನಿಖೆ ಹಂತದಲ್ಲಿ ಲಭ್ಯವಾದ ಎಲ್ಲ ಸಂಗತಿಗಳನ್ನು ಪರಿಗಣಿಸಿದ್ದೆವು. ಆದರೆ, ಆರ್ಯನ್‌ ಖಾನ್‌ ವಿರುದ್ಧ ಪ್ರಬಲ ಸಾಕ್ಷ್ಯಗಳು ಪತ್ತೆಯಾಗಿಲ್ಲ’ ಎಂದು ಹೇಳಿದ್ದಾರೆ.

‘ಪ್ರಕರಣಕ್ಕೆ ಸಂಬಂಧಿಸಿ, ಶಾರುಕ್‌ ಖಾನ್‌ ಅವರನ್ನೂ ವಿಚಾರಣೆಗೆ ಒಳಪಡಿಸಲಾಗಿತ್ತೆ’ ಎಂಬ ಪ್ರಶ್ನೆಗೆ, ‘ಸಂಬಂಧಪಟ್ಟ ಕೆಲ ವ್ಯಕ್ತಿಗಳನ್ನು ವಿಚಾರಣೆಗೆ ಒಳಪಡಿಸಲಾಗಿತ್ತು. ಆದರೆ, ಅವರ ಹೆಸರುಗಳ ಬಗ್ಗೆ ಪ್ರತಿಕ್ರಿಯಿಸುವುದಿಲ್ಲ’ ಎಂದು ಉತ್ತರಿಸಿದರು.

ಆರ್ಯನ್‌ ಖಾನ್‌ ಪರ ವಕೀಲ ಮುಕುಲ್‌ ರೋಹ್ಟಗಿ, ‘ಸತ್ಯ ಗೆದ್ದಿದೆ. ನಾನು, ನನ್ನ ಕಕ್ಷಿದಾರರು ಹಾಗೂ ಶಾರುಕ್‌ ಖಾನ್‌ ನಿರಾಳರಾಗಿದ್ದೇವೆ’ ಎಂದು ಪ್ರತಿಕ್ರಿಯಿಸಿದ್ದಾರೆ.

‘ಆರ್ಯನ್ ಖಾನ್‌ ವಿರುದ್ಧ ಆರೋಪ ಹೊರಿಸಲು ಅಥವಾ ಅವರನ್ನು ಬಂಧಿಸುವುದಕ್ಕೆ ಪೂರಕವಾಗಿ ಯಾವುದೇ ಸಾಕ್ಷ್ಯಾಧಾರಗಳು ಇರಲಿಲ್ಲ. ಎನ್‌ಸಿಬಿ ತನ್ನ ತಪ್ಪನ್ನು ಒಪ್ಪಿಕೊಂಡಿದೆ. ಆರ್ಯನ್‌ ಖಾನ್‌ ವಿರುದ್ಧದ ಪ್ರಕರಣ ಮುಂದುವರಿಸುವುದರಲ್ಲಿ ಕಾರಣ ಇಲ್ಲ ಎಂಬುದು ಸಹ ಅದಕ್ಕೆ ಮನವರಿಕೆಯಾಗಿದೆ’ ಎಂದೂ ಪ್ರತಿಕ್ರಿಯಿಸಿದ್ದಾರೆ.

ಎನ್‌ಡಿಪಿಎಸ್‌ ವಿಶೇಷ ನ್ಯಾಯಾಲಯವು ಆರೋಪ ಪಟ್ಟಿ ಸಲ್ಲಿಕೆಗಾಗಿ ಎನ್‌ಸಿಬಿಗೆ ಮಾರ್ಚ್‌ನಲ್ಲಿ 60 ದಿನಗಳ ಕಾಲಾವಕಾಶ ವಿಸ್ತರಿಸಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT