ಶುಕ್ರವಾರ, 19 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಛತ್ತೀಸಗಢ | ಎನ್‌ಕೌಂಟರ್‌ನಲ್ಲಿ 8 ನಕ್ಸಲರ ಹತ್ಯೆ: ಒಬ್ಬ ಯೋಧ ಹುತಾತ್ಮ

Published 15 ಜೂನ್ 2024, 7:37 IST
Last Updated 15 ಜೂನ್ 2024, 7:37 IST
ಅಕ್ಷರ ಗಾತ್ರ

ನಾರಾಯಣಪುರ (ಛತ್ತೀಸ್‌ಗಢ): ಛತ್ತೀಸ್‌ಗಢದ ನಾರಾಯಣಪುರ ಜಿಲ್ಲೆಯಲ್ಲಿ ಶನಿವಾರ ನಡೆದ ಎನ್‌ಕೌಂಟರ್‌ನಲ್ಲಿ ಎಂಟು ನಕ್ಸಲರ ಹತ್ಯೆ ಮಾಡಲಾಗಿದೆ. ವಿಶೇಷ ಕಾರ್ಯಪಡೆಯ (ಎಸ್‌ಟಿಎಫ್‌) ಒಬ್ಬ ಸಿಬ್ಬಂದಿ ಹುತಾತ್ಮರಾಗಿದ್ದು, ಇಬ್ಬರು ಗಾಯಗೊಂಡಿದ್ದಾರೆ ಎಂದು ಪೊಲೀಸರು ಹೇಳಿದ್ದಾರೆ.

ಎನ್‌ಕೌಂಟರ್‌ ನಡೆದ ಸ್ಥಳದಲ್ಲಿ ದೊಡ್ಡ ಪ್ರಮಾಣದ ಶಸ್ತ್ರಾಸ್ತ್ರ ಪತ್ತೆಯಾಗಿದ್ದು, ಅವುಗಳನ್ನು ವಶಕ್ಕೆ ತೆಗೆದುಕೊಳ್ಳಲಾಗಿದೆ. ಅಬೂಝ್‌ಮಾಡ್‌ ಅರಣ್ಯ ಪ್ರದೇಶದಲ್ಲಿ ಶನಿವಾರ ಬೆಳಿಗ್ಗೆ ಗುಂಡಿನ ಚಕಮಕಿ ಆರಂಭವಾಗಿದೆ. ನಾರಾಯಣಪುರ, ಕಾಂಕೇರ್‌, ದಾಂತೇವಾಡ ಮತ್ತು ಕೊಂಡಗಾಂವ್ ಜಿಲ್ಲೆಗಳ ಭದ್ರತಾ ಸಿಬ್ಬಂದಿಯ ತಂಡಗಳು ನಕ್ಸಲರ ವಿರುದ್ಧ ಜಂಟಿ ಕಾರ್ಯಾಚರಣೆ ನಡೆಸಿವೆ ಎಂದು ರಾಯ್‌ಪುರದ ಪೊಲೀಸ್‌ ಅಧಿಕಾರಿಯೊಬ್ಬರು ಮಾಹಿತಿ ನೀಡಿದರು.

ಜಿಲ್ಲಾ ಮೀಸಲು ಪಡೆ, ಎಸ್‌ಟಿಎಫ್‌, ಐಟಿಬಿಪಿಯ 53ನೇ ಬೆಟಾಲಿಯನ್‌ ಮತ್ತು ಗಡಿ ಭದ್ರತಾ ಪಡೆಯ 135ನೇ ಬೆಟಾಲಿಯನ್‌ನ ಸಿಬ್ಬಂದಿ ನಕ್ಸಲರು ಪ್ರಬಲವಾಗಿರುವ ಕುತುಲ್‌, ಪರಸ್‌ವಾಡಾ ಮತ್ತು ಕೊಡ್ತಮೇಟಾ ಗ್ರಾಮಗಳ ಅರಣ್ಯ ಪ್ರದೇಶದಲ್ಲಿ ಜೂನ್‌ 12ರಿಂದ ಕಾರ್ಯಾಚರಣೆ ಆರಂಭಿಸಿದ್ದರು.

ಭದ್ರತಾ ಸಿಬ್ಬಂದಿ ಈ ಪ್ರದೇಶವನ್ನು ಸುತ್ತುವರಿದಾಗ ಗುಂಡಿನ ಚಕಮಕಿ ಆರಂಭವಾಯಿತಲ್ಲದೆ, ಸುಮಾರು ಹೊತ್ತು ಮುಂದುವರಿಯಿತು. ಭದ್ರತಾ ಸಿಬ್ಬಂದಿಯ ಗುಂಡಿಗೆ ಎಂಟು ನಕ್ಸಲರ ಹತರಾದರು. ಎಸ್‌ಟಿಎಫ್‌ನ ಒಬ್ಬ ಜವಾನ ಹುತಾತ್ಮರಾದರು. ಭದ್ರತಾ ಪಡೆಯ ಇಬ್ಬರು ಸಿಬ್ಬಂದಿ ಗಾಯಗೊಂಡಿದ್ದು, ಅವರಿಗೆ ಸ್ಥಳೀಯ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಿದ ಬಳಿಕ ಹೆಚ್ಚಿನ ಚಿಕಿತ್ಸೆಗಾಗಿ ರಾಯ್‌ಪುರಕ್ಕೆ ಕರೆದೊಯ್ಯಲಾಯಿತು ಎಂದು ಅಧಿಕಾರಿಯೊಬ್ಬರು ವಿವರಿಸಿದರು.

ಮೂರು ಕಚ್ಚಾ ಬಾಂಬ್ ಪತ್ತೆ: ಛತ್ತೀಸ್‌ಗಢದ ಬಿಜಾಪುರ ಜಿಲ್ಲೆಯಲ್ಲಿ ನಿರ್ಮಾಣ ಹಂತದಲ್ಲಿದ್ದ ರಸ್ತೆಯಲ್ಲಿ ನಕ್ಸಲರು ಹುದುಗಿಸಿಟ್ಟಿದ್ದ ಮೂರು ಕಚ್ಚಾ ಬಾಂಬ್‌ಗಳನ್ನು ಪತ್ತೆ ಮಾಡಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ.

ಈ ವರ್ಷ 131 ನಕ್ಸಲರ ಬಲಿ

* ಛತ್ತೀಸ್‌ಗಢದ ಬಸ್ತರ್‌ ವಲಯದಲ್ಲಿ ಈ ವರ್ಷ ನಡೆದ ಪ್ರತ್ಯೇಕ ಎನ್‌ಕೌಂಟರ್‌ಗಳಲ್ಲಿ ಇದುವರೆಗೆ 131 ನಕ್ಸಲರು ಬಲಿಯಾಗಿದ್ದಾರೆ.

* ಜೂನ್‌ 5ರಂದು ನಾರಾಯಣಪುರದಲ್ಲಿ ಆರು ಹಾಗೂ ಮೇ 23 ರಂದು ನಾರಾಯಣಪುರ–ಬಿಜಾಪುರ ಗಡಿಯಲ್ಲಿ ಏಳು ನಕ್ಸಲರನ್ನು ಹತ್ಯೆ ಮಾಡಲಾಗಿತ್ತು.

* ಮೇ 10ರಂದು ಬಿಜಾಪುರದಲ್ಲಿ 12 ನಕ್ಸಲರು ಹಾಗೂ ಏಪ್ರಿಲ್‌ 30ರಂದು ನಾರಾಯಣಪುರ ಮತ್ತು ಕಾಂಕೇರ್‌ ಜಿಲ್ಲೆಗಳಲ್ಲಿ ಮೂವರು ಮಹಿಳೆಯರು ಸೇರಿದಂತೆ 10 ನಕ್ಸಲರು ಭದ್ರತಾ ಸಿಬ್ಬಂದಿ ಗುಂಡಿಗೆ ಹತರಾಗಿದ್ದರು.

* ಏಪ್ರಿಲ್‌ 16ರಂದು ಕಾಂಕೇರ್‌ ಜಿಲ್ಲೆಯಲ್ಲಿ ನಡೆದ ಎನ್‌ಕೌಂಟರ್‌ನಲ್ಲಿ 29 ನಕ್ಸಲರನ್ನು ಹತ್ಯೆ ಮಾಡಲಾಗಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT